Tuesday 22 December 2015

silanussati in kannada ಶೀಲಾನುಸ್ಸತಿ

 ಶೀಲಾನುಸ್ಸತಿ
                ಶ್ರೀಗಂಧ ತಗರಗಳ ಸುಗಂಧವು ಅಲ್ಪಮಾತ್ರದ್ದು, ಆದರೆ ಶೀಲವಂತನ ಗುಣಗಂಧವು (ಅತ್ಯಂತ ಶ್ರೇಷ್ಠವಾದುದು) ಉತ್ತಮೋತ್ತಮವಾದುದು. ಅದು ದೇವತೆಗಳಲ್ಲೂ ಹರಡಿ ಹಬ್ಬುವಂಥದ್ದು.
                ಇದೇರೀತಿ ಹಲವಾರು ಗಾಥೆಗಳನ್ನು, ಸುತ್ತಗಳನ್ನು, ಶೀಲದ ಬಗ್ಗೆ ನಾವು ಓದುತ್ತೇವೆ. ಶೀಲದ ಮಹತ್ವ ಅಂತಹುದು. ಶೀಲವಂತರು ಮಾತ್ರ ಮಾನವರಾಗಿದ್ದಾರೆ. ಉಳಿದವರು ಮಾನವ ಶರೀರಧಾರಿಗಳು ಮಾತ್ರ ಅಷ್ಟೆ.
                ಬೌದ್ಧ ಧ್ಯಾನಗಳು ಅತ್ಯಂತ ಶ್ರೇಷ್ಟಕರ. ಏಕೆಂದರೆ ಇವು ಏಕಾಗ್ರತೆ ಮತ್ತು ಶಾಂತಿಯನ್ನಷ್ಟೇ ನೀಡುವುದಿಲ್ಲ. ಇವು ಸದ್ಗುಣಗಳನ್ನು ನಿಮರ್ಾಣ ಮಾಡುತ್ತವೆ.
ಉದಾಹರಣೆಗೆ       
                ಶೀಲಾನುಸ್ಸತಿಯಿಂದ ಮಾನವ ಶೀಲವಂತನಾಗುತ್ತಾನೆ.
                ತ್ಯಾಗನುಸತಿಯಿಂದ ಮಾನವ ದಾನಿಯಾಗುತ್ತಾನೆ.
                ಅಶುಭಾ ಧ್ಯಾನದಿಂದ ಮಾನವ ವಿರಾಗಿಯಾಗುತ್ತಾನೆ.
                ಮೆತ್ತಾ ಧ್ಯಾನದಿಂದ ಮಾನವ ನಿಸ್ವಾರ್ಥ ಪ್ರೀತಿಯುಳ್ಳವನಾಗುತ್ತಾನೆ.
                ಕರುಣಾ ಧ್ಯಾನದಿಂದ ಅನುಕಂಪವುಳ್ಳವನಾಗುತ್ತಾನೆ.
                ಮುದಿತಾ ಧ್ಯಾನದಿಂದ ಅನಸೂಯಪರನಾಗುತ್ತಾನೆ.
                ಉಪೇಕ್ಷಾ ಧ್ಯಾನದಿಂದ ಸಮಚಿತ್ತತೆವುಳ್ಳವನಾಗುತ್ತಾನೆ.
                ವಿಪಶ್ಶನ ಧ್ಯಾನದಿಂದ ನಿಜವಾದ ಜ್ಞಾನಿಯಾಗುತ್ತಾನೆ ಮತ್ತು ವಿಮುಕ್ತಿನಾಗುತ್ತಾನೆ.
                ಶೀಲನುಸ್ಸತಿಯು ಮಾನವನನ್ನು ಸುಶೀಲನನ್ನಾಗಿಯು, ಶಿಸ್ತುಬದ್ಧನಾಗಿಯು ಮಾಡುತ್ತದೆ.
                ಇಲ್ಲಿ ಸಾಧಕನು ನಿಶ್ಶಬ್ದ, ನಿರ್ಜನ ವಾತಾವರಣದಲ್ಲಿ, ಪದ್ಮಾಸನಬದ್ಧನಾಗಿ ತನ್ನ ಶೀಲಗಳನ್ನು ಧ್ಯಾನಿಸುತ್ತಾನೆ. ನನ್ನಲ್ಲಿ ಯಾವ ಯಾವ ಶೀಲಗಳು ಇರಬೇಕಿತ್ತು? ಯಾವ ಯಾವ ಶೀಲಗಳಿವೆ. ನಾನು ಯಾವ ಶೀಲಗಳನ್ನು ಅಭಿವೃದ್ಧಿಗೊಳಿಸದ್ದೇನೆ? ಕಷ್ಟಪಟ್ಟು ಯಾವ ಶೀಲಗಳನ್ನು ನಾನು ಸ್ಥಾಪಿಸಿರುವೆನು. ಈ ಜನ್ಮದಲ್ಲಿ ನಾನು ಯಾವ ಶೀಲಗಳನ್ನು ಸಹಜವಾಗಿ ಪಡೆದಿರುವೆನು? ಯಾವ ಶೀಲಗಳು ಇನ್ನೂ ಸ್ಥಾಪಿಸಬೇಕಾಗಿದೆ? ನಾನು ಎಷ್ಟು ಕ್ಷಿಪ್ರವಾಗಿ ಈ ಶೀಲಗಳನ್ನು ಸಾಧಿಸಬಲ್ಲೆ? ಶೀಲಗಳಿಗೋಸ್ಕರ ನಾನು ಏನೆಲ್ಲವನ್ನು ತ್ಯಾಗ ಮಾಡಿದೆ. ಶೀಲಗಳಿಗೋಸ್ಕರ ನಾನು ಎಷ್ಟು ಸಂಕಷ್ಟಗಳನ್ನು ಅನುಭವಿಸಿದೆ. ಅಂತಹ ಸಂದರ್ಭದಲ್ಲಿ ನಾನು ಆ ಶೀಲವನ್ನು ಮುರಿದಿಲ್ಲ. ಇಂತಹ ಸಂದರ್ಭದಲ್ಲಿ ನಾನು ಈ ಶೀಲವನ್ನು ಮಲಿನವಾಗಲು ಬಿಡಲಿಲ್ಲ. ಈ ರೀತಿಯಾಗಿ ನಾನು ನಿಜಕ್ಕೂ ಧನ್ಯ ! ಧನ್ಯನೇ ಸರಿ ಎಂದೆಲ್ಲಾ ಚಿಂತಿಸುತ್ತಾನೆ.
                ನಾನು ಶೀಲಗಳನ್ನು ಅಭಂಗವಾಗಿ ಪಾಲಿಸಿದ್ದೇನೆ
                ನಾನು ಶೀಲಗಳನ್ನು ಅಛಿದ್ರವಾಗಿ ಪಾಲಿಸಿದ್ದೇನೆ
                ನಾನು ಶೀಲಗಳನ್ನು ಕಲೆರಹಿತವಾಗಿ ಪಾಲಿಸಿದ್ದೇನೆ
                ನಾನು ಶೀಲಗಳನ್ನು ಅಮಲಿನವಾಗಿ ಪಾಲಿಸಿದ್ದೇನೆ
                ನಾನು ಶೀಲಗಳನ್ನು ಅಖಂಡವಾಗಿ ಪಾಲಿಸಿದ್ದೇನೆ
ಎಂದು ಆನಂದಿಸುತ್ತಾನೆ.
                ಶೀಲಗಳನ್ನು ಅಛಿದ್ರವಾಗಿ ಪಾಲಿಸುವುದೆಂದರೆ ಸಣ್ಣ ತಪ್ಪುಗಳನ್ನು ಮಾಡದಿರುವುದು, ಮಧ್ಯದಲ್ಲಿ ತಪ್ಪು ಮಾಡದಿರುವುದು.
                ಶೀಲಗಳನ್ನು ಕಲೆರಹಿತ, ಮಲಿನರಹಿತ ಪಾಲಿಸುವುದು ಎಂದರೆ ಮನಸ್ಸಿನಲ್ಲೂ ರಾಗ, ದ್ವೇಷ, ಲೋಭ, ಮೋಹಗಳನ್ನು ನುಸುಳಲು ಅವಕಾಶ ನೀಡದೆ ಪಾಲಿಸುವುದು.
                ಸ್ವತಂತ್ರವಾಗಿ ಶೀಲಗಳನ್ನು ಪಾಲಿಸುವುದೆಂದರೆ, ಸ್ವಯಿಚ್ಛೆಯಿಂದ ನಾನು, ನನ್ನದು ಎಂದು ಅಹಂಕಾರ ಮತ್ತು ಮಮಕಾರ ಇಲ್ಲದೆ, ಲೋಭವಿಲ್ಲದೆ, ಯಾವುದೇ ವಿರೋಧಭಾಸವಿಲ್ಲದೆ, ಯಾವುದೇ ಮಿಥ್ಯಾ ದೃಷ್ಟಿಯಿಲ್ಲದೆ ಪಾಲಿಸುವುದು.
                ಆತನು ಅತ್ಯಂತ ಸಣ್ಣ ತಪ್ಪನ್ನು ಸಹಾ ಮಾಡದೆ, ನಿರಂತರ ಅಖಂಡಶೀಲ ಪಾಲಿಸುತ್ತಾನೆ, ಅಂತಹ ಸಣ್ಣ ತಪ್ಪಿಗೂ ಹೆದರುತ್ತಾನೆ. ಜ್ಞಾನಿಗಳ ಪ್ರಶಂಸೆಗೆ ಪಾತ್ರನಾಗುತ್ತಾನೆ).
                ಆತನ ಶೀಲವು, ಧ್ಯಾನಕ್ಕೂ ಸಹಕಾರಿಯಾಗುತ್ತದೆ. ಅಂದರೆ ನಿವರಣಗಳ ನಾಶವು ಆಗಿರುತ್ತದೆ.
                ಈ ರೀತಿಯಾಗಿ ಶೀಲಗಳನ್ನು ಧ್ಯಾನಿಸುತ್ತಾ ಆತನು ಆನಂದದಿಂದ, ಸುಖದಿಂದ ಕೂಡಿ, ಪಂಚನಿವರಣಗಳಿಂದ ಮುಕ್ತವಾಗಿ ಉಪಚರ ಸಮಾಧಿಯನ್ನು ಪಡೆಯುತ್ತಾನೆ.
ಆತನು ಈ ಲಾಭಗಳನ್ನು ಪಡೆಯುತ್ತಾನೆ.
1.            ಆತನು ಶಿಕ್ಷಣವನ್ನು (ಶೀಲ ಶಿಕ್ಷಣ, ಶಿಸ್ತು) ಗೌರವಿಸುತ್ತಾನೆ.
2.            ಸಹಶೀಲವಂತರ ಜೊತೆ ವಾಸಿಸುತ್ತಾನೆ.
3.            ಯೋಗ್ಯ ವಿಷಯದಲ್ಲಿ ಆತನ ಯತ್ನಶೀಲತೆ ಸ್ವಾಗತನೀಯವಾಗುತ್ತದೆ.
4.            ಆತನು ಸ್ವನಿಂದನ ಭಯದಿಂದ ಪಾರಾಗುತ್ತಾನೆ, ಪರಲೋಕದ ಭಯದಿಂದ ಮುಕ್ತ.
5.            ಸಣ್ಣ ತಪ್ಪಿನಲ್ಲೂ ಭಯ ಕಾಣುವವನು ಆಗುತ್ತಾನೆ.
6.            ಶ್ರದ್ಧೆಯಿಂದ, ಶೀಲದಿಂದ ಕೂಡಿರುತ್ತಾನೆ.
7.            ಸುಖ, ಆನಂದವನ್ನು ಪಡೆಯುತ್ತಾನೆ.
8.            ಸುಗತಿಯನ್ನು ಪ್ರಾಪ್ತಿ ಮಾಡುತ್ತಾನೆ.
                ನಿಜವಾದ ಜ್ಞಾನಿಯು ಶೀಲಾನುಸ್ಸತಿಯಲ್ಲಿ ಆನಂದಿಸುತ್ತಾನೆ.

                ಅಂತಹ ಬೃಹತ್ ಪ್ರಚ್ಚನ್ನಶಾಲಿಯು ಧನ್ಯನೇ ಸರಿ.

No comments:

Post a Comment