Wednesday 29 May 2019

8 ಬಗೆಯ ಆರ್ಯರು ಅಥವಾ ವಿಮುಕ್ತರು ಆಥವಾ ಸಂತರು.


8 ಬಗೆಯ ಆರ್ಯರು ಅಥವಾ ವಿಮುಕ್ತರು ಆಥವಾ ಸಂತರು.


ಮೊದಲ ಫಲ - ಸೋತಾಪನ್ನ (ದ್ವೀತೀಯ ಆರ್ಯ)

ಆ ಜ್ಞಾನದ ನಂತರ 2 ಅಥವಾ 3 ಫಲಚಿತ್ತವು ಉದಯಿಸುತ್ತದೆ. ಅದು ಅದರ ಪರಿಣಾಮವಾಗಿದೆ. ಇವು ಆಸವಗಳ ನಾಶದಿಂದಾಗಿವೆ. ಕೆಲವರ ಪ್ರಕಾರ 1 ರಿಂದ 5 ಫಲಚಿತ್ತಗಳು ಬದಲಿಸುತ್ತದೆ. ಗೋತ್ರಭು ಜ್ಞಾನವು ಅನುಲೋಮ ಜ್ಞಾನದ ಪುನರಾವರ್ತನೆಯ ಅಂತ್ಯದಲ್ಲಿ ಆಗುತ್ತದೆ. ಹೀಗಾಗಿ ಕಡಿಮೆ ಎಂದರೂ 2 ಅನುಲೋಮ ಚಿತ್ತಗಳಿರಲೇಬೇಕು. ಕೇವಲ ಒಂದೇ ಪುನರಾವರ್ತನೆಯ ಅಂತ್ಯದಲ್ಲಿ ಆಗುತ್ತದೆ. ಹೀಗಾಗಿ ಕಡಿಮೆ ಎಂದರೂ 2 ಅನುಲೋಮ ಚಿತ್ತಗಳಿರಲೇಬೇಕು. ಕೇವಲ ಒಂದೇ ಪುನರಾವರ್ತನೆ ಮಾಡಲಾರದು ಮತ್ತು ಏಕ ಸರಣಿಯ ರಭಸಗಳು ಹೆಚ್ಚೆಂದರೆ 7 ರಭಸಚಿತ್ತವನ್ನು ಹೊಂದಿರುತ್ತದೆ. ಪರಿಣಾಮವಾಗಿ ಆ ಸರಣಿಯಲ್ಲಿ 2 ಅನುಲೋಮ ಮತ್ತು 1 ಗೋತ್ರಭು ಮತ್ತು ಮಾರ್ಗಚಿತ್ತವು ನಾಲ್ಕನೆಯದಾಗಿದ್ದು 3 ಫಲಚಿತ್ತವನ್ನು ಒಳಗೊಂಡಿರುತ್ತದೆ. ಆದ್ದರಿಂದಲೇ 2 ಅಥವಾ 3 ಫಲಚಿತ್ತವನ್ನು ಹೊಂದಿರುತ್ತದೆ ಎನ್ನಲಾಗಿದೆ.
ಈ ಹಂತದಲ್ಲಿ ಶ್ರೋತದಲ್ಲಿ ಪ್ರವೇಶಿಸುವವನನ್ನು 2ನೆಯ ಆರ್ಯ ಎನ್ನುತ್ತಾರೆ. ಆತನು ಎಷ್ಟೋ ನಿರ್ಲಕ್ಷಿಸುವಂತಹವನೇ ಆಗಲಿ ಆತನು 7 ಜನ್ಮಕ್ಕಿಂತ ಹೆಚ್ಚು ಜನ್ಮ ಪಡೆಯಲಾರ. ಅದಕ್ಕಿಂತ ಮುಂಚೆಯೇ ಆತನು ದುಃಖ ವಿಮುಕ್ತನಾಗುತ್ತಾನೆ.
ಫಲಚಿತ್ತದ ಅಂತ್ಯದಲ್ಲಿ ಆತನು ಭವಂಗವನ್ನು ಪ್ರವೇಶಿಸುತ್ತಾನೆ. ನಂತರ ಮನೋದ್ವಾರ ಅವಜ್ಜನ ಉದಯಿಸುವುದು. ಅದು ಭವಂಗವನ್ನು ತಡೆಮಾಡಿ ಮಾರ್ಗವನ್ನು ವೀಕ್ಷಿಸುವಂತೆ ಮಾಡುವುದು. ಅದು ಅಳಿದ ನಂತರ 7 ರಭಸಗಳ ಮಾರ್ಗ ಅವಲೋಕನ ಉದಯಿಸಬಹುದು. ನಂತರ ಮತ್ತೆ ಭವಂಗ... ಇತ್ಯಾದಿ ನಂತರ ಮತ್ತೆ ಪುನರ್ ಅವಲೋಕಿಸುತ್ತಾನೆ. ಹೀಗೆ ಆತನು ಮತ್ತೆ ಮತ್ತೆ ಮಾರ್ಗವನ್ನು ಮತ್ತು ಫಲವನ್ನು ಪುನರ್ ಅವಲೋಕಿಸಿದ ನಂತರ ಆತನಿಗೆ ಬಂಧನಗಳು ಕಡಿಯಲ್ಪಟ್ಟಿರುವುದು ಮತ್ತು ಉಳಿದಿರುವ ಬಂಧನಗಳು ಗೋಚರಿಸುತ್ತದೆ ಮತ್ತು ಆತನು ನಿಬ್ಬಾಣವನ್ನು ವೀಕ್ಷಿಸುತ್ತಾನೆ.
ಸೋತಾಪನ್ನಾನಿಗೆ 5 ರೀತಿಯ ಪುನರ್ ಅವಲೋಕನವಿದೆ. ಹಾಗೆಯೇ ಸಕದಾಗಾಮಿ ಮತ್ತು ಅನಾಗಾಮಿಗಳನ್ನು ಸದಾ ಪುನರ್ ಅವಲೋಕನವಿದೆ. ಆದರೆ ಅರಹಂತರಿಗೆ ಯಾವ ಪುನರ್ ಅವಲೋಕನವಿಲ್ಲ. ಏಕೆಂದರೆ ಅವರಲ್ಲಿ ಯಾವ ಬಂಧನವಾಗಲಿ ಅಥವಾ ಕಶ್ಮಲಗಳಾಗಲಿ ಇರುವುದಿಲ್ಲ. ಒಟ್ಟು ಗರಿಷ್ಠ 19 ಪುನರ್ ಅವಲೋಕನಗಳಿರುತ್ತದೆ.
ಸಮುದ್ರದಲ್ಲಿ ರಾತ್ರಿ ಪ್ರಯಾಣ ಮಾಡುವ ಪ್ರಯಾಣಿಕನು ದೂರದಿಂದ ಭೂ ಪ್ರದೇಶದ ಬೆಳಕನ್ನು ಕಂಡು ಮರೆಯಾದಂತೆ ಧ್ಯಾನಿಗೆ ಇಲ್ಲಿ ನಿಬ್ಬಾಣದ ದರ್ಶನವಾಗುತ್ತದೆ. ಮೊದಲಬಾರಿಗೆ ನಿಬ್ಬಾಣ ಸಾಕ್ಷಾತ್ಕರಿಸುವುದರಿಂದ, ನಿಬ್ಬಾಣದ ಹೊಳೆಯಲ್ಲಿ ಪ್ರವೇಶಿಸುವುದರಿಂದಾಗಿ ಆತನಿಗೆ ಸೋತಾಪನ್ನ ಎನ್ನುತ್ತಾರೆ.
ಈ ಹೊಳೆಯಲ್ಲಿ ಗೆದ್ದ ವಿಜಯಶಾಲಿ (ಸೋತಾಪನ್ನ) ಈಗ ಪ್ರಾಪಂಚಿಕನಲ್ಲ (ಪುತುಜ್ಜನ) ಬದಲಾಗಿ ಆರ್ಯನಾಗಿರುತ್ತಾನೆ (ಶ್ರೇಷ್ಠ).

ಆತನಲ್ಲಿ 3 ಸಂಕೋಲೆಗಳು ಕತ್ತರಿಸಲ್ಪಟ್ಟಿರುತ್ತದೆ. ಅವೆಂದರೆ :

1. ಸಕ್ಕಾಯದಿಟ್ಟಿ - ಅಂದರೆ ಆತ್ಮ ಇದೆ ಎನ್ನುವ ದೃಷ್ಟಿ ಮತ್ತು ಸಾವೇ ದೇಹದ ಕೊನೆ ಎಂಬ ದೃಷ್ಟಿಗಳು ನಾಶವಾಗುತ್ತದೆ.
2. ಸಂಶಯಗಳು - ತ್ರಿರತ್ನದಲ್ಲಿ ಮತ್ತು 3 ಕಾಲದಲ್ಲಿರುವ ಸಂಶಯಗಳೆಲ್ಲಾ ಆತನಲ್ಲಿ ನಾಶವಾಗುತ್ತದೆ.
3. ಸೀಲಬ್ಬತ ಪರಾಮಾಸ : ಅಂದರೆ ಮಿಥ್ಯಾ ಆಚರಣೆಗಳಿಗೆ ಮತ್ತು ಮಿಥ್ಯಾ ಸಮಾರಂಭಗಳಿಗೆ ಅಂಟಿರುವುದು.
ಇವೆಲ್ಲವೂ ಸೋತಾಪನ್ನಾನಲ್ಲಿ ಕತ್ತರಿಸಲ್ಪಟ್ಟಿರುತ್ತದೆ.
ಸೋತಾಪನ್ನರವರು ಬುದ್ಧರಲ್ಲಿ, ಧಮ್ಮದಲ್ಲಿ, ಸಂಘದಲ್ಲಿ ಅಪಾರ ಅಚಲ ಶ್ರದ್ಧೆಯಿಂದ ಕೂಡಿರುತ್ತಾರೆ.
ಸೋತಾಪನ್ನರವರು ಎಂದಿಗೂ ಪಂಚಶೀಲವನ್ನು ಭಂಗ ಮಾಡುವುದಿಲ್ಲ ಮತ್ತು ಅವರು ಅಪಾಯ ಲೋಕಗಳಾವುದರಲ್ಲೂ ಜನಿಸುವುದಿಲ್ಲ ಮತ್ತು ಅವರು ಬೋಧಿಗೆ ವಾಲಿರುವುದರಿಂದಾಗಿ ಹೆಚ್ಚೆಂದರೆ 7 ಜನ್ಮಗಳನ್ನು ಹೊಂದಿರುತ್ತಾರೆ. ಅದರ ಒಳಗೆಯೇ ನಿಬ್ಬಾಣವನ್ನು ಪಡೆಯುತ್ತಾರೆ ಮತ್ತು ಅವರಿಗೆ 7 ಸಂಕೋಲೆಗಳು ಮಾತ್ರ ಉಳಿದಿರುತ್ತದೆ. ಮೆತ್ತಾ ಕರುಣೆಯಿಂದ ಕೂಡಿರುವ ಅವರು ಪರರನ್ನು ಸೋತಾಪನ್ನ ಮಾಡಲು ಸದಾ ಪ್ರಯತ್ನಶೀಲರಾಗಿರುತ್ತಾರೆ ಹಾಗು ಸೋತಾಪನ್ನರಲ್ಲಿ ಈ 5 ದೋಷಗಳು ಇರುವುದಿಲ್ಲ.
1. ಬೇರೆಯವರು ಬೋಧನೆ ಮಾಡಿದರೆ ಬೇಸರಪಡುವುದು (ಮಾಕ್ಕೋ)
2. ತನ್ನನ್ನು ಶ್ರೇಷ್ಠರಿಗೆ ಹೋಲಿಸಿಕೊಳ್ಳುವುದು (ಫಲಿಸೋ)
3. ಅಸೂಯೆ (ಇಸ್ಸಾ)
4. ಸ್ವಾರ್ಥ (ಮಚ್ಚರಿಯ)
5. ಮಾಯಾವಿಯತೆ (ಮಾಯಾ) ಅಂದರೆ ಮೋಸ, ವಂಚನೆ.

ದ್ವಿತೀಯ ಮಾರ್ಗದ ಜ್ಞಾನ - 3ನೆಯ ಆರ್ಯ :

ಇಲ್ಲಿ ಸೋತಾಪನ್ನರವರು ಪದೇ ಪದೇ ಮಾರ್ಗವನ್ನು ವೀಕ್ಷಿಸಿ, ಇಂದ್ರೀಯ ಭೋಗಗಳಾದ ಲೋಭವನ್ನು ಮತ್ತು ದ್ವೇಷವನ್ನು ಕ್ಷಯಿಸುತ್ತಾರೆ, ದುರ್ಬಲಗೊಳಿಸುತ್ತಾರೆ ಮತ್ತು ಅವರು ಇಂದ್ರೀಯಗಳನ್ನು, ಬಲಗಳನ್ನು ಸಪ್ತಬೋಧಿ ಅಂಗಗಳನ್ನು ಬಲಿಷ್ಠಗೊಳಿಸಿ, ಮತ್ತೆ ಪಂಚಖಂಧಗಳಲ್ಲಿ ತ್ರಿಲಕ್ಷಣ ವೀಕ್ಷಿಸುತ್ತಾ, ಜ್ಞಾನಗಳಲ್ಲಿ ವೃದ್ಧಿಯಾಗುತ್ತಾ ಮುಂದುವರೆಯುತ್ತಾರೆ. ನಂತರ ಸಂಖಾರಗಳಲ್ಲಿ ಉಪೇಖ್ಖಾ ತಾಳಿ ಅನುಲೋಮ ನ್ಯಾನ ಪಡೆದು, ಗೋತ್ರಭು ಜ್ಞಾನ ಉದಯಿಸುತ್ತದೆ. ನಂತರ ಸಕದಾಗಾಮಿ (ಒಮ್ಮೆ ಮಾತ್ರ ಹಿಂತಿರುಗುವವ) ಮಾರ್ಗವು ಉದಯಿಸುತ್ತದೆ. ಸಕದಾಗಾಮಿಯ ಮಾರ್ಗದ ಜ್ಞಾನವು ಸಿಗುತ್ತದೆ.

ದ್ವಿತೀಯ ಫಲ - 4ನೆಯ ಆರ್ಯ : ಸಕದಾಗಾಮಿ :

ಇಲ್ಲಿ ಫಲವಿನ್ಯಾನವನ್ನು ಹಿಂದಿನ ಪ್ರಕ್ರಿಯೆಯಂತೆಯೆ ಅಥರ್ೈಸಿಕೊಳ್ಳುವುದು ಮತ್ತು ಇಲ್ಲಿ ಸಕದಾಗಾಮಿಯು (ಒಮ್ಮೆ ಮರಳುವವ) 4ನೇಯ ಆರ್ಯನಾಗಿದ್ದಾರೆ. ಅವರು ದುಃಖವನ್ನು ಅಂತ್ಯ ಮಾಡಲು ಒಮ್ಮೆ ಮಾತ್ರ ಲೋಕಕ್ಕೆ ಹಿಂತಿರುಗುತ್ತಾರೆ.
ಮುಂದೆ ಬರುವಂತಹ ಪುನರ್ ಅವಲೋಕನವನ್ನು ಹಿಂದೆಯೇ ವಿವರಿಸಲಾಗಿದೆ.
ಸಕದಾಗಾಮಿತ್ವವು ಎರಡನೆಯ ಹಂತದ ಸಂತತ್ವವಾಗಿದೆ. ಇಲ್ಲಿ ಇವರಲ್ಲಿ ಕಾಮರಾಗ ಮತ್ತು ಪಟಿಘ (ದ್ವೇಷ) ಬಹುಪಾಲು ನಾಶವಾಗಿರುತ್ತದೆ. ಇವರಿಗೆ ಒಮ್ಮೆ ಮರಳುವವ ಎಂದು ಕರೆಯುತ್ತಾರೆ. ಏಕೆಂದರೆ ಇವರು ಮಾನವರಾಗಿ ಒಮ್ಮೆ ಮಾತ್ರ ಜನಿಸಿ ನಂತರ ಅರಹಂತರಾಗುತ್ತಾರೆ.

ತೃತೀಯ ಮಾರ್ಗದ ಜ್ಞಾನ - 5ನೆಯ ಆರ್ಯ :

ಈ ರೀತಿಯಾಗಿ ಪುನರ್ ಅವಲೋಕಿಸಿ ಇಲ್ಲಿ ಸಕಾದಗಾಮಿಯು ವಜರ್ಿಸುವ ಮಹತ್ಕಾರ್ಯದಲ್ಲಿ ತಲ್ಲೀನರಾಗುತ್ತಾರೆ. ಅವರು ದ್ವೇಷ ಮತ್ತು ಇಂದ್ರೀಯ ಸುಖಗಳಲ್ಲಿರುವ ಲೋಭವನ್ನು ಪೂರ್ಣವಾಗಿ ನಿಶ್ಶೇಶವಾಗಿ ಪರಿತ್ಯಜಿಸುತ್ತಾರೆ. ಅವರು ಪಂಚೇಂದ್ರಿಯಗಳನ್ನು, ಪಂಚಬಲಗಳನ್ನು ಮತ್ತು ಸಪ್ತಬೋಧಿ ಅಂಗಗಳನ್ನು ಒಟ್ಟುಗೊಳಿಸಿ ಪಂಚಖಂಧಗಳಲ್ಲಿ ತ್ರಿಲಕ್ಷಣ ಜ್ಞಾನ ಅರಿಯಲು ಪ್ರಾರಂಭಿಸುತ್ತಾರೆ ಮತ್ತು ನಿರಂತರ ಅಭಿವೃದ್ಧಿಪರ ಜ್ಞಾನಗಳನ್ನು ಅರಿಯುತ್ತಿರುತ್ತಾರೆ.
ಯಾವಾಗ ಅವರು ಈ ರೀತಿಯಾಗಿ ಮಾಡುವರೋ, ಅಗ ಸಂಖಾರಗಳಲ್ಲಿ ಉಪೇಕ್ಷೆ ತಾಳುತ್ತಾರೆ. ಅನುಲೋಮ ಜ್ಞಾನ ಮತ್ತು ಗೋತ್ರಭು ಜ್ಞಾನವು ಸಹಾ ಹಿಂದೆ ವಿವರಿಸಿದ್ದಂತೆಯೇ ಒಂದೇಬಾರಿ ಗಮನ ನೀಡಿದ್ದರಿಂದಾಗಿ ಉದಯಿಸುತ್ತದೆ. ಆಗ ಆನಾಗಾಮಿಯ ಮಾರ್ಗದ ಜ್ಞಾನವು ಗೋತ್ರಭು ಜ್ಞಾನದ ಹಿಂದೆಯೇ ಲಭಿಸುತ್ತದೆ. ಇದು ಅನಾಗಾಮಿ ಮಾರ್ಗದ ಜ್ಞಾನವಾಗಿದೆ.

ತೃತೀಯ ಫಲಜ್ಞಾನ - 6ನೆಯ ಉದಾತ್ತ ಪುರುಷ (ಆರ್ಯ) (ಅನಾಗಾಮಿ)

ಫಲಜ್ಞಾನವನ್ನು ಈ ಹಿಂದಿನಂತೆಯೇ ಆರ್ಥಮಾಡಿಕೊಳ್ಳಬೇಕು ಮತ್ತು ಈ ಸಂದರ್ಭದಲ್ಲಿ ಹಿಂತಿರುಗದವ (ಅನಾಗಾಮಿ)ಯ 6ನೇ ಆರ್ಯನೆಂದು ಕರೆಯುತ್ತಾರೆ. ಅವರ ಮರಣದ ನಂತರ ಯೋಗ್ಯ ಸ್ಥಳದಲ್ಲಿ ಹುಟ್ಟುತ್ತಾರೆ ಮತ್ತು ಅಲ್ಲಿ ಅವರು ಪೂರ್ಣವಾದ ಸಾಧನೆಯನ್ನು ಅಂದರೆ ಪೂರ್ಣ ಆರಿಹೋಗುವಿಕೆ ಪ್ರಾಪ್ತಿಮಾಡಿ ಮತ್ತೆ ಇಲ್ಲಿ ಬಾರದಂತಹ ಈ ಲೋಕಕ್ಕೆ ಬಾರದಂತಹ ಸ್ಥಿತಿಯನ್ನು ಪಡೆಯುತ್ತಾರೆ.
ಆನಾಗಾಮಿಗೆ ಎಂದಿಗೂ ಹಿಂತಿರುಗದವ ಎಂದು ಕರೆಯುತ್ತಾರೆ. ಏಕೆಂದರೆ ಇವರು ಎಂದಿಗೂ ಮತ್ತೆ ಮಾನವರಾಗಿ ಹುಟ್ಟುವುದಿಲ್ಲ. ಅವರು ಕೇವಲ ಶುದ್ಧವಾಸವೆಂಬ ಅರೂಪಲೋಕದಲ್ಲಿ ಜನಿಸಿ ಅಲ್ಲಿಂದಲೇ ಅರಹಂತರಾಗುತ್ತಾರೆ. ಇವರಲ್ಲಿ ಕಾಮರಾಗ ಮತ್ತು ದ್ವೇಷಿಗಳು (ಪುಟಿಘ) ಪೂರ್ಣವಾಗಿ ನಶಿಸಿರುತ್ತದೆ.
ಒಂದುವೇಳೆ ಗೃಹಸ್ಥರಲ್ಲಿ ಯಾರಾದರೂ ಅನಾಗಾಮಿಯಾದರೆ ಅವರು ಪೂರ್ಣ ಬ್ರಹ್ಮಚಾರಿಯಾಗಿ ಜೀವಿಸುತ್ತಾರೆ.
ಅರಹಂತರಾಗುವುದು ಅಷ್ಟು ಸುಲಭವಲ್ಲ
ಕೆಲವು ಭಿಕ್ಷುಗಳು, ಶೀಲವಂತರಾಗಿದ್ದರು, ಸಮಾಧಿವಂತರು ಆಗಿದ್ದರು. ಜೊತೆಗೆ ಅನಾಗಾಮಿಗಳಾಗಿದ್ದರು. ಅವರು ಅಷ್ಟಕ್ಕೆ ತೃಪ್ತರಾದರು. ಅವರು ಸುಲಭವಾಗಿ ಅರಹಂತತ್ವವನ್ನು ಪ್ರಾಪ್ತಿ ಮಾಡಬಹುದೆಂದು ನಂಬಿದ್ದರು. ಅವರು ಬುದ್ಧರನ್ನು ಕಾಣಲು ಹೋದರು. ಆಗ ಭಗವಾನರು ಅವರನ್ನು ಕೇಳಿದರು ಭಿಕ್ಷುಗಳೇ ನೀವು ಅರಹತ್ವ ಪ್ರಾಪ್ತಿ ಮಾಡಿ ಆಯಿತೆ? ಆಗ ಅವರು ನಾವು ಯಾವಾಗ ಬೇಕಾದರೂ ಅರಹತ್ವ ಪ್ರಾಪ್ತಿ ಮಾಡಬಲ್ಲೆವು, ನಾವು ಅಂತಹ ಸ್ಥಿತಿಯಲ್ಲಿದ್ದೇವೆ.
ಆಗ ಭಗವಾನರು ಅವರಿಗೆ ಈ ಗಾಥೆಯನ್ನು ನುಡಿದರು.
ಕೇವಲ ಶೀಲದಿಂದಾಗಲಿ, ತಪಚ್ಚರ್ಯೆಯಿಂದಾಗಲಿ, ಬಹು ಶ್ರುತ (ಬಹಳ ಕೇಳಿ ತಿಳಿದಿರುವುದರಿಂದಾಗಲಿ) ದಿಂದಾಗಲಿ, ಸಮಾಧಿ ಲಾಭದಿಂದಾಗಲಿ, ಅಥವಾ ಏಕಾಂತವಾಸದಿಂದಾಗಲಿ, ಅಲೌಕಿಕ ಸುಖದಿಂದಾಗಲಿ, ಓ ಭಿಕ್ಷುಗಳೇ, ನೀವು ತೃಪ್ತಿ ತಾಳದಿರಿ. ಅಸವ ಕ್ಷಯ (ಅರಹತ್ವದಲ್ಲಿ) ಪ್ರಾಪ್ತಿಯವರೆಗೂ ತೃಪ್ತರಾಗಬೇಡಿ.
ಅಲ್ಲಿಯವರೆಗೂ ನೀವು ಅರಹಂತರ ಪರಿಶುದ್ಧ ಸುಖ ಪಡೆಯಲಾರಿರಿ.

ನಾಲ್ಕನೆಯ ಮಾರ್ಗದ ಜ್ಞಾನ - 7ನೆಯ ಆರ್ಯ :

ಈ ರೀತಿಯಾಗಿ ಪುನರಾವಲೋಕಿಸಿ, ತಮ್ಮ ಪರಿತ್ಯಾಗದಲ್ಲಿ ಪ್ರಯತ್ನಶೀಲತೆ ಆರಂಭಿಸುತ್ತಾರೆ. ರೂಪ ಲೋಕದಲ್ಲಿ ಮತ್ತು ಅರೂಪ ಲೋಕದಲ್ಲಿ ಅವರಿಗೆ ಇರುವಂತಹ ರಾಗವನ್ನು ತೊಡೆದುಹಾಕುತ್ತಾರೆ. ಪರಿತ್ಯಾಗ ಮಾಡುತ್ತಾರೆ. ಅಹಂಕಾರವನ್ನು ತೊರೆಯುತ್ತಾರೆ, ಅವಿಶ್ರಾಂತಿಯ ಸ್ಥಿತಿಗೆ ಅತೀತವಾಗಿ ಗೆಲ್ಲುತ್ತಾರೆ ಮತ್ತು ಅಜ್ಞಾನದಿಂದ ಪೂರ್ಣವಾಗಿ ಮುಕ್ತರಾಗುತ್ತಾರೆ. ಕುಶಲಸ್ಥಿತಿಗಳಾದ ಪಂಚೇಂದ್ರಿಯಗಳನ್ನು ಪಂಚಬಲಗಳನ್ನು ಸಪ್ತಬೋಧಿ ಅಂಗಗಳನ್ನು ಒಗ್ಗೂಡಿಸಿ ಸಾಧನೆ ಮಾಡುತ್ತಾರೆ. ಮತ್ತೆ ಪಂಚಖಂಧಗಳಲ್ಲಿ ತ್ರಿಲಕ್ಷಣಗಳನ್ನು ಅರಿಯುತ್ತಾರೆ ಮತ್ತು ಎಲ್ಲಾ ಜ್ಞಾನಗಳನ್ನು ಪಡೆಯುತ್ತಾರೆ.
ಯಾವಾಗ ಅವರು ಹಾಗೆ ಮಾಡುತ್ತಾರೋ, ಸಂಖಾರಗಳಲ್ಲಿ ಉಪೇಖ್ಖಾ ಭಾವನೆ ತಾಳುತ್ತಾರೋ, ಅನುಲೋಮ ಜ್ಞಾನವನ್ನು ಪಡೆಯುತ್ತಾರೋ ಆಗ ಗೋತ್ರಭು ಜ್ಞಾನವು ಒಂದೇಬಾರಿಯ ಗಮನಗೊಡುವಿಕೆಗೆ ಉದಯಿಸುತ್ತದೆ. ನಂತರ ಅರಹಂತರ ಮಾರ್ಗವು ಉದಯಿಸುತ್ತದೆ. ಇದು ಅರಹಂತರ ಮಾರ್ಗದ ಜ್ಞಾನವಾಗಿದೆ.

ನಾಲ್ಕನೆಯ ಫಲ - 8ನೆಯ ಆರ್ಯರು (ಅರಹಂತರು) :

ಮಾರ್ಗ ಜ್ಞಾನದ ನಂತರ ಫಲಚಿತ್ತವನ್ನು ಹಿಂದಿನಂತೆಯೇ ಅರ್ಥಮಾಡಿಕೊಳ್ಳಬೇಕು ಮತ್ತು ಈ ಹಂತದಲ್ಲಿರುವ ಅರಹಂತರಿಗೆ 8ನೆಯ ಆರ್ಯರು ಎನ್ನುತ್ತಾರೆ. ಅವರು ಅಸವಗಳನ್ನು ನಾಶಪಡಿಸಿರುವ ಪರಮಶ್ರೇಷ್ಠರಾಗಿದ್ದಾರೆ. ಅವರು ಅಂತಿಮ ಶರೀರಧಾರಿಗಳಾಗಿದ್ದಾರೆ. ಅವರು ಹೊರೆಯನ್ನು ಇಳಿಸಿದವರಾಗಿದ್ದಾರೆ. ತಮ್ಮ ಅಂತಿಮ ಗುರಿಯನ್ನು ತಲುಪಿದವರಾಗಿದ್ದಾರೆ ಮತ್ತು ತಮ್ಮ ತಡೆಗಳನ್ನು, ಬಂಧನಗಳನ್ನು ನಾಶಪಡಿಸಿದವರಾಗಿದ್ದಾರೆ. ಮತ್ತು ಅವರು ತಮ್ಮ ಪರಮಾರ್ಥ ಜ್ಞಾನದಿಂದಾಗಿ ಸರಿಯಾಗಿ ಮುಕ್ತರಾಗಿದ್ದಾರೆ. ಅವರು ಶ್ರೇಷ್ಠಮಟ್ಟದ ಪೂಜೆಗೆ, ಆತಿಥ್ಯಕ್ಕೆ, ದಾನಕ್ಕೆ ಅರ್ಹರು ಆಗಿದ್ದಾರೆ ಮತ್ತು ದೇವತೆಗಳಿಂದಲೂ ಮತ್ತು ಜಗತ್ತಿನ ಎಲ್ಲಾ ಜೀವಿಗಳಿಂದಲೂ ಗೌರವ, ಪೂಜೆಗೆ ಅರ್ಹರಾಗಿದ್ದಾರೆ.
ಈ ರೀತಿಯಾಗಿ ಜ್ಞಾನದರ್ಶನ ವಿಶುದ್ಧಿಯು 4 ಮಾರ್ಗಗಳನ್ನು ಮತ್ತು 4 ಫಲಗಳನ್ನು ಒಳಗೊಂಡಿದೆ.
ಅರಹಂತರು ರೂಪ ರಾಗ, ಅರೂಪರಾಗಗಳಲ್ಲಿ (ಸಮಥಾ ಧ್ಯಾನದ ಮತ್ತು ಅರೂಪ ಧ್ಯಾನದ ಅವಸ್ಥೆಗಳಲ್ಲಿ) ಆಸಕ್ತಿ ಪೂರ್ಣವಾಗಿ ತೊರೆದಿರುತ್ತಾರೆ ಮತ್ತು ಅವರು ಅಹಂಕಾರ ವಿಶ್ರಾಂತಿರಹಿತತೆ ಮತ್ತು ಅಜ್ಞಾನವನ್ನು ಪೂರ್ಣ ನಾಶಮಾಡಿ ಅರಹಂತತ್ವ ಪ್ರಾಪ್ತಿ ಮಾಡಿರುತ್ತಾರೆ.
ಇವರಿಗೆ ಅಸೇಖ ಎನ್ನುತ್ತಾರೆ, ಅಂದರೆ ಅವರಿಗೆ ಯಾವ ಶಿಕ್ಷಣದ ಅಗತ್ಯವಿಲ್ಲ ಎಂದರ್ಥ. ಮಿಕ್ಕ ಆರ್ಯರಾದ ಸೋತಾಪನ್ನ ಸಕದಾಗಾಮಿ ಮತ್ತು ಅನಾಗಾಮಿಗಳಿಗೆ ಸೇಖರೆನ್ನುತ್ತಾರೆ. ಏಕೆಂದರೆ ಅವರಿಗೆ ಶಿಕ್ಷಣದ ಅಗತ್ಯವಿದೆ.
ಅರಹಂತರು ಪೂರ್ಣವಾಗಿ ಮುಕ್ತರಾಗಿರುತ್ತಾರೆ. ಅವರಿಗೆ ಜನ್ಮವಿರುವುದಿಲ್ಲ. ಅವರ ಹಳೆಯ ಬಂಧನಗಳೆಲ್ಲ ನಾಶವಾಗಿರುತ್ತದೆ ಮತ್ತು ಹೊಸ ಯಾವ ಬಂಧನವನ್ನು ಅವರು ಉಂಟುಮಾಡಲಾರರು. ಎಲ್ಲಾ ವಿಧವಾದ ಬಂಧನಗಳು, ಕ್ಲೇಶಗಳು, ತನ್ಹಾಗಳು ಅವರಲ್ಲಿ ನಾಶವಾಗಿರುತ್ತದೆ. ಅವರು ನಿರೋಧ ಸಮಾಪತ್ತಿಯನ್ನು ತಡೆರಹಿತವಾಗಿ ಏಳು ದಿನಗಳ ಕಾಲ ವಿಹರಿಸುತ್ತಾರೆ. ನಿರೋಧ ಸಮಾಪತ್ತಿ ಸ್ಥಿತಿಯಲ್ಲಿ ಅವರು ಪರಮಸುಖದಲ್ಲಿ ನೆಲೆಸುತ್ತಾರೆ. ಆಗ ಅವರಲ್ಲಿ ಉಸಿರಾಟ ನಿಂತಿರುತ್ತದೆ. ಎಲ್ಲಾರೀತಿಯ ಗ್ರಹಿಕೆ ಮತ್ತು ವೇದನೆಗಳು ಸಹಾ ನಿರೋಧಕ್ಕೆ ಒಳಪಟ್ಟಿರುತ್ತದೆ. ಅಂದರೆ ಗ್ರಹಿಕೆಯಾಗಲಿ ಅಥವಾ ವೇದನೆಯಾಗಲಿ ಉದಯಿಸುವುದೇ ಇಲ್ಲ.

ಮರಣದ ನಂತರ ಅರಹಂತರು :

ಅರಹಂತರಲ್ಲಿ ಎಲ್ಲಾರೀತಿಯ ಆಕಾರ (ದೇಹ), ವೇದನೆಗಳು, ಗ್ರಹಿಕೆಗಳು, ಸಂಖಾರಗಳು ಮತ್ತು ವಿನ್ಯಾನವು ಪರಿತ್ಯಜಿಸಲ್ಪಟ್ಟಿರುತ್ತದೆ, ಬುಡಮೇಲಾಗಿರುತ್ತದೆ, ತಾಳೆಮರದ ಕಾಂಡವನ್ನು ಕತ್ತರಿಸಿ ಮರ ಉರುಳಿಸಿ ಮತ್ತೆ ಆ ಮರವು ಚಿಗುರದಂತೆ ಪಂಚಖಂಧಗಳನ್ನು ಕತ್ತರಿಸಿರುತ್ತಾರೆ. ಆದ್ದರಿಂದ ಅರಹಂತರನ್ನು ಪರಿನಿಬ್ಬಾಣದ ನಂತರ ನೋಡಲಾಗುವುದಿಲ್ಲ.
ಅವರು ಇದ್ದಾರೆ, ಇಲ್ಲ, ಇದ್ದೂ ಇಲ್ಲ, ಇಲ್ಲದೆಯೇ ಇದ್ದಾರೆ ಎಂಬ ಯಾವ ತರ್ಕವೂ ಅವರಿಗೆ ಹೊಂದಿಕೆಯಾಗುವುದಿಲ್ಲ. ಕೇವಲ ಪರಿನಿಬ್ಬಾಣ ಪಡೆದಿದ್ದಾರೆ ಎಂದು ಹೇಳಬಹುದು. ಯಾವ ಯಾವುದರಿಂದ ಅವರನ್ನು ಗುತರ್ಿಸಬಹುದೋ ಅವ್ಯಾವುವೂ ಅಲ್ಲಿರುವುದಿಲ್ಲ. ಅಂದರೆ ದೇಹದಿಂದಾಗಲಿ, ಸಂವೇದನೆಗಳಿಂದಾಗಲಿ, ವ್ಯಕ್ತಿತ್ವದಿಂದಾಗಲಿ, ಸಮಾಧಿ ಸ್ಥಿತಿಗಳಿಂದಾಗಲಿ, ಪ್ರಜ್ಞೆಯಿಂದಾಗಲಿ ಯಾವುದೇ ಚಿತ್ತ ಮತ್ತು ಚೇತಸಿಕಾಗಳಿಂದಾಗಲಿ ಅವರನ್ನು ಗುತರ್ಿಸಲು ಅಸಾಧ್ಯ. ಅದ್ಯಾವುದೂ ಅಲ್ಲಿರುವುದಿಲ್ಲ. ಪರಿನಿಬ್ಬಾಣ ಪಡೆದಿದ್ದಾರೆ ಎಂದು ಮಾತ್ರ ಹೇಳಬಹುದು.

ಖೀಣಾಸವ ಅರಹಂತರಲ್ಲಿ 10 ಗುಣಗಳು ಇರುವುದಿಲ್ಲ.

1. ಅವರು ಜೀವಹತ್ಯೆ ಮಾಡುವುದಿಲ್ಲ
2. ಅವರು ತನಗೆ ಸೇರದಿರುವುದನ್ನು ಸ್ವೀಕರಿಸುವುದಿಲ್ಲ.
3. ಬ್ರಹ್ಮಚಾರಿಗಳಾಗಿರುತ್ತಾರೆ.
4. ಸುಳ್ಳಾಡುವುದಿಲ್ಲ
5. ಹಣವನ್ನು (ಐಶ್ವರ್ಯ) ಬಳಸುವುದಿಲ್ಲ
6. ಪಕ್ಷಪಾತದಿಂದ ಕೂಡಿರುವುದಿಲ್ಲ
7. ಲೋಭದಿಂದ ಕೂಡಿರುವುದಿಲ್ಲ
8. ದ್ವೇಷದಿಂದ ಕೂಡಿರುವುದಿಲ್ಲ
9. ಮೋಹದಿಂದ ಕೂಡಿರುವುದಿಲ್ಲ
10. ಭಯದಿಂದ ಕೂಡಿರುವುದಿಲ್ಲ