Monday 20 October 2014

. ಧ್ಯಾನ ಎಂದರೇನು ?(what is meditation ?)

ಧ್ಯಾನ ಎಂದರೇನು ?
                "ಮಾನವನ ಜೀವನ ದುರ್ಲಭ, ಮರ್ತರ ಜೀವನ ಕಷ್ಟಕರ. ಆದ್ದರಿಂದ ಈ ಅವಕಾಶ ಕಳೆದುಕೊಳ್ಳಬೇಡಿ"

                "ದುಶ್ಶೀಲನಾಗಿ ಸಂಯಮರಹಿತನಾಗಿ ನೂರು ವರ್ಷ ಬದುಕುವುದಕ್ಕಿಂತ ಒಂದೇ ಒಂದುದಿನ ಸುಶೀಲನಾಗಿ ಧ್ಯಾನಿಯಾಗಿ ಬದುಕುವುದು ಮೇಲು".

                "ಓ ಭಿಕ್ಷುಗಳೇ ಕೆಲವರು ಧ್ಯಾನದ ಬಗ್ಗೆ ಅಧ್ಯಯನ ಮಾಡುತ್ತಾರೆ. ಇನ್ನೂ ಕೆಲವರು ಅದನ್ನು ಕಂಠಪಾಠ ಮಾಡುತ್ತಾರೆ. ಮತ್ತೆ ಕೆಲವರು ಪರರಿಗೆ ಮನವರಿಕೆ ಮಾಡುತ್ತಿರುತ್ತಾರೆ. ಆದರೆ ಇವರನ್ನು ನಾನು ಧಮ್ಮವಿಹಾರಿ ಎಂದು ಕರೆಯುವುದಿಲ್ಲ."
                "ಯಾರು ಧಮ್ಮ ಕೇಳಿ (ಓದಿ), ಆಗಿನಿಂದಲೇ ಏಕಾಂತಕ್ಕೆ ತೆರಳಿ ಧ್ಯಾನವನ್ನು ಸಿದ್ಧಿಸಲು ತೊಡಗುವನೋ ಆತ ಮಾತ್ರ ಧಮ್ಮವಿಹಾರಿ".
                ಓ ಭಿಕ್ಷುಗಳೇ, ಇದೇ ಮರದ ಬುಡಗಳು (ಸಾರವಾದುದು) ಶೂನ್ಯಗಾರಗಳು, ಧ್ಯಾನಿಸಿ ಭಿಕ್ಷುಗಳೇ, ಅಲಕ್ಷಿಸಬೇಡಿ, ನಂತರ ಪಶ್ಚಾತ್ತಾಪ ಪಡಬೇಡಿ. ಇದು ನಿಮಗಾಗಿ ನನ್ನ ಬುದ್ಧಿವಾದವಾಗಿದೆ.
                "ಜ್ಞಾನಿಯಲ್ಲದವನಿಗೆ ಧ್ಯಾನ ಸಿದ್ಧಿಯಿಲ್ಲ, ಧ್ಯಾನರಹಿತನಿಗೆ ಜ್ಞಾನವಿಲ್ಲ (ಪ್ರಜ್ಞಾ) ಯಾರಲ್ಲಿ ಧ್ಯಾನ, ಜ್ಞಾನ ಇವೆಯೋ ಆತ ನಿಬ್ಬಾಣಕ್ಕೆ ಸಮೀಪವಾಗಿದ್ದಾನೆ".
                ಹೀಗೆ ಬುದ್ಧರು ವಿವಿಧರೀತಿಯಲ್ಲಿ ಧ್ಯಾನದ ಮಹತ್ವ ತಿಳಿಸಿದ್ದಾರೆ.  ನಾವು ಈಗ ಧ್ಯಾನ ಎಂದರೇನು ಎಂಬುದನ್ನು ಅರಿಯೋಣ.  ಧ್ಯಾನ ಮತ್ತು ಸಮಾಧಿಗೆ ಇಲ್ಲಿ ವ್ಯತ್ಯಾಸವಿಲ್ಲ. ಅದರ ಹಂತಗಳು ಬಹಳ ಇವೆ. ಸಂಸ್ಕೃತದ 'ಧ್ಯಾನ' ಪಾಳಿಯಲ್ಲಿ 'ಝಾನ' ಎನಿಸಿಕೊಳ್ಳುತ್ತದೆ ಸಮನಾರ್ಥಕ ಪದವಾಗಿ 'ಸಮಾಧಿ', 'ಸಮಾಪತ್ತಿ', 'ಬಾವನ', ಎಂದೆಲಾ ಕರೆಯುತ್ತಾರೆ.  ಸಮಾಧಿಯ (ಧ್ಯಾನದ) ಅರ್ಥ ಇಲ್ಲಿ ಹೀಗೆ ವಿವರಿಸಲಾಗಿದೆ.
"ಕುಶಲ ಸ್ಥಿತಿಗಳ ಸಮಗ್ರತೆ" : ಎಲ್ಲಾ ಕುಶಲ ಸ್ಥಿತಿಗಳಿಗೆ ಸಮಾಧಿಯೇ ನಾಯಕವಾಗಿದೆ, ಸಮಾಧಿಯನ್ನೇ ಹಿಂಬಾಲಿಸುತ್ತದೆ ಮತ್ತು ಭಾಗುತ್ತವೆ" ಸಮಾಧಾನ ತರುವುದರಿಂದ ಸಮಾಧಿಯಾಗಿದೆ.  ಚಿತ್ತವನ್ನು ಸುಕೇಂದ್ರಿಕರಿಸುವುದರಿಂದ, ಸಮಂ (ಸಮನಾಗಿ) ಸಮ್ಮ (ಸರಿಯಾಗಿ) ಚಿತ್ತವನ್ನು ಏಕ ವಿಷಯದ ಮೇಲೆ ಹರಿಸುವುದರಿಂದ ಅಕ್ಷೊಭ ಮತ್ತು ಅಚದುರುವಿಕೆ ಹೊಂದಿರುವುದರಿಂದ ಇದು ಸಮಾಧಿಯಾಗಿದೆ.
                ಸಮಾಧಿಯ ಲಕ್ಷಣ ಏನೆಂದರೆ ಚದುರಿಹೋಗದಿರುವಿಕೆ ಮತ್ತು ನೆಲಸುವಿಕೆಯಾಗಿದೆ.  ಸಮಾಧಿಯ ಕ್ರಿಯೆ ಏನೆಂದರೆ ಚದುರುವುದನ್ನು ತೆಗೆದುಹಾಕುವಿಕೆ.
                ಸಮಾಧಿಯು ವ್ಯಕ್ತವಾಗುವುದು ಹೇಗೆಂದರೆ ಅಚಲತೆಯಿಂದ ಅಂದರೆ ಚಿತ್ತದ ಅಲೆರಹಿತತೆಯಿಂದ ಮತ್ತು ಶಾಂತತೆಯಿಂದಲೇ ಆಗಿದೆ. 
                ಸಮಾಧಿಗೆ ತತ್ಕ್ಷಣದ ಕಾರಣ ಯಾವುದೆಂದರೆ ಆನಂದ.  ಏಕೆಂದರೆ ಉತ್ಸಾಹಯುತ ಆನಂದದಿಂದಲೇ ಮನಸ್ಸು ಏಕಾಗ್ರವಹಿಸುವುದು. ಹಾಗು ಚಿತ್ತದ ಕಲ್ಮಶಗಳಿಂದ ದೂರವಾದಾಗಲೇ ಸಮಾಧಿಯು ಲಭಿಸುವುದು ಇದೇ ತಕ್ಷಣದ ಕಾರಣವಾಗಿದೆ.  ಅಂದರೆ ಒಟ್ಟಾರೆ ಹೇಳುವುದಾದರೆ "ಯೋಗ್ಯ ವಿಷಯವೊಂದರ ಮೇಲೆ ಚದುರಿಹೋಗದಂತಹ ಚಿತ್ತದ ಏಕಾಗ್ರತೆಯಾಗಿದ್ದು ಕುಶಲಸ್ಥಿತಿಗಳ ಸಮಗ್ರತೆ ಹೊಂದಿಸುವಂತಹದ್ದಾಗಿದೆ".
                ಇದನ್ನು "ವಾಯುವಿಲ್ಲದ ಕಡೆ ಸ್ಥಿರವಾಗಿ ಅಚಲ ಸ್ಥಿತಿಯಲ್ಲಿರುವ ದೀಪಕ್ಕೆ ಹೋಲಿಸುತ್ತಾರೆ".
                "ಯಾವುದಕ್ಕೂ ಅವಲಂಬಿತವಾಗದೆ, ಅಚಲವಾಗಿ, ಅಕ್ಷೊಭ್ಯವಾಗಿ (ಅಭಾದಿತ) ಶಾಂತವಾಗಿ, ಯಾವುದಕ್ಕೂ ಅಂಟದೆ ಸರಿಯಾಗಿ, ಏಕವಾಗಿ ಮನಸ್ಸು ಕೇಂದ್ರೀಕೃತವಾಗಿ ನೆಲಸುವಂತಹುದೇ ಸಮಾಧಿಯಾಗಿದೆ".
                "ಕಲ್ಮಶಗಳಿಂದ, ತಡೆಗಳಿಂದ ದೂರವಾಗಿ, ಸುಖ, ಶಾಂತತೆಯಿಂದ ಸಮನ್ವಯವಾಗಿ ಏಕವಾಗಿ, ಸ್ಥಿರವಾಗಿ ವಿಹರಿಸುವಂತಹುವೇ ಸಮಾಧಿ ಎನಿಸುತ್ತದೆ".
ಪ್ರಶ್ನೆ 1    : ಭಜನೆ, ಪ್ರಾರ್ಥನೆ ಹಾಗು ಧ್ಯಾನ ಒಂದೆಯೇ ?
ಉತ್ತರ   : ಖಂಡಿತವಾಗಿ ಇಲ್ಲ. ಪ್ರಾರ್ಥನೆಯಲ್ಲಿ ಕೆಲವೊಮ್ಮೆ ಲೋಭವಿರುತ್ತದೆ, ಮೋಹವಿರುತ್ತದೆ. ಹಾಗು ಆಳವಾದ ಏಕಾಗ್ರತೆಯ ಕೊರತೆಯಿರುತ್ತದೆ. ಆದರೆ ಧ್ಯಾನದಲ್ಲಿ ಅಲೋಭ, ಅಮೋಹಯುತ ಆಳವಾದ ಏಕಾಗ್ರತೆ ಯಿರುತ್ತದೆ.
ಪ್ರಶ್ನೆ 2    : ನಾವು ಚಲನಚಿತ್ರ ನೋಡುವಾಗ ಅಥವಾ ಓದುವಾಗ ಇರುವ ಏಕಾಗ್ರತೆಯು ಸಮಾಧಿಯೆ ?
ಉತ್ತರ : ಖಂಡಿತವಾಗಿ ಅಲ್ಲ, ಏಕಾಗ್ರತೆಗೆ ಹಾಗು ಸಮಾಧಿಗೆ ಬಹಳ ಅಜಗಜಾಂತರದ ವ್ಯತ್ಯಾಸವಿದೆ.  ಏಕಾಗ್ರತೆಯಲ್ಲಿ ಚಿತ್ತವು ಒಂದೇಕಡೆ ಹರಿಯುತ್ತಿರುತ್ತದೆ. ಅದು ಕೋಪದ ಭಾವಾವೇಶವಾಗಿರಬಹುದು ಅಥವಾ ವಾಮಾಚಾರಿಗಳ ದ್ವೇಷದ ಏಕಾಗ್ರತೆಯಾಗಿರಬಹುದು. ಅಥವಾ ಚಲನಚಿತ್ರದ ಲೋಭದ ಏಕಾಗ್ರತೆಯಾಗಿರಬಹುದು ಅಥವಾ ಕಾಲ್ಪನಿಕ ದೇವರ ಜಪವಾಗಿರಬಹುದು. ಅದು ಸಮ್ಮ ಸಮಾಧಿ ಎನಿಸುವುದಿಲ್ಲ. ಏಕೆಂದರೆ ಅವು ಕುಶಲವಾಗಿಲ್ಲ. ಅವೆಲ್ಲಾ ಲೋಭ, ದ್ವೇಷ ಮತ್ತು ಮೋಹದಿಂದ ಕೂಡಿದೆ. ಸಮ್ಮ ಸಮಾಧಿಯಲ್ಲಿ ಧ್ಯಾನದ ವಸ್ತುವು ಲೋಭ, ದ್ವೇಷ ಮತ್ತು ಮೋಹರಹಿತವಾಗಿರಬೇಕು. ಹಾಗು ಕಲುಷಿತ (ಚಿತ್ತದ ತಡೆಗಳಿಂದ) ದಿಂದ ದೂರವಾದ ಸುಖ, ಶಾಂತತೆಯಿಂದ ಕೂಡಿದ ಆಳವಾದ, ಅಚಲವಾದ, ಅಬಾಧಿತವಾದ ಚಿತ್ತದ ಏಕಾಗ್ರತೆ, ಸಮಗ್ರತೆಯಾಗಿದೆ".
ಪ್ರಶ್ನೆ 3    : ಧ್ಯಾನ ಮತ್ತು ಚಿಂತನೆ ಒಂದೆಯೇ ?

ಉತ್ತರ   : ಇಲ್ಲ, ಚಿಂತನೆಯು ಸ್ಥೂಲವಾದ ಯೋಚನೆಗಳಿಂದ ಕೂಡಿರುವ ಏಕಾಗ್ರತೆಯಾಗಿದೆ ಮತ್ತು ಅದು ಸಾಮಿಪ್ಯ ಸಮಾಧಿಯನ್ನು ಮಾತ್ರ ಏರಬಹುದಷ್ಟೆ. ಆದರೆ ಧ್ಯಾನವು ಚಿಂತನೆಗಿಂತಲೂ ಸಾವಿರಪಟ್ಟು ಸೂಕ್ಷ್ಮವಾಗಿರುತ್ತದೆ ಮತ್ತು ಧ್ಯಾನದಲ್ಲಿ ಅನುಭವ ಆಳವಾಗಿ, ವಿಶಾಲವಾಗಿರುತ್ತದೆ. ಅಲ್ಲಿ ಸಮಾಧಿಯನ್ನು 4 ಹಂತಗಳವರೆವಿಗೂ ಏರಬಹುದು. 

No comments:

Post a Comment