Sunday 9 November 2014

ಜಾಗರೂಕತೆಯ ಬೃಹತ್ ಶಕ್ತಿ( the great power of mindfulness )

. ಜಾಗರೂಕತೆಯ ಬೃಹತ್ ಶಕ್ತಿ
                ಎಚ್ಚರಿಕೆಯಿಂದಿರುವಿಕೆಯೆ ಅಮರತ್ವದ ಹಾದಿ
                ಎಚ್ಚರಿಕೆಯಿಲ್ಲದಿರುವಿಕೆಯು ಮೃತ್ಯುವಿನ ಹಾದಿ
                ಎಚ್ಚರಿಕೆಯಿಂದಿರುವವರು ಮರಣಿಸುವುದಿಲ್ಲ.
                ಎಚ್ಚರಿಕೆಯಿಂದಿಲ್ಲದವರು ಎಂದೂ ಸತ್ತಂತೆ ಇರುತ್ತಾರೆ
.
                ಭಿಕ್ಷುಗಳೇ, ಒಂದೇ ಸದ್ಗುಣದ ಸ್ಥಾಪನೆಯಿಂದ 5 ಇಂದ್ರೀಯಗಳು  ಅಭಿವೃದ್ಧಿ ಹೊಂದುತ್ತವೆ. ಯಾವುದದು ಆ ಸದ್ಗುಣ?
                ಅದೇ ಸತಿ (ಸ್ಮೃತಿ/ಜಾಗರೂಕತೆ/ಎಚ್ಚರಿಕೆ) ಜಾಗರೂಕತೆಯ ಲಕ್ಷಣ ಏನೆಂದರೆ ಗಮನಿಸುವುದು ಮತ್ತು (ಚಿತ್ತದ) ರಕ್ಷಣೆ ಮಾಡುವುದು.
                ಜಾಣರಿಗೆ ಎಚ್ಚರಿಕೆ ಅಮೂಲ್ಯ ಐಶ್ವರ್ಯದಂತೆ,
                ಜಾಗರೂಕನು ವೇಗದ ಕುದುರೆಯಂತೆ,
                ಎಚ್ಚರಿಕೆಯಿಂದಾಗಿಯೆ ಶ್ರೇಷ್ಠತ್ವ ಲಭ್ಯ.
                ಎಚ್ಚರಿಕೆಯಿಂದಿರುವುದು ಸದಾ ಶ್ಲಾಘನೀಯ
                ಎಚ್ಚರದಿಂದ ಇರುವವನಿಗೆ ಅವನತಿಯಿಲ್ಲ.
                ಜಾಗೃತನು ನಿಬ್ಬಾಣಕ್ಕೆ ಹತ್ತಿರ.
                ಸ್ಮೃತಿಯ ಲಕ್ಷಣ ನೆನಪಿಸುಕೊಳ್ಳುವಿಕೆ
                ಸ್ಮೃತಿಯ ಕ್ರಿಯೆ ಮರೆಯದಿರುವಿಕೆ
                ಇದು ರಕ್ಷಿಸುವಿಕೆಯಿಂದ ವ್ಯಕ್ತವಾಗುತ್ತದೆ.
                ಸದಾ ಎಚ್ಚರಿಕೆ ಸದಾ ಅರಿವೆ ಸಮ್ಮ ಸತಿಯಾಗಿದೆ
                ಭಿಕ್ಷುಗಳೇ, ಸ್ಮೃತಿ (ಎಚ್ಚರಿಕೆ)ಯನ್ನು ನಾನು ಸರ್ವರೀತಿಯ ಸಹಾಯಕಾರಿ ಎಂದು ಘೋಷಿಸುತ್ತೇನೆ.
                ಹಾಗೆಯೇ ಸತಿಪಟ್ಠಾನ ಸುತ್ತದಲ್ಲಿ ಹೀಗೆ ಹೇಳಿದ್ದಾರೆ.
                ಇದೊಂದೆ ಮಾರ್ಗವಿರುವುದು ಭಿಕ್ಷುಗಳೇ, ಜೀವಿಗಳ ಪರಿಶುದ್ಧತೆಗೆ, ದುಃಖ ಮತ್ತು ಶೋಕಗಳ ದಾಟುವಿಕೆಗೆ ನೋವು ಮತ್ತು ವ್ಯಥೆಗಳ ನಾಶಕ್ಕೆ. ಸಮ್ಮ ಮಾರ್ಗದಲ್ಲಿ ತಲುಪುವುದಕ್ಕಾಗಿ, ನಿಬ್ಬಾಣ ಪ್ರಾಪ್ತಿಗಾಗಿ ಯಾವುದದು? ಅದೇ ನಾಲ್ಕು ಸ್ಮೃತಿ ಪ್ರತಿಷ್ಠಾನ (ಸತಿ ಪಟ್ಟಾನ).
                ಬುದ್ಧ ಭಗವಾನರ ಅಂತಿಮ ವಚನವು ಸಹಾ ಹೀಗಿತ್ತು.
                ಎಲ್ಲಾ ಸಂಖಾರಗಳು ಅನಿತ್ಯ, ಉತ್ಪತ್ತಿಯಾಗುತ್ತದೆ ಹಾಗೆಯೇ ಅಳಿಯುತ್ತವೆ. ಆದ್ದರಿಂದ ಎಚ್ಚರಿಕೆಯಿಂದ (ನಿಬ್ಬಾಣ) ಸಂಪಾದಿಸಿರಿ.
                ಇದನ್ನೆಲ್ಲ ಅರಿತಾಗ ಜಾಗರೂಕತೆಯು ಒಂದು ಮಹಾನ್ಶಕ್ತಿ ಎಂದು ಅರಿವಾಗುತ್ತದೆ. ಇಲ್ಲಿ ಭಿಕ್ಷುವು ನಾಲ್ಕು ವಿಷಯಗಳಲ್ಲಿ ಜಾಗ್ರತೆಯನ್ನು ಪ್ರತಿಷ್ಠಾಪಿಸುತ್ತಾನೆ. ಅವೆಂದರೆ ದೇಹ, ಸಂವೇದನೆ (ವೇದನಾ), ಮನಸ್ಸು (ಚಿತ್ತ) ಮತ್ತು ಚಿತ್ತ ವೃತ್ತಿಗಳು (ಧಮ್ಮಾ) ಯಾವರೀತಿಯಲ್ಲಿ ಜಾಗ್ರತೆ ಪ್ರತಿಷ್ಠಾಪಿಸುತ್ತಾನೆಂದರೆ ಅಪಾರ ಪ್ರಯತ್ನಶೀಲತೆಯಿಂದ ಉತ್ಸಾಹದಿಂದ, ಸ್ಪಷ್ಟವಾಗಿ ಗ್ರಹಿಸುತ್ತಾ, ತಿಳಿಯುತ್ತಾ, ಎಚ್ಚರಿಕೆಯಿಂದ, ಆಸೆಗಳೆಲ್ಲವನ್ನು ತ್ಯಜಿಸುತ್ತಾ, ಸಕಾರಾತ್ಮಕ ಭಾವಾವೇಶಗಳಾದ ದ್ವೇಷ, ದುಃಖ, ಭಯಗಳಿಂದ ದೂರಾಗಿ ದೇಹವನ್ನು ಅದು ಹೇಗಿದೆಯೋ ಹಾಗೆಯೆ ಯಥಾಭೂತ ಸ್ಥಿತಿಯಲ್ಲಿ ಅರಿಯುತ್ತಾನೆ. ಇದಕ್ಕೆ ಕಾಯಾನುಪಶ್ಶನ ಎನ್ನುವರು.
ಕಾಯಾನುಪಶ್ಶನ
: ಇದರಲ್ಲಿ 6 ವಿಧವಿದೆ
1.            ಅನಾಪಾನ ಸತಿ ಧ್ಯಾನ (ಉಸಿರಾಟದ ಧ್ಯಾನ)
2.            ದೇಹದ ಸವರ್ಾವಸ್ಥೆಯಲ್ಲಿ ಜಾಗರೂಕನಾಗಿರುವಿಕೆ (ನಿಂತಾಗ, ಕುಳಿತಾಗ, ನಡೆಯುವಾಗ, ಮಲಗಿದಾಗ, ಬಾಗಿದಾಗ, ಇತ್ಯಾದಿ).
3.            ದೇಹದ ಸವರ್ಾವಸ್ಥೆಯನ್ನು ಎಚ್ಚರಿಕೆಯಿಂದ ಗಮನಿಸುವಿಕೆ, ಅರಿಯುವಿಕೆ
4.            ಅಶುಭ ಧ್ಯಾನ (ಆಸುಂದರತೆಯ ಧ್ಯಾನ)
5.            ಧಾತುಗಳ ಧ್ಯಾನ
6.            ಶವವೀಕ್ಷಣಾ ಧ್ಯಾನ
ವೇದಾನುಪಶ್ಶನ : ಹಾಗೆಯೇ ಭಿಕ್ಷುವು ಅಪಾರ ಪ್ರಯತ್ನಶೀಲತೆಯಿಂದ, ಉತ್ಸಾಹದಿಂದ ಸ್ಪಷ್ಟವಾಗಿ ಗ್ರಹಿಸುತ್ತಾ ತಿಳಿಯುತ್ತಾ ಎಚ್ಚರಿಕೆಯಿಂದ, ಆಸೆ ಮತ್ತು ದೋಮನಸ್ಸನ್ನು (ನಕಾರಾತ್ಮಕ ಭಾವಾವೇಶ) ದೂರಿಕರಿಸುತ್ತಾ ವೇದಾನುಪಶ್ಶನ (ಸಂವೇದನೆಗಳನ್ನು ಅರಿಯುತ್ತಾನೆ) ಮಾಡುತ್ತಾನೆ.
                ಇಲ್ಲಿ ಆತನು ಪ್ರಿಯ ಸಂವೇದನೆಗಳನ್ನು (ನೋಟಕ್ಕೆ ಪ್ರಿಯವಾದುದು, ಇಂಪಾದುದು, ಸುಂಗಧಮಯವಾದುದು, ರುಚಿಕರವಾದುದು, ಸುಸ್ಪರ್ಶಗಳನ್ನು ಮತ್ತು ಆನಂದಿಸುವಿಕೆ) ಇವುಗಳನ್ನು ಅನುಭವಿಸುವಿಕೆಯನ್ನು ಅರಿಯುತ್ತಾನೆ. ಹಾಗೆಯೇ ಅಪ್ರಿಯ ಸಂವೇದನೆಯನ್ನು (ಆರು ಇಂದ್ರೀಯಗಳಿಗೆ ಅಪ್ರಿಯವಾದುದು, ಬೇಸರ ತರಿಸುವಂತಹುದು, ದುಃಖಕಾರಿ, ಭಯಕಾರಿ) ಅರಿಯುತ್ತಾನೆ.
                ಹಾಗೆಯೇ ಸುಖವು ಅಲ್ಲದೆ ದುಃಖವು ಅಲ್ಲದ ತಟಸ್ಥ ವೇದನೆಗಳನ್ನು ಅರಿಯುತ್ತಾನೆ.
                ಅವುಗಳ ಉದಯವ್ಯಯ (ಅನಿತ್ಯ), ಭೀಕರತೆ (ದುಃಖಕಾರಿ) ಮತ್ತು ಆನಾತ್ಮ (ಆತ್ಮ ಇಲ್ಲದಿರುವಿಕೆ) ಅರಿಯುತ್ತಾರೆ.
ಚಿತ್ತಾನುಪಶ್ಶನ : ಹಾಗೆಯೇ ಭಿಕ್ಷುವು ಚಿತ್ತವನ್ನು (ರಾಗಚಿತ್ತ, ದ್ವೇಷಚಿತ್ತ, ಮೋಹಚಿತ್ತ, ಜಡಪಿತ್ತ, ಕ್ಷೊಭಾಚಿತ್ತ, ಹಗುರಚಿತ್ತ, ಹಿಗ್ಗಿದಚಿತ್ತ, ಸಮಾಹಿತಚಿತ್ತ, ಅನುತ್ತರ ಚಿತ್ತ, ಬಂಧಿತಚಿತ್ತ, ವಿಮುಕ್ತಚಿತ್ತ) ಹೇಗಿದೆಯೋ ಹಾಗೆಯೇ ಯಥಾಭೂತವಾಗಿ, ಯಾವುದಕ್ಕೂ ಅಂಟದೆ ಸ್ಪಷ್ಟವಾಗಿ ಅರಿಯುತ್ತಾನೆ. ತ್ರಿಲಕ್ಷಣ ಅರಿಯುತ್ತಾನೆ.
ಧಮ್ಮಾನುಪಶ್ಶನ : ಧಮ್ಮಾನುಪಶ್ಶನವು 5 ಭಾಗವಾಗಿ ವಿಂಗಡಿಸಲ್ಪಟ್ಟಿದೆ. ಸಾಧಕರು ಯಾವುದಾದರೊಂದು ವಿಷಯ ತೆಗೆದುಕೊಂಡು ಸಾಧಿಸಿ ವಿಮುಕ್ತರಾಗಬಹುದು.
1.            ಐದು ತಡೆಗಳು (ಪಂಚನಿವಾರಣ) : ಧ್ಯಾನಕ್ಕೆ ಅಡ್ಡಿ ಮಾಡುವಂತಹ, ಬೋಗಾಭಿಲಾಶೆ, ದ್ವೇಷ, ಸೋಮಾರಿತನ, ಚಿಂತೆ ಮತ್ತು ಸಂದೇಹಗಳು ಅವುಗಳ ಹುಟ್ಟು, ಕಾರಣ, ತಡೆ, ಮಾರ್ಗ ಎಲ್ಲವನ್ನೂ ಸ್ಪಷ್ಟವಾಗಿ ಅರಿತುಕೊಳ್ಳುತ್ತಾನೆ.
2.            ಪಂಚ ಬಂಧಗಳು (ಐದು ರಾಶಿಗಳು) : ದೇಹ, ವೇದನೆ, ಗ್ರಹಿಕೆ, ಮನೋನಿಮರ್ಿತಗಳು ಮತ್ತು ಅರಿಯುವಿಕೆ. ಇವುಗಳ ಉದಯ, ಕಾರ್ಯಸ್ವರೂಪ, ಆಳಿವು, ತಡೆ, ಅನಿತ್ಯತೆ, ದುಃಖಸ್ವರೂಪ, ಆನಾತ್ತತೆ ಎಲ್ಲವನ್ನೂ ಸ್ಪಷ್ಟವಾಗಿ ಅರಿತು ಅಂಟದೆ ಇರುತ್ತಾರೆ.
3.            ಸಳಾಯತನ (ಆರು ಇಂದ್ರೀಯಗಳು) : ಇಂದ್ರೀಯಗಳಲ್ಲಿ ಹೇಗೆ ಬಂಧನ ಉದಯಿಸುತ್ತದೆ, ಬೆಳೆಯುತ್ತದೆ. ಹೇಗೆ ಬಂಧನ ಇಲ್ಲದೆ ಹೋಗುತ್ತದೆ. ಭವಿಷ್ಯದಲ್ಲಿ ಹೇಗೆ ಉದಯಿಸುವುದಿಲ್ಲ ಎಂದು ಸ್ಪಷ್ಟವಾಗಿ ಅರಿಯುತ್ತಾರೆ.
4.            ಸಪ್ತಬೊಜ್ಜಂಗ (ಸಪ್ತಬೋಧಿ ಅಂಗಗಳು) : ಇಲ್ಲಿ ಸಾಧಕನು ಬೋಧಿ ಪ್ರಾಪ್ತಿಗೆ ಸಹಾಯಕ ಅಂಶಗಳಾದ 1. ಸ್ಮೃತಿ  2. ಸತ್ಯಶೋಧನೆ  3. ಪ್ರಯತ್ನಶೀಲತೆ 4. ಆನಂದ 5. ಪ್ರಶಾಂತತೆ 6. ಸಮಾಧಿ 7. ಸಮಚಿತ್ತತೆ  ಇವುಗಳನ್ನು ಪರಿಪೂರ್ಣಗೊಳ್ಳುತ್ತಾ ಸತ್ಯವನ್ನು ಸ್ಪಷ್ಟವಾಗಿ ಅರಿತು ಅಂಟದೆ ಇರುತ್ತಾರೆ.
5.            ಆರ್ಯ ಸತ್ಯಗಳ ದರ್ಶನ : ಇಲ್ಲಿ ಭಿಕ್ಷುವು ಸ್ಪಷ್ಟವಾಗಿ ದುಃಖ, ದುಃಖಕ್ಕೆ ಕಾರಣ, ದುಃಖ ನಿರೋಧನೆ ಮತ್ತು ದುಃಖ ನಿರೋಧ ಮಾರ್ಗವನ್ನು ಸ್ಪಷ್ಟವಾಗಿ ಅರಿತು ಅಂಟದೆ ಇರುತ್ತಾರೆ.
                ಈ ರೀತಿಯಲ್ಲಿ ಜಾಗ್ರತೆಯನ್ನು ಪ್ರತಿಷ್ಠಾಪಿಸಿ, ಅರಿಯುತ್ತಾ ಅಂಟದೆ, ವಿಶ್ಲೇಷಿಸುತ್ತಾ ಜಗದ ಯಾವುದಕ್ಕು ಅಂಟಿಕೊಳ್ಳದೆ, ಶೀಲವನ್ನು ಜಾಗ್ರತೆಯಿಂದ ಪೂರ್ಣಗೊಳಿಸಿ, ಸಮಾಧಿಯನ್ನು ಸಿದ್ಧಿಸಿ, ಪ್ರಜ್ಞಾವನ್ನು ಸಾಕ್ಷಾತ್ಕಾರಿಸಿ ಅರಹಂತನಾಗುತ್ತಾರೆ. ಇದಕ್ಕೆ ಗರಿಷ್ಠ ಅವಧಿ ಒಂದು ವಾರದಿಂದ ಆರುವರ್ಷ ನೀಡಿದ್ದಾರೆ. ಆದರೆ ಪೂರ್ಣ ನಿಷ್ಠರಾಗಿ ಮಾಡಿದರೆ ಮಾತ್ರ ಸಾಧ್ಯ.

                ಈ ಎಲ್ಲಾ ಧ್ಯಾನಗಳು ಸಂಕ್ಷಿಪ್ತವಾಗಿವೆ. ಮುಂದೆ ವಿವರವಾಗಿ ಕಾಣಿಸಿಕೊಳ್ಳುತ್ತದೆ. ಒಂದಂತೂ ನಿಜ, ಇಲ್ಲಿ ಜಾಗ್ರತೆ ಸಂಯುಕ್ತರೂಪದಲ್ಲಿದೆ ಅಂದರೆ ಎಚ್ಚರಿಕೆಯಲ್ಲಿ, ಶ್ರಮವಿದೆ, ಸಮಾಧಿಯಿದೆ, ವಿಶ್ಲೇಷಣೆಯಿದೆ, ಹಾಗೆಯೆ ಸಮಚಿತ್ತತೆಯು ಇದೆ. ಇವು ಒಟ್ಟಿಗೆ ಸಮತೋಲನದಿಂದ ಕಾರ್ಯವಹಿಸುತ್ತದೆ.