Sunday 18 October 2015

karuna jhana or compassion meditation in kannada ಕರುಣಾ ಧ್ಯಾನ

ಕರುಣಾ ಧ್ಯಾನ


                ಈ ಶರೀರದ ಮಾಂಸ, ರಕ್ತ ಮತ್ತು ನನ್ನ ಸರ್ವಸ್ವವೆಲ್ಲವೂ ಜಗತ್ತಿನ ಹಿತಕ್ಕಾಗಿ ಮತ್ತು ಜಗತ್ತಿನ ಕ್ಷೇಮಕ್ಕಾಗಿಯೇ ಇದೆ         - ಶ್ರೀ ಸಂಘ ಬೋಧಿ
                ಇಂದು ಈ ಜಗತ್ತಿಗೆ ಅತ್ಯಂತ ಕರುಣಾಭರಿತ ಸ್ತ್ರೀಯರು ಮತ್ತು ಪುರುಷರು ಬೇಕಾಗಿದ್ದಾರೆ. ಅವರು ಇಲ್ಲಿರುವ ಕ್ರೌರ್ಯ ಮತ್ತು ಹಿಂಸೆಯನ್ನು ಹಾಗು ದುಃಖವನ್ನು ಈ ಭೂಮಿಯಿಂದಲೇ ತೆಗೆದುಹಾಕಬೇಕಾಗಿದೆ          - ಪರಮ ಪೂಜ್ಯ ನಾರದ ಥೇರ
                ಬುದ್ಧ ಭಗವಾನರು ಪ್ರತಿದಿನವೂ ಕೇವಲ ಒಂದು ಗಂಟೆ ಮಾತ್ರ ನಿದ್ರಿಸುತ್ತಿದ್ದರು. ಅದು 3 ರಿಂದ 4 ಗಂಟೆಯವರೆಗೆ ನಂತರ ಅವರು 4 ರಿಂದ 5ರತನಕ ನಿಬ್ಬಾಣದ ಸುಖದಲ್ಲಿ ತಲ್ಲೀನರಾಗುತ್ತಿದ್ದರು. ನಂತರ 5 ರಿಂದ 6ರತನಕ ಮಹಾ ಕರುಣಾ ಸಮಾಪತ್ತಿಯಲ್ಲಿದ್ದು ಸರ್ವಜೀವಿಗಳ ದುಃಖ ವಿಮುಕ್ತತೆಗೆ ಧ್ಯಾನಿಸುತ್ತಿದ್ದರು. ತಮ್ಮ ಬುದ್ಧ ಚಕ್ಷುವಿನಿಂದ ಯಾರ್ಯಾರಿಗೆ ಸಹಾಯ ಮಾಡಬಹುದೆಂದು ಅರಿತು ಅವರಿಗೆ ಸಹಾಯ ಮಾಡುತ್ತಿದ್ದರು.
                ಶ್ರೇಷ್ಠ ಭಿಕ್ಷುಗಳಾದ, ಸಾರಿಪುತ್ರರು, ಮೊಗ್ಗಾಲಾನರು, ಕಶ್ಯಪರು ಇನ್ನು ಮುಂತಾದವರು ರಾಜ ಮಹಾರಾಜರು ಬುದ್ಧರಲ್ಲಿಗೆ ಹುಡುಕಿಕೊಂಡು ಬರುತ್ತಿದ್ದರು. ಆದರೆ ಬುದ್ಧ ಭಗವಾನರು ತಮ್ಮ ಕರುಣೆಯಿಂದ ಪಾಪಿಗಳಾದ ಅಂಗುಲಿಮಾಲಾ, ಅಳವಕ, ಡಕಾಯಿತರು, ದುಃಖಿತರು, ಬೇಟೆಗಾರರು, ಕಷ್ಟದಲ್ಲಿದ್ದ ಇನ್ನಿತರರ ಬಳಿಗೆ ತಾವೇ ಹೋಗಿ ಅವರನ್ನು ಸರಿಪಡಿಸುತ್ತಿದ್ದರು. ಅವರ ಕರುಣೆ ಅನುಪಮವಾಗಿತ್ತು.
                ಬೋಧಿಸತ್ತ ಮುಂದೆ ಬುದ್ಧರಾಗಿದ್ದು ಈ ಕರುಣಾ ಬಲದಿಂದಲೇ. ಈ ರೀತಿ ಕರುಣೆಯಿಂದ ಮಾನವ ಬ್ರಹ್ಮನೂ ಅಗಬಲ್ಲ, ಹಾಗೆಯೇ ಬುದ್ಧರೂ ಆಗಬಲ್ಲ. ಅಂತಹ ಅಗಾಧಶಕ್ತಿ, ಕರುಣೆಗೆ ಇದೆ. ಕರುಣೆಯ ಪರಿಪೂರ್ಣತೆಯನ್ನು ಬುದ್ಧರು ಹೊಂದಿರುವದರಿಂದಾಗಿ ಅವರನ್ನು ಮಹಾ ಕಾರುಣಿಕನಾಥ ಎನ್ನುತ್ತಾರೆ. ನಿವೇನಾದರು ಬುದ್ಧರ ಬೋಧನೆಯಿಂದ ಕರುಣೆಯನ್ನು ತೆಗೆದರೆ ಅಥವಾ ವಿರಾಗವನ್ನು ತೆಗೆದರೆ ಅಥವಾ ಪ್ರಜ್ಞಾವನ್ನು ತೆಗೆದರೆ ನೀವು ಬೌದ್ಧ ಧರ್ಮದ ಹೃದಯವನ್ನೇ ಅಥವಾ ಪ್ರಾಣವನ್ನೇ ತೆಗೆದಂತಾಗುತ್ತದೆ. ಸಕಲ ಸದ್ಗುಣಗಳಿಗೆ ಕರುಣೆಯೇ ಆಧಾರ. ಅಷ್ಟೇ ಏಕೆ, ಬೌದ್ಧತ್ವದ ಗುರಿ ಇಟ್ಟಿರುವ ಬೋಧಿಸತ್ತರಿಗಂತೂ ಕರುಣೆಯೇ ಸರ್ವಸ್ವವಾಗಿರುತ್ತದೆ. ಕರುಣೆಯಿಲ್ಲದೆ ಪರಿಪೂರ್ಣತೆಯೇ ಇಲ್ಲ.
                ಲೋಕದಲ್ಲಿ ಜೀವಗಳಾಗಲಿ ಅಥವಾ ಮಾನವರಾಗಲಿ ದುಃಖದಲ್ಲಿದ್ದಾಗ, ನೋವಿನಲ್ಲಿದ್ದಾಗ, ಭೀತಿಯಲ್ಲಿದ್ದಾಗ, ಕಷ್ಟದಲ್ಲಿದ್ದಾಗ ಅವರನ್ನು ಕಂಡು ಅಥವಾ ಅವರ ಬಗ್ಗೆ ಕೇಳಿ ಹೃದಯವು ಕಂಪಿಸಿದರೆ ಅವರ ದುಃಖ ವಿಮುಕ್ತಿ ಬಯಸಿದರೆ, ಆ ಭಾವವೇ ಕರುಣೆಯಾಗಿ, ಇದರ ಸಮಾನಾರ್ಥಕ ಪದಗಳೆಂದರೆ ಅನುಕಂಪ, ಮಮತೆ, ಮರುಕ, ದಯೆ ಇತ್ಯಾದಿ. ಇದರ ಪ್ರಧಾನ ಲಕ್ಷಣವೇನೆಂದರೆ ಪರರ ದುಃಖವು ಇಲ್ಲದಂತಾಗಲಿ ಎಂದು ಬಯಸುವುದು. ಇದರ ನೇರ ಶತ್ರುವು ಹಿಂಸಾಭಾವನೆಯಾದರೆ ಆದರೆ ಪರೋಕ್ಷ ಶತ್ರು. ದೋಮನಸ್ಸು (ದುಃಖಿತ ಮನಸ್ಸು) ಆಗಿದೆ.
                ಪರರ ದುಃಖವನ್ನು ಕಂಡು ಸತ್ಪುರುಷರ ಹೃದಯವು (ಕಂಪನ) ಕಂಪಿತವಾಗಿ, ದುಃಖವಿಮುಕ್ತಿಗೆ ಚಾಲನೆಯಾಗಿ (ಕರೋತಿ) ಈ ರೀತಿಯಾಗಿ ಇದನ್ನು ಕರುಣೆ ಅಥವಾ ಅನುಕಂಪ ಎನ್ನುತ್ತಾರೆ. ಪರರ ದುಃಖ ವಿಮುಕ್ತಿಗೆ ಶ್ರಮಿಸುವುದರಿಂದ (ಕಿರಿಯಾತಿ) ಇದನ್ನು ಕರುಣಾ ಎನ್ನುತ್ತಾರೆ. ಪರರ ದುಃಖವನ್ನು ಸಹಿಸದೆ ಇರುವುದೇ ಇದರ ಕ್ರಿಯೆಯಾಗಿದೆ. ಕರುಣೆಯು ಕಾರ್ಯರಹಿತತೆಯಿಂದ ವ್ಯಕ್ತವಾಗುತ್ತದೆ. ಇದರ ತತ್ಕ್ಷಣದ ಕಾರಣವೇನೆಂದರೆ ಪರ ದುಃಖಿತರನ್ನು ನೋಡುವುದು ಅಥವಾ ಕೇಳುವುದು ಅಥವಾ ಅದರ ಬಗ್ಗೆ ಚಿಂತಿಸುವುದು. ಕ್ರೂರತ್ವ ಅಂತ್ಯವಾದಾಗ ಕರುಣೆಯು ಜಯಿಸುತ್ತದೆ. ಶೋಕವು ಕರುಣೆಯಲ್ಲ, ಶೋಕವು ಕರುಣೆಯಂತೆ ಕಾಣುತ್ತದೆ ಅಷ್ಟೇ. ಕರುಣೆಯ ಪೂರ್ಣತೆಗಾಗಿ ಶೋಕವನ್ನು ಗೆಲ್ಲುವುದು ಅತ್ಯಗತ್ಯವಾಗಿದೆ. ಕರುಣೆಯೆಂದರೆ ಗೋಳಾಡುವುದಲ್ಲ. ಅವರ ದುಃಖ ವಿಮುಕ್ತಿಯನ್ನು ಪ್ರಬಲವಾಗಿ ಬಯಸುವುದು ಮತ್ತು ಅದಕ್ಕೆ ಕ್ರಿಯೆಯಲ್ಲಿ ಆಚರಣೆಗೆ ತುರುವುದು. ನಿಯಂತ್ರಣದಿಂದ ಕರುಣೆ ಇರುತ್ತದೆ ಹೊರತು ಬೇಕಾದಂತೆ ನಿಯಂತ್ರಣ ತಪ್ಪುವುದಲ್ಲ. ಕರುಣೆಯು ಪ್ರಜ್ಞಾದ ಸಂಗಡ ಇರುತ್ತದೆ. ಪ್ರಜ್ಞಾದಿಂದ ಪರರ ದುಃಖ ಅರಿವಾಗುತ್ತದೆ. ಕರುಣೆಯಿಂದಾಗಿ ಅದನ್ನು ನಿವಾರಿಸಲು ಪ್ರಯತ್ನಿಸುತ್ತೇವೆ. ಪ್ರಜ್ಞಾದಿಂದ ಯೋಗ್ಯ ಪರಿಹಾರ ಸಿಗುತ್ತದೆ. ಕರುಣೆಯಿಂದ ಅದನ್ನು ಆಚರಣೆಯಲ್ಲಿ ಪರಿಹರಿಸುತ್ತೇವೆ. ಪ್ರಜ್ಞಾರಹಿತ ಕರುಣೆ ಅಪಾಯಕಾರಿ, ಕರುಣಾರಹಿತ ಪ್ರಜ್ಞಾವು ಅಪೂರ್ಣ.
ಕರುಣಾಧ್ಯಾನ ವಿಧಾನ :
                ಇಲ್ಲಿ ಸಾಧಕನು ನಿಶ್ಶಬ್ದ ನಿರ್ಜನ ವಾತಾವರಣದಲ್ಲಿ ಪದ್ಮಾಸನದಲ್ಲಿದ್ದು ಬೆನ್ನನ್ನು ನೇರವಾಗಿಟ್ಟುಕೊಂಡು ಅಕುಶಲ ಯೋಚನೆಗಳೆಲ್ಲವನ್ನೂ ದ್ವೇಷದ, ಹಿಂಸೆಯ ಇನ್ನಿತರ ಎಲ್ಲಾ ಪಾಪಯುತ ಯೋಚನೆಗಳಿಂದ ಮುಕ್ತವಾಗಿ ನಂತರ ತಾನು ದಾರಿಯಲ್ಲಿ, ಅಥವಾ ವಾಯು ವಿಹಾರದ ಸ್ಥಳದಲ್ಲಿ ಕಂಡಂತಹ ದುಃಖಿತರನ್ನು, ಶೋಕ ಪೀಡಿತರನ್ನು ಭಯ ಪೀಡಿತರನ್ನು, ರೋಗಿಗಳನ್ನು, ಮಾನಸಿಕ ಅಸ್ವಸ್ಥರನ್ನು, ಭಿಕ್ಷುಕರನ್ನು, ನೋವಿನಿಂದ ಕೂಡಿದವರನ್ನು, ಅಳುತ್ತಿರುವವರನ್ನು, ಒಬ್ಬೊಬ್ಬರಾಗಿ ನೆನೆಯುತ್ತಾನೆ. ಹಾಗಿ ಈ ರೀತಿ ಹಾರೈಸುತ್ತಾನೆ ಓಹ್! ಈತನು ದುಃಖದಿಂದ ಮುಕ್ತನಾಗಲಿ ಹಾಗು ಹಿಂಸಾ ಭಾವನೆಯಿಂದ ಮುಕ್ತನಾಗಲಿ ಅಥವಾ ಈತನು ರೋಗದಿಂದ ಮುಕ್ತನಾಗಲಿ ಹಾಗು ಭಯದಿಂದ ಮುಕ್ತನಾಗಲಿ ಅಥವಾ ಈತನು ನೋವಿನಿಂದ ಮುಕ್ತನಾಗಲಿ ಮತ್ತು ಎಲ್ಲಾ ದುಃಖಗಳಿಂದ ಮುಕ್ತನಾಗಲಿ, ಇವರು ನಷ್ಟದಿಂದ ಮುಕ್ತರಾಗಲಿ ಹಾಗು ಎಲ್ಲಾ ರೀತಿಯ ಶೋಕಗಳಿಂದ ಮುಕ್ತರಾಗಲಿ. ಈ ರೀತಿಯಾಗಿ ಒಬ್ಬರನ್ನು ತೆಗೆದುಕೊಂಡು ಅದರ ಬಗ್ಗೆ ಅವರ ದುಃಖ ನಿವಾರಣೆಯಾಗಲಿ ಎಂದು ಪ್ರಬಲವಾಗಿ ಹಾರೈಸಬೇಕು. ಇವರು ಎಲ್ಲಾ ದುಃಖಗಳಿಂದ ಮುಕ್ತರಾಗಲಿ ಹಾಗು ದುಃಖಕ್ಕೆ ಕಾರಣವಾದಂತಹ ಜನ್ಮದಿಂದ ಮುಕ್ತರಾಗಲಿ ಈ ವ್ಯಕ್ತಿಯು ಹಿಂಸಾ ಭಾವನೆಯಿಂದ ಮುಕ್ತರಾಗಲಿ ಈ ರೀತಿ ಧ್ಯಾನಿಸಬೇಕು.
                ನಂತರ ಪ್ರಿಯರಾದವರನ್ನು ನೆನಪಿಗೆ ತಂದು ಓಹ್! ಅವರು ತಮ್ಮ ರೋಗದಿಂದ ಮುಕ್ತರಾಗಲಿ, ಅವರು ತಮ್ಮ ಎಲ್ಲಾ ದುಃಖ ದೌಭರ್ಾಗ್ಯಗಳಿಂದ ಮುಕ್ತರಾಗಲಿ ಎಂದು ಹಾರೈಸಬೆಕು.
                ನಂತರ ಪಾಪಿಗಳನ್ನು ಮತ್ತು ದ್ರೋಹಿಗಳನ್ನು ನೆನಪಿಗೆ ತಂದು ಓಹ್! ಈತನು ತನ್ನ ದ್ವೇಷಗಳೆಲ್ಲದರಿಂದ, ತನ್ನ ಹಿಂಸಾಬೋಧನೆಯಿಂದ ಪೂರ್ಣವಾಗಿ ವಿಮುಕ್ತನಾಗಲಿ. ಈತನು ತನ್ನೆಲ್ಲಾ ದುಃಖಗಳಿಂದ ಮುಕ್ತನಾಗಲಿ, ಎಲ್ಲಾ ರೀತಿಯ ನೋವುಗಳಿಂದ ಮುಕ್ತನಾಗಲಿ. ಈತ ಜನ್ಮದಿಂದಲೇ ಮುಕ್ತನಾಗಲಿ. ನಂತರ ಹೀಗೆಯೇ ಪರಿಚಯಸ್ಥರ ಮೇಲೆ ಮಾಡಿ.
                ನಂತರ ಕೊನೆಗೆ ತನ್ನಮೇಲೆ ನಾನು ನನ್ನ ಎಲ್ಲಾ ದುಃಖಗಳಿಂದ ಮುಕ್ತನಾಗಲಿ, ನಾನು ಪರರ ದುಃಖವನ್ನು ನಿವಾರಿಸುವಂತಾಗಲಿ ಎಂದು ಹಾರೈಸಬೇಕು. ಈ ರೀತಿಯಾಗಿ ಯಾರಲ್ಲೂ ಬೇಧಭಾವವಿಲ್ಲದೆ ಸರ್ವರಲ್ಲೂ ಸಮಾನವಾಗಿ ಕರುಣೆಯನ್ನು ಪ್ರಸರಿಸಿ. ಕೊನೆಗೆ
                ಸರ್ವಜೀವಿಗಳು ದುಃಖದಿಂದ ಮುಕ್ತರಾಗಲಿ
                ಸರ್ವಜೀವಿಗಳು ಶೋಕದಿಂದ ಮುಕ್ತರಾಗಲಿ
                ಸರ್ವಜೀವಿಗಳು ನೋವಿನಿಂದ ಮುಕ್ತರಾಗಲಿ
                ಸರ್ವಜೀವಿಗಳು ರೋಗದಿಂದ ಮುಕ್ತರಾಗಲಿ
                ಸರ್ವಜೀವಿಗಳು ದುಃಸ್ಥಿತಿಗಳಿಂದ ಮುಕ್ತರಾಗಲಿ
                ಸರ್ವಜೀವಿಗಳು ದೌಭರ್ಾಗ್ಯಗಳಿಂದ ಮುಕ್ತರಾಗಲಿ

ಎಂದು ಹಾರೈಸುವುದು. ಮೆತ್ತಾ ಧ್ಯಾನದಂತೆ ಪಯರ್ಾಯ ವಿಧಾನಗಳನ್ನು ಅನುಸರಿಸುವುದು. ಆದರೆ ಮೊದಲಿಗೆ ದುಃಖಿತರ ಮೇಲೆಯೇ ಮಾಡಬೇಕು. 

No comments:

Post a Comment