Monday 19 September 2016

Marananusati in kannada (ಮರಣಾನುಸ್ಮೃತಿ)

ಮರಣಾನುಸ್ಮೃತಿ
                ಮಾನವ ಜೀವನವು ಅತಿಅಲ್ಪ, ಮರಣವು ಎಂದಿಗೂ ಸೋಲದೆ (ತಪ್ಪದೆ) ಬರುವುದು. ಇದನ್ನು ಜ್ಞಾನಿಯು ಅರಿತು ತಲೆಯು ಸುಡುತ್ತಿರುವ ಮನುಷ್ಯ ಆರೋಗ್ಯಕ್ಕೆ ಹಂಬಲಿಸಿ ಜೀವಿಸುವಂತೆ ಸರಿಯಾಗಿ ಜೀವಿಸಬೇಕು.
                ಬೌದ್ಧರ ಧ್ಯಾನಗಳಲ್ಲಿ ಮರಣಾನುಸ್ಮೃತಿ (ಮರಣದ ಬಗ್ಗೆ ಸಮಗ್ರ ಚಿಂತನೆ) ಅತಿ ಪ್ರಮುಖವಾಗಿದೆ. ಏಕೆಂದರೆ ಇದರಿಂದ ಮಾನವನಿಗೆ ಜೀವನದ ತೋರಿಕೆಯು ಆಡಂಬರವು ವ್ಯರ್ಥವೆಂದು ಅನಿತ್ಯವೆಂದು ಅರಿವಾಗಿ ಜೀವನ ಅನಿಶ್ಚಿತ, ಮರಣವು ನಿಶ್ಚಿತವೆಂದು ಅರಿವಾಗಿ ತನ್ನ ಸ್ವ-ಅಭಿವೃದ್ಧಿಗೆ ಹಾಗೂ ಪರಹಿತಕ್ಕೆ ಯೋಗ್ಯರೀತಿಯಲ್ಲಿ ಶ್ರಮಿಸುತ್ತಾನೆ.
                ಮರಣಾನುಸ್ಮೃತಿಯಿಂದ ಮಾನವ ನಿರಾಶವಾದಿಯಾಗುವುದಿಲ್ಲ. ಬದಲಾಗಿ ಕ್ಷಣ ಮಾತ್ರವು ವ್ಯರ್ಥಮಾಡದೆ ಪರಿಶ್ರಮಿಯಾಗುತ್ತಾನೆ. ಹಾಗೂ ಸಾವಿನೊಡನೆ ಪ್ರಸನ್ನತೆಯಿಂದ ಎದುರು ಮುಖನಾಗುತ್ತಾನೆ. ಮರಣದ ಬಗ್ಗೆ ಆಳ ಚಿಂತನೆ ಮಾಡಿದ್ದರ ಫಲವಾಗಿ ಮೃತ್ಯುಭಯದಿಂದ ಮುಕ್ತನಾಗುತ್ತಾನೆ. ಅಪಾಯಗಳಿಗೆ ಹೆದರದೆ ಧೀರನಾಗುತ್ತಾನೆ. ಪರರ ಮೃತ್ಯುಗಳನ್ನು ಕಂಡು ಸಹಾ ಶೋಕ ವಿಲಾಪಗಳನ್ನು ಮಾಡದೆ ಸಮಚಿತ್ತತೆ ಸಾಧಿಸಿರುವ ಸ್ಥಿರ ಪ್ರಜ್ಞಾವಂತನಾಗುತ್ತಾನೆ. ಅಷ್ಟೇ ಅಲ್ಲ, ಸೋಮಾರಿತನ ತ್ಯಜಿಸಿ ಪ್ರಯತ್ನಶೀಲನಾಗಿ, ಸಂಗ್ರಹಕಾರಿ ಸ್ವಾಥರ್ಿಯಾಗದೆ ಪರಹಿತಕ್ಕಾಗಿ ದುಡಿಯುವ ದಯಾಳುವಾಗುತ್ತಾನೆ. ತನ್ನಂತೆ ಪರರು, ಪರರ ಸುಖವೇ ತನ್ನ ಸುಖ ಎಂದು ಭಾವಿಸಿ ಯಾರಿಗೂ ದುಃಖ ನೀಡಿದೆ ಶೀಲವಂತನಾಗುತ್ತಾನೆ. ಜೀವಿಸುವ ಲೋಭವಾದ ಭವತನ್ಹವನ್ನು ನಾಶಮಾಡಿ, ತ್ರಿಲಕ್ಷಣಗಳನ್ನು (ಅನಿತ್ಯ, ದುಃಖ, ಅನಾತ್ಮ) ರೂಢಿಸಿಕೊಂಡು ಅರಹಂತನೂ ಸಹ ಆಗಬಲ್ಲ. ಅಂತಹ ಮಹಾನ್ ಶಕ್ತಿಶಾಲಿಯಾದ ಮರಣಾನ ಸ್ಮೃತಿಯನ್ನು ಅರಿಯೋಣ.
                ಅಹೋ ಜೀವನವು ಅತಿ ಅಲ್ಪವಾಗಿದೆ. ನೂರು ವರ್ಷಗಳಿಗೆ ಮುಂಚೆಯೇ ಸಾವು ಬರುತ್ತದೆ. ಇದಕ್ಕಿಂತ ಹೆಚ್ಚಾದರೂ ಸಹಾ ವೃದ್ಧಾವಸ್ಥೆ ಪಡೆದು ಮರಣಿಸುತ್ತಾರೆ.
                ಯಾವರೀತಿಯಲ್ಲಿ ಸ್ವಪ್ನದಲ್ಲಿ ಕಂಡಂತಹ ವಸ್ತುಗಳನ್ನು ಎಚ್ಚೆತ್ತಮೇಲೆ ಕಾಣುವು ದಿಲ್ಲವೋ ಅದೇರೀತಿಯಲ್ಲಿ ಪ್ರಿಯಜನರನ್ನು ಮರಣದ ನಂತರ ಕಾಣಲಾಗುವುದಿಲ್ಲ.
                ಮರಣದ ನಂತರ ಜೀವನ, ಜೀವನದ ನಂತರ ಮರಣ ಹೀಗೆಯೇ ಸೂರ್ಯಾಸ್ತ ಹಾಗೂ ಸೂರ್ಯೋದಯದಂತೆ ಕ್ರಿಯೆ ನಿರಂತರ ನಡೆಯುತ್ತಿರುತ್ತದೆ.
                ಎಲೆಗಳ ಮೇಲೆ ಇರುವ ಬಾಷ್ಪ ಹನಿಗಳು ಸೂರ್ಯಬಂದಂತೆ ಮಾಯವಾಗುವ ರೀತಿ, ಕುಂಬಾರನ ಮಡಿಕೆಯು ಒಡೆದುಹೋದರೆ ವ್ಯರ್ಥವಾದಂತೆ ಮರಣವು ಕ್ಷಣದಲ್ಲಿ ಪ್ರತಾಪ ತೋರಿಸುತ್ತದೆ.
                ಜಲಪಾತಗಳು ಹಿಮ್ಮುಖವಾಗಿ ಹರಿಯುವುದಿಲ್ಲ. ಮುದಿತನ ಯೌವ್ವನವಾಗಿ ಪರಿವರ್ತನವಾಗುವುದಿಲ್ಲ. ಹಾಗೆಯೇ ಸತ್ತವನು ಜೀವಂತವಾಗುವುದಿಲ್ಲ. ಸಾವು ತಡೆಯಲಾರದಂತಹುದು.
                ಕೊಲೆಗಾರನು ಅಟ್ಟಿಸಿಕೊಂಡು ಬಂದು ಹತ್ಯೆ ಮಾಡುವ ರೀತಿ ಮೃತ್ಯುವು ಜೀವಿಸುವ ಮಾನವನನ್ನು ಅಂತ್ಯಗೊಳಿಸುತ್ತದೆ. ಅಪಾರವಾದ ಐಶ್ವರ್ಯವು ಕಳುವಾದಂತೆ ನಷ್ಟವಾಗುವ ರೀತಿಯಂತೆ, ಗಾಳಿಯಿಂದ ದೀಪವು ಆರಿಹೋದಂತೆ ಈ ಜೀವನವು ನಷ್ಟವಾಗುವುದು.
                ನಾಲ್ಕು ಧಾತುಗಳಲ್ಲಿ ಒಂದು ಏರುಪೇರಾದರೂ ಜೀವನವಿಲ್ಲ. ಉಸಿರಾಟವು ಸ್ಥಬ್ಧವಾದರೂ ಜೀವವಿಲ್ಲ. ಯಾವುದಾದರೂ ರೋಗಕ್ಕೆ ಬಲಿಯಾದರೂ ಬಾಳಿಲ್ಲ. ಅಗ್ನಿಯಿಂದಾಗಲೀ, ಜಲದಿಂದಾಗಲೀ, ವಾಯುವಿನಿಂದಾಗಲೀ ಕೀಟ, ಪ್ರಾಣಿ ಸರಿಸೃಪಗಳಿಂದಾಗಲೀ ಆಯುಧಗಳಿಂದಾಗಲೀ ಕೊನೆಗೆ ಆಹಾರ ಪಾನೀಯ ಔಷಧ ಏರುಪೇರಿನಿಂದಾಗಲೀ ಅಥವಾ ಅಪಘಾತದಿಂದಲೂ ಜೀವಂತ ವ್ಯಕ್ತಿ ಮೃತನಾಗಬಲ್ಲ.
                ಯೋಗ ಕ್ರಿಯೆಗಳನ್ನು ಮಾಡಿಕೊಂಡಿರುವವರು, ಪೂರ್ಣ ಆರೋಗ್ಯವಂತರೂ, ಬಲಿಷ್ಠವಾದ ದೃಢಕಾಯರು, ಮಹಾನ್ ಶೂರರು, ಮಹಾನ್ ಕ್ಷತ್ರಿಯರು, ಮಹಾನ್ ಸಾಮ್ರಾಟರು, ಅತಿ ಬಲಶಾಲಿಗಳು ಸಹಾ ಮೃತ್ಯುವಿನ ಮುಂದೆ ದುರ್ಬಲರಾಗಿ ಸಾವನ್ನಪ್ಪುತ್ತಾರೆ ಇನ್ನು ರೋಗಿಗಳ ಬಗ್ಗೆ ಹೇಳಬೇಕಾಗಿಲ್ಲ.
                ಅತಿ ಐಶ್ವರ್ಯವಂತರೂ, ಜಗತ್ತಿಗೆ ಮಹಾ ಶ್ರೀಮಂತರು ಸಹಾ ಸಾವನ್ನು ಹಣದಿಂದ ದೂರ ಮಾಡಲಾಗುವುದಿಲ್ಲ.
                ಲೌಕಿನ ಜ್ಞಾನದಲ್ಲಿ ನಿಷ್ಣಾತರು, ವೈಜ್ಞಾನಿಕ ರಂಗದಲ್ಲಿ ನಿಸ್ಸೀಮರು ಜಗತ್ತನ್ನೇ ನಿತ್ಯನವೀನ ಮಾಡಬಲ್ಲ ವಿಜ್ಞಾನಿಗಳು ಸಹಾ ಸಾವಿನ ಮುಂದೆ ವಿಫಲರಾಗಿ ಮೃತ್ಯವಶವಾಗುತ್ತಾರೆ.
                ಜಗತ್ತಿನಲ್ಲಿ ನಾನಾ ಸಾಧನೆಗಳನ್ನು ಮಾಡಿ ಅತಿ ಲೋಕ ವಿಖ್ಯಾತಿ ಪಡೆದವರೂ, ಜನಪ್ರಿಯರು, ಕೀತರ್ಿ ಸಂಪನ್ನರೂ ಸಹಾ ಮೃತ್ಯುವಿಗೆ ಶರಣಾಗತರಾಗುತ್ತಾರೆ.
                ಅತ್ಯಂತ ಪುಣ್ಯಶಾಲಿಗಳು, ಅದ್ಭುತ ಮಾನಸಿಕ ಪವಾಡ ಪಡೆದಂತವರು, ಶ್ರೇಷ್ಠಜ್ಞಾನ ಅರಿತವರು, ಒಟ್ಟಾರೆ ಸರ್ವರೂ ಮೃತ್ಯುವಿಗೆ ಅಪ್ಪುತ್ತಾರೆ.
                ಮರಣದ ನಂತರ ಈ ದೇಹ ಚೂರುಚೂರಾಗಿ ಹೋಗುತ್ತದೆ. ಚರ್ಮವು ಮಾಂಸವು ಕೊಳೆಯುತ್ತದೆ. ನಾನಾ ಕ್ರಿಮಿ ಮುಂತಾದ ಜೀವಿಗೆ ಆಹಾರವಾಗುತ್ತದೆ.
                ಆಯುಷ್ಯ ಆಗಲೀ, ಮರಣದ ಕಾಲವಾಗಲೀ, ಮರಣದ ಸ್ಥಳವಾಗಲೀ ಸಾವಿನ ನಂತರದ ಗತಿಯಾಗಲೀ ದಿವ್ಯಚಕ್ಷುವಂತರ ಹೊರತು ಯಾರೂ ಅರಿಯರು.
                ಚಕ್ರದ ಪರಿದಿಯು ಸ್ವಲ್ಪವೇ ನೆಲದ ಮೇಲಿರುವ ಹಾಗೆ ಈ ವರ್ತಮಾನ ಜೀವನವಿದೆ. ನಂತರ ಜೀವನದ ನಿರೋಧವಾಗಿ ನಾನಾ ರೂಪಗಳು ಬೇರ್ಪಟ್ಟು ಕರ್ಮಫಲಕ್ಕೆ ತಕ್ಕಂತೆ ಕಾಲ ಅಕಾಲ ಮರಣಕ್ಕೆ ವಶರಾಗಿ, ಮುಂದಿನ ಗತಿ ಪಡೆಯುತ್ತಾನೆ.
                ಭೋಗಗಳು, ಐಶ್ವರ್ಯಗಳು ಮಾನವನನ್ನು ಬಿಟ್ಟುಹೋಗುತ್ತದೆ. ಅಥವಾ ಮಾನವನೇ ಅವನ್ನು ಬಿಟ್ಟು ದೇಹತ್ಯಾಗ ಮಾಡುತ್ತಾನೆ. ಇಲ್ಲಿ ಯಾವುದು ನಿತ್ಯವಲ್ಲ.
                ಕರೆಯದೆ ಬಂದ ಅಪ್ಪಣೆ ಪಡದೆ ಹೋದ ಶವಕ್ಕೆ ಬಂಧು ದುಃಖವಿಲ್ಲ. ಅದರ ಗತಿ ಅದಕ್ಕೆ.
                ಸಾವಿನ ನಂತರ ಎರಡು ಗತಿಯಿದೆ (1) ಪುನರ್ಜನ್ಮ ಪಡೆಯುತ್ತಾನೆ. (2) ಪುನರ್ಜನ್ಮ ಇಲ್ಲದೇ ಸಾಯುತ್ತಾನೆ. ಪುನರ್ಜನ್ಮ ಪಡೆಯುತ್ತಾನೆಂದಾದರೆ ಏಕೆ ಶೋಕಿಸಬೇಕು. ಆತ ಜೀವಂತವಾಗಿ ಬೇರೆ ರೂಪ ಪಡೆಯುತ್ತಾನಲ್ಲ. ಪುನರ್ಜನ್ಮ ಇಲ್ಲದೆ ಸಾಯುತ್ತಾನೆ ಎಂದಾದರೆ ಆತನಿಗೆ ಇನ್ನು ಯಾವುದೇ ದುಃಖವಿಲ್ಲ. ಹೀಗಾಗಿ ಚಿಂತೆ ಏತಕ್ಕೆ?
                ಕಳೆದುಹೋದ ಸುಖವನ್ನು ಪಡೆಯಲಾಗುವುದಿಲ್ಲ. ಹಾಗೆಯೇ ಮುಂಬರುವ ಸುಖವನ್ನು ತರಲಾಗುವುದಿಲ್ಲ. ಅಕಾಶದ ಚಂದ್ರ ಅಪೇಕ್ಷೆಗೆ ಸಿಗುವುದಿಲ್ಲ. ಶೋಕದಿಂದ ಯಾವ ಸಹಾಯವೂ ಇಲ್ಲ.
                ಚಿಂತೆಯಿಂದ, ಕೃಶತ್ವ, ದುಃಖ, ಬುದ್ಧಿನಾಶ, ಸಮತ್ವಭಂಗ, ಆನಂದ ಸುಖದ ಅನುತ್ಪತ್ತಿಗೆ ಕಾರಣವಾಗುತ್ತದೆ. ಶತ್ರುವಿಗೆ ಸಂತೋಷವಾಗುತ್ತದೆ. ಅಳುವುದರಿಂದ ಸತ್ತವರು ಏಳುವುದಾದರೆ ನಾವೆಲ್ಲರೂ ಸೇರಿ ಅಳೋಣ, ಆದರೆ ಹಾಗೆ ಸಾಧ್ಯವಿಲ್ಲ, ಅಳುವುದು ನಿರರ್ಥಕ ವ್ಯರ್ಥ.
                ಪ್ರತಿ ಗುರಿಗೂ ಮಾರ್ಗಗಳಿರುತ್ತದೆ. ಆದರೆ ಮೃತ್ಯುಂಜಯಕ್ಕೆ ಅಷ್ಠಾಂಗ ಮಾರ್ಗವೇ ಮಾರ್ಗವಾಗಿದೆ. ಸತ್ತವನನ್ನು ಜೀವಂತಗೊಳಿಸುವುದು ಅಸಾಧ್ಯವೆಂದು ತಿಳಿದು ಹಿಂದಿನ ಕರ್ಮ ಎಂದು ತಿಳಿದು ಶಾಂತರಾಗಬೇಕು.
                ಅಕಾಶದಲ್ಲಿಯಾಗಲೀ ಅಥವಾ ಸಮುದ್ರದ ಮಧ್ಯದಲ್ಲಾಗಲೀ ಅಥವಾ ಪರ್ವತದ ಕಂದರಗಳಲ್ಲಿ ಅಡಗಿದರಾಗಲೀ, ಮರಣದಿಂದ ತಪ್ಪಿಸಿಕೊಳ್ಳಬಹುದಾದ ಯಾವ ಸ್ಥಳವೂ ಈ ಜಗತ್ತಿನಲ್ಲಿ ಎಲ್ಲಿಯೂ ಇಲ್ಲ ಎಂದು ಅರಿಯಬೇಕು.
                ಆದರೆ ಯಾರು ಈ ಲೋಕವನ್ನು ನೀರಿನ ಗುಳ್ಳೆಯಂತೆ ಮತ್ತು ಬಯಲ ಮರೀಚಿಕೆ ಎಂದು ಕಾಣುವರೋ ಅಂತಹವರನ್ನು ಮೃತ್ಯುರಾಜನು ನೋಡುವುದಿಲ್ಲ.
                ಆದ್ದರಿಂದ ನಾವು ಅಲ್ಪವೇ ಜೀವಿಸಲಿ ಅಧಿಕವೇ ಜೀವಿಸಲಿ ಬುದ್ಧ ಶಾಸನದಲ್ಲಿ ಆನಂದಿಸಬೇಕು, ಪಾಲಿಸಬೇಕು. ಸುಗತಿ ಅಥವಾ ನಿಬ್ಬಾಣ ಮುಂದೆ ಪಡೆಯಬೇಕಾಗುತ್ತದೆ.
                ಮಮತ್ವದಲ್ಲಿ ಬಿದ್ದು ಜನರು ಶೋಕಪಡುತ್ತಾರೆ. ಯಾವುದೇ ರೀತಿಯ ಪರಿಗ್ರಹವು ನಿತ್ಯವಲ್ಲ. ಅದರಲ್ಲಿ ವಿಯೋಗ ಇದ್ದೇ ಇರುತ್ತದೆ. ಇದನ್ನು ಅರಿತು ಅದರಲ್ಲಿ ಆನಂದಿಸದಿರಲಿ.
                ಪುರುಷನು ಯಾವುದನ್ನು ತನ್ನದು ಎಂದು ಅರಿಯುತ್ತಾನೋ ಅದನ್ನು ಮರಣ ನಂತರ ಬಿಡಬೇಕಾಗುತ್ತದೆ. ಆದ್ದರಿಂದ ಪಂಡಿತರು ಸಮತ್ವರಾಗಲೀ, ಮುನಿಗಳು ಸರ್ವಥ ಅನಾಸಕ್ತರಾಗುತ್ತಾರೆ. ಅವರು ಯಾವುದನ್ನು ಪ್ರಿಯ ಅಥವಾ ಅಪ್ರಿಯವನ್ನಾಗಿ ಮಾಡಿಕೊಳ್ಳುವುದಿಲ್ಲ. ಯಾವರೀತಿ ಕಮಲದ ದಳದ ಮೇಲೆ ಜಲವು ನಿಲ್ಲುವುದಿಲ್ಲವೋ ಅದೇರೀತಿ ಆತನಿಗೆ ವಿಲಾಪ ಮತ್ತು ಸ್ವಾರ್ಥಗಳು ಆತನಿಗೆ ಪ್ರಭಾವಿತ ಮಾಡಲಾರವು.
                ಇದೇರೀತಿಯಾದ ಚಿಂತನೆಯಿಂದ ಸಾಧಕರು ಜೀವ ಭಯವನ್ನು ಹಾಗೂ ವಿಯೋಗ ದುಃಖವನ್ನು ದಾಟುತ್ತಾನೆ. ಚಿತ್ತಶಾಂತಿಯನ್ನು ಸ್ಥಾಪಿಸುತ್ತಾರೆ. ಸಾವಿಗೆ ಸಿದ್ಧರಾಗುತ್ತಾರೆ ಸಾವಿನ ನಂತರ ಬದುಕಿಗೆ ಸಿದ್ಧತೆ ಮಾಡುತ್ತಾರೆ. ಶೀಲದ ಸಮಾಧಿಯ, ಪ್ರಜ್ಞೆಯ, ಸೇವೆಯ, ಮಹೋನ್ನತ ಜೀವನ ನಡೆಸಿ ಶ್ರೇಷ್ಠ ಸಾವು (ಜೀವನ) ಪಡೆಯುತ್ತಾರೆ.

ಈ ಅನುಸ್ಸತಿಯಿಂದ ಉಪಚರ ಸಮಾಧಿ ಪಡೆಯುತ್ತಾರೆ

1 comment: