Sunday 18 October 2015

upekkha or equanimity meditation in kannada ಉಪೇಖ್ಖಾ (ಉಪೇಕ್ಷಾ) ಧ್ಯಾನ

ಉಪೇಖ್ಖಾ (ಉಪೇಕ್ಷಾ) ಧ್ಯಾನ

                ಮಾನವ ಶಾಂತಿ ಅಪೇಕ್ಷೆಯಿಂದಲೇ ಪ್ರಾರಂಭದಲ್ಲಿ ಧರ್ಮದ ಬಳಿಗೆ ಬರುತ್ತಾನೆ. ಜೀವನದಲ್ಲಿ ಈ ಶಾಂತಿಯು ಸಮಚಿತ್ತತೆಯಿಂದ ಲಭಿಸುತ್ತದೆ. ಜೀವನದಲ್ಲಿ ಲಾಭ, ನಷ್ಟ, ಜಯ, ಪರಾಜಯ, ನಿಂದೆ, ಸ್ತುತಿ, ಸುಖ-ದುಃಖಗಳು ಬರುತ್ತವೆ, ಇರುತ್ತವೆ. ಹಾಗೆಯೇ ಸಮಚಿತ್ತತೆಯನ್ನು ಲೋಭ, ದ್ವೇಷ, ಭಯ, ಚಿಂತೆಗಳು ಸಹಾ ಕದಡುತ್ತದೆ. ಈ ಎಲ್ಲಾ ಕ್ಲೇಶಗಳನ್ನು ಸುಖ-ದುಃಖಗಳನ್ನು ಮೀರಿದ ಸ್ಥಿತಿಯೇ ಸಮಚಿತ್ತತೆ ಆಗಿದೆ. ಇದು ಪಾಲಿಸಲು ಅತ್ಯಂತ ಕಠಿಣವು, ಅಷ್ಟೇ ಪ್ರಾಧಾನ್ಯತೆವುಳ್ಳದ್ದು ಆಗಿದೆ.
                ಸಮಚಿತ್ತತೆಯಿಂದ ಕೂಡಿದವನು ಅಭಯನು, ಅಶೋಕನು, ಅದ್ವೇಷಿಯು ಹಾಗೆಯೇ ಅಲೋಭಿಯು ಮತ್ತು ಅಮೋಹಿಯು ಆಗಿರುತ್ತಾನೆ. ಅದರಿಂದಾಗಿ ಇದು ಮಹತ್ತರವಾದ ಗುಣವಾಗಿದೆ. ಮಾನವನಿಗೆ ಸದಾ ಪ್ರಿಯ ಮತ್ತು ಅಪ್ರಿಯ ಬಯಕೆಗಳಿರುತ್ತದೆ. ಅದರಲ್ಲು ಪ್ರಿಯ ವ್ಯಕ್ತಿಗಳು ಮತ್ತು ಅಪ್ರಿಯ ವ್ಯಕ್ತಿಗಳು ಎಂಬ ಬಂಧನವಿದ್ದು, ಇದರಿಂದಾಗಿ ಆತನು ಪ್ರಿಯ ವ್ಯಕ್ತಿಗಳ ವಿಯೋಗದಿಂದ ದುಃಖಿತನಾಗುತ್ತಾನೆ. ಹಾಗೆಯೇ ಅಪ್ರಿಯ ವ್ಯಕ್ತಿಗಳ ಸಮಾಗಮದಿಂದ ಭಯ ಅಥವಾ ದ್ವೇಷವುಳ್ಳವನು ಆಗುತ್ತಾನೆ. ಯಾವಾಗ ಆತನಲ್ಲಿ ಈ ಪ್ರಿಯ ವ್ಯಕ್ತಿಗಳು ಮತ್ತು ಅಪ್ರಿಯ ವ್ಯಕ್ತಿಗಳು ಎಂಬ ಬಾಂಧವ್ಯ ಸಮಚಿತ್ತತೆಯಿಂದಾಗಿ ಅಳಿದು ಹೋಗುತ್ತದೋ ಸರ್ವರನ್ನು ಶಾಂತವಾಗಿ ಕಾಣುತ್ತಾನೆ. ವ್ಯಕ್ತಿಗಳ ಬಂಧನದಿಂದ ಮುಕ್ತನಾಗುತ್ತಾನೆ. ಸರ್ವರನ್ನು ಸಮಭಾವದಿಂದ ಕಾಣುತ್ತಾನೆ. ನ್ಯಾಯಪರತೆ ಹೊಂದುತ್ತಾನೆ. ಆಸಕ್ತಿಯನ್ನು ವಜರ್ಿಸಿ ನೋಡುವುದರಿಂದ (ಉಪೇಖ್ಖತ್ತಿ) ಮತ್ತು ತಟಸ್ಥತೆ ಹೊಂದಿರುವುದರಿಂದಾಗಿ ಇದನ್ನು ಉಪೇಖ್ಖಾ ಎನ್ನುತ್ತಾರೆ.
                ಉಪೇಖ್ಖಾದ ಲಕ್ಷಣವೇನೆಂದರೆ ಜೀವಿಗಳ ಬಗ್ಗೆ ತಟಸ್ಥತೆ. ಇದರ ಕಾರ್ಯ ಏನೆಂದರೆ ಎಲ್ಲಾ ಜೀವಿಗಳನ್ನು ಸಮಭಾವದಿಂದ ನೋಡುವುದು. ಇದು ರಾಗ ಮತ್ತು ದ್ವೇಷಗಳು (ಪ್ರಿಯ ಮತ್ತು ಅಪ್ರಿಯ ಬಯಕೆಗಳು) ಶಾಂತವಾಗುವುದರಿಂದ ವ್ಯಕ್ತವಾಗುತ್ತದೆ. ಇದರ ತತ್ಕ್ಷಣದ ಕಾರಣ ಏನೆಂದರೆ ಜೀವಿಗಳ ಸುಖದುಃಖಕ್ಕೆ ಆ ಜೀವಿಗಳೇ ಕಾರಣ ಎಂದು ಸ್ಪಷ್ಟವಾಗಿ ಅರಿಯುವುದು. ಉಪೇಖ್ಖಾವು ಅಪ್ರಿಯ ಮತ್ತು ಪ್ರಿಯ ಯೋಚನೆಗಳು ಸ್ತಬ್ದವಾದಾಗ ಜಯಶಾಲಿಯಾಗುತ್ತದೆ. ಆದರೆ ಅಲಕ್ಷಬಾರದ ಪ್ರಾಪಂಚಿಕ ವಿಷಯಗಳಲ್ಲಿ ಉಪೇಕ್ಷೆ ತಾಳಿದಾಗ ಸೋಲುತ್ತದೆ

.
ಉಪೇಖ್ಖಾ ಧ್ಯಾನ ವಿಧಾನ :
                ಯಾರು ಬ್ರಹ್ಮವಿಹಾರದ ಉಪೇಖ್ಖಾ ಧ್ಯಾನದಲ್ಲಿ ತಲ್ಲೀನನಾಗಲು ಬಯಸುವನೋ ಆತನು ಮೊದಲು ಮೆತ್ತಾದಲ್ಲಿ ಆಗಲಿ, ಅಥವಾ ಕರುಣಾದಲ್ಲಿ ಆಗಲಿ ಅಥವಾ ಮುದಿತಾದಲ್ಲಿ ಆಗಲಿ ತ್ರಿತೀಯ ಸಮಾಧಿ ಪಡೆದಿರಬೇಕು. ಅನಂತರ ಆತನು ತ್ರೀತೀಯ ಸಮಾಧಿಯಿಂದ ನಿರ್ಗಮಿಸಿ ಅದರ ಪುನರ್ ಅವಲೋಕನ ಮಾಡಬೇಕು. ಹಾಗೆ ಮಾಡಿದಾಗ ಆತನಿಗೆ ಜೀವಿಗಳಿಗೆ ಅಂಟುವಿಕೆ ದುಃಖದ ರೀತಿ ಭಾಸವಾಗುತ್ತದೆ. ಹಾಗು ಆನಂದಕ್ಕಿಂತ, ಸುಖಕ್ಕಿಂತ, ಆನಂದ ಮೀರಿದ, ಸುಖವನ್ನು ಮೀರಿದ ಸಮಚಿತ್ತತೆಯು ಇಷ್ಟವಾಗುತ್ತದೆ. ಆಗ ಆತನು ಸಮಚಿತ್ತತೆಯಿಂದ ಕೂಡಿದ ಮನದಿಂದ ತಟಸ್ಥ ವ್ಯಕ್ತಿಯ ಬಗ್ಗೆ ಕೇಂದ್ರೀಕೃತಗೊಳ್ಳುತ್ತಾನೆ. ಬಹುಕಾಲ ಹೀಗೆ ಇದ್ದು ನಂತರ ಆತನು ಪ್ರಿಯ ವ್ಯಕ್ತಿಯ ಬಗ್ಗೆ ಸಮಚಿತ್ತತೆಯಿಂದ ಕೂಡಿ ಬಹುಕಾಲ ನೆಲೆಸುತ್ತಾನೆ. ನಂತರ ದ್ವೇಷಿಸುವವನನ್ನು ನೆನಪು ಮಾಡುತ್ತಾ ಆತನ ಬಗ್ಗೆಯು ಸಮಚಿತ್ತತೆಯನ್ನು ಪ್ರಸಾರ ಮಾಡುತ್ತಾನೆ. ನಂತರ ಎಲ್ಲಾ ಜೀವಿಗಳ ಮೆಲೆ ಸಮಚಿತ್ತತೆ ಪ್ರಸರಿಸುತ್ತಾನೆ. ಹಾಗೆಯೇ ಪೂರ್ವ ದಿಕ್ಕಿನಲ್ಲಿರುವ ಎಲ್ಲಾ ಜೀವಿಗಳ ಬಗ್ಗೆ ಸಮಚಿತ್ತತೆ ಪ್ರಸರಿಸುತ್ತಾನೆ. ನಂತರ ಪಶ್ಚಿಮ, ಉತ್ತರ, ದಕ್ಷಿಣ ಊದ್ರ್ವ, ಅದೋ ಹೀಗೆ ಎಲ್ಲಾ ಜೀವಿಗಳ ಮೇಲೆ ಸಮಭಾವದಿಂದ, ಸಮಚಿತ್ತತೆಯಿಂದ ಸಮಚಿತ್ತತೆಯನ್ನು ಪ್ರಸರಿಸುತ್ತಾನೆ.
                ದಿಕ್ಕಿನ ಮೂಲಕ ಆತನು ಸಮಚಿತ್ತತೆಯನ್ನು ಹೇಗೆ ಪ್ರಸರಿಸುತ್ತಾನೆ ಎಂದರೆ ಮೊದಲು 1 ಅಥವಾ 2 ಮನೆಗಳು, ನಂತರ 15 ಮನೆಗಳು, ಹಾಗೆಯೇ ಒಂದು ಬೀದಿ, ಅರ್ಧ ಹಳ್ಳಿ, ಜಿಲ್ಲೆ, ರಾಜ್ಯ, ದೇಶ, ಖಂಡ, ಪೃಥ್ವಿ, ಸೌರವ್ಯೂಹ ಹಾಗೆಯೇ ಇಡೀ ಬ್ರಹ್ಮಾಂಡವನ್ನು ಆತನು ಸಮಚಿತ್ತತೆಯಿಂದ ಪ್ರಸರಿಸುತ್ತಾನೆ. ಚತುರ್ಥ ಧ್ಯಾನ ಪ್ರಾಪ್ತಿಯಾಗಿ ನಂತರ ಆತನು ಅದರ ಸಹಾಯದಿಂದ ನೇರವಾಗಿ ಅಕಿಂಚಾಯಾತನ ಅರೂಪ ಸಮಾಧಿ ಪಡೆಯುತ್ತಾನೆ.
                ಬುದ್ಧ ಘೋಷರವರ ಪ್ರಕಾರ 4 ಬ್ರಹ್ಮವಿಹಾರಗಳು ಪೂರ್ಣತೆಯಿಂದ ದಶಪಾರಮಿಗಳು ಪೂರ್ಣವಾಗುತ್ತದೆ.

- ಇಲ್ಲಿಗೆ ನಾಲ್ಕು ಬ್ರಹ್ಮ ವಿಹಾರಗಳು ಮುಗಿಯಿತು  

mudita meditation in kannada ಮುದಿತಾ ಧ್ಯಾನ

ಮುದಿತಾ ಧ್ಯಾನ

                ಮುದಿತಾ ಧ್ಯಾನವನ್ನು, ಆನಂದ ಧ್ಯಾನವೆಂತಲೂ, ಕರೆಯುತ್ತಾರೆ. ಇದು ಮೋದದಿಂದ (ಆನಂದದಿಂದ) ಕೂಡಿರುವುದರಿಂದ ಅಥವಾ ಆನಂದವಾಗುವ ಕಾರ್ಯವನ್ನು ಮಾಡುವುದರಿಂದ (ಮೋದನೆ) ಇದನ್ನು ಮುದಿತಾ ಎನ್ನುತ್ತಾರೆ (ಆನಂದ)
                ಇದರ ಪ್ರಧಾನ ಲಕ್ಷಣವೆಂದರೆ ಪರರ ಉನ್ನತಿಯಲ್ಲಿ ಆನಂದಿಸುವುದು. ಇದರ ಕ್ರಿಯೆ ಏನೆಂದರೆ ಅಸೂಯೆ ತಾಳದೆ ಇರುವುದು. ಇದು ಬೇಸರವನ್ನು ಮತ್ತು ಅಸೂಯೆಯನ್ನು ತೆಗೆಯುವುದರಿಂದಾಗಿ ವ್ಯಕ್ತವಾಗುತ್ತದೆ. ಇದರ ತತ್ಕ್ಷಣದ ಕಾರಣ ಏನೆಂದರೆ ಉನ್ನತ ಜನರ ಯಶಸ್ಸನ್ನು ಕಾಣುವುದು ಮತ್ತು ಕೇಳುವುದು ಹಾಗು ಯೋಚಿಸುವುದಾಗಿದೆ. ಇದರ ಸಿದ್ಧಿಯ ಯಶಸ್ಸು ಅಸೂಯೆ ಮತ್ತು ಬೇಸರವನ್ನು ನಾಶಮಾಡುವುದರಲ್ಲಿದೆ. ಆದರೆ ಪ್ರಾಪಂಚಿಕ ಸಂತೋಷ, ಹಾಸ್ಯ, ಮೋಜು ಇದರ ಪರೋಕ್ಷ ಶತ್ರುವಾಗಿದೆ. ಅದನ್ನು ನಿವಾರಿಸಿದಾಗ ಇದು ಜಯವನ್ನು ಕಾಣುತ್ತದೆ.
                ಈ ಧ್ಯಾನವನ್ನು ಆನಂದದ ಸ್ಥಿತಿ ಸ್ಥಾಪಿಸಲು ಹಾಗು ಅಸೂಯೆಯನ್ನು ಅಂತ್ಯ ಮಾಡಲು ಧ್ಯಾನಿಸುತ್ತಾರೆ. ಮೆತ್ತಾ ಕರುಣಾದ ಸಿದ್ಧಿಯು ಸುಲಭ. ಆದರೆ ಮುದಿತಾ ಸ್ಥಾಪನೆಗೆ ಅಪಾರ ಇಚ್ಛಾಶಕ್ತಿ ಮತ್ತು ಶ್ರಮದ ಅಗತ್ಯವಿದೆ. ಏಕೆಂದರೆ ಮಾನವನಲ್ಲಿ ಸ್ವಾರ್ಥದಿಂದ ಕೇವಲ ತಾನು, ತನ್ನ ಕುಟುಂಬ, ತನ್ನವರು ಈ ಸೀಮೆಯನ್ನು ಇರಲು ಇಚ್ಛಿಸುತ್ತಾರೆ. ಈ ಪರಿಧಿ ದಾಟಲು ಇಚ್ಛಿಸುವುದೇ ಇಲ್ಲ. ನಾವು ಇಂದು ಎಲ್ಲಾ ಕ್ಷೇತ್ರದಲ್ಲೂ ಅಸೂಯೆ ಕಾಣುತ್ತೇವೆ. ವಿದ್ಯಾಭ್ಯಾಸ, ಕ್ರೀಡಾರಂಗ, ವೃತ್ತಿರಂಗ, ವ್ಯಾಪಾರ, ರಾಜಕೀಯ, ಭಾಷೆ, ದೇಶ ಮಟ್ಟದಲ್ಲಿ ಅಷ್ಟೇ ಏಕೆ, ಧರ್ಮಗಳಲ್ಲಿ ಸಹಾ ಒಬ್ಬರ ಉನ್ನತಿ ಇನ್ನೊಬ್ಬರು ಸಹಿಸಲಾರರು. ಸಾಕ್ರಟೀಸ್, ಕ್ರಿಸ್ತ, ಗಾಂಧಿ ಇವರೆಲ್ಲಾ ಬಲಿಯಾಗಿದ್ದು, ಅಸೂಯೆಯಿಂದಲೇ ಅಲ್ಲವೇ. ಅಸೂಯೆಯು ಅತ್ಯಂತ ಹೇಯವಾದಿ ಗುಣವಾಗಿದೆ. ಇದು ಮಾನವನನ್ನು ಸಂಕುಚಿತನನ್ನಾಗಿ ಮಾಡುತ್ತದೆ. ಅವನಿಗೆ ನಿಜವಾದ ಯಶಸ್ಸಿನ ರುಚಿ ಅನುಭವಿಸಲು ಬಿಡುವುದಿಲ್ಲ. ಆತನಿಗೆ ದಿವ್ಯವಾದ ಶ್ರೇಷ್ಠವಾದ ಆನಂದದ ಸವಿಯು ಸೇವಿಸದಂತೆ ಮಾಡುತ್ತದೆ. ಇನ್ನೊಬ್ಬರನ್ನು ಅಸೂಯೆಯಿಂದ ಕಾಣುತ್ತಾ ತಾವೇ ತಮ್ಮ ಕ್ಷೇತ್ರದಲ್ಲಿ ಕುಸಿಯುತ್ತಿರುತ್ತಾರೆ. ನಿಜವಾದ ಉನ್ನತಗಾಮಿಯು ಪರರನ್ನು ನ್ಯಾಯವಾದ ರೀತಿಯಲ್ಲಿ, ಇನ್ನಷ್ಟು ಪರಿಶ್ರಮದಿಂದ, ಸೃಜನಶೀಲತೆಯಿಂದ ಪರರನ್ನು ದಾಟಿ ಅಭಿವೃದ್ಧಿ ಹೊಂದುತ್ತಾನೆಯೇ ಹೊರತು ಪರರ ಪ್ರತಿಭೆಗಳನ್ನು ಚಿವುಟಿ, ಅವರಿಗೆ ಅಡ್ಡಿಯುಂಟು ಮಾಡಿ ಕೃತಿಮತೆಯ ಯಶಸ್ಸಿನಲ್ಲಿ ಆನಂದಿಸಲಾರ.
                ಅಸೂಯೆ ನಾಶದ ಮಾರ್ಗವಾಗಿರುವ ಮುದಿತಾದ (ಅಭಿನಂದನಾ ಆನಂದ) ಧ್ಯಾನವಿಧಾನ ಹೀಗಿದೆ :
                ಇಲ್ಲಿ ಸಾಧಕನು ನಿರ್ಜನ ನಿಶ್ಶಬ್ದ ವಾತಾವರಣದಲ್ಲಿ, ಪದ್ಮಾಸನದಲ್ಲಿ ಕುಳಿತು, ಪಾಪಯುತವಾದ ಅಕುಶಲವಾದ ಎಲ್ಲಾ ರೀತಿಯ ಯೋಚನೆಗಳಿಂದ ಮುಕ್ತನಾಗುತ್ತಾನೆ. ನಂತರ ಆತನು ತನಗೆ ಅತ್ಯಂತ ಪ್ರೀತಿ ಪಾತ್ರರನ್ನು ನೆನಪಿಸಿಕೊಳ್ಳುತ್ತಾನೆ. ಅತ್ಯಂತ ಪ್ರೀತಿ ಪಾತ್ರರೆಂದರೆ, ದಿನೇ ದಿನೇ ಉನ್ನತಿ ಹೊಂದುತ್ತಿರುವ ಮಗುವು ಆಗಬಹುದು ಅಥವಾ ಯಾರನ್ನು ನಾವು ನೋಡಿ ಮೊದಲು ಆನಂದಿತರಾಗಿ ನಕ್ಕು ನಂತರ ಮಾತನಾಡಿಸುತ್ತೇವೆಯೋ ಅಂತಹವರನ್ನು ನೆನೆಯುತ್ತಾ ಓಹ್ ಇವರು ಇನ್ನೂ ಸುಖಿಯಾಗಿರಲಿ, ಇನ್ನೂ ಉನ್ನತಿ ಹೊಂದಲಿ ಎಂದು ಹಾರೈಸುತ್ತಾ ಆನಂದ ಭಾವ ತಾಳಬೇಕು. ಅಥವಾ ಇವನು ಹಿಂದೆ ಉನ್ನತಿ ಹೊಂದಿದ್ದನು, ಹೀಗೆಯೇ ಈಗಲೂ ಮತ್ತು ಮುಂದೆಯು ಉನ್ನತಿ ಹೊಂದಲಿ ಎಂದು ಅಥವಾ ಈತನು ಮುಂದೆಯಾದರೂ ಇನ್ನೂ ಸುಖಿಯಾಗಿರಲಿ, ಇನ್ನೂ ಉನ್ನತಿ ಹೊಂದಲಿ.
                ಓಹ್ ಆತನ ಮುಂದೆ ಅತ್ಯಂತ ಶ್ರೀಮಂತನಾಗಲಿ ಎಂದೂ
                ಓಹ್ ಆತ ಮುಂದೆ ಅತ್ಯಂತ ಆರೋಗ್ಯವಂತ/ಸುಂದರನಾಗಲಿ
                ಓಹ್ ಆತ ಮುಂದೆ ಅತ್ಯಂತ ಬಲಿಷ್ಠನಾಗಲಿ
                ಓಹ್ ಆತ ಮುಂದೆ ಅತ್ಯಂತ ಶೀಲವಂತನಾಗಲಿ
                ಓಹ್ ಆತ ಮುಂದೆ ಅತ್ಯಂತ ಸಮಾಧಿವಂತನಾಗಲಿ
                ಓಹ್ ಆತ ಮುಂದೆ ಅತ್ಯಂತ ಪ್ರಜ್ಞಾವಂತನಾಗಲಿ
                ಓಹ್ ಆತ ಮುಂದೆ ಅತ್ಯಂತ ಹೃದಯವಂತನಾಗಲಿ
                ಓಹ್ ಆತ ಮುಂದೆ ಅತ್ಯಂತ ವಿಮುಕ್ತನಾಗಲಿ
                ಓಹ್ ಆತ ಮುಂದೆ ಅತ್ಯಂತ ಸುಖಿಯಾಗಿಯೇ ಇರಲಿ
                ಓಹ್ ಆತ ಮುಂದೆ ಸದಾ ಅಭಿವೃದ್ಧಿಶೀಲನಾಗಲಿ
                ಈ ರೀತಿ ಮುದಿತಾ ಧ್ಯಾನ ಮಾಡುತ್ತಾ, ನಂತರ ಆತನು ಪ್ರಿಯರಾದವರನ್ನು, ನಂತರ, ತಟಸ್ಥ ವ್ಯಕ್ತಿಗಳನ್ನು, ನಂತರ ದ್ವೇಷಿಸುವವರನ್ನು, ನಂತರ ಅಸೂಯೆಪಡುವವರನ್ನು, ನಂತರ ತನ್ನ ಮೆಲೆ ಪ್ರಸರಿಸಲಿ, ನಂತರ ಸರ್ವ ಜೀವಿಗಳ ಮೆಲೆ ಪ್ರಸರಿಸಲಿ, ಸರ್ವದಿಕ್ಕುಗಳಲ್ಲಿ ಪ್ರಸರಿಸಲಿ, ಮೆತ್ತಾ ಧ್ಯಾನದಂತೆ ಬೇಧಭಾವವಿಲ್ಲದೆ ಸರ್ವರ ಮೇಲೆ ಪ್ರಸರಿಸುವುದರಿಂದಾಗಿ ನಿವರಣಗಳಿಂದ ಮುಕ್ತನಾಗುತ್ತಾರೆ. ನಂತರ ಹಾಗೆಯೇ ತ್ರಿತೀಯ ಧ್ಯಾನದವರೆಗೂ ಆತನು ತಲುಪುತ್ತಾನೆ. ಅಲ್ಲಿಂದ ಆತನು ನೇರವಾಗಿ ವಿನ್ಯಾನನಂಚ ಯಾತನ ಸ್ಥಿತಿಗೆ ತಲುಪಬಹುದು ಅದಕ್ಕೆ ಈ ಧ್ಯಾನ ಶ್ರೇಷ್ಠವಾದ ಆಧಾರವಾಗಿದೆ.
                ಮುದಿತಾ ಧ್ಯಾನದ ಲಾಭಗಳು ಮೆತ್ತಾ ಧ್ಯಾನದಂತೆಯೆ ಅಗಿರುತ್ತದೆ.

ಇಲ್ಲಿಗೆ ಮುದಿತಾ ಧ್ಯಾನವು ಮುಗಿಯಿತು.

the maha karuna meditation of bodhisatta in kannada ಬೋಧಿಸತ್ವರ ಮಹಾ ಕರುಣಾ ಧ್ಯಾನ

ಬೋಧಿಸತ್ವರ ಮಹಾ ಕರುಣಾ ಧ್ಯಾನ :


                ಬೋಧಿಸತ್ವರು ಸಹಾ ಹಿಂದಿನಂತೆಯೇ ಧ್ಯಾನ ಮಾಡುತ್ತಾರೆ ಮತ್ತು ಜೊತೆಗೆ ಈ ರೀತಿಯೂ ಧ್ಯಾನಿಸುತ್ತಾರೆ. ಇಲ್ಲಿರುವ ಸಂಕ್ಷಿಪ್ತ ಮಾಡಿರುವ ಕರುಣಾ ಚಿಂತನೆಯು ಬೋಧಿಸತ್ವ, ಶಾಂತಿದೇವ ಅವರದ್ದಾಗಿದೆ :
                ಎಲ್ಲಾ ಜೀವಿಗಳ ದುಃಖವು ನನಗೆ ಸಿಗಲಿ ಮತ್ತು ಎಲ್ಲಾ ಜೀವಿಗಳು ದುಃಖದಿಂದ ಮುಕ್ತರಾಗಲಿ
                ಎಲ್ಲಾ ಜೀವಿಗಳ ನೋವು ನನಗೆ ಸಿಗಲಿ ಮತ್ತು ಎಲ್ಲಾ ಜೀವಿಗಳು ನೋವುಗಳಿಂದ ಮುಕ್ತರಾಗಲಿ.
                ಎಲ್ಲಾ ಜೀವಿಗಳ ಪಾಪಗಳ ಎಲ್ಲಾ ಫಲಗಳನ್ನು ನಾನು ಅನುಭವಿಸುತಂತಾಗಲಿ ಮತ್ತು ಎಲ್ಲಾ ಜೀವಿಗಳು ದುಃಖದಿಂದ ಮುಕ್ತರಾಗಲಿ
                ಇದುವರೆಗೆ ನಾನು ಗಳಿಸಿದ ಎಲ್ಲಾ ಪುಣ್ಯಗಳ ಫಲದಿಂದ ಸರ್ವಜೀವಿಗಳು ನೋವಿನಿಂದ ಮತ್ತು ಶೋಕದಿಂದ ಮುಕ್ತರಾಗಲಿ.
                ಎಲ್ಲಿಯವರೆಗೆ ಒಂದು ಜೀವಿಯು ದುಃಖದಿಂದ ಇರುವುದು, ಅಲ್ಲಿಯವರೆಗೆ ನಾನು ನಿಬ್ಬಾಣ ಪಡೆಯುವುದಿಲ್ಲ.
                ಎಲ್ಲಾ ರೋಗಿಗಳಿಗೆ ನಾನು ವೈದ್ಯನಾಗಲಿ, ನಾನೇ ಔಷಧಿಯಾಗಲಿ.
                ನಾನು ಬಾಯಾರಿದವರ ನೀರಾಗಲಿ
                ನಾನು ಹಸಿದವರ ಆಹಾರವಾಗಲಿ
                ನಾನು ವಸತಿಹೀನರಿಗೆ ಆಶ್ರಯವಾಗಲಿ
                ನಾನು ದೌಭರ್ಾಗ್ಯವುಳ್ಳವರಿಗೆ ಐಶ್ವರ್ಯವಾಗಲಿ
                ನನ್ನ ದೇಹ ಹೀಗೆಯೇ ನನ್ನ ಎಲ್ಲಾ ಪುಣ್ಯಗಳು, ನನ್ನ ಸರ್ವಸ್ವವು ಎಲ್ಲವನ್ನು ನಾನು ಪರರಿಗೆ ನೀಡಿ ಏನೂ ಇಲ್ಲದವನಾಗುತ್ತೇನೆ.
                ನಿಬ್ಬಾಣವು ಪ್ರಾಪ್ತಿಯಾಗುವುದು ಸರ್ವವೂ ತ್ಯಾಗ ಮಾಡಿದ ಮೇಲೆಯೇ. ಸರ್ವರ ನಿಬ್ಬಾಣವೇ ನನ್ನ ಗುರಿ. ಆದ್ದರಿಂದ ನನ್ನ ಸರ್ವವೂ ತ್ಯಾಗವಾಗಲಿ, ಸರ್ವವನ್ನು ಸರ್ವರಿಗೂ ನೀಡುವಂತಾಗಲಿ.
                ನನ್ನನ್ನು ಹಿಂಸಿಸಿದ, ಅಪಕಾರವೆಸಗಿದ, ನಿಂದಿಸಿದ, ದೋಚಿದ, ನನ್ನ ಹತ್ಯೆ ಮಾಡಲು ಬರುವ ಎಲ್ಲರೂ ಸಹಾ ಸಂಬೋಧಿ ಮತ್ತು ನಿಬ್ಬಾಣವನ್ನು ಪಡೆಯುವಂತಾಗಲಿ.
                ನಾನು ಅನಾಥರಿಗೆ ಅನಾಥ ರಕ್ಷಕನಾಗಲಿ.
                ನಾನು ರಕ್ಷಣೆಯಿಲ್ಲದವರಿಗೆ ಮಹಾ ರಕ್ಷಕನಾಗಲಿ.
                ನಾನು ದಾರಿತಪ್ಪಿದವರಿಗೆ ಮಾರ್ಗದರ್ಶಕನಾಗಲಿ.
                ನಾನು ಮುಳುಗುತ್ತಿರುವವರಿಗೆ ಪ್ರಾಣರಕ್ಷಕನಾಗಲಿ.
                ನಾನು ದಾಟುತ್ತಿರುವವರಿಗೆ ದೋಣಿಯಾಗಲಿ.
                ನಾನು ಕತ್ತಿಲೆಯಲ್ಲಿರುವವರಿಗೆ ಬೆಳಕಾಗಲಿ.
                ನಾನು ಕಾಮಧೇನುವಿನಂತೆ, ಕಲ್ಪವೃಕ್ಷದಂತೆ, ಮಹಾ ಮಂತ್ರದಂತೆ, ಚಿಂತಾಮಣಿಯಂತೆ, ಅಕ್ಷಯ ಪಾತ್ರೆಯಂತೆ ಸರ್ವರಿಗೂ ಸರ್ವಸ್ವವನ್ನು ನೀಡುವಂತಾಗಲಿ.
                ನಾನು ಪೃಥ್ವಿಯಂತೆ ಸರ್ವರಿಗೂ ಆಧಾರವಾಗಿರಲಿ, ಆಕಾಶದಂತೆ ಸರ್ವವನ್ನು ಸಹಿಸುವಂತಾಗಲಿ, ನೀರಿನಂತೆ ಸರ್ವರನ್ನು ಶುದ್ಧಿಗೊಳಿಸಲಿ. ವಾಯುವಿನಂತೆ ಉಸಿರಾಗಲಿ, ತೇಜೋವಿನಂತೆ ಬೆಳಕಾಗಲಿ.
                ಬಂಧಿತರಾಗಿರುವ ಪ್ರಾಣಿಗಳು ಬಿಡುಗಡೆ ಪಡೆಯಲಿ, ಪ್ರಾಣಭಯದಿಂದ ಕೂಡಿದ ಜೀವಿಗಳು ಭಯದಿಂದ ಮುಕ್ತರಾಗಲಿ, ಕುರುಡರು ದೃಷ್ಟಿಯಿನ್ನು ಪಡೆಯುವಂತಾಗಲಿ, ಕಿವುಡರು, ಶಬ್ಧವನ್ನು ಕೇಳುವಂತಾಗಲಿ, ಮೂಕ ಮಾತನಾಡುವಂತಾಗಲಿ, ಹೆಳವರು ನಡೆಯುವಂತಾಗಲಿ, ಗಭರ್ಿಣಿಯರು ಮಹಾಮಾತೆ ಮಾಯಾದೇವಿಯವರ ರೀತಿ ನೋವಿಲ್ಲದೆ ಪ್ರಸರಿಸುವಂತಾಗಲಿ.
                ಹಸಿದವರಿಗೆ ಆಹಾರ ಸಿಗುವಂತಾಗಲಿ. ನಗ್ನರಿಗೆ ವಸ್ತ್ರ ದೊರೆಯುವಂತಾಗಲಿ. ಬಡವರಿಗೆ ಐಶ್ವರ್ಯ ಸಿಗುವಂತಾಗಲಿ. ರೋಗಿಗಳು ಆರೋಗ್ಯ ಹೊಂದುವಂತಾಗಲಿ. ಭಯಸ್ಥರು ನಿಭರ್ಿತಿ ಹೊಂದಲಿ. ಬಂಧಿತರು ಬಿಡುಗಡೆ ಹೊಂದಲಿ. ಸಾಲಗಾರರು ಋಣಮುಕ್ತರಾಗಲಿ. ಬಲಹೀನರು ಶಕ್ತಿಯನ್ನು ಹೊಂದಲಿ. ದಾರಿ ತಪ್ಪಿದವರು ಮಾರ್ಗದರ್ಶನ ಹೊಂದಲಿ. ಶೋಕಭರಿತರು ಅಶೋಕರಾಗಲಿ. ಅನಾಥರು ರಕ್ಷಣೆ ಮತ್ತು ಸೌಲಭ್ಯ ಪಡೆಯಲಿ. ಅಜ್ಞಾನಿಗಳು ಜ್ಞಾನವನ್ನು ಪಡೆಯಲಿ. ದುರ್ಗತಿಯುಳ್ಳವರು ಸುಗತಿ ಪಡೆಯಲಿ. ದುರ್ಜನರು ಶೀಲವಂತರಾಗಲಿ. ಸರ್ವರೂ ಸಂಬೋಧಿಗಳಿಸಲಿ. ಸರ್ವರೂ ನಿಬ್ಬಾಣವನ್ನು ಹೊಂದಲಿ. ಸರ್ವರೂ ಬುದ್ಧತ್ವ ಪ್ರಾಪ್ತಿ ಮಾಡಲಿ.
                ಈ ರೀತಿ ಬೋಧಿಸತ್ವರು ಚಿಂತಿಸಿ, ಕರುಣೆಯಿಂದಲೇ ಸ್ಫೂತರ್ಿ ಪಡೆಯುತ್ತಾರೆ, ಕರುಣೆಯಿಂದಲೇ ಪ್ರೇರಣೆ ಬಲಹೊಂದಿ ಅವರು, ಕರುಣೆಯಿಂದ ತಮ್ಮ ಸರ್ವಸ್ವ ಪರರಿಗೆ ಅಪರ್ಿಸಿ ದಾನಿಯಾಗುತ್ತಾರೆ.
                ಕರುಣೆಯಿಂದಾಗಿ ಅವರು ಯಾರಿಗೂ ಯಾವ ರೀತಿಯಲ್ಲೂ ಹಿಂಸಿಸದೆ ಶೀಲವಂತರಾಗುತ್ತಾರೆ.
                ಕರುಣೆಯಿಂದಾಗಿ ಅವರು ಎಲ್ಲ ಸುಖವನ್ನು ತ್ಯಜಿಸುತ್ತಾರೆ.
                ಕರುಣೆಯಿಂದಾಗಿ ಅವರು ಪ್ರಜ್ಞಾ ಮತ್ತು ಜ್ಞಾನವನ್ನು ಪ್ರಾಪ್ತಿ ಮಾಡುತ್ತಾರೆ.
                ಕರುಣೆಯಿಂದಾಗಿ ಅವರು ಪರರ ತಪ್ಪುಗಳನ್ನು ಸಹಿಸುತ್ತಾರೆ.
                ಕರುಣೆಯಿಂದಾಗಿ ಅವರು ಪರರಿಗಾಗಿ ನೀಡಿದ ಸತ್ಯವಚನ ಪಾಲಿಸುತ್ತಾರೆ.
                ಕರುಣೆಯಿಂದಾಗಿ ಅವರು ಪರಹಿತ ಕಾರ್ಯದಲ್ಲಿ ದೃಢನಿಧರ್ಾರ ತಾಳುತ್ತಾರೆ.
                ಕರುಣೆಯಿಂದಾಗಿ ಅವರು ಸದಾ ಮೈತ್ರಿಯುತ ಮನಸ್ಸಿನಿಂದ ಕೂಡಿರುತ್ತಾರೆ.
                ಕರುಣೆಯಿಂದಾಗಿ ಅವರು ಯಾರಿಂದಲೂ, ಏನನ್ನು, ಎಂದಿಗೂ ಅಪೇಕ್ಷಿಸದೆ ನ್ಯಾಯದಿಂದ ಸಮಚಿತ್ತತೆಯಿಂದ ಇರುತ್ತಾರೆ.
                ಕರುಣೆಯಿಂದಾಗಿ ಸಮಾಧಿಯನ್ನು ಪರಿಪೂರ್ಣಗೊಳಿಸುತ್ತಾರೆ.
                ಈ ರೀತಿ 10 ಪಾರಾಮಿತಗಳನ್ನು ಪರಿಪೂರ್ಣಗೊಳಿಸಿ ಬುದ್ಧರಾಗುತ್ತಾರೆ.
- ಂ - ಂ -
                ಸರ್ವಜೀವಿಗಳು ದುಃಖವೆಲ್ಲದರಿಂದ ಮುಕ್ತರಾಗಲಿ ಅಥವಾ ಸರ್ವಜೀವಿಗಳು ಹಿಂಸಾಭಾವನೆಯಿಂದ ಮುಕ್ತರಾಗಲಿ ಈ ವಾಕ್ಯದಿಂದಲೇ ಧ್ಯಾನಗಳು ಹಂತಗಳನ್ನು ದಾಟಿ ತ್ರೀತೀಯ ಸಮಾಧಿ ಪಡೆಯಬಹುದು. ನಂತರ ಇದರ ಸಹಾಯದಿಂದ ಅವರು ಆಕಾಶ ನಂಚಾಯಾತನದ ಅರೂಪ ಧ್ಯಾನಕ್ಕೆ ನೇರವಾಗಿ ಹೋಗಬಹುದು.
                ಕರುಣಾ ಧ್ಯಾನದ ಲಾಭಗಳು ಮೆತ್ತಾ ಧ್ಯಾನದಂತೆಯೇ ಆಗಿದ್ದು ಬೋಧಿಸತ್ವರಿಗೆ ಕೆಲವು ವಿಶೇಷತೆಗಳು ದೊರೆಯುತ್ತದೆ.

ಇಲ್ಲಿಗೆ ಕರುಣಾ ಧ್ಯಾನ ಮುಗಿಯಿತು.

karuna jhana or compassion meditation in kannada ಕರುಣಾ ಧ್ಯಾನ

ಕರುಣಾ ಧ್ಯಾನ


                ಈ ಶರೀರದ ಮಾಂಸ, ರಕ್ತ ಮತ್ತು ನನ್ನ ಸರ್ವಸ್ವವೆಲ್ಲವೂ ಜಗತ್ತಿನ ಹಿತಕ್ಕಾಗಿ ಮತ್ತು ಜಗತ್ತಿನ ಕ್ಷೇಮಕ್ಕಾಗಿಯೇ ಇದೆ         - ಶ್ರೀ ಸಂಘ ಬೋಧಿ
                ಇಂದು ಈ ಜಗತ್ತಿಗೆ ಅತ್ಯಂತ ಕರುಣಾಭರಿತ ಸ್ತ್ರೀಯರು ಮತ್ತು ಪುರುಷರು ಬೇಕಾಗಿದ್ದಾರೆ. ಅವರು ಇಲ್ಲಿರುವ ಕ್ರೌರ್ಯ ಮತ್ತು ಹಿಂಸೆಯನ್ನು ಹಾಗು ದುಃಖವನ್ನು ಈ ಭೂಮಿಯಿಂದಲೇ ತೆಗೆದುಹಾಕಬೇಕಾಗಿದೆ          - ಪರಮ ಪೂಜ್ಯ ನಾರದ ಥೇರ
                ಬುದ್ಧ ಭಗವಾನರು ಪ್ರತಿದಿನವೂ ಕೇವಲ ಒಂದು ಗಂಟೆ ಮಾತ್ರ ನಿದ್ರಿಸುತ್ತಿದ್ದರು. ಅದು 3 ರಿಂದ 4 ಗಂಟೆಯವರೆಗೆ ನಂತರ ಅವರು 4 ರಿಂದ 5ರತನಕ ನಿಬ್ಬಾಣದ ಸುಖದಲ್ಲಿ ತಲ್ಲೀನರಾಗುತ್ತಿದ್ದರು. ನಂತರ 5 ರಿಂದ 6ರತನಕ ಮಹಾ ಕರುಣಾ ಸಮಾಪತ್ತಿಯಲ್ಲಿದ್ದು ಸರ್ವಜೀವಿಗಳ ದುಃಖ ವಿಮುಕ್ತತೆಗೆ ಧ್ಯಾನಿಸುತ್ತಿದ್ದರು. ತಮ್ಮ ಬುದ್ಧ ಚಕ್ಷುವಿನಿಂದ ಯಾರ್ಯಾರಿಗೆ ಸಹಾಯ ಮಾಡಬಹುದೆಂದು ಅರಿತು ಅವರಿಗೆ ಸಹಾಯ ಮಾಡುತ್ತಿದ್ದರು.
                ಶ್ರೇಷ್ಠ ಭಿಕ್ಷುಗಳಾದ, ಸಾರಿಪುತ್ರರು, ಮೊಗ್ಗಾಲಾನರು, ಕಶ್ಯಪರು ಇನ್ನು ಮುಂತಾದವರು ರಾಜ ಮಹಾರಾಜರು ಬುದ್ಧರಲ್ಲಿಗೆ ಹುಡುಕಿಕೊಂಡು ಬರುತ್ತಿದ್ದರು. ಆದರೆ ಬುದ್ಧ ಭಗವಾನರು ತಮ್ಮ ಕರುಣೆಯಿಂದ ಪಾಪಿಗಳಾದ ಅಂಗುಲಿಮಾಲಾ, ಅಳವಕ, ಡಕಾಯಿತರು, ದುಃಖಿತರು, ಬೇಟೆಗಾರರು, ಕಷ್ಟದಲ್ಲಿದ್ದ ಇನ್ನಿತರರ ಬಳಿಗೆ ತಾವೇ ಹೋಗಿ ಅವರನ್ನು ಸರಿಪಡಿಸುತ್ತಿದ್ದರು. ಅವರ ಕರುಣೆ ಅನುಪಮವಾಗಿತ್ತು.
                ಬೋಧಿಸತ್ತ ಮುಂದೆ ಬುದ್ಧರಾಗಿದ್ದು ಈ ಕರುಣಾ ಬಲದಿಂದಲೇ. ಈ ರೀತಿ ಕರುಣೆಯಿಂದ ಮಾನವ ಬ್ರಹ್ಮನೂ ಅಗಬಲ್ಲ, ಹಾಗೆಯೇ ಬುದ್ಧರೂ ಆಗಬಲ್ಲ. ಅಂತಹ ಅಗಾಧಶಕ್ತಿ, ಕರುಣೆಗೆ ಇದೆ. ಕರುಣೆಯ ಪರಿಪೂರ್ಣತೆಯನ್ನು ಬುದ್ಧರು ಹೊಂದಿರುವದರಿಂದಾಗಿ ಅವರನ್ನು ಮಹಾ ಕಾರುಣಿಕನಾಥ ಎನ್ನುತ್ತಾರೆ. ನಿವೇನಾದರು ಬುದ್ಧರ ಬೋಧನೆಯಿಂದ ಕರುಣೆಯನ್ನು ತೆಗೆದರೆ ಅಥವಾ ವಿರಾಗವನ್ನು ತೆಗೆದರೆ ಅಥವಾ ಪ್ರಜ್ಞಾವನ್ನು ತೆಗೆದರೆ ನೀವು ಬೌದ್ಧ ಧರ್ಮದ ಹೃದಯವನ್ನೇ ಅಥವಾ ಪ್ರಾಣವನ್ನೇ ತೆಗೆದಂತಾಗುತ್ತದೆ. ಸಕಲ ಸದ್ಗುಣಗಳಿಗೆ ಕರುಣೆಯೇ ಆಧಾರ. ಅಷ್ಟೇ ಏಕೆ, ಬೌದ್ಧತ್ವದ ಗುರಿ ಇಟ್ಟಿರುವ ಬೋಧಿಸತ್ತರಿಗಂತೂ ಕರುಣೆಯೇ ಸರ್ವಸ್ವವಾಗಿರುತ್ತದೆ. ಕರುಣೆಯಿಲ್ಲದೆ ಪರಿಪೂರ್ಣತೆಯೇ ಇಲ್ಲ.
                ಲೋಕದಲ್ಲಿ ಜೀವಗಳಾಗಲಿ ಅಥವಾ ಮಾನವರಾಗಲಿ ದುಃಖದಲ್ಲಿದ್ದಾಗ, ನೋವಿನಲ್ಲಿದ್ದಾಗ, ಭೀತಿಯಲ್ಲಿದ್ದಾಗ, ಕಷ್ಟದಲ್ಲಿದ್ದಾಗ ಅವರನ್ನು ಕಂಡು ಅಥವಾ ಅವರ ಬಗ್ಗೆ ಕೇಳಿ ಹೃದಯವು ಕಂಪಿಸಿದರೆ ಅವರ ದುಃಖ ವಿಮುಕ್ತಿ ಬಯಸಿದರೆ, ಆ ಭಾವವೇ ಕರುಣೆಯಾಗಿ, ಇದರ ಸಮಾನಾರ್ಥಕ ಪದಗಳೆಂದರೆ ಅನುಕಂಪ, ಮಮತೆ, ಮರುಕ, ದಯೆ ಇತ್ಯಾದಿ. ಇದರ ಪ್ರಧಾನ ಲಕ್ಷಣವೇನೆಂದರೆ ಪರರ ದುಃಖವು ಇಲ್ಲದಂತಾಗಲಿ ಎಂದು ಬಯಸುವುದು. ಇದರ ನೇರ ಶತ್ರುವು ಹಿಂಸಾಭಾವನೆಯಾದರೆ ಆದರೆ ಪರೋಕ್ಷ ಶತ್ರು. ದೋಮನಸ್ಸು (ದುಃಖಿತ ಮನಸ್ಸು) ಆಗಿದೆ.
                ಪರರ ದುಃಖವನ್ನು ಕಂಡು ಸತ್ಪುರುಷರ ಹೃದಯವು (ಕಂಪನ) ಕಂಪಿತವಾಗಿ, ದುಃಖವಿಮುಕ್ತಿಗೆ ಚಾಲನೆಯಾಗಿ (ಕರೋತಿ) ಈ ರೀತಿಯಾಗಿ ಇದನ್ನು ಕರುಣೆ ಅಥವಾ ಅನುಕಂಪ ಎನ್ನುತ್ತಾರೆ. ಪರರ ದುಃಖ ವಿಮುಕ್ತಿಗೆ ಶ್ರಮಿಸುವುದರಿಂದ (ಕಿರಿಯಾತಿ) ಇದನ್ನು ಕರುಣಾ ಎನ್ನುತ್ತಾರೆ. ಪರರ ದುಃಖವನ್ನು ಸಹಿಸದೆ ಇರುವುದೇ ಇದರ ಕ್ರಿಯೆಯಾಗಿದೆ. ಕರುಣೆಯು ಕಾರ್ಯರಹಿತತೆಯಿಂದ ವ್ಯಕ್ತವಾಗುತ್ತದೆ. ಇದರ ತತ್ಕ್ಷಣದ ಕಾರಣವೇನೆಂದರೆ ಪರ ದುಃಖಿತರನ್ನು ನೋಡುವುದು ಅಥವಾ ಕೇಳುವುದು ಅಥವಾ ಅದರ ಬಗ್ಗೆ ಚಿಂತಿಸುವುದು. ಕ್ರೂರತ್ವ ಅಂತ್ಯವಾದಾಗ ಕರುಣೆಯು ಜಯಿಸುತ್ತದೆ. ಶೋಕವು ಕರುಣೆಯಲ್ಲ, ಶೋಕವು ಕರುಣೆಯಂತೆ ಕಾಣುತ್ತದೆ ಅಷ್ಟೇ. ಕರುಣೆಯ ಪೂರ್ಣತೆಗಾಗಿ ಶೋಕವನ್ನು ಗೆಲ್ಲುವುದು ಅತ್ಯಗತ್ಯವಾಗಿದೆ. ಕರುಣೆಯೆಂದರೆ ಗೋಳಾಡುವುದಲ್ಲ. ಅವರ ದುಃಖ ವಿಮುಕ್ತಿಯನ್ನು ಪ್ರಬಲವಾಗಿ ಬಯಸುವುದು ಮತ್ತು ಅದಕ್ಕೆ ಕ್ರಿಯೆಯಲ್ಲಿ ಆಚರಣೆಗೆ ತುರುವುದು. ನಿಯಂತ್ರಣದಿಂದ ಕರುಣೆ ಇರುತ್ತದೆ ಹೊರತು ಬೇಕಾದಂತೆ ನಿಯಂತ್ರಣ ತಪ್ಪುವುದಲ್ಲ. ಕರುಣೆಯು ಪ್ರಜ್ಞಾದ ಸಂಗಡ ಇರುತ್ತದೆ. ಪ್ರಜ್ಞಾದಿಂದ ಪರರ ದುಃಖ ಅರಿವಾಗುತ್ತದೆ. ಕರುಣೆಯಿಂದಾಗಿ ಅದನ್ನು ನಿವಾರಿಸಲು ಪ್ರಯತ್ನಿಸುತ್ತೇವೆ. ಪ್ರಜ್ಞಾದಿಂದ ಯೋಗ್ಯ ಪರಿಹಾರ ಸಿಗುತ್ತದೆ. ಕರುಣೆಯಿಂದ ಅದನ್ನು ಆಚರಣೆಯಲ್ಲಿ ಪರಿಹರಿಸುತ್ತೇವೆ. ಪ್ರಜ್ಞಾರಹಿತ ಕರುಣೆ ಅಪಾಯಕಾರಿ, ಕರುಣಾರಹಿತ ಪ್ರಜ್ಞಾವು ಅಪೂರ್ಣ.
ಕರುಣಾಧ್ಯಾನ ವಿಧಾನ :
                ಇಲ್ಲಿ ಸಾಧಕನು ನಿಶ್ಶಬ್ದ ನಿರ್ಜನ ವಾತಾವರಣದಲ್ಲಿ ಪದ್ಮಾಸನದಲ್ಲಿದ್ದು ಬೆನ್ನನ್ನು ನೇರವಾಗಿಟ್ಟುಕೊಂಡು ಅಕುಶಲ ಯೋಚನೆಗಳೆಲ್ಲವನ್ನೂ ದ್ವೇಷದ, ಹಿಂಸೆಯ ಇನ್ನಿತರ ಎಲ್ಲಾ ಪಾಪಯುತ ಯೋಚನೆಗಳಿಂದ ಮುಕ್ತವಾಗಿ ನಂತರ ತಾನು ದಾರಿಯಲ್ಲಿ, ಅಥವಾ ವಾಯು ವಿಹಾರದ ಸ್ಥಳದಲ್ಲಿ ಕಂಡಂತಹ ದುಃಖಿತರನ್ನು, ಶೋಕ ಪೀಡಿತರನ್ನು ಭಯ ಪೀಡಿತರನ್ನು, ರೋಗಿಗಳನ್ನು, ಮಾನಸಿಕ ಅಸ್ವಸ್ಥರನ್ನು, ಭಿಕ್ಷುಕರನ್ನು, ನೋವಿನಿಂದ ಕೂಡಿದವರನ್ನು, ಅಳುತ್ತಿರುವವರನ್ನು, ಒಬ್ಬೊಬ್ಬರಾಗಿ ನೆನೆಯುತ್ತಾನೆ. ಹಾಗಿ ಈ ರೀತಿ ಹಾರೈಸುತ್ತಾನೆ ಓಹ್! ಈತನು ದುಃಖದಿಂದ ಮುಕ್ತನಾಗಲಿ ಹಾಗು ಹಿಂಸಾ ಭಾವನೆಯಿಂದ ಮುಕ್ತನಾಗಲಿ ಅಥವಾ ಈತನು ರೋಗದಿಂದ ಮುಕ್ತನಾಗಲಿ ಹಾಗು ಭಯದಿಂದ ಮುಕ್ತನಾಗಲಿ ಅಥವಾ ಈತನು ನೋವಿನಿಂದ ಮುಕ್ತನಾಗಲಿ ಮತ್ತು ಎಲ್ಲಾ ದುಃಖಗಳಿಂದ ಮುಕ್ತನಾಗಲಿ, ಇವರು ನಷ್ಟದಿಂದ ಮುಕ್ತರಾಗಲಿ ಹಾಗು ಎಲ್ಲಾ ರೀತಿಯ ಶೋಕಗಳಿಂದ ಮುಕ್ತರಾಗಲಿ. ಈ ರೀತಿಯಾಗಿ ಒಬ್ಬರನ್ನು ತೆಗೆದುಕೊಂಡು ಅದರ ಬಗ್ಗೆ ಅವರ ದುಃಖ ನಿವಾರಣೆಯಾಗಲಿ ಎಂದು ಪ್ರಬಲವಾಗಿ ಹಾರೈಸಬೇಕು. ಇವರು ಎಲ್ಲಾ ದುಃಖಗಳಿಂದ ಮುಕ್ತರಾಗಲಿ ಹಾಗು ದುಃಖಕ್ಕೆ ಕಾರಣವಾದಂತಹ ಜನ್ಮದಿಂದ ಮುಕ್ತರಾಗಲಿ ಈ ವ್ಯಕ್ತಿಯು ಹಿಂಸಾ ಭಾವನೆಯಿಂದ ಮುಕ್ತರಾಗಲಿ ಈ ರೀತಿ ಧ್ಯಾನಿಸಬೇಕು.
                ನಂತರ ಪ್ರಿಯರಾದವರನ್ನು ನೆನಪಿಗೆ ತಂದು ಓಹ್! ಅವರು ತಮ್ಮ ರೋಗದಿಂದ ಮುಕ್ತರಾಗಲಿ, ಅವರು ತಮ್ಮ ಎಲ್ಲಾ ದುಃಖ ದೌಭರ್ಾಗ್ಯಗಳಿಂದ ಮುಕ್ತರಾಗಲಿ ಎಂದು ಹಾರೈಸಬೆಕು.
                ನಂತರ ಪಾಪಿಗಳನ್ನು ಮತ್ತು ದ್ರೋಹಿಗಳನ್ನು ನೆನಪಿಗೆ ತಂದು ಓಹ್! ಈತನು ತನ್ನ ದ್ವೇಷಗಳೆಲ್ಲದರಿಂದ, ತನ್ನ ಹಿಂಸಾಬೋಧನೆಯಿಂದ ಪೂರ್ಣವಾಗಿ ವಿಮುಕ್ತನಾಗಲಿ. ಈತನು ತನ್ನೆಲ್ಲಾ ದುಃಖಗಳಿಂದ ಮುಕ್ತನಾಗಲಿ, ಎಲ್ಲಾ ರೀತಿಯ ನೋವುಗಳಿಂದ ಮುಕ್ತನಾಗಲಿ. ಈತ ಜನ್ಮದಿಂದಲೇ ಮುಕ್ತನಾಗಲಿ. ನಂತರ ಹೀಗೆಯೇ ಪರಿಚಯಸ್ಥರ ಮೇಲೆ ಮಾಡಿ.
                ನಂತರ ಕೊನೆಗೆ ತನ್ನಮೇಲೆ ನಾನು ನನ್ನ ಎಲ್ಲಾ ದುಃಖಗಳಿಂದ ಮುಕ್ತನಾಗಲಿ, ನಾನು ಪರರ ದುಃಖವನ್ನು ನಿವಾರಿಸುವಂತಾಗಲಿ ಎಂದು ಹಾರೈಸಬೇಕು. ಈ ರೀತಿಯಾಗಿ ಯಾರಲ್ಲೂ ಬೇಧಭಾವವಿಲ್ಲದೆ ಸರ್ವರಲ್ಲೂ ಸಮಾನವಾಗಿ ಕರುಣೆಯನ್ನು ಪ್ರಸರಿಸಿ. ಕೊನೆಗೆ
                ಸರ್ವಜೀವಿಗಳು ದುಃಖದಿಂದ ಮುಕ್ತರಾಗಲಿ
                ಸರ್ವಜೀವಿಗಳು ಶೋಕದಿಂದ ಮುಕ್ತರಾಗಲಿ
                ಸರ್ವಜೀವಿಗಳು ನೋವಿನಿಂದ ಮುಕ್ತರಾಗಲಿ
                ಸರ್ವಜೀವಿಗಳು ರೋಗದಿಂದ ಮುಕ್ತರಾಗಲಿ
                ಸರ್ವಜೀವಿಗಳು ದುಃಸ್ಥಿತಿಗಳಿಂದ ಮುಕ್ತರಾಗಲಿ
                ಸರ್ವಜೀವಿಗಳು ದೌಭರ್ಾಗ್ಯಗಳಿಂದ ಮುಕ್ತರಾಗಲಿ

ಎಂದು ಹಾರೈಸುವುದು. ಮೆತ್ತಾ ಧ್ಯಾನದಂತೆ ಪಯರ್ಾಯ ವಿಧಾನಗಳನ್ನು ಅನುಸರಿಸುವುದು. ಆದರೆ ಮೊದಲಿಗೆ ದುಃಖಿತರ ಮೇಲೆಯೇ ಮಾಡಬೇಕು. 

the 11 benefits of metta meditation in kannada ಮೈತ್ರಿಯ ಧ್ಯಾನದಿಂದ ಸಿಗುವಂತಹ 11 ಮಹತ್ತರ ಲಾಭಗಳು

ಮೈತ್ರಿಯ ಧ್ಯಾನದಿಂದ ಸಿಗುವಂತಹ 11 ಮಹತ್ತರ ಲಾಭಗಳು :

1.            ಆತನು ಸುಖವಾಗಿ ನಿದ್ರಿಸುತ್ತಾನೆ : ಹೇಗೆಂದರೆ ಧ್ಯಾನದಲ್ಲಿ ಪ್ರವೇಶಿಸುವಂತೆ ಹಾಗು ಕ್ಷಿಪ್ರವಾಗಿ ನಿದ್ರಾ ಸ್ಥಿತಿಯಲ್ಲಿರುತ್ತಾನೆ.
2.            ಆತನು ಸುಖವಾಗಿ ಎಚ್ಚೆತ್ತುಕೊಳ್ಳುತ್ತಾನೆ : ಕಮಲವು ಅರಳುವಮತೆ ಯಾವುದೇ ರೀತಿ ಬಾಧೆಯಿಲ್ಲದೆ ಎಚ್ಚರಗೊಳ್ಳುತ್ತಾನೆ.
3.            ಆತನು ಯಾವುದೇ ರೀತಿ ಕೆಟ್ಟ ಸ್ವಪ್ನಗಳನ್ನು ಕಾಣುವುದಿಲ್ಲ : ಡಕಾಯಿತರು, ಪ್ರಾಣಿಗಳು, ನಷ್ಟದ ಇನ್ನಿತರೆ ಯಾವುದೇ ಚಿಂತಕೃತ, ಭಯಯುತ, ಕೋಪವುಳ್ಳ, ರಾಗವುಳ್ಳ ಯಾವುದೇ ಸ್ವಪ್ನಗಳನ್ನು ಕಾಣುವುದಿಲ್ಲ. ಬದಲಾಗಿ ಸದಾ ಪವಿತ್ರತೆಯ ಶುಭ ಸ್ವಪ್ನಗಳನ್ನು ಕಾಣುತ್ತಾನೆ. ಹೇಗೆಂದರೆ ಪೂಜಿಸುವಂತಹ, ದಾನ ನೀಡುತ್ತಿರುವಂತಹ, ಮೈತ್ರಿಯುತ ಸನ್ನಿವೇಶ, ಸ್ತೂಪಗಳು, ಚೈತ್ಯಗಳು, ಇನ್ನಿತರ ಶುದ್ಧ ಸ್ವಪ್ನಗಳನ್ನು ಕಾಣುತ್ತಾನೆ.
4.            ಮಾನವರಿಗೆ ಪ್ರಿಯನಾಗುತ್ತಾನೆ : ಅತ್ಯಂತ ಜನಪ್ರಿಯನಾಗುತ್ತಾನೆ, ಜನರು ಆತನನ್ನು ಆಭರಣದಂತೆ, ಕಿರೀಟದಂತೆ ಇಷ್ಟಪಡುತ್ತಾರೆ.
5.            ಮನುಷ್ಯರಲ್ಲದವರಿಗೂ ಪ್ರಿಯನಾಗುತ್ತಾನೆ : ಮನುಷ್ಯರಲ್ಲದ ಜೀವಿಗಳಾದ, ಪ್ರಾಣಿಗಳು, ಪ್ರೇತಗಳು, ಅಸುರರಿಗೂ ಇಷ್ಟವಾಗುತ್ತಾನೆ. ಏಕೆಂದರೆ ಆತನಲ್ಲಿ ದ್ವೇಷವಿರುವುದಿಲ್ಲ ಹಾಗು ಹಾರೈಕೆಯಿಂದ ಕೂಡಿರುತ್ತಾನೆ.
6.            ದೇವತೆಗಳು ರಕ್ಷಿಸುತ್ತಾರೆ : ದೇವತೆಗಳು ಸಹಾ ಆತನಿಗೆ ಪ್ರೀತಿಸಿ, ತಂದೆಯಂತೆ, ತಾಯಿಯಂತೆ ಕಾಪಾಡುವರು.
7.            ಬೆಂಕಿ, ವಿಷ, ಶಸ್ತ್ರಗಳು ಆತನ ಮೇಲೆ ಯವುದೇ ಪರಿಣಾಮ ಬೀರುವುದಿಲ್ಲ. ಉದಾ: ಬುದ್ಧರು ನಾಲಾಗಿರಿ ಆನೆಯಿಂದ ಪಾರಾಗಿದ್ದು, ಸಾಮಾವತಿಯು ಬಾಣದಿಂದ ಪಾರಾಗಿದ್ದು, ಉತ್ತರಳಿಗೆ ಬಿಸಿ ಎಣ್ಣೆಯು ಸಹಾ ಏನೂ ಮಾಡಲಿಲ್ಲ.
8.            ಆತನ ಮನಸ್ಸು ಅತ್ಯಂತ ವೇಗದಲ್ಲಿ ಏಕಾಗ್ರತೆ ಪಡೆಯತ್ತದೆ : ಆತ ಸುಲಭವಾಗಿ ಧ್ಯಾನದಲ್ಲಿ ಪ್ರವೇಶಿಸಬಲ್ಲ.
9.            ಆತನ ಮುಖಾರವಿಂದವು ಅತ್ಯಂತ ತೇಜಸ್ಸಿನಿಂದ ಕೂಡಿರುತ್ತದೆ. ಮೈತ್ರಿವಂತನು ಅತ್ಯಂತ ಮುಗ್ಧವಾಗಿ, ಸುಂದರವಾಗಿ ಕಾಣುತ್ತಾನೆ.
10.          ಯಾವುದೇ ಧ್ವಂದ್ವವಿಲ್ಲದೆ ಸಾಯುತ್ತಾನೆ : ಆತನು ಪಶ್ಚಾತ್ತಾಪವಿಲ್ಲದೆ, ನೋವಿಲ್ಲದೆ, ಶಾಂತವಾಗಿ, ಮೋಹವಿಲ್ಲದೆ, ಭಯವಿಲ್ಲದೆ, ಸಂಶಯವಿಲ್ಲದೆ, ನಿದ್ರಿಸುವಂತೆ ಮೃತ್ಯು ಪಡೆಯುತ್ತಾನೆ.
11.          ಬ್ರಹ್ಮಲೋಕ ಪ್ರಾಪ್ತಿ : ಒಂದುವೇಳೆ ಆತನು ಅರಹಂತನಾಗದಿದ್ದರೆ, ಅಥವಾ ಯಾವುದೇ ಆರ್ಯ ಸ್ಥಿತಿಯನ್ನು ಮುಟ್ಟದಿದ್ದರೂ ಸಹಾ ಬ್ರಹ್ಮಲೋಕ ಪ್ರಾಪ್ತಿ ಮಾಡುತ್ತಾನೆ.

                ಈ ರೀತಿಯಲ್ಲಿ ಮೈತ್ರಿ ಧ್ಯಾನವು ಇಲ್ಲಿಗೆ ಮುಗಿಯಿತು.