Monday 27 February 2017

Contemplation on corpses in kannada ಅಶುಭಾ ಧ್ಯಾನ part 2

2.            ನೀಲಿಗಟ್ಟಿದ ಶವದ ಅಶುಭಾ ಧ್ಯಾನ :
                ಧ್ಯಾನವು ಶರೀರದ ವರ್ಣದಲ್ಲಿ ಆಸಕ್ತರಾದ ಲೋಭಗಳಿಗೆ ಸೂಕ್ತವಾದುದು. ಇಲ್ಲಿ ಧ್ಯಾನದ ವಿಧಾನಗಳು ಮತ್ತು ಲಾಭಗಳು ಎಲ್ಲೂ ಉಬ್ಬಿದ ಶವದ ಅಶುಭ ಧ್ಯಾನದಂತೆಯೇ ಇರುತ್ತದೆ. ಆದರೆ ಇಲ್ಲಿ 3 ಅಥವಾ 4 ದಿನ ಹಳೆಯ ಬಣ್ಣಗೆಟ್ಟ ಶವವನ್ನು ಆಯ್ಕೆ ಮಾಡಬೇಕಾಗುತ್ತದೆ. ಇಲ್ಲಿ ಉಗ್ಗದ ನಿಮಿತ್ತವು ಬಣ್ಣಗಳ ಮಚ್ಚೆಯಂತೆ ಕಾಣಿಸುತ್ತದೆ.
                ಆದರೆ ಪತಿಬಾಗ ನಿಮಿತ್ತವು ಪ್ರಬಲ ವರ್ಣದಿಂದ ಗೋಚರಿಸುತ್ತಿದೆ. ಧ್ಯಾನದಿಂದ ವರ್ಣದ ಮೇಲೆ ಅಸಹ್ಯ ಮೂಡುತ್ತದೆ.

3.            ಕೀವುಗಟ್ಟಿ ಕೊಳೆತ ಶವದ ಅಶುಭಾ ಧ್ಯಾನ :
                ಇಲ್ಲಿ 4 ಅಥವಾ 5 ದಿನದ ಕೀವು ಸ್ರವಿಕೆಯ ಕೊಳೆತ ಶವವನ್ನು ಧ್ಯಾನಕ್ಕೆ ಆಯ್ಕೆ ಮಾಡಬೇಕಾಗುತ್ತದೆ. ಧ್ಯಾನವು ಸುವಾಸನೆ, ಹಾಗು ಸುಗಂಧ ದ್ರವಗಳಲ್ಲಿ ಆಸಕ್ತರಾದ ವ್ಯಕ್ತಿಗಳಿಗೆ ಸೂಕ್ತವಾದುದು. ಧ್ಯಾನದಿಂದ ಕೊಳೆಯುವಿಕೆಯ ಅಸಹ್ಯತೆ ಉಂಟಾಗುತ್ತದೆ. ಇಲ್ಲಿ ಉಗ್ಗಹ ನಿಮಿತ್ತವು ಸ್ರವಿಕೆಯಿಂದ ಕೂಡಿದ ಚಿಹ್ನೆಯಾಗಿದ್ದರೆ ಪತಿಭಾಗನಿಮಿತ್ತವು ಅಚಲ ಮತ್ತು ಶಾಂತವಾಗಿರುತ್ತದೆ. ಇದರ ಧ್ಯಾನ ವಿಧಾನ ಮತ್ತು ಲಾಭಗಳು ಉಬ್ಬಿದ ಧ್ಯಾನದಂತೆ ಇರುತ್ತದೆ.
4.            ತುಂಡಾದ ಶವದ ಅಶುಭ ಧ್ಯಾನ :
                ಇದಕ್ಕೆ ಬೇಕಾದ ಧ್ಯಾನ ವಿಷಯವು ಯುದ್ಧರಂಗದಲ್ಲಿ ತುಂಡಾಗಿರುವ ಶವದಲ್ಲಿ ಸಿಗುತ್ತದೆ. ಧ್ಯಾನದಿಂದ ಕತ್ತರಿಸುವಿಕೆಯ ಅಸಹ್ಯ ಮೂಡುತ್ತದೆ. ಧ್ಯಾನದಲ್ಲಿ ಉಗ್ಗಹ ನಿಮಿತ್ತವು ಕತ್ತಿರಿಸಿದಂತೆ ಕಾಣುತ್ತದೆ. ಹಾಗು ಪ್ರತಿಭಾಗ ನಿಮಿತ್ತವು ಪೂರ್ಣವಾಗಿ ಕಾಣುತ್ತದೆ. ಧ್ಯಾನ ವಿಧಾನ ಮತ್ತು ಲಾಭಗಳು ಉಬ್ಬಿದ ಅಶುಭಾ ಧ್ಯಾನದಂತೆ ಇರುತ್ತದೆ.
5.            ಪ್ರಾಣಿಗಳು ಕಚ್ಚಿ ತಿಂದಿರುವ ಶವದ ಅಶುಭ ಧ್ಯಾನ :
                ಧ್ಯಾನಕ್ಕೆ ಪ್ರಾಣಿಗಳು ಕಚ್ಚಿ ತಿಂದಿರುವ ಶವವನ್ನು ಆಯ್ಕೆ ಮಾಡಬೇಕಾಗುತ್ತದೆ. ಧ್ಯಾನವು ಶರೀರದ ಅಂಗಗಳಲ್ಲಿ ಆಸಕ್ತರಾದ ಕಾಮುಕರಿಗೆ ಸೂಕ್ತವಾದುದು. ಧ್ಯಾನದಲ್ಲಿ ಉಗ್ಗಹ ನಿಮಿತ್ತವು ಅಲ್ಲಿ ಅಥವಾ ಇಲ್ಲಿ ಕಚ್ಚಿರುವಂತೆ ಕಂಡರೆ, ಪ್ರತಿಭಾಗ ನಿಮಿತ್ತದಲ್ಲಿ ಪೂರ್ಣವಾಗಿ ಕಾಣಿಸುತ್ತದೆ. ಧ್ಯಾನದಿಂದ ಅಂಗಗಳ ಬಗ್ಗೆ ಅಸಹ್ಯತೆ ಮೂಡುತ್ತದೆ. ಧ್ಯಾನದ ವಿಧಾನ ಮತ್ತು ಲಾಭಗಳು ಉಬ್ಬಿದ ಅಶುಭಾ ಧ್ಯಾನದಂತೆಯೇ ಆಗಿರುತ್ತದೆ.
6.            ಚೆಲ್ಲಾಪಿಲ್ಲಿಯಾಗಿರುವ ಶವದ ಅಶುಭಾ ಧ್ಯಾನ :
                ಧ್ಯಾನಕ್ಕೆ ಚಿಕ್ಕ ಚಿಕ್ಕ ತುಂಡುಗಳಾಗಿ ಚೆಲ್ಲಾಪಿಲ್ಲಿಯಾಗಿರುವ ಶವವನ್ನು ಆಯ್ಕೆ ಮಾಡಬೇಕಾಗುತ್ತದೆ. ಧ್ಯಾನವು ಅಂಗಾಗಗಳಲ್ಲಿ ಅಹಂಕಾರವನ್ನು ಹೊಂದಿದ ವ್ಯಕ್ತಿಗೆ ಸೂಕ್ತವಾದುದು. ಧ್ಯಾನದಲ್ಲಿ ಉಗ್ಗಹ ನಿಮತ್ತವು ಬಿರುಕು ಬಿರುಕಾಗಿ ಕಾಣಿಸುತ್ತದೆ. ಆದರೆ ಪತಿಭಾಗ ನಿಮಿತ್ತವು ಪೂರ್ಣವಾಗಿ ಕಾಣಿಸುತ್ತದೆ. ಧ್ಯಾನದಿಂದ ಅಂಗಾಂಗಗಳ ಬಗ್ಗೆ ಅಸಹ್ಯತೆ ಮೂಡುತ್ತದೆ. ಧ್ಯಾನದ ವಿಧಾನ ಮತ್ತು ಲಾಭಗಳು ಉಬ್ಬಿದ ಅಶುಭಾ ಧ್ಯಾನದಂತೆಯೇ ಇರುತ್ತದೆ.
7.            ಕತ್ತರಿಸಿ ಚೆಲ್ಲಾಪಿಲ್ಲಿಯಾಗಿರುವ ಶವದ ಅಶುಭಾ ಧ್ಯಾನ :
                ಇಲ್ಲಿ ಖಡ್ಗದಿಂದ ಕತ್ತರಿಸಲ್ಪಟ್ಟು ಚೆಲ್ಲಾಪಿಲ್ಲಿಯಾಗಿರುವ ಶವದ ಆಯ್ಕೆ ಮಾಡಬೇಕು. ಧ್ಯಾನವು ಚೆನ್ನಾಗಿರುವ ದೇಹದ ಆಸಕ್ತಿ ಹೊಂದಿರುವವನಿಗೆ ಸೂಕ್ತವಾದುದು. ಧ್ಯಾನದ ಉಗ್ಗಹ ನಿಮಿತ್ತವು ಛಿದ್ರವಾಗಿರುವ ಗಾಯಗಳಂತೆ ಕಾಣುತ್ತದೆ. ಆದರೆ ಪತಿಭಾಗನಿಮಿತ್ತವು ಪೂರ್ಣವಾಗಿ ಕಾಣುತ್ತದೆ. ಧ್ಯಾನದ ವಿಧಾನ ಮತ್ತು ಲಾಭಗಳು ಉಬ್ಬಿದ ಅಶುಭಾ ಧ್ಯಾನದಂತೆಯೇ ಆಗಿರುತ್ತದೆ.
8.            ರಕ್ತ ಕಲೆಗಳ ಶವದ ಅಶುಭಾ ಧ್ಯಾನ :
                ಇಲ್ಲಿ ರಕ್ತಸಿಕ್ತವಾದ ಶವವನ್ನು ಆಯ್ಕೆ ಮಾಡಬೇಕಾಗುತ್ತದೆ. ಅಂದರೆ ರಕ್ತ, ಹರಿದ, ರಕ್ತ ತೊಟ್ಟಿಕ್ಕುತ್ತಿರುವ ಶವವನ್ನು ಧ್ಯಾನಿಸಬೇಕಾಗುತ್ತದೆ. ಧ್ಯಾನವು ಆಭರಣಗಳ ಆಸಕ್ತನಿಗೆ ಸೂಕ್ತವಾದುದು. ಇಲ್ಲಿ ಉಗ್ಗಹ ನಿಮಿತ್ತವು ಚಲಿಸುತ್ತಿರುವ ಕೆಂಪು ದ್ರವದಂತೆ ಕಾಣಿಸುತ್ತದೆ. ಆದರೆ ಪತಿಭಾಗ ನಿಮಿತ್ತವು ಶಾಂತವಾಗಿರುತ್ತದೆ. ಧ್ಯಾನದ ವಿಧಾನ ಮತ್ತು ಲಾಭಗಳು ಉಬ್ಬಿದ ಅಶುಭಾ ಧ್ಯಾನದಂತೆಯೇ ಆಗಿರುತ್ತದೆ.
9.            ಕ್ರಿಮಿಗಳಿಂದ ಆವೃತವಾದ ಅಶುಭಾ ಧ್ಯಾನ :
                ಇಲ್ಲಿ ಹಳೆಯ ಶವಕ್ಕೆ ಕ್ರಿಮಿಗಳು ಆವೃತವಾಗಿ ನವರಂಧ್ರಗಳಲ್ಲಿ ಚಲಿಸುತ್ತಾ, ಹಾಗೆಯೇ ಇಡೀ ಶರೀರವನ್ನು ಆವರಿಸಿರುವ ಶವವನ್ನು ಆಯ್ಕೆ ಮಾಡಬೇಕಾಗಿರುತ್ತದೆ. ಧ್ಯಾನವು ಶರೀರದ ಮೇಲಿನ ಅಹಂಕಾರವುಳ್ಳವನಿಗೆ ಸೂಕ್ತವಾದುದು. ಇಲ್ಲಿ ಉಗ್ಗಹ ನಿಮತ್ತವು ಚಲಿಸುವ ಚಿಹ್ನೆಯಿಂದ ಕೂಡಿರುತ್ತದೆ. ಆದರೆ ಪ್ರತಿಭಾಗ ನಿಮಿತ್ತವು ಬೆಂದ ಅಕ್ಕಿಯ ಮುದ್ದೆಯಂತೆ ಕಾಣಿಸುತ್ತದೆ. ಧ್ಯಾನದಿಂದ ದೇಹ ನನ್ನದು ಎಂಬ ಭಾವನೆ ದೂರವಾಗುತ್ತದೆ. ಧ್ಯಾನದ ವಿಧಾನ ಮತ್ತು ಲಾಭಗಳು ಉಬ್ಬಿದ ಅಶುಭಾ ಧ್ಯಾನದಂತೆಯೇ ಆಗಿರುತ್ತದೆ.
10.          ಅಸ್ತಿ ಪಂಜರದ ಅಶುಭಾ ಧ್ಯಾನ :
                ಇಲ್ಲಿ ಹೊಸ ಅಥವಾ ಹಳೆಯ ಮುರಿದ ಅಥವಾ ಪೂರ್ಣ ಅಸ್ತಿಪಂಜರವನ್ನು ಧ್ಯಾನಕ್ಕೆ ಆಯ್ಕೆ ಮಾಡಬೇಕಾಗುತ್ತದೆ. ಧ್ಯಾನವು ಹಲ್ಲುಗಳಿಗೆ ಮತ್ತು ಮೂಳೆಗಳಿಗೆ ಆಸಕ್ತನಾದವನಿಗೆ ಸೂಕ್ತವಾದುದು. ಇಲ್ಲಿ ಉಗ್ಗಹ ನಿಮಿತ್ತವು ಪೂರ್ಣವಾಗಿ ಕಾಣಿಸುತ್ತದೆ. ಧ್ಯಾನದಿಂದ ದೇಹದ ಅನಿತ್ಯ, ದುಃಖ ಮತ್ತು ಅನಾತ್ಮಗಳು ಗೋಚರವಾಗುತ್ತವೆ. ಧ್ಯಾನದ ವಿಧಾನ ಮತ್ತು ಲಾಭಗಳು ಉಬ್ಬಿದ ಅಶುಭಾ ಧ್ಯಾನದಂತೆಯೇ ಆಗಿರುತ್ತದೆ.
                ಇದು ದೇಹದ ಅಂತಿಮ ಅವಸ್ಥೆಯಾಗಿದೆ. ಆಗ ಶವವು ಊದುತ್ತದೆ, ನೀಲಿಗಟ್ಟುತ್ತದೆ, ಹರಿಯುತ್ತದೆ, ಪ್ರಾಣಿಗಳಿಂದ ತಿನ್ನಲ್ಪಡುತ್ತದೆ, ಕ್ರಿಮಿಗಳಿಂದ ತಿನ್ನಲ್ಪಡುತ್ತದೆ. ಶತ್ರುಗಳಿಂದ ತುಂಡು ತುಂಡಾಗುತ್ತದೆ. ರಕ್ತವೆಲ್ಲಾ ಸ್ರವಿಕೆಯಾಗುತ್ತದೆ. ಕೊನೆಗೆ ಮೂಳೆಗಳ ಹಂದರ ಉಳಿಯುತ್ತದೆ. ಹೀಗೆಯೇ ನನ್ನ ದೇಹದ ಗತಿಯೂ ಆಗುತ್ತದೆ. ಇಲ್ಲಿ ಸುಂದರವೆಂಬುದೇ ಇಲ್ಲ. ನೂರಾರು ಮೂಳೆಗಳಿಂದ ರಚಿತವಾಗಿ ಅದರ ಸುತ್ತಲು ಮಾಂಸ ಇತ್ಯಾದಿಗಳಿಂದ ಕಟ್ಟಲ್ಪಟ್ಟು ಚರ್ಮದ ಹೊದಿಕೆಯಿಂದ ದೇಹ ಹೀಗೆ ಕಾಣಿಸುತ್ತದೆ. ಕ್ರಿಮಿಗಳ ಗೂಡು, ರೋಗದ ತವರೂರು, ಮುಪ್ಪಿನ ಮನೆ, ಅಸಹ್ಯತೆಗಳ ಹುಟ್ಟುವಿಕೆಗೆ ಮೂಲಸ್ಥಾನ. ದೇಹದ ನಿಜಸ್ವರೂಪವನ್ನು ಅಶುಭಾ ಧ್ಯಾನದಲ್ಲಿ ಕಂಡವರು ಎಂದಿಗೂ ಕಾಮುಕತೆಯಲ್ಲಿ ಆಸಕ್ತಿ ತಾಳಲಾರರು? ದೇಹದ ಬಗ್ಗೆ ಅಹಂಕಾರ ತಾಳುವುದಿಲ್ಲ, ಭೀತಿ ಪಡುವುದಿಲ್ಲ. ಧ್ಯಾನ ಮಾಡಿದವನಿಗೆ ಜೀವಂತ ಶರೀರವು ಹಾಗು ಶವಕ್ಕೆ ಆತ ಬೇಧ ಕಾಣುವುದಿಲ್ಲ. ದೇಹವೆಂದರೆ ದುಃಖ, ದುಃಖವೆಂದರೆ ದೇಹವುಳ್ಳವನಾಗುವುದೇ ಎಂಬ ಜ್ಞಾನ ಸಿಗುತ್ತದೆ.
                ದೇಹ ನಿರಂತರ ಬದಲಾವಣೆ ಹೊಂದುತ್ತಿರುತ್ತದೆ. ಇಲ್ಲಿ ಆತ್ಮವಿಲ್ಲ. ನನ್ನದು ಎಂಬುದು ಏನೂ ಇಲ್ಲ. ನಾನು ಎಂಬುದು ಮೊದಲೇ ಇಲ್ಲ ಎಂಬ ಯತಾರ್ಥ ಜ್ಞಾನ ಆತನಿಗೆ ಸಿಗುತ್ತದೆ.

ಇಲ್ಲಿಗೆ ಅಶುಭಾ ಧ್ಯಾನಗಳು ಮುಗಿಯಿತ




No comments:

Post a Comment