Monday 19 September 2016

kayagatasati in kannada (ಕಾಯಾಗತಸತಿ)

ಕಾಯಾಗತಸತಿ


                ಭಿಕ್ಷುಗಳೇ, ಯಾರು ಅಮರತ್ವದ ರುಚಿ ನೋಡಿರುವರೋ ಅವರು ಕಾಯಾಗತಸತಿಯ ರುಚಿಯನ್ನು ನೋಡಿರುತ್ತಾರೆ. ಯಾರು ಕಾಯಾಗತಸತಿಯ ರುಚಿಯನ್ನು ನೋಡಿಲ್ಲವೋ ಅವರು ಅಮರತ್ವದ ರುಚಿ ನೋಡಿಲ್ಲ.
                ಇದೇರೀತಿ ಭಗವಾನರು ವಿಭಿನ್ನ ಕಡೆ ಕಾಯಾಗಸತಿಯನ್ನು ಪ್ರಶಂಸಿಸಿದ್ದಾರೆ. ಇದನ್ನು ಮಾಡುವ ರೀತಿ ಮಾತ್ರ ವಿವಿಧ ರೀತಿಯಿಂದ ಭಗವಾನರು ಮಜ್ಜಿಮನಿಕಾಯದ ಕಾಯಾಗತಾಸತಿ ಸುತ್ತದಲ್ಲಿ ಇದನ್ನು ಸಾಧಿಸುವ ಹಂತಗಳು ಈ ರೀತಿ ಬರುತ್ತದೆ.
                (1) ಅನಾಪಾನಾಸತಿ (2) ದೇಹದ ಭಂಗಿಗಳಲ್ಲಿ ಜಾಗರೂಕತೆ (3) ದೇಹದ ವರ್ತನೆಗಳ ಅರಿವು (4) ದೇಹದಲ್ಲಿ ಏನೆಲ್ಲಾ ಇವೆ ಎಂಬ ಚಿಂತನೆ (5) ದೇಹದಲ್ಲಿ ನಾಲ್ಕು ದಾತುಗಳಿವೆ. (6) 10 ರೀತಿಯ ಶವಗಳ ಅಶುಭ ಅರಿಯುವುದು (7) 4 ಹಂತದ ಸಮಾಧಿ ಇವಿಷ್ಟನ್ನು ಹೇಳಿದ್ದಾರೆ.
ಅದರಿಂದ ಒದಗುವ ಫಲಗಳನ್ನು ಹೀಗೆ ಹೇಳಿದ್ದಾರೆ.
1.            ಆತನು ಪ್ರಿಯ, ಅಪ್ರಿಯ ಭಾವನೆಗಳನ್ನು ಮೀರಿರುತ್ತಾನೆ.
2.            ಭಯ ಗೆದ್ದಿರುತ್ತಾನೆ.
3.            ಚಳಿ, ಉಷ್ಣ, ಹಸಿವು, ಬಾಯಾರಿಕೆ, ಸೊಳ್ಳೆ ಮುಂತಾದ ಕೀಟಗಳ ವೇದನೆ, ಬಿಸಿಲು, ವಾಯು, ಮಳೆಗಳ ತೊಂದರೆ, ಸರಿಸೃಪಗಳ ಸರಿದಾಡುವಿಕೆ, ಕೆಟ್ಟ ಮಾತು, ನೋವು, ಹಿಂಸೆ, ಮರಣ ನೋವು ಅವೆಲ್ಲವನ್ನು ಆತ ಸಹಿಸುವ ಶಕ್ತಿ ಆತನಿಗೆ ಸಿಗುತ್ತದೆ.
4.            ತನ್ನ ಇಚ್ಛೆ ಮಾತ್ರದಿಂದ ನಾಲ್ಕನೆಯ ಸಮಾಧಿ ಪ್ರಾಪ್ತಿ ಮಾಡಬಲ್ಲ.
5.            ದೇಹದಿಂದ ಮಾಡುವ ಎಲ್ಲಾ ಪವಾಡ ಸಿದ್ಧಿಯಾಗುತ್ತದೆ.
6.            ದಿವ್ಯ ಕಿವಿ
7.            ದಿವ್ಯ ಚಕ್ಷು.
8.            ಪರಚಿತ್ತ ಅರಿಯುವಿಕೆ
9.            ಪೂರ್ವಜನ್ಮ ಅರಿಯುವಿಕೆ
10.          ಅಸವ ಕ್ಷಯ ಜ್ಞಾನ ಮತ್ತು ನಿಬ್ಬಾಣ ಪ್ರಾಪ್ತಿ.
                ಇಲ್ಲಿ ಕಾಯಾಗತಾಸತಿಯಲ್ಲಿ ದೇಹದಲ್ಲಿ ಏನೆಲ್ಲಾ ಇವೆ ಎಂಬ ಚಿಂತನೆ ಮಾತ್ರ ಇವೆ. ಏಕೆಂದರೆ ಮಿಕ್ಕವು ವಿವಿಧಕಡೆ ವಿವರಿಸಲಾಗಿದೆ. ಇಲ್ಲಿ ಸಾಧಕನು ವೃಕ್ಷ ಮೂಲದಲ್ಲೂ ಅಥವಾ ಅರಣ್ಯದಲ್ಲೂ ಅಥವಾ ಗವಿಯಲ್ಲೂ, ಅಥವಾ ಶೂನ್ಯಗೃಹದಲ್ಲೂ ನಿರ್ಜನ, ನಿಶ್ಶಬ್ದ ವಾತಾವರಣದಲ್ಲಿ ಪದ್ಮಾಸನದಲ್ಲಿ ಕುಳಿತು ದೇಹದ ಬಗ್ಗೆ ಈ ಚಿಂತನೆ ಮಾಡುತ್ತಾನೆ.
                ಈ ದೇಹದಲ್ಲಿ ತಲೆಗೂದಲು, ಮೈಕೂದಲು, ಉಗುರುಗಳು, ಹಲ್ಲುಗಳು, ಚರ್ಮ, ಮಾಂಸ, ಸ್ನಾಯುಗಳು, ಮೂಳೆ, ಅಸ್ಥಿಮಚ್ಚೆ, ಮೂತ್ರಪಿಂಡ, ಹೃದಯ, ಪಿತ್ತಕೋಶ, ಶ್ವಾಸದ ಪೊರೆ, ಗುಲ್ಮ, ಶ್ವಾಸಕೋಶ, ಕರುಳು, ವಪೆ, ಉದರ, ಮಲ, ಶ್ಲೇಷ್ಮ, ಕೀವು, ರಕ್ತ, ಬೆವರು, ಕೊಬ್ಬು, ಕಣ್ಣೀರು ಮೆದುಳು ಜಿಡ್ಡಾದ ಕೊಬ್ಬು, ಜೊಲ್ಲು, ಲೋಳೆ, ಕೀಲಿನದ್ರವ ಮತ್ತು ಮೂತ್ರಗಳಿಂದ ಆಗಿದೆ.
                ಹೇಗೆ ಮೂಟೆಯಲ್ಲಿ ಧವಸಧಾನ್ಯಗಳು ಇರುತ್ತವೆಯೋ ಹಾಗೆಯೇ ಚರ್ಮವೆಂಬ ಮೂಟೆಯಲ್ಲಿ ಈ ಎಲ್ಲಾ ಕಶ್ಮಲ ಅಂಗಗಳು ಇವೆ.
                ಬಿಂಬದಂತಿರುವ ಈ ಶರೀರವನ್ನು ನೋಡು, ಇದೊಂದು ವೃಣಗಳಿರುವ ದುರ್ಬಲವಾದ ಪಂಜರ. ಬಯಕೆಗಳ ಗೂಡು
                ಇದು ದ್ರುವವಲ್ಲ, ಶಾಶ್ವತವಲ್ಲ. ಶಾಶ್ವತವಲ್ಲದ ಈ ಕಾಯವು ನಿರರ್ಥಕ ಒಣಗಿದ ಮರದಂತೆ ಭೂಮಿಗೆ ಬಿದ್ದು ಹೋಗುತ್ತದೆ.
                ಅಸ್ತಿಪಂಜರವೆಂಬ ನಗರದ ಗೋಡೆಗಳಿಂದ ಆವೃತವಾಗಿರುವ ಈ ದೇಹ, ಮಾಂಸ, ರಕ್ತಗಳಿಂದ ಲೇಪಿತವಾಗಿದೆ. ಇದರೊಳಗೆ ಜರಾ, ಮೃತ್ಯುಗಳು, ಗರ್ವ, ಈಷರ್ೆ ಮನೆ ಮಾಡಿವೆ.
                ಈ ಕಾಯವು ನೊರೆಯಂತಿದೆ ಎಂಬುದನ್ನು ತಿಳಿದು ಮರಿಚಿಕೆ ಎಂಬ ಅರಿವನ್ನು ಹೊಂದಿ ಮಾರನ ಪುಷ್ಪಗಳನ್ನು ಕತ್ತರಿಸಿ ಹಾಕಿ ಮಾರನ ಕಣ್ಣಿಗೆ ಬೀಳದೆ ಹೋಗು.
                ಈ ಕಾಯವು ಮಡಿಕೆಯಂತಿದೆ ಎಂಬುದನ್ನು ತಿಳಿದು, ಕೋಟೆಯಂತೆ ಚಿತ್ತವನ್ನು ಭದ್ರಪಡಿಸಿಕೊಂಡು, ಪ್ರಜ್ಞಾವೆಂಬ ಆಯುಧದಿಂದ ಮಾರನನ್ನು ಜಯಿಸಿ ತನ್ನನ್ನು ರಕ್ಷಿಸಿಕೊಂಡವ ಯಾವುದಕ್ಕೂ ಅಂಟಿಕೊಂಡಿರುವುದಿಲ್ಲ.
                ಈ ಶರೀರವು ಮಲಿನ್ಯಗಳಿಂದ ಉತ್ಪತ್ತಿಯಾಗುತ್ತದೆ. ಮಲಿನ ವಸ್ತುಗಳಿಂದ ಪೋಷಣೆಗೊಂಡು ಬೆಳೆಯುತ್ತದೆ. ಮಲಿನ ಭಾಗದಿಂದಲೆ ಜನ್ಮಿಸುತ್ತದೆ. ನವರಂಧ್ರಗಳು ಸಹಾ ಮಲಿನವನ್ನೇ ಸ್ರವಿಸುತ್ತದೆ.
                ಈ ಶರೀರದಲ್ಲಿ ಸಹಸ್ರಾರು ಸೂಕ್ಷ್ಮ ಜೀವಿಗಳು, ಕ್ರಿಮಿಗಳು ಇವೆ. ಅನೇಕ ಮೂಳೆಗಳಿಂದ ಕಟ್ಟಲ್ಪಟ್ಟಿದೆ. ಅತ್ಯಂತ ಕುರೂಪವಾಗಿದೆ. ಲೆಕ್ಕವಿಲ್ಲದ ರೋಗ ಉತ್ಪತ್ತಿ ಪ್ರದೇಶವಾಗಿದೆ. ರೋಗಗಳ ಗೂಡಾಗಿದೆ. ನೋವಿನ ಸ್ಥಳವಾಗಿದೆ. ದುಃಖಜನಕವಾಗಿದೆ. ಆದ್ದರಿಂದ ವಿವೇಕಿಯು ಮತ್ತೊಮ್ಮೆ ಶರೀರಧಾರಣೆ ಮಾಡದೆ ಇರಲಿ.
                ಈ ರೀತಿಯ ಚಿಂತನೆಗಳಿಂದ ಕೂಡಿ ಏಕಾಗ್ರಚಿತ್ತವನ್ನು ಪಡೆಯುತ್ತಾನೆ. ನಿವರಣಗಳಿಂದ ಮುಕ್ತನಾಗುತ್ತಾನೆ. ಸಾಮೀಪ್ಯ ಸಮಾಧಿ ಪಡೆಯುತ್ತಾನೆ (ಉಪಚರ ಸಮಾಧಿ)
2.            ಪಯರ್ಾಯ ವಿಧಾನ :
                ಇಲ್ಲಿ ಸಾಧಕನು ದೇಹದ 32 ಅಂಗಗಳನ್ನು ಕ್ರಮವಾಗಿ ಜಪಿಸಬೇಕಾಗುತ್ತದೆ. ಹೇಗೆಂದರೆ ತಲೆಗೂದಲು, ದೇಹ ಕೂದಲು, ಉಗುರು, ಹಲ್ಲು, ಚರ್ಮ... ಅಥವಾ ಮಾಂಸ, ಸ್ನಾಯು, ಅಸ್ತಿ, ಮಜ್ಜೆ, ಮೂತ್ರಪಿಂಡ... ಈ ರೀತಿಯಾಗಿ ಜಪಿಸಬೇಕಾಗುತ್ತದೆ.
                ಕೆಲವು ಸಾಧಕರು ಈ ರೀತಿ ಮತ್ತು 4 ತಿಂಗಳು ಜಪಿಸಿಯೆ ಸೋತಪನ್ನರಾಗಿದ್ದಾರೆ.
3.            ಪಯರ್ಾಯ ವಿಧಾನ : ಮನೋಜಪ : ಇಲ್ಲಿ ಮೇಲಿನಂತೆ ಮನಸ್ಸಿನಲ್ಲಿಯೆ ಜಪಿಸಬೆಕಾಗುತ್ತದೆ.
4.            ಪಯರ್ಾಯ ವಿಧಾನ : ಇಲ್ಲಿ ಈ ರೀತಿ ಧ್ಯಾನಿಸಬೇಕಾಗುತ್ತದೆ. ಉದಾ : ತಲೆಗೂದಲು.
                ತಲೆಕೂದಲು ಸಾಮಾನ್ಯವಾಗಿ ಕಪ್ಪಗಿರುತ್ತದೆ. ಅವುಗಳ ಆಕಾರ ಉದ್ದನೆಯ ಎಳೆಗಳಂತೆ ಇರುತ್ತದೆ. ಅವುಗಳು ಊದ್ವರ್ಾ ದಿಕ್ಕಿನಲ್ಲಿರುತ್ತವೆ. ಅವು ಚರ್ಮದ ಮೇಲಿರುತ್ತದೆ. ಅವುಗಳ ಗಡಿ ಕುತ್ತಿಗೆ ಮಾತ್ರ. ಕೂದಲು ನೆರೆತರೆ ಕುರೂಪವಾಗಿರುತ್ತದೆ. ವಾಸನೆಯು ಅಸಹ್ಯಕರ, ಅದು ಅಹಾರದಲ್ಲಿದ್ದರೆ ಆಹಾರ ತಿನ್ನುವುದಿಲ್ಲ. ಅದರ ಆಕಾರವು ಸಹ್ಯವಲ್ಲ.
ಇಲ್ಲಿ ಗಮನಿಸಿ :
                ವರ್ಣ = ಕಪ್ಪು, ಆಕಾರ = ಉದ್ದನೆಯ ಎಳೆ, ದಿಕ್ಕು = ಊದ್ರ್ವ, ಸ್ಥಳ = ಚರ್ಮದ ಮೇಲೆ, ಗಡಿ = ಕುತ್ತಿಗೆಯವರೆಗೆ ಮಾತ್ರ.
                ಅಸಹ್ಯಭಾವನೆ = ಕಣ್ಣಿನಿಂದ, ಮೂಗಿನಿಂದ, ನಾಲಿಗೆಯಿಂದ, ಆಕಾರದಿಂದ, ವರ್ಣದಿಂದ ಈ ರೀತಿಯಾಗಿ ವರ್ಣ, ಆಕಾರ, ದಿಕ್ಕು, ಸ್ಥಳ, ಗಡಿ ಮತ್ತು ಅಸಹ್ಯೆಯಿಂದ ಧ್ಯಾನಿಸಬೇಕಾಗುತ್ತದೆ. ಹೀಗೆಯೇ ದೇಹ 32 ಅಂಗಗಳನ್ನು ಧ್ಯಾನಿಸಬೇಕು.

ಇಲ್ಲಿಗೆ ಕಾಯಾಗತಸತಿ ಸಂಕ್ಷಿಪ್ತವಾಗಿ ಮುಗಿಯಿತು.

Marananusati in kannada (ಮರಣಾನುಸ್ಮೃತಿ)

ಮರಣಾನುಸ್ಮೃತಿ
                ಮಾನವ ಜೀವನವು ಅತಿಅಲ್ಪ, ಮರಣವು ಎಂದಿಗೂ ಸೋಲದೆ (ತಪ್ಪದೆ) ಬರುವುದು. ಇದನ್ನು ಜ್ಞಾನಿಯು ಅರಿತು ತಲೆಯು ಸುಡುತ್ತಿರುವ ಮನುಷ್ಯ ಆರೋಗ್ಯಕ್ಕೆ ಹಂಬಲಿಸಿ ಜೀವಿಸುವಂತೆ ಸರಿಯಾಗಿ ಜೀವಿಸಬೇಕು.
                ಬೌದ್ಧರ ಧ್ಯಾನಗಳಲ್ಲಿ ಮರಣಾನುಸ್ಮೃತಿ (ಮರಣದ ಬಗ್ಗೆ ಸಮಗ್ರ ಚಿಂತನೆ) ಅತಿ ಪ್ರಮುಖವಾಗಿದೆ. ಏಕೆಂದರೆ ಇದರಿಂದ ಮಾನವನಿಗೆ ಜೀವನದ ತೋರಿಕೆಯು ಆಡಂಬರವು ವ್ಯರ್ಥವೆಂದು ಅನಿತ್ಯವೆಂದು ಅರಿವಾಗಿ ಜೀವನ ಅನಿಶ್ಚಿತ, ಮರಣವು ನಿಶ್ಚಿತವೆಂದು ಅರಿವಾಗಿ ತನ್ನ ಸ್ವ-ಅಭಿವೃದ್ಧಿಗೆ ಹಾಗೂ ಪರಹಿತಕ್ಕೆ ಯೋಗ್ಯರೀತಿಯಲ್ಲಿ ಶ್ರಮಿಸುತ್ತಾನೆ.
                ಮರಣಾನುಸ್ಮೃತಿಯಿಂದ ಮಾನವ ನಿರಾಶವಾದಿಯಾಗುವುದಿಲ್ಲ. ಬದಲಾಗಿ ಕ್ಷಣ ಮಾತ್ರವು ವ್ಯರ್ಥಮಾಡದೆ ಪರಿಶ್ರಮಿಯಾಗುತ್ತಾನೆ. ಹಾಗೂ ಸಾವಿನೊಡನೆ ಪ್ರಸನ್ನತೆಯಿಂದ ಎದುರು ಮುಖನಾಗುತ್ತಾನೆ. ಮರಣದ ಬಗ್ಗೆ ಆಳ ಚಿಂತನೆ ಮಾಡಿದ್ದರ ಫಲವಾಗಿ ಮೃತ್ಯುಭಯದಿಂದ ಮುಕ್ತನಾಗುತ್ತಾನೆ. ಅಪಾಯಗಳಿಗೆ ಹೆದರದೆ ಧೀರನಾಗುತ್ತಾನೆ. ಪರರ ಮೃತ್ಯುಗಳನ್ನು ಕಂಡು ಸಹಾ ಶೋಕ ವಿಲಾಪಗಳನ್ನು ಮಾಡದೆ ಸಮಚಿತ್ತತೆ ಸಾಧಿಸಿರುವ ಸ್ಥಿರ ಪ್ರಜ್ಞಾವಂತನಾಗುತ್ತಾನೆ. ಅಷ್ಟೇ ಅಲ್ಲ, ಸೋಮಾರಿತನ ತ್ಯಜಿಸಿ ಪ್ರಯತ್ನಶೀಲನಾಗಿ, ಸಂಗ್ರಹಕಾರಿ ಸ್ವಾಥರ್ಿಯಾಗದೆ ಪರಹಿತಕ್ಕಾಗಿ ದುಡಿಯುವ ದಯಾಳುವಾಗುತ್ತಾನೆ. ತನ್ನಂತೆ ಪರರು, ಪರರ ಸುಖವೇ ತನ್ನ ಸುಖ ಎಂದು ಭಾವಿಸಿ ಯಾರಿಗೂ ದುಃಖ ನೀಡಿದೆ ಶೀಲವಂತನಾಗುತ್ತಾನೆ. ಜೀವಿಸುವ ಲೋಭವಾದ ಭವತನ್ಹವನ್ನು ನಾಶಮಾಡಿ, ತ್ರಿಲಕ್ಷಣಗಳನ್ನು (ಅನಿತ್ಯ, ದುಃಖ, ಅನಾತ್ಮ) ರೂಢಿಸಿಕೊಂಡು ಅರಹಂತನೂ ಸಹ ಆಗಬಲ್ಲ. ಅಂತಹ ಮಹಾನ್ ಶಕ್ತಿಶಾಲಿಯಾದ ಮರಣಾನ ಸ್ಮೃತಿಯನ್ನು ಅರಿಯೋಣ.
                ಅಹೋ ಜೀವನವು ಅತಿ ಅಲ್ಪವಾಗಿದೆ. ನೂರು ವರ್ಷಗಳಿಗೆ ಮುಂಚೆಯೇ ಸಾವು ಬರುತ್ತದೆ. ಇದಕ್ಕಿಂತ ಹೆಚ್ಚಾದರೂ ಸಹಾ ವೃದ್ಧಾವಸ್ಥೆ ಪಡೆದು ಮರಣಿಸುತ್ತಾರೆ.
                ಯಾವರೀತಿಯಲ್ಲಿ ಸ್ವಪ್ನದಲ್ಲಿ ಕಂಡಂತಹ ವಸ್ತುಗಳನ್ನು ಎಚ್ಚೆತ್ತಮೇಲೆ ಕಾಣುವು ದಿಲ್ಲವೋ ಅದೇರೀತಿಯಲ್ಲಿ ಪ್ರಿಯಜನರನ್ನು ಮರಣದ ನಂತರ ಕಾಣಲಾಗುವುದಿಲ್ಲ.
                ಮರಣದ ನಂತರ ಜೀವನ, ಜೀವನದ ನಂತರ ಮರಣ ಹೀಗೆಯೇ ಸೂರ್ಯಾಸ್ತ ಹಾಗೂ ಸೂರ್ಯೋದಯದಂತೆ ಕ್ರಿಯೆ ನಿರಂತರ ನಡೆಯುತ್ತಿರುತ್ತದೆ.
                ಎಲೆಗಳ ಮೇಲೆ ಇರುವ ಬಾಷ್ಪ ಹನಿಗಳು ಸೂರ್ಯಬಂದಂತೆ ಮಾಯವಾಗುವ ರೀತಿ, ಕುಂಬಾರನ ಮಡಿಕೆಯು ಒಡೆದುಹೋದರೆ ವ್ಯರ್ಥವಾದಂತೆ ಮರಣವು ಕ್ಷಣದಲ್ಲಿ ಪ್ರತಾಪ ತೋರಿಸುತ್ತದೆ.
                ಜಲಪಾತಗಳು ಹಿಮ್ಮುಖವಾಗಿ ಹರಿಯುವುದಿಲ್ಲ. ಮುದಿತನ ಯೌವ್ವನವಾಗಿ ಪರಿವರ್ತನವಾಗುವುದಿಲ್ಲ. ಹಾಗೆಯೇ ಸತ್ತವನು ಜೀವಂತವಾಗುವುದಿಲ್ಲ. ಸಾವು ತಡೆಯಲಾರದಂತಹುದು.
                ಕೊಲೆಗಾರನು ಅಟ್ಟಿಸಿಕೊಂಡು ಬಂದು ಹತ್ಯೆ ಮಾಡುವ ರೀತಿ ಮೃತ್ಯುವು ಜೀವಿಸುವ ಮಾನವನನ್ನು ಅಂತ್ಯಗೊಳಿಸುತ್ತದೆ. ಅಪಾರವಾದ ಐಶ್ವರ್ಯವು ಕಳುವಾದಂತೆ ನಷ್ಟವಾಗುವ ರೀತಿಯಂತೆ, ಗಾಳಿಯಿಂದ ದೀಪವು ಆರಿಹೋದಂತೆ ಈ ಜೀವನವು ನಷ್ಟವಾಗುವುದು.
                ನಾಲ್ಕು ಧಾತುಗಳಲ್ಲಿ ಒಂದು ಏರುಪೇರಾದರೂ ಜೀವನವಿಲ್ಲ. ಉಸಿರಾಟವು ಸ್ಥಬ್ಧವಾದರೂ ಜೀವವಿಲ್ಲ. ಯಾವುದಾದರೂ ರೋಗಕ್ಕೆ ಬಲಿಯಾದರೂ ಬಾಳಿಲ್ಲ. ಅಗ್ನಿಯಿಂದಾಗಲೀ, ಜಲದಿಂದಾಗಲೀ, ವಾಯುವಿನಿಂದಾಗಲೀ ಕೀಟ, ಪ್ರಾಣಿ ಸರಿಸೃಪಗಳಿಂದಾಗಲೀ ಆಯುಧಗಳಿಂದಾಗಲೀ ಕೊನೆಗೆ ಆಹಾರ ಪಾನೀಯ ಔಷಧ ಏರುಪೇರಿನಿಂದಾಗಲೀ ಅಥವಾ ಅಪಘಾತದಿಂದಲೂ ಜೀವಂತ ವ್ಯಕ್ತಿ ಮೃತನಾಗಬಲ್ಲ.
                ಯೋಗ ಕ್ರಿಯೆಗಳನ್ನು ಮಾಡಿಕೊಂಡಿರುವವರು, ಪೂರ್ಣ ಆರೋಗ್ಯವಂತರೂ, ಬಲಿಷ್ಠವಾದ ದೃಢಕಾಯರು, ಮಹಾನ್ ಶೂರರು, ಮಹಾನ್ ಕ್ಷತ್ರಿಯರು, ಮಹಾನ್ ಸಾಮ್ರಾಟರು, ಅತಿ ಬಲಶಾಲಿಗಳು ಸಹಾ ಮೃತ್ಯುವಿನ ಮುಂದೆ ದುರ್ಬಲರಾಗಿ ಸಾವನ್ನಪ್ಪುತ್ತಾರೆ ಇನ್ನು ರೋಗಿಗಳ ಬಗ್ಗೆ ಹೇಳಬೇಕಾಗಿಲ್ಲ.
                ಅತಿ ಐಶ್ವರ್ಯವಂತರೂ, ಜಗತ್ತಿಗೆ ಮಹಾ ಶ್ರೀಮಂತರು ಸಹಾ ಸಾವನ್ನು ಹಣದಿಂದ ದೂರ ಮಾಡಲಾಗುವುದಿಲ್ಲ.
                ಲೌಕಿನ ಜ್ಞಾನದಲ್ಲಿ ನಿಷ್ಣಾತರು, ವೈಜ್ಞಾನಿಕ ರಂಗದಲ್ಲಿ ನಿಸ್ಸೀಮರು ಜಗತ್ತನ್ನೇ ನಿತ್ಯನವೀನ ಮಾಡಬಲ್ಲ ವಿಜ್ಞಾನಿಗಳು ಸಹಾ ಸಾವಿನ ಮುಂದೆ ವಿಫಲರಾಗಿ ಮೃತ್ಯವಶವಾಗುತ್ತಾರೆ.
                ಜಗತ್ತಿನಲ್ಲಿ ನಾನಾ ಸಾಧನೆಗಳನ್ನು ಮಾಡಿ ಅತಿ ಲೋಕ ವಿಖ್ಯಾತಿ ಪಡೆದವರೂ, ಜನಪ್ರಿಯರು, ಕೀತರ್ಿ ಸಂಪನ್ನರೂ ಸಹಾ ಮೃತ್ಯುವಿಗೆ ಶರಣಾಗತರಾಗುತ್ತಾರೆ.
                ಅತ್ಯಂತ ಪುಣ್ಯಶಾಲಿಗಳು, ಅದ್ಭುತ ಮಾನಸಿಕ ಪವಾಡ ಪಡೆದಂತವರು, ಶ್ರೇಷ್ಠಜ್ಞಾನ ಅರಿತವರು, ಒಟ್ಟಾರೆ ಸರ್ವರೂ ಮೃತ್ಯುವಿಗೆ ಅಪ್ಪುತ್ತಾರೆ.
                ಮರಣದ ನಂತರ ಈ ದೇಹ ಚೂರುಚೂರಾಗಿ ಹೋಗುತ್ತದೆ. ಚರ್ಮವು ಮಾಂಸವು ಕೊಳೆಯುತ್ತದೆ. ನಾನಾ ಕ್ರಿಮಿ ಮುಂತಾದ ಜೀವಿಗೆ ಆಹಾರವಾಗುತ್ತದೆ.
                ಆಯುಷ್ಯ ಆಗಲೀ, ಮರಣದ ಕಾಲವಾಗಲೀ, ಮರಣದ ಸ್ಥಳವಾಗಲೀ ಸಾವಿನ ನಂತರದ ಗತಿಯಾಗಲೀ ದಿವ್ಯಚಕ್ಷುವಂತರ ಹೊರತು ಯಾರೂ ಅರಿಯರು.
                ಚಕ್ರದ ಪರಿದಿಯು ಸ್ವಲ್ಪವೇ ನೆಲದ ಮೇಲಿರುವ ಹಾಗೆ ಈ ವರ್ತಮಾನ ಜೀವನವಿದೆ. ನಂತರ ಜೀವನದ ನಿರೋಧವಾಗಿ ನಾನಾ ರೂಪಗಳು ಬೇರ್ಪಟ್ಟು ಕರ್ಮಫಲಕ್ಕೆ ತಕ್ಕಂತೆ ಕಾಲ ಅಕಾಲ ಮರಣಕ್ಕೆ ವಶರಾಗಿ, ಮುಂದಿನ ಗತಿ ಪಡೆಯುತ್ತಾನೆ.
                ಭೋಗಗಳು, ಐಶ್ವರ್ಯಗಳು ಮಾನವನನ್ನು ಬಿಟ್ಟುಹೋಗುತ್ತದೆ. ಅಥವಾ ಮಾನವನೇ ಅವನ್ನು ಬಿಟ್ಟು ದೇಹತ್ಯಾಗ ಮಾಡುತ್ತಾನೆ. ಇಲ್ಲಿ ಯಾವುದು ನಿತ್ಯವಲ್ಲ.
                ಕರೆಯದೆ ಬಂದ ಅಪ್ಪಣೆ ಪಡದೆ ಹೋದ ಶವಕ್ಕೆ ಬಂಧು ದುಃಖವಿಲ್ಲ. ಅದರ ಗತಿ ಅದಕ್ಕೆ.
                ಸಾವಿನ ನಂತರ ಎರಡು ಗತಿಯಿದೆ (1) ಪುನರ್ಜನ್ಮ ಪಡೆಯುತ್ತಾನೆ. (2) ಪುನರ್ಜನ್ಮ ಇಲ್ಲದೇ ಸಾಯುತ್ತಾನೆ. ಪುನರ್ಜನ್ಮ ಪಡೆಯುತ್ತಾನೆಂದಾದರೆ ಏಕೆ ಶೋಕಿಸಬೇಕು. ಆತ ಜೀವಂತವಾಗಿ ಬೇರೆ ರೂಪ ಪಡೆಯುತ್ತಾನಲ್ಲ. ಪುನರ್ಜನ್ಮ ಇಲ್ಲದೆ ಸಾಯುತ್ತಾನೆ ಎಂದಾದರೆ ಆತನಿಗೆ ಇನ್ನು ಯಾವುದೇ ದುಃಖವಿಲ್ಲ. ಹೀಗಾಗಿ ಚಿಂತೆ ಏತಕ್ಕೆ?
                ಕಳೆದುಹೋದ ಸುಖವನ್ನು ಪಡೆಯಲಾಗುವುದಿಲ್ಲ. ಹಾಗೆಯೇ ಮುಂಬರುವ ಸುಖವನ್ನು ತರಲಾಗುವುದಿಲ್ಲ. ಅಕಾಶದ ಚಂದ್ರ ಅಪೇಕ್ಷೆಗೆ ಸಿಗುವುದಿಲ್ಲ. ಶೋಕದಿಂದ ಯಾವ ಸಹಾಯವೂ ಇಲ್ಲ.
                ಚಿಂತೆಯಿಂದ, ಕೃಶತ್ವ, ದುಃಖ, ಬುದ್ಧಿನಾಶ, ಸಮತ್ವಭಂಗ, ಆನಂದ ಸುಖದ ಅನುತ್ಪತ್ತಿಗೆ ಕಾರಣವಾಗುತ್ತದೆ. ಶತ್ರುವಿಗೆ ಸಂತೋಷವಾಗುತ್ತದೆ. ಅಳುವುದರಿಂದ ಸತ್ತವರು ಏಳುವುದಾದರೆ ನಾವೆಲ್ಲರೂ ಸೇರಿ ಅಳೋಣ, ಆದರೆ ಹಾಗೆ ಸಾಧ್ಯವಿಲ್ಲ, ಅಳುವುದು ನಿರರ್ಥಕ ವ್ಯರ್ಥ.
                ಪ್ರತಿ ಗುರಿಗೂ ಮಾರ್ಗಗಳಿರುತ್ತದೆ. ಆದರೆ ಮೃತ್ಯುಂಜಯಕ್ಕೆ ಅಷ್ಠಾಂಗ ಮಾರ್ಗವೇ ಮಾರ್ಗವಾಗಿದೆ. ಸತ್ತವನನ್ನು ಜೀವಂತಗೊಳಿಸುವುದು ಅಸಾಧ್ಯವೆಂದು ತಿಳಿದು ಹಿಂದಿನ ಕರ್ಮ ಎಂದು ತಿಳಿದು ಶಾಂತರಾಗಬೇಕು.
                ಅಕಾಶದಲ್ಲಿಯಾಗಲೀ ಅಥವಾ ಸಮುದ್ರದ ಮಧ್ಯದಲ್ಲಾಗಲೀ ಅಥವಾ ಪರ್ವತದ ಕಂದರಗಳಲ್ಲಿ ಅಡಗಿದರಾಗಲೀ, ಮರಣದಿಂದ ತಪ್ಪಿಸಿಕೊಳ್ಳಬಹುದಾದ ಯಾವ ಸ್ಥಳವೂ ಈ ಜಗತ್ತಿನಲ್ಲಿ ಎಲ್ಲಿಯೂ ಇಲ್ಲ ಎಂದು ಅರಿಯಬೇಕು.
                ಆದರೆ ಯಾರು ಈ ಲೋಕವನ್ನು ನೀರಿನ ಗುಳ್ಳೆಯಂತೆ ಮತ್ತು ಬಯಲ ಮರೀಚಿಕೆ ಎಂದು ಕಾಣುವರೋ ಅಂತಹವರನ್ನು ಮೃತ್ಯುರಾಜನು ನೋಡುವುದಿಲ್ಲ.
                ಆದ್ದರಿಂದ ನಾವು ಅಲ್ಪವೇ ಜೀವಿಸಲಿ ಅಧಿಕವೇ ಜೀವಿಸಲಿ ಬುದ್ಧ ಶಾಸನದಲ್ಲಿ ಆನಂದಿಸಬೇಕು, ಪಾಲಿಸಬೇಕು. ಸುಗತಿ ಅಥವಾ ನಿಬ್ಬಾಣ ಮುಂದೆ ಪಡೆಯಬೇಕಾಗುತ್ತದೆ.
                ಮಮತ್ವದಲ್ಲಿ ಬಿದ್ದು ಜನರು ಶೋಕಪಡುತ್ತಾರೆ. ಯಾವುದೇ ರೀತಿಯ ಪರಿಗ್ರಹವು ನಿತ್ಯವಲ್ಲ. ಅದರಲ್ಲಿ ವಿಯೋಗ ಇದ್ದೇ ಇರುತ್ತದೆ. ಇದನ್ನು ಅರಿತು ಅದರಲ್ಲಿ ಆನಂದಿಸದಿರಲಿ.
                ಪುರುಷನು ಯಾವುದನ್ನು ತನ್ನದು ಎಂದು ಅರಿಯುತ್ತಾನೋ ಅದನ್ನು ಮರಣ ನಂತರ ಬಿಡಬೇಕಾಗುತ್ತದೆ. ಆದ್ದರಿಂದ ಪಂಡಿತರು ಸಮತ್ವರಾಗಲೀ, ಮುನಿಗಳು ಸರ್ವಥ ಅನಾಸಕ್ತರಾಗುತ್ತಾರೆ. ಅವರು ಯಾವುದನ್ನು ಪ್ರಿಯ ಅಥವಾ ಅಪ್ರಿಯವನ್ನಾಗಿ ಮಾಡಿಕೊಳ್ಳುವುದಿಲ್ಲ. ಯಾವರೀತಿ ಕಮಲದ ದಳದ ಮೇಲೆ ಜಲವು ನಿಲ್ಲುವುದಿಲ್ಲವೋ ಅದೇರೀತಿ ಆತನಿಗೆ ವಿಲಾಪ ಮತ್ತು ಸ್ವಾರ್ಥಗಳು ಆತನಿಗೆ ಪ್ರಭಾವಿತ ಮಾಡಲಾರವು.
                ಇದೇರೀತಿಯಾದ ಚಿಂತನೆಯಿಂದ ಸಾಧಕರು ಜೀವ ಭಯವನ್ನು ಹಾಗೂ ವಿಯೋಗ ದುಃಖವನ್ನು ದಾಟುತ್ತಾನೆ. ಚಿತ್ತಶಾಂತಿಯನ್ನು ಸ್ಥಾಪಿಸುತ್ತಾರೆ. ಸಾವಿಗೆ ಸಿದ್ಧರಾಗುತ್ತಾರೆ ಸಾವಿನ ನಂತರ ಬದುಕಿಗೆ ಸಿದ್ಧತೆ ಮಾಡುತ್ತಾರೆ. ಶೀಲದ ಸಮಾಧಿಯ, ಪ್ರಜ್ಞೆಯ, ಸೇವೆಯ, ಮಹೋನ್ನತ ಜೀವನ ನಡೆಸಿ ಶ್ರೇಷ್ಠ ಸಾವು (ಜೀವನ) ಪಡೆಯುತ್ತಾರೆ.

ಈ ಅನುಸ್ಸತಿಯಿಂದ ಉಪಚರ ಸಮಾಧಿ ಪಡೆಯುತ್ತಾರೆ

upasamanussati in kannada (ಉಪಸಮಾನುಸ್ಸತಿ)

ಉಪಸಮಾನುಸ್ಸತಿ

                ಒಂದೇ ಒಂದು ಚಿಂತನೆ, ಓ ಭಿಕ್ಷುಗಳೇ ಅಭಿವೃದ್ಧಿಗೊಳಿಸಿದರೆ, ನಿರಂತರ ಸಾಧಿಸಿದರೆ ಈ ಜಗದಿಂದ ವಿಮುಖಗೊಳಿಸುತ್ತದೆ. ವಿರಾಗವುಂಟು ಮಾಡುತ್ತದೆ. ನಿರೋಧ ಉಂಟುಮಾಡುತ್ತದೆ. ಶಾಂತಿಯನ್ನು, ಧ್ಯಾನವನ್ನು, ಸಂಬೋಧಿಯನ್ನು ಮತ್ತು ನಿಬ್ಬಾಣವನ್ನು ನೀಡುತ್ತದೆ ಮತ್ತು ಯಾವುದದು ಆ ಚಿಂತನೆ? ಅದೇ ಉಪಸಮಾನುಸ್ಸತಿ (ಅಥವಾ ನಿಬ್ಬಾಣದ) ಚಿಂತನೆಯಾಗಿದೆ.
                ಈ ಉಪಸಮಾನುಸ್ಸತಿಯು ಬುದ್ಧಿವಂತರಿಗೆ ನೀಡುವ ಧ್ಯಾನ ವಿಷಯವಾಗಿದೆ. ಏಕೆಂದರೆ ಇದು ಪರರಿಂದ ಮಾಡಲು ಅಸಾಧ್ಯವಾಗಿದೆ. ಇದಕ್ಕೆ ತೀಷ್ಣ ಗ್ರಹಿಕೆ, ಅರಿವು ಬೇಕಾಗಿದೆ. ಆಳವಾದ ಧಮ್ಮಬ್ಯಾಸ ಬೇಕು ಇಲ್ಲದಿದ್ದರೆ ಮಿಥ್ಯಾಗ್ರಹಿಕೆಗಳು ಉಂಟಾಗುವ ಸಾಧ್ಯತೆ ಹೇರಳವಾಗಿರುತ್ತದೆ.
                ಒಂದು ಮಾತು ಗಮನದಲ್ಲಿಡಿ, ಇದು ನಿಬ್ಬಾಣದ ಕುರಿತು ಚಿಂತನೆಯೆ ಹೊರತು ನಿಬ್ಬಾಣದ ಸಾಕ್ಷಾತ್ಕಾರವಲ್ಲ. ಇದರಿಂದ ನೀವು ಸಾಧಕ ಕೇವಲ ಉಪಚಾರ ಸಮಾಧಿ ಪಡೆಯುತ್ತಾನೆ. ಅದು ಪ್ರಥಮ ಸಮಾದಿಗಿಂತ ಕಡಿಮೆಯಾಗಿದೆ.
                ಇಲ್ಲಿ ಸಾದಕನು ತೊಂದರೆ ಉಂಟಾಗದಂತಹ ವಿರುದ್ಧ, ನಿರ್ಜನ ವಾತಾವರಣದಲ್ಲಿ ಪದ್ಮಾಸನದಲ್ಲಿ ಕುಳಿತು ಅಕುಶಲ ಯೋಚನೆಗಳನ್ನು ದೂರೀಕರಿಸುತ್ತಾನೆ. ತನ್ನ ಶರೀರ ಮತ್ತು ಮನವನ್ನು ಶಾಂತಗೊಳಿಸುತ್ತಾನೆ. ಪ್ರಶಾಂತತೆಯನ್ನು ಅನುಭವಿಸುತ್ತಾ ಆತನು ನಿಬ್ಬಾಣವನ್ನು ಕುರಿತು ಈ ರೀತಿ ಚಿಂತನೆ ಮಾಡುತ್ತಾನೆ.
                ಓ ಇಲ್ಲಿ ಭಿಕ್ಷುವೊಬ್ಬ, ಶೀಲವಂತನಾಗಿ, ಸಂಯಮಿಯಾಗಿ, ಜಾಗರೂಕನಾಗಿ ಪಂಚನಿವಾರಣಗಳನ್ನು ತ್ಯಜಿಸದವನಾಗಿ, ಪ್ರಥಮ ಸಮಾಧಿ ಪಡೆಯುತ್ತಾನೆ. ಹಾಗೆಯೇ ಚತುರ್ಥ ಸಮಾಧಿ... ನೇವಸನ್ನನಸನ್ಯಾಯಾತನವನ್ನು ಆಯತನ ಪಡೆಯುತ್ತಾನೆ. ನಂತರ ಸೋತಪನ್ನನಾಗಿ ಹಾಗೆಯೇ ಅರಹಂತರಾದಾಗ ಅವರು ನಿಬ್ಬಾಣ ಪ್ರಾಪ್ತಿ ಮಾಡುವರು. ಅವರು ಎಲ್ಲದರ ಅಂತ್ಯ ಮಾಡುವರು. ಲೋಭ, ದ್ವೇಷ, ಮೋಹಗಳ ಹಾಗು ಜನ್ಮ ಮರಣಗಳಿಂದ ಮುಕ್ತರಾಗುವರು. ಅಹಂ ಮತ್ತು ಅಸ್ತಿತ್ವಗಳಿಂದ ಮುಕ್ತರಾಗುವರು ಆ ನಿಬ್ಬಾಣ ಹೇಗಿರುತ್ತದೆ?
                ಅದು ಯಾವುದರಿಂದಲೂ ರಚಿತವಾಗದಂತಹುದು....ಅನಂತ...ಮುಕ್ತ... ಸತ್ಯ... ಪಾರ.... ಗ್ರಹಿಕೆಗೆ ಮೀರಿದ್ದು... ಅಜರ, ಅಮರ... ದುಃಖರಹಿತ... ನಿತ್ಯ... ದಾತುಗಳಿಗೆ ಅತೀತ... ಶಾಂತ.... ಅತ್ಯುನ್ನತ....ಶುಭಕರ... ಭವನಿರೋಧ... ಕ್ಷೇಮಕರ... ಅದ್ಭುತವಾದುದು.... ದುಃಖರಹಿತವಾದುದು... ಶರಣೋತ್ತಮ... ಅಂಟದೆ ಇಂರುವಂತಹ...ಅಂತಿಮ ಸ್ಥಿತಿ... ತೃಷ್ಣಾಕ್ಷಯಸ್ಥಿತಿ, ನಿರೋಧ... ನಿಬ್ಬಾಣ ಆಗಿರುತ್ತದೆ.
                ನಿಬ್ಬಾಣವು... ಯಾವುದರಿಂದಲೂ ರಚಿತವಾಗಿರುವುದಿಲ್ಲ (ದೇಹ, ಮನಸ್ಸು ಮತ್ತು ಜಗತ್ತು) ಮರೆಯಾಗುವಂತಹುದ್ದಾಗಿದೆ. ಅಂದರೆ ಲೋಭ, ದ್ವೇಷ, ಮೋಹ, ಅಹಂ ಸರ್ವದರಿಂದ ಮರೆಯಾಗುತ್ತದೆ. ಸರ್ವಲೋಕಗಳಿಂದ ಮುಕ್ತಿ ಪಡೆಯುವಂತಹದ್ದಾಗಿದೆ. ತೃಷ್ಣೆಯಿಂದ ಮುಕ್ತಿ ಪಡೆಯುವಂತಹದ್ದಾಗಿದೆ. ಇದು ಆರಿ ಹೋಗುವಿಕೆಯಾಗಿದೆ.
                ಭಗವಾನರ ನುಡಿಯಿಂದ ಕೇಳುವುದಾದರೆ :
                ಭಿಕ್ಷುಗಳೇ, ಯಾವುದರಿಂದಲೂ ರಚಿತವಾದ, ಯಾವುದರಿಂದಲೂ ಕೂಡಿರದ, ಸತ್ಯ... ಆಚೆಯ ದಡ... ಅರಿಯಲು ಕಠಿಣವಾದ... ಮುಪ್ಪಿರದ... ನಿತ್ಯ... ಅಮರವಾದುದು... ಶುಭವಾದದ್ದು... ಪರಮ ಕ್ಷೇಮಕರವಾದುದು... ಅದ್ಭುತವಾದುದು... ಪರಿಶುದ್ಧವಾದುದು... ಪರಿಪೂರ್ಣವಾದುದು... ಅದೇ ನಿಬ್ಬಾಣ.
                ಹೀಗೆ ಆತನು ಚಿಂತಿಸುತ್ತಿರುವಾಗ ನಿಬ್ಬಾಣ ಪ್ರಾಪ್ತಿಗೆ ಸ್ಫೂತರ್ಿ ಪಡೆಯುತ್ತಾನೆ, ಆನಂದಿತನಾಗುತ್ತಾನೆ. ಏಕಾಗ್ರತೆ ಹೊಂದುತ್ತಾನೆ. ಪಂಚನಿವರಣಗಳಿಂದ ದೂರವಾಗುತ್ತಾನೆ. ಉಪಚರ ಸಮಾಧಿ ಪಡೆಯುತ್ತಾನೆ.
ಉಪಶಮನುಸ್ಸತಿಯ ಲಾಭಗಳು :
1.            ಆತನು ಶಾಂತವಾಗಿ ನಿದ್ರಿಸುತ್ತಾನೆ ಮತ್ತು ಶಾಂತವಾಗಿ ಏಳುತ್ತಾನೆ.
2.            ಆತನ ಸವರ್ೆಂದ್ರಿಯಗಳು ಶಾಂತವಾಗಿರುತ್ತದೆ.
3.            ಶ್ರದ್ಧೆಯಿಂದ ಕೂಡಿರುತ್ತಾನೆ ಹಾಗು ಶೀಲವಂತನಾಗಿರುತ್ತಾನೆ.
4.            ಶ್ರೇಷ್ಠತ್ವ ಪ್ರಾಪ್ತಿಗೆ ದೃಢಸಂಕಲ್ಪಿತನಾಗಿ ಸಾಧನೆ ಮಾಡುತ್ತಾನೆ.
5.            ಸುಗತಿ ಪ್ರಾಪ್ತಿ ಮಾಡುತ್ತಾನೆ.
                ಏಕಾಂತತೆಯಲ್ಲಿರುವ ಸವಿರಸವನ್ನು ಮತ್ತು ಉಪಸಮದ ಶಾಂತಿರಸ ಕುಡಿದವನು, ಧಮ್ಮ ಸುಖದ ರಸವನ್ನು ಸೇವಿಸುವವನು ನಿಶ್ಪಾಪಿಯು ಮತ್ತು ಅದುಃಖಿಯು ಆಗುವನು.

ಇಲ್ಲಿ ಉಪಸಮಾನುಸ್ಸತಿ ಮುಗಿಯಿತು

Devataanussati in kannada (ದೇವತಾನುಸ್ಸತಿ)

ದೇವತಾನುಸ್ಸತಿ

                ಸತ್ಯವನ್ನೇ ನುಡಿ, ಕೋಪಿಸಿಕೊಳ್ಳಬೇಡ, ಯಾಚಕರಿಗೆ ಸ್ವಲ್ಪವಾದರೂ ದಾನಮಾಡು, ಈ ಮೂರು ಕ್ರಮಗಳಿಂದ ಒಬ್ಬನು ದೇವತೆಗಳ ಹತ್ತಿರ ಹೋಗುವನು            - 224 ಧಮ್ಮಪದ
                ದೇವತೆಗಳ ಬಳಿ ಹೋಗಬಲ್ಲ ಹಾಗು ಅದಕ್ಕೆ ಬೇಕಾದ ಗುಣಗಳನ್ನು ಸಂಕ್ಷಿಪ್ತವಾಗಿ ಇಲ್ಲಿ ಹೇಳಿದೆ. ಮಾನವರು ಶ್ರದ್ಧೆ, ಶೀಲ, ದಾನ, ಕಲಿಕೆ ಮತ್ತು ಪ್ರಜ್ಞಾದಿಂದ ಈ ಪುಣ್ಯಗಳಿಂದ ದೇವತೆಗಳಾಗುವರು. ಇಲ್ಲಿ ಸಾಧಕ ಆ ಸದ್ಗುಣಗಳನ್ನು ತನ್ನಲ್ಲಿ ವೃದ್ಧಿಸುತ್ತಾ, ನೆನೆಯುತ್ತಾ ದೇವತೆಗಳನ್ನು ನೆನೆಯುತ್ತಾನೆ. ಹಂತ ಹಂತದಲ್ಲಿರುವ ಆ ದೇವತೆಗಳನ್ನು ನೆನೆಯುತ್ತಾನೆ. ಏಕಾಗ್ರತೆ ಹೊಂದುತ್ತಾನೆ. ಇದೇ ದೇವತಾನುಸ್ಸತಿಯಾಗಿದೆ.
                ಇಲ್ಲಿ ಸಾಧಕನು ತೊಂದರೆಯಾಗದಂತಹ, ನಿರ್ಜನ, ನಿಶ್ಶಬ್ದ ವಾತಾವರಣದಲ್ಲಿ ಪದ್ಮಾಸನದಲ್ಲಿ ಕುಳಿತು, ಅಕುಶಲ ಯೋಚನೆಗಳನ್ನು ದೂರೀಕರಿಸಿ ಈ ರಿತಿ ಚಿಂತಿಸುತ್ತಾನೆ ಚತುರ್ ಮಹಾರಾಜಿಕ ದೇವತೆಗಳಿದ್ದಾರೆ, ತಾವತಿಂಸ ದೇವತೆಗಳಿದ್ದಾರೆ, ತುಸಿತಾ ದೇವತೆಗಳಿದ್ದಾರೆ, ನಿಮರ್ಾಣರತಿ ದೇವತೆಗಳಿದ್ದಾರೆ, ಪರನಿಮರ್ಾಣರತಿ ದೇವತೆಗಳಿದ್ದಾರೆ, ಬ್ರಹ್ಮ ದೇವತೆಗಳಿದ್ದಾರೆ ಮತ್ತು ಬೇರೆಯ ರೀತಿಯ ದೇವತೆಗಳಿದ್ದಾರೆ. ಇವರೆಲ್ಲರ ಬಳಿ ಶ್ರದ್ಧೆ, ಶೀಲ, ಧ್ಯಾನ, ಕಲಿಯುವಿಕೆ, ಪ್ರಜ್ಞಾ ಗುಣವು ಇದ್ದು ಈಗ ಅವುಗಳ ಫಲದಿಂದ ದೇವತೆಗಳಾಗಿದ್ದಾರೆ. ನನ್ನಲ್ಲೂ ಸಹಾ ಆ ಗುಣಗಳಿವೆ. ನಾನು ಆ ಗುಣಗಳನ್ನು ವೃದ್ಧಿಸುವೆ.
                ಹೀಗೆ ಆತನು ಚಿಂತಿಸುತ್ತಾ ರಾಗ, ದ್ವೇಷ ಮತ್ತು ಮೋಹಗಳಿಂದ ದೂರವಾಗುತ್ತಾನೆ. ಆತನ ಮನಸ್ಸು ಉನ್ನತವಾಗಿ ಧಮ್ಮವನ್ನು ಅರಿಯುತ್ತಾನೆ, ಆನಂದಿತನಾಗುತ್ತಾನೆ, ಸುಖದಿಂದ ಕೂಡಿರುತ್ತಾನೆ, ಶಾಂತನಾಗುತ್ತಾನೆ. ಏಕಾಗ್ರತೆಯನ್ನು ಪಡೆಯುತ್ತಾನೆ ಹಾಗು ಉಪಚಾರ ಸಮಾಧಿ ಪಡೆಯುತ್ತಾನೆ.

ಲಾಭಗಳು

1.            ಭಿಕ್ಷುವು ದೇವತೆಗಳಿಗೆ ಪ್ರಿಯನಾಗುತ್ತಾನೆ. ಅವರಿಂದ ರಕ್ಷಣೆ ಪಡೆಯುತ್ತಾನೆ.
2.            ಶ್ರದ್ಧೆಯುಳ್ಳವನಾಗುತ್ತಾನೆ.
3.            ಆನಂದ, ಶಾಂತತೆ ವೃದ್ಧಿಯಾಗುವುದು.
4.            ಸುಗತಿ ಪ್ರಾಪ್ತಿ ಮಾಡಿಕೊಳ್ಳುತ್ತಾನೆ.
                ಈ ಮಾನವ ನಿಜಕ್ಕೂ ಪ್ರಜ್ಞಾನಾದರೆ, ನಿರಂತರ ದೇವತಾನುಸ್ಸತಿ ಮಾಡಲಿ ಅಂತಹುದರಿಂದ ಧನ್ಯವಾಗಲಿ.

ಇದು ದೇವತಾನುಸ್ಸತಿಯಾಗಿದೆ