Monday 7 December 2015

sanghanusati in kannada ಸಂಘಾನುಸತಿ

3. ಸಂಘಾನುಸತಿ     
                ಬುದ್ಧ ಭಗವಾನರ ಶಿಷ್ಯರುಗಳಾದಂತಹ ಯಾರು
                ಹಗಲು ಮತ್ತು ರಾತ್ರಿ ನಿರಂತರವಾಗಿ ಸಂಘಾನುಸತಿ
                (ಸಂಘದ ಸದ್ಗುಣಗಳ ಕುರಿತು ಧ್ಯಾನ) ಅಭ್ಯಾಸ
                ಮಾಡುವರೋ ಅವರುಗಳು ಸದಾ ಎಚ್ಚೆತ್ತ ಸುಖದಲ್ಲಿ ಇರುವರು
                ಇದು ಸಂಘಾನುಸತಿಯ ಮಹೋನ್ನತೆಯನ್ನು ತಿಳಿಸುವಂತಹ ಗಾಥೆಯಾಗಿದೆ. ಸಂಘಾನುಸತಿಯನ್ನು ಆಚರಣೆ ಮಾಡುತ್ತಿರುವವರು ಅನೇಕ ಲಾಭಗಳನ್ನು ಪಡೆಯುತ್ತಾರೆ. ಮೊದಲಿಗೆ ಸಂಘವೆಂದರೆ ಬುದ್ಧ ಭಗವಾನರ ಶಿಷ್ಯರ ಸಮೂಹ. ಅಂದರೆ ಆಚರಣೆಯಿಂದ ಕೂಡಿದ ಸಂಘ. ಇಲ್ಲಿ ಭಿಕ್ಷುಗಳು ಅಥವಾ ಉಪಾಸಕರು ಅರಹಂತ ಗುರಿಗೆ ಬದ್ಧರಾಗಿ ಶೀಲ, ಸಮಾಧಿ ಮತ್ತು ಪ್ರಜ್ಞಾವನ್ನು ಪೂರ್ಣಗೊಳಿಸುತ್ತಾರೆ. ಅಂತಹವರಲ್ಲಿ ಕೆಲವರು ಅರಹಂತರು, ಕೆಲವರು ಅನಾಗಾಮಿ, ಕೆಲವರು ಸಕದಾಗಾಮಿ ಮತ್ತು ಕೆಲವರು ಸೋತಪನ್ನರಾಗುತ್ತಾರೆ. ಉಳಿದವರು ಈ 4 ಹಂತಗಳ ಮಾರ್ಗದಲ್ಲಿ ಕ್ರಮಿಸುತ್ತಾರೆ. ಈ ಸಮೂಹಕ್ಕೆ ಸಂಘ ಎನ್ನುವರು. ಇವರಲ್ಲಿ ಸೋತಪನ್ನ ಕನಿಷ್ಠ ಮೂರು ಬಂಧನ ಕತ್ತರಿಸಿರುತ್ತಾರೆ. ಅರಹಂತರು ಎಲ್ಲಾ ಬಂಧನಗಳನ್ನು ಕತ್ತರಿಸಿರುತ್ತಾರೆ. ಅರಹಂತರಿಗೆ ಮರುಜನ್ಮವೇ ಇಲ್ಲ. ಸೋತಪನ್ನಾಗೆ 7 ಜನ್ಮ ಮಾತ್ರ ಇರುತ್ತದೆ. ಉಳಿದವರಿಗೆ 1 ಜನ್ಮ ಮಾತ್ರ ಇರುತ್ತದೆ.
                ಯಾರು ಸಂಘಾನುಸತಿ ಭಾವನ ಸಿದ್ಧಿಸಲು ಸಿದ್ಧರಿರುವರೋ ಅವರು ನಿಶಬ್ದ, ನಿರ್ಜನ ಪ್ರದೇಶದಲ್ಲಿದ್ದು ಪದ್ಮಾಸನಲ್ಲಿ ಆಸೀನರಾಗಿ, ಅಕುಶಲ ಯೋಚನೆಗಳನ್ನು ದೊರಕಿಸಿ ಸಂಘದ ಮಹೋನ್ನತ ಗುಣಗಳನ್ನು ಈ ರೀತಿ ಧ್ಯಾನಿಸುತ್ತಾರೆ.
                ಸುಪಟಿಪನ್ನೊ ಭಗವತೋ ಸಾವಕಸಂಘೋ
                ಉಜುಪಟಿಪನ್ನೊ ಭಗವತೋ ಸಾವಕಸಂಘೋ
                ಞಾಯ ಪಟಿಪನ್ನೋ ಭಗವತೋ ಸಾವಕಸಂಘೋ
                ಸಾಮಿಚಿ ಪಟಿಪನ್ನೋ ಭಗವತೋ ಸಾವಕಸಂಘೋ
                ಆಹುನೆಯ್ಯೋ, ಪಾಹುನೆಯ್ಯೋ, ದಕ್ಷಿನೆಯ್ಯೋ
                ಅಂಜಲಿಕರನಿಯ್ಯೋ, ಅನುತ್ತರಂ ಪುಣ್ಯಕ್ಖೇತ್ತಂ ಲೋಕಸ್ಸಾತಿ
ಇದರ ಅರ್ಥ ಹೀಗಿದೆ :
ಭಗವಾನರ ಶ್ರಾವಕ ಸಂಘವು ಒಳ್ಳೆಯ ದಾರಿಯಲ್ಲಿ ಹೋಗುತ್ತಿದೆ
ಭಗವಾನರ ಶ್ರಾವಕ ಸಂಘವು ಋಜುವಿನ (ನೇರವಾದ) ದಾರಿಯಲ್ಲಿ. ಹೋಗುತ್ತಿದೆ.
ಭಗವಾನರ ಶ್ರಾವಕ ಸಂಘವು ನ್ಯಾಯವಾದ (ನಿಜ/ಸತ್ಯ) ದಾರಿಯಲ್ಲಿ ಹೋಗುತ್ತಿದೆ.
ಭಗವಾನರ ಶ್ರಾವಕ ಸಂಘವು ಸಮಂಜಸವಾದ ದಾರಿಯಲ್ಲಿ ಹೋಗುತ್ತಿದೆ.
                ನಾಲ್ಕು ವ್ಯಕ್ತಿಗಳ ಜೋಡಿಗಳಿಂದ ಮತ್ತು ಅಷ್ಟ ವ್ಯಕ್ತಿಗಳಿಂದ ಕೂಡಿರುವುದೇ ಭಗವಾನರ ಶ್ರಾವಕ ಸಂಘವಾಗಿದೆ. ಈ ಪವಿತ್ರವಾದ ಸಂಘವು ದಾನಕ್ಕೆ ಅರ್ಹವಾಗಿದೆ, ಆತಿಥ್ಯಕ್ಕೆ ಅರ್ಹವಾಗಿದೆ, ದಕ್ಷಣೆಗೆ (ಸಮರ್ಪಣೆ)ಗೆ ಅರ್ಹವಾಗಿದೆ. ಅಂಜಲಿಬದ್ಧರಾಗಿ ಅನುತ್ತರವಾದ ಪುಣ್ಯಕ್ಷೇತ್ರವಾಗಿದೆ.
                ಇಲ್ಲಿ ಭಗವಾನರ ಸಂಘವು ಒಳ್ಳೆಯ ದಾರಿಯಲ್ಲಿ, ಋಜುವಿನ ದಾರಿಯಲ್ಲಿ ನ್ಯಾಯ (ಸತ್ಯ)ವಾದ ದಾರಿಯಲ್ಲಿ ಮತ್ತು ಸಮಂಜಸವಾದ ದಾರಿಯಲ್ಲಿ ಹೋಗುತ್ತಿದೆ ಎಂತಿದೆ.
                ಇಲ್ಲಿ ಒಳ್ಳೆಯ ಅಂದರೆ ಸಮ್ಮ ಪಟಪದ ಅಂದರೆ ಯೋಗ್ಯವಾದ ಧಮ್ಮದ ಹಾದಿಯಲ್ಲಿಹರು ಅಂದರೆ ಧಮ್ಮ ಮತ್ತು ವಿನಯದ ಹಾದಿಯಲ್ಲಿದ್ದಾರೆ. ಆದ್ದರಿಂದ ಅವರಿಗೆ ಸಪಟಿಪನ್ನೊ ಅಂದರೆ ಸಾಧನೆಯಲ್ಲಿ, ಸುಹಾದಿಯಲ್ಲಿ ಹೋಗುವವರು ಎನ್ನುತ್ತಾರೆ.
                ಋಜುವಿನ ಹಾದಿ ಎಂದರೆ ಶೀಲದ ಹಾಗು ಮಧ್ಯಮವರ್ಗದ ಅತಿರೇಕವಿಲ್ಲದ ನೇರವಾದ ಹಾದಿಯಲ್ಲಿಹರು ಎಂದರ್ಥ. ನ್ಯಾಯವಾದ (ಸತ್ಯದ) ಹಾದಿಯಲ್ಲಿಹರು ಎಂದರೆ ನಿಬ್ಬಾಣದ ಕಡೆ ನಿಜವಾಗಿಯೂ ಕೊಂಡೊಯ್ಯುವ ಹಾದಿಯಲ್ಲಿದಾರೆ ಎಂದು ಅರ್ಥವಾಗಿದೆ. ಸಮಂಜಸ ಮಾರ್ಗದಲ್ಲಿ ಹೋಗುವವರು ಎಂದರೆ ಯೋಗ್ಯವಾದ ವ್ಯಕ್ತಿಗಳಿಂದ ಕೂಡಿರುವಂತಹ ಮಾರ್ಗವಾಗಿದೆ.
                ಶ್ರಾವಕ ಎಂದರೆ ಕೇಳುವವರು ಅಂದರೆ ಬುದ್ಧರ ಬೋಧನೆಯಂತೆ ಕೇಳಿ ನಡೆಯುವವರು ಎಂದು ಅರ್ಥ.
                ನಾಲ್ಕು ವ್ಯಕ್ತಿಗಳ ಜೋಡಿ ಎಂದರೆ ಅಥವಾ ಅಷ್ಟ ವ್ಯಕ್ತಿಗಳೆಂದರೆ
                ಅರಹಂತರಾಗಿರುವವರು ಮತ್ತು ಆ ಮಾರ್ಗದಲ್ಲಿ ಇರುವವರು
                ಅನಾಗಾಮಿ ಮತ್ತು ಆ ಮಾರ್ಗದಲ್ಲಿ ಇರುವವರು
                ಸಕದಾಗಾಮಿ ಮತ್ತು ಆ ಮಾರ್ಗದಲ್ಲಿ ಇರುವವರು
                ಸೋತಪನ್ನ ಮತ್ತು ಆ ಮಾರ್ಗದಲ್ಲಿ ಇರುವವರು
                ಈ ರೀತಿ ಇರುವವರು ಲೋಭ, ದ್ವೇಷ, ಮೋಹದಿಂದ ಮುಕ್ತರಾಗಿರುತ್ತಾರೆ. ಹಾಗು ಜನ್ಮದಿಂದಲೇ ಮುಕ್ತರಾಗಿರುತ್ತಾರೆ. ಅಂತಹವರಿಗೆ ಮಾಡುವ ಗೌರವ ಅದರಲ್ಲೂ ಅಂಜಲಿಬದ್ಧರಾಗಿ (ಕಣ್ಣೀರಿನಿಂದ ತುಂಬಿದ ಭಕ್ತಿಯಿಂದ, ಹೃದಯದಿಂದ ತುಂಬಿದ ಅಪಾರ ಭಕ್ತಿಯಿಂದ) ವಂದಿಸುವುದು ಸಹಾ ಪುಣ್ಯಕಾರ್ಯವಾಗಿದೆ. ಇನ್ನೂ ಅವರಿಗೆ ದಾನ, ಸಮರ್ಪಣೆ ಹಾಗು ಅತಿಥ್ಯ ನೀಡುವುದು ನಿಜಕ್ಕೂ ಪುಣ್ಯಕಾರ್ಯವಾಗಿದೆ.
                ಅದಕ್ಕೆ ಸಂಬಂಧಿಸಿದಂತೆ ಒಂದು ಗಾಥೆಯಿದೆ.
                ಯಾರು ಪೂಜ್ಯಾರ್ಹರಾದವರನ್ನು, ಬುದ್ಧರನ್ನು ಅಥವಾ ಅವರ ಶ್ರಾವಕರನ್ನು ಪೂಜಿಸುವರೋ, ಪ್ರಪಂಚದ ತಡೆಗಳನ್ನು ದಾಟಿ ಶೋಕ ಸಂಕಟಗಳಿಂದ ಪಾರಾದ, ಮುಕ್ತರಾದ, ಶಾಂತ ಸ್ವರೂಪಿಗಳನ್ನು, ಭಯವಿಲ್ಲದವರನ್ನು ಯಾರು ಪೂಜಿಸುವರೋ ಅವರು ಗಳಿಸಿದ ಪುಣ್ಯವನ್ನು ಯಾವುದರಿಂದಲೂ ಅಳೆಯಲು ಸಾಧ್ಯವಿಲ್ಲ.
                ಹೀಗಾಗಿ ಅವರು ಲೋಕದಲ್ಲಿ ಅನುತ್ತರ ಪುಣ್ಯಕ್ಷೇತ್ರವಾಗಿದ್ದಾರೆ.
                ಹೀಗೆ ಆತನು ಸಂಘದ ಸದ್ಗುಣಗಳನ್ನು ಧ್ಯಾನಿಸಿದಾಗ, ಆತನಲ್ಲಿ ಪಂಚನಿವರಣಗಳು ನಶಿಸುತ್ತದೆ. ಧ್ಯಾನಂಗಗಳು ಕೂಡಿ ಉಪಚರ ಸಮಾಧಿ ಪ್ರಾಪ್ತಿಯಾಗುತ್ತದೆ.
ಆತನಿಗೆ ಈ ಕೆಳಕಂಡ ಲಾಭಗಳಾಗುತ್ತದೆ :
1.            ಆತನು ಗೌರವ, ನೀಡುವವನು ಆಗುತ್ತಾನೆ.
2.            ಶ್ರದ್ಧೆಯು ಹೆಚ್ಚಾಗುತ್ತದೆ ಮತ್ತು ದಾನಿಯು ಆಗುತ್ತಾನೆ.
3.            ಆನಂದ ಮತ್ತು ಸುಖವನ್ನು ಗಳಿಸುತ್ತಾನೆ.
4.            ಭಯವನ್ನು ಗೆಲ್ಲುತ್ತಾನೆ.
5.            ಅಪಾಯಗಳಿಂದ ಪಾರಾಗುತ್ತಾನೆ.
6.            ನೋವುಗಳ ಸಹನಾಶೀಲತೆ ವೃದ್ಧಿಯಾಗುತ್ತದೆ.
7.            ಆತನು ಸಂಘದ ಜೊತೆ ವಾಸ ಮಾಡಿರುವಂತೆ ಅನುಭವವಾಗುತ್ತದೆ.
8.            ಪಾಪಲಜ್ಜೆ, ಪಾಪಭಯ, ಹಾಗು ಶೀಲವು ವೃದ್ಧಿಯಾಗುತ್ತದೆ.
9.            ಸುಗತಿ ಪ್ರಾಪ್ತಿಯಾಗುತ್ತದೆ.

ಇದು ಸಂಘಾನುಸತಿಯಾಗಿದೆ

No comments:

Post a Comment