Sunday 18 October 2015

four brahma viharas in kannada ನಾಲ್ಕು ಬ್ರಹ್ಮ ವಿಹಾರಗಳು

 ನಾಲ್ಕು ಬ್ರಹ್ಮ ವಿಹಾರಗಳು
                ಬ್ರಹ್ಮ ಎಂದರೆ ಶ್ರೇಷ್ಠ ಎಂದರ್ಥ. ಅತ್ಯುತ್ತಮ ಎಂದೂ ಅರ್ಥವಿದೆ. ವಿಹಾರ ಎಂದರೆ ವಿಹರಿಸುವುದು, ನೆಲೆಸುವುದು ಮತ್ತು ಬ್ರಹ್ಮ ದೇವತೆಗಳ ಮನಸ್ಸು. ಇದೇ ರೀತಿಯಲ್ಲಿ ವತರ್ಿಸುವುದರಿಂದ ಇದನ್ನು ಬ್ರಹ್ಮವಿಹಾರ ಎನ್ನುತ್ತಾರೆ.
                ಇವು ನಿಜವಾಗಿ ಮನುಷ್ಯನನ್ನು ಮಾನವನನ್ನಾಗಿ ಮಾಡುತ್ತದೆ ಅಷ್ಟೇ ಅಲ್ಲದೆ, ಅವನನ್ನು ಬ್ರಹ್ಮತ್ವಕ್ಕೆ ಕರೆದೊಯ್ಯುತ್ತದೆ. ಇವನ್ನು ಸೀಮಾತೀತವಾದುದು ಮತ್ತು ಅಳೆಯಲಾಗದಂತಹುದು ಎನ್ನುತ್ತಾರೆ. ಇವು ನಾಲ್ಕು ಇರುವುದರಿಂದ 4 ಬ್ರಹ್ಮವಿಹಾರ ಎನ್ನುತ್ತಾರೆ.
                1. ಮೆತ್ತಾ  2. ಕರುಣಾ  3. ಮುದಿತಾ   4. ಉಪೇಕ್ಖಾ
1.  ಮೆತ್ತಾ (ಮೈತ್ರಿ) :

                ಇದು ನಿಜಮಿತ್ರನ ಲಕ್ಷಣ ಹೊಂದಿರುವುದರಿಂದ ಇದನ್ನು ಮೆತ್ತ ಎನ್ನುತ್ತಾರೆ. ಮೃದುತೆ ಹೊಂದಿರುವುದರಿಂದ ಮೆತ್ತಾ ಎನ್ನುತ್ತಾರೆ.
                ಮೆತ್ತಾದ ಲಕ್ಷಣ ಏನೆಂದರೆ ಪರಹಿತ, ಪರಸುಖ ಕಾಮನ, ಅಂದರೆ ಸರ್ವರ ಹಿತ ಬಯಸುವಿಕೆಯಾಗಿದೆ. ಇದರ ಕ್ರಿಯೆ ಏನೆಂದರೆ ಸರ್ವರ ಕ್ಷೇಮವನ್ನು ಆಯ್ಕೆ ಮಾಡುವುದು. ಇದರ ತತ್ಕ್ಷಣದ ಕಾರಣ ಪ್ರಿಯರಾದವರನ್ನು ನೋಡುವುದು. ಇದರ ಶತ್ರು ದ್ವೇಷವಾಗಿದೆ, ಅದನ್ನು ಜಯಿಸಿದಾಗಲೇ ಮೆತ್ತ ಭಾವನದಲ್ಲಿ ವಿಜಯಿಯಾಗುತ್ತದೆ. ಮೆತ್ತಾದ ಪರೋಕ್ಷ ಶತ್ರು ಪ್ರೇಮ ಮತ್ತು ವಾತ್ಸಲ್ಯವಾಗಿದೆ. ಈ ಪರೋಕ್ಷ ಶತ್ರುವಿನಿಂದ ಸೋಲುವ ಸಾಧ್ಯತೆಯು ಇರುತ್ತದೆ.
                ಮೆತ್ತಾ ಧ್ಯಾನವು ಜಯಶಾಲಿಯಾಗಬೇಕಾದರೆ ಮೊದಲು ದ್ವೇಷವನ್ನು, ಕ್ರೋಧವನ್ನು ಜಯಿಸಬೇಕು.
ದ್ವೇಷ ಜಯಕ್ಕೆ ಸಹಾಯಕಾರಿ ಗಾಥೆಗಳು :
1.            ಸಹನೆಗಿಂತ ಮಿಗಿಲಾದ ಶಿಸ್ತಿನ ನಿಯಮವಿಲ್ಲ, ಸಹನೆಯು ತಪಗಳಲ್ಲೇ ಶ್ರೇಷ್ಠವಾದುದು. ಸಹನೆಗಿಂತ ಮಿಗಿಲಾದ ಶ್ರೇಷ್ಠತ್ವ ಇನ್ನೊಂದಿಲ್ಲ. ಯಾರ ಬಲವು ಸಹನೆಯೋ ಆತನೇ ಶ್ರೇಷ್ಠ (ಬ್ರಾಹ್ಮಣ) ಎಂದೆಲ್ಲಾ ಸಹನೆಯ ಬಗ್ಗೆ ಮೌಲ್ಯ ಅರಿತು ಸಹನಶೀಲರಾಗುವುದು.
2.            ಬುದ್ಧರ ವಾಣಿಯನ್ನು ನೆನೆಯುತ್ತಾ ಸಾಧಕರೇ, ನಿಮ್ಮನ್ನು ಡಕಾಯಿತರು ಗರಗಸದಿಂದ ತುಂಡು ತುಂಡಾಗಿ ಕತ್ತರಿಸಿದರೂ, ಯಾರ ಮನಸ್ಸು ದ್ವೇಷದಿಂದ ಕೂಡಿಲ್ಲವೊ, ಆತನು ಮಾತ್ರ ನನ್ನ ಬೋಧನೆ ಪಾಲಿಸುತ್ತಿದ್ದಾನೆ ಮತ್ತು ನೀವೇನಾದರೂ ಈಗ ಕೋಪ ಹೊಂದಿದ್ದೇ ಆದರೆ, ನೀವು ನನ್ನ ಬೋಧನೆ ಅನುಸರಿಸುತ್ತಿಲ್ಲ. ಕೋಪಿಯನ್ನು ಕೋಪದಿಂದ ಜಯಿಸಲು ಹೋದರೆ ನೀವೇ ಪರಮ ನೀಚರಾಗುವಿರಿ ಮತ್ತು ಜಯಿಸಲು ಕಠಿಣವಾದ ನಿಜ ಯುದ್ಧದಲ್ಲಿ ಸೋಲುವಿರಿ. ನಿಮ್ಮ ಶತ್ರು ಆನಂದ ತಾಳುವ ಕಾರ್ಯ ಮಾಡುತ್ತಿದ್ದೀರಿ. ನೀವು ಮರದ ತುಂಡಿನ ಸಮಾನರಾಗುವಿರಿ.
3.            ನಾವು ಪರರಿಗೆ ಏನನ್ನು ಇಚ್ಛಿಸುತ್ತೇವೆಯೋ ಅವೆಲ್ಲಾ ನಮಗೆ ಮರಳಿ ದೊರೆಯುತ್ತವೆ. ಚಂಡಿನಂತೆ ಪುಟಿಯುತ್ತವೆ. ಪರರಿಗೆ ಕೆಟ್ಟದ್ದನ್ನು ಇಚ್ಛಿಸಿದರೆ ನಮಗೆ ಕೆಟ್ಟದಾಗುತ್ತದೆ. ಎಂದು ಕರ್ಮ ನಿಯಮ ಅರಿಯುವುದು.
4.            ಮಾನವರಲ್ಲಿ ಏನಾದರೂ ಒಂದು ಒಳ್ಳೆಯ ಗುಣ ಇದ್ದೇ ಇರುತ್ತದೆ. ಅದನ್ನು ನೆನೆಯುತ್ತಾ ಮೈತ್ರಿಯನ್ನು ತೋರಿ.
5.            ಏನೂ ಒಳ್ಳೆಯ ಗುಣವಿಲ್ಲದಿದ್ದರೆ ಆತನ ಮುಂದಿನ ಗತಿ ಅತ್ಯಂತ ಭೀಕರ ಎಂಬುದು ತಿಳಿದು ಆತನಲ್ಲಿ ಮೈತ್ರಿಯನ್ನು ತೋರಿ.
6.            ಈ ಕೋಪದಿಂದ ನಮ್ಮ ಸದ್ಗುಣದ ಬೇರುಗಳೆಲ್ಲಾ ಅಲ್ಲಾಡುತ್ತವೆ. ಅಲ್ಪಕ್ಕಾಗಿ ಅಪಾರ ಪುಣ್ಯ ಸಂಪತ್ತು ಕಳೆಯಲು ನಾವು ಮೂರ್ಖರಾಗಬೇಕೆ?
7.            ಪರರು ನೀಚ ಕೃತ್ಯ ಮಾಡುತ್ತಿದ್ದಾರೆ. ಅವರಂತೆ ನೀವು ವತರ್ಿಸಿ ಆತನ ಹಿಂಬಾಲಕ ಅಥವಾ ತದ್ರೂಪಿ ಆಗಲು ಬಯಸುವಿರಾ?
8.            ಯಾವ ಕೋಪದ ಕಾರಣ ಪರರು ನೀಚರಾಗುತ್ತಾರೋ ಅಂತಹ ಕೋಪವನ್ನು ನೀವು ದಮನಿಸಬಾರದೇಕೆ?
9.            ಅವರು ಮಾಡಿದ ಕರ್ಮಕ್ಕೆ ಅವರಿಗೆ ಫಲ ದೊರೆಯುತ್ತದೆ.  ನೀವೇನಾದರೂ ಮಧ್ಯೆ ಪ್ರವೇಶಿಸಿದರೆ ನೀವು ಕರ್ಮ ಫಲದಲ್ಲಿ ಭಾಗಿಯಾಗುತ್ತೀರಿ.
10.          ದ್ವೇಷಿಯು ಸದ್ಗುಣವನ್ನು ಹಿಡಿಯಲಾರ. ಆತನಿಗೆ ಸತ್ಯ ನೋಡುವ ಬಯಕೆಯು ಇಲ್ಲ. ಯಾವಾಗ ದ್ವೇಷವು ಮಾನವನ ಮನಸ್ಸನ್ನು ಆವರಿಸುವುದೋ ಆಗ ಬಲಿಷ್ಠವಾದ ಕತ್ತಲೆಯು, ಅಜ್ಞಾನವು ಆಳ್ವಿಕೆ ನಡೆಸುತ್ತದೆ
11.          ಅತ್ಯಂತ ಕಡುಕಷ್ಟದ ಪರಿಸ್ಥಿತಿಯಲ್ಲೂ ಬೋಧಿಸತ್ವರು ಕೋಪಿಸಲಿಲ್ಲ, ಹಿಂಸಿಸಲಿಲ್ಲ. ಆದರ್ಶವಾಗಿ ಅವರನ್ನು ಮುಂದಿಟ್ಟು ನಾನು ಮೈತ್ರಿ ಪಾಲಿಸುವೆ.
12.          ಯಾರು ದ್ವೇಷಿಯನ್ನು ದ್ವೇಷದಿಂದ ಪರಿವರ್ತನೆ ಮಾಡುವನೋ ಆತ ಮೊದಲನೆಯವನಿಗಿಂತ ನೀಚ. ಯಾರು ದ್ವೇಷಿಗೆ ದ್ವೇಷ ತೋರುವುದಿಲ್ಲವೋ ಆತ ಕಠಿಣವಾದ ಯುದ್ಧದಲ್ಲಿ ಜಯಶಾಲಿಯಾಗಿದ್ದಾನೆ.
13.          ಪ್ರತಿಯೊಬ್ಬರು ಒಂದಲ್ಲ ಒಂದು ಜನ್ಮದಲ್ಲಿ ನಮಗೆ ತಂದೆ-ತಾಯಿಯರು, ಸೋದರ ಸೋದರಿಯರು ಹಾಗು ಮಕ್ಕಳಾಗಿದ್ದಾರೆ. ಆದ್ದರಿಂದ ಯಾರ ಮೇಲೆ ಕೋಪಿಸಲಿ.
14.          ಯಾವ ಮಾನವ ಯತಾರ್ಥವನ್ನು ನೋಡುತ್ತಾನೋ, ಆತನು ದ್ವೇಷವನ್ನು ದಮಿಸುತ್ತಾನೆ. ಆದ್ದರಿಂದ ನೀವು ಎಲ್ಲಾ ಕುಶಲಕರ್ಮ ಮಾಡುತ್ತಾ ಇರಿ. ಅದರಿಂದಾಗಿ ನೀವು ಪಶ್ಚಾತ್ತಾಪ ಪಡುವುದಿಲ್ಲ.
15.          ಯಾರಿಗೆ ನಾನು ಕೋಪಿಸಲಿ, ಕೈಗೆ, ಕಾಲಿಗೆ, ಕಣ್ಣಿಗೆ, ನಾಲಿಗೆಗೆ, ಆತನ ಇಚ್ಛೆಗೆ, ಆತನ ಕೋಪಕ್ಕೆ? ಯಾರೊಂದಿಗೆ ನಾನು ಕೋಪಿಸಲಿ, ಬಿಡದೇಹವು ಅವನಲ್ಲ, ಪೂರ್ಣ ದೇಹವೂ ಅವನಲ್ಲ.
16.          ಕೋಪದಿಂದ ದ್ವೇಷವು ನಾಶವಾಗಲಾರದು. ಅಕ್ರೋಧದಿಂದ ಮಾತ್ರ ನಾಶವಾಗುತ್ತದೆ. ಇದೇ ಸನಾತನ ನಿಯಮವಾಗಿದೆ.
                ಇತ್ಯಾದಿ ಗಾಥೆಗಳೊಂದಿಗೆ ಹೀಗೆಯೇ ಕೋಪವನ್ನು ಧಮಿಸಿ ಸಹನೆಯನ್ನು ಸ್ಥಾಪಿಸಬೇಕು.
- ಂ - ಂ -
                ಮೈತ್ರಿ ಧ್ಯಾನವು ಕೆಲವರ ಮೇಲೆ ಮಾಡಬಾರದು.
 ಅವರೆಂದರೆ : 1. ಪುರುಷರಾಗಿದ್ದರೆ ಸ್ತ್ರೀಯ ಮೇಲೆ, ಸ್ತ್ರೀಯಾಗಿದ್ದರೆ ಪುರುಷನ ಮೆಲೆ 2. ಸತ್ತಿರುವವರ ಮೇಲೆ. ಏಕೆಂದರೆ
1. ವಿರುದ್ಧ ಲಿಂಗದವರ ಮೇಲೆ ಮಾಡಿದರೆ ಅವರಲ್ಲಿ ಕಾಮವು ಉದಯಿಸಬಹುದು, ಪ್ರೇಮವು ಉದಯಿಸಬಹುದು ಆಗ ಅದು ಮೈತ್ರಿಧ್ಯಾನ ಅನಿಸುವುದಿಲ್ಲ. ಆದ್ದರಿಂದ ಸ್ತ್ರೀಯ ಮೇಲೆ ಅಥವಾ ಸ್ತ್ರೀಯು ಪುರುಷನ ಮೇಲೆ ಮಾಡಬಾರದು. 2. ಇನ್ನು ಸತ್ತಿರುವವರ ಮೇಲೆ ಮಾಡಿದರೆ ಅವರ ಅಸ್ತಿತ್ವವು ಬದಲಾಗಿರುತ್ತದೆ. ಅದು ಗುರಿಯನ್ನು ತಲುಪದು, ಅದರಿಂದ ಧ್ಯಾನವು ಸಿದ್ಧಿಯಾಗದು.
                ಮತ್ತು ಮೈತ್ರಿಯನ್ನು ಮೊದಲು ನಿಮ್ಮ ಮೇಲೆಯೇ ಪ್ರಸರಿಸಬೇಕು. ಹೇಗೆಂದರೆ ನಿಮ್ಮ ದೀಪ ಉರಿದಾಗ ಮಾತ್ರ ನೀವು ಪರರ ದೀಪಗಳನ್ನು ಉರಿಸುವಿರಿ. ಭಗವಾನರು ತಮ್ಮ ದಿವ್ಯದೃಷ್ಟಿಯಲ್ಲಿ ಜೀವಿಗಳಲ್ಲೆಲ್ಲಾ ವೀಕ್ಷಿಸಿ ಈ ರೀತಿ ಹೇಳುತ್ತಾರೆ.

                ನಾನು ನನ್ನ ಮನಸ್ಸಿನಿಂದ ಎಲ್ಲಾ ದಿಕ್ಕುಗಳಲ್ಲಿಯೂ ಹೋಗಿದ್ದೇನೆ. ಆದರೆ ನನಗೆ ನನಗಿಂತ ಪ್ರಿಯರು ನನಗೆ ಯಾರು ಕಾಣಲಿಲ್ಲ. ಹಾಗೆಯೇ ಪರಜೀವಿಗಳು ಸಹಾ ತಮ್ಮನ್ನೇ ಹೆಚ್ಚು ಪ್ರೀತಿಸುತ್ತವೆ. ಯಾರು ನಿಜವಾಗಿ ತಮ್ಮನ್ನು ಪ್ರೀತಿಸುವರೊ ಅವರು ಪರರಲ್ಲಿಯೂ ತಮ್ಮನ್ನೇ ಕಂಡು ಯಾರನ್ನೂ ಹಿಂಸಿಸುವುದಿಲ್ಲ ಆದ್ದರಿಂದ ತಮ್ಮ ಮೇಲೆಯೇ ಮೊದಲು ಮೈತ್ರಿ ಪ್ರಸರಿಸಬೇಕು. 

No comments:

Post a Comment