Sunday 18 October 2015

mudita meditation in kannada ಮುದಿತಾ ಧ್ಯಾನ

ಮುದಿತಾ ಧ್ಯಾನ

                ಮುದಿತಾ ಧ್ಯಾನವನ್ನು, ಆನಂದ ಧ್ಯಾನವೆಂತಲೂ, ಕರೆಯುತ್ತಾರೆ. ಇದು ಮೋದದಿಂದ (ಆನಂದದಿಂದ) ಕೂಡಿರುವುದರಿಂದ ಅಥವಾ ಆನಂದವಾಗುವ ಕಾರ್ಯವನ್ನು ಮಾಡುವುದರಿಂದ (ಮೋದನೆ) ಇದನ್ನು ಮುದಿತಾ ಎನ್ನುತ್ತಾರೆ (ಆನಂದ)
                ಇದರ ಪ್ರಧಾನ ಲಕ್ಷಣವೆಂದರೆ ಪರರ ಉನ್ನತಿಯಲ್ಲಿ ಆನಂದಿಸುವುದು. ಇದರ ಕ್ರಿಯೆ ಏನೆಂದರೆ ಅಸೂಯೆ ತಾಳದೆ ಇರುವುದು. ಇದು ಬೇಸರವನ್ನು ಮತ್ತು ಅಸೂಯೆಯನ್ನು ತೆಗೆಯುವುದರಿಂದಾಗಿ ವ್ಯಕ್ತವಾಗುತ್ತದೆ. ಇದರ ತತ್ಕ್ಷಣದ ಕಾರಣ ಏನೆಂದರೆ ಉನ್ನತ ಜನರ ಯಶಸ್ಸನ್ನು ಕಾಣುವುದು ಮತ್ತು ಕೇಳುವುದು ಹಾಗು ಯೋಚಿಸುವುದಾಗಿದೆ. ಇದರ ಸಿದ್ಧಿಯ ಯಶಸ್ಸು ಅಸೂಯೆ ಮತ್ತು ಬೇಸರವನ್ನು ನಾಶಮಾಡುವುದರಲ್ಲಿದೆ. ಆದರೆ ಪ್ರಾಪಂಚಿಕ ಸಂತೋಷ, ಹಾಸ್ಯ, ಮೋಜು ಇದರ ಪರೋಕ್ಷ ಶತ್ರುವಾಗಿದೆ. ಅದನ್ನು ನಿವಾರಿಸಿದಾಗ ಇದು ಜಯವನ್ನು ಕಾಣುತ್ತದೆ.
                ಈ ಧ್ಯಾನವನ್ನು ಆನಂದದ ಸ್ಥಿತಿ ಸ್ಥಾಪಿಸಲು ಹಾಗು ಅಸೂಯೆಯನ್ನು ಅಂತ್ಯ ಮಾಡಲು ಧ್ಯಾನಿಸುತ್ತಾರೆ. ಮೆತ್ತಾ ಕರುಣಾದ ಸಿದ್ಧಿಯು ಸುಲಭ. ಆದರೆ ಮುದಿತಾ ಸ್ಥಾಪನೆಗೆ ಅಪಾರ ಇಚ್ಛಾಶಕ್ತಿ ಮತ್ತು ಶ್ರಮದ ಅಗತ್ಯವಿದೆ. ಏಕೆಂದರೆ ಮಾನವನಲ್ಲಿ ಸ್ವಾರ್ಥದಿಂದ ಕೇವಲ ತಾನು, ತನ್ನ ಕುಟುಂಬ, ತನ್ನವರು ಈ ಸೀಮೆಯನ್ನು ಇರಲು ಇಚ್ಛಿಸುತ್ತಾರೆ. ಈ ಪರಿಧಿ ದಾಟಲು ಇಚ್ಛಿಸುವುದೇ ಇಲ್ಲ. ನಾವು ಇಂದು ಎಲ್ಲಾ ಕ್ಷೇತ್ರದಲ್ಲೂ ಅಸೂಯೆ ಕಾಣುತ್ತೇವೆ. ವಿದ್ಯಾಭ್ಯಾಸ, ಕ್ರೀಡಾರಂಗ, ವೃತ್ತಿರಂಗ, ವ್ಯಾಪಾರ, ರಾಜಕೀಯ, ಭಾಷೆ, ದೇಶ ಮಟ್ಟದಲ್ಲಿ ಅಷ್ಟೇ ಏಕೆ, ಧರ್ಮಗಳಲ್ಲಿ ಸಹಾ ಒಬ್ಬರ ಉನ್ನತಿ ಇನ್ನೊಬ್ಬರು ಸಹಿಸಲಾರರು. ಸಾಕ್ರಟೀಸ್, ಕ್ರಿಸ್ತ, ಗಾಂಧಿ ಇವರೆಲ್ಲಾ ಬಲಿಯಾಗಿದ್ದು, ಅಸೂಯೆಯಿಂದಲೇ ಅಲ್ಲವೇ. ಅಸೂಯೆಯು ಅತ್ಯಂತ ಹೇಯವಾದಿ ಗುಣವಾಗಿದೆ. ಇದು ಮಾನವನನ್ನು ಸಂಕುಚಿತನನ್ನಾಗಿ ಮಾಡುತ್ತದೆ. ಅವನಿಗೆ ನಿಜವಾದ ಯಶಸ್ಸಿನ ರುಚಿ ಅನುಭವಿಸಲು ಬಿಡುವುದಿಲ್ಲ. ಆತನಿಗೆ ದಿವ್ಯವಾದ ಶ್ರೇಷ್ಠವಾದ ಆನಂದದ ಸವಿಯು ಸೇವಿಸದಂತೆ ಮಾಡುತ್ತದೆ. ಇನ್ನೊಬ್ಬರನ್ನು ಅಸೂಯೆಯಿಂದ ಕಾಣುತ್ತಾ ತಾವೇ ತಮ್ಮ ಕ್ಷೇತ್ರದಲ್ಲಿ ಕುಸಿಯುತ್ತಿರುತ್ತಾರೆ. ನಿಜವಾದ ಉನ್ನತಗಾಮಿಯು ಪರರನ್ನು ನ್ಯಾಯವಾದ ರೀತಿಯಲ್ಲಿ, ಇನ್ನಷ್ಟು ಪರಿಶ್ರಮದಿಂದ, ಸೃಜನಶೀಲತೆಯಿಂದ ಪರರನ್ನು ದಾಟಿ ಅಭಿವೃದ್ಧಿ ಹೊಂದುತ್ತಾನೆಯೇ ಹೊರತು ಪರರ ಪ್ರತಿಭೆಗಳನ್ನು ಚಿವುಟಿ, ಅವರಿಗೆ ಅಡ್ಡಿಯುಂಟು ಮಾಡಿ ಕೃತಿಮತೆಯ ಯಶಸ್ಸಿನಲ್ಲಿ ಆನಂದಿಸಲಾರ.
                ಅಸೂಯೆ ನಾಶದ ಮಾರ್ಗವಾಗಿರುವ ಮುದಿತಾದ (ಅಭಿನಂದನಾ ಆನಂದ) ಧ್ಯಾನವಿಧಾನ ಹೀಗಿದೆ :
                ಇಲ್ಲಿ ಸಾಧಕನು ನಿರ್ಜನ ನಿಶ್ಶಬ್ದ ವಾತಾವರಣದಲ್ಲಿ, ಪದ್ಮಾಸನದಲ್ಲಿ ಕುಳಿತು, ಪಾಪಯುತವಾದ ಅಕುಶಲವಾದ ಎಲ್ಲಾ ರೀತಿಯ ಯೋಚನೆಗಳಿಂದ ಮುಕ್ತನಾಗುತ್ತಾನೆ. ನಂತರ ಆತನು ತನಗೆ ಅತ್ಯಂತ ಪ್ರೀತಿ ಪಾತ್ರರನ್ನು ನೆನಪಿಸಿಕೊಳ್ಳುತ್ತಾನೆ. ಅತ್ಯಂತ ಪ್ರೀತಿ ಪಾತ್ರರೆಂದರೆ, ದಿನೇ ದಿನೇ ಉನ್ನತಿ ಹೊಂದುತ್ತಿರುವ ಮಗುವು ಆಗಬಹುದು ಅಥವಾ ಯಾರನ್ನು ನಾವು ನೋಡಿ ಮೊದಲು ಆನಂದಿತರಾಗಿ ನಕ್ಕು ನಂತರ ಮಾತನಾಡಿಸುತ್ತೇವೆಯೋ ಅಂತಹವರನ್ನು ನೆನೆಯುತ್ತಾ ಓಹ್ ಇವರು ಇನ್ನೂ ಸುಖಿಯಾಗಿರಲಿ, ಇನ್ನೂ ಉನ್ನತಿ ಹೊಂದಲಿ ಎಂದು ಹಾರೈಸುತ್ತಾ ಆನಂದ ಭಾವ ತಾಳಬೇಕು. ಅಥವಾ ಇವನು ಹಿಂದೆ ಉನ್ನತಿ ಹೊಂದಿದ್ದನು, ಹೀಗೆಯೇ ಈಗಲೂ ಮತ್ತು ಮುಂದೆಯು ಉನ್ನತಿ ಹೊಂದಲಿ ಎಂದು ಅಥವಾ ಈತನು ಮುಂದೆಯಾದರೂ ಇನ್ನೂ ಸುಖಿಯಾಗಿರಲಿ, ಇನ್ನೂ ಉನ್ನತಿ ಹೊಂದಲಿ.
                ಓಹ್ ಆತನ ಮುಂದೆ ಅತ್ಯಂತ ಶ್ರೀಮಂತನಾಗಲಿ ಎಂದೂ
                ಓಹ್ ಆತ ಮುಂದೆ ಅತ್ಯಂತ ಆರೋಗ್ಯವಂತ/ಸುಂದರನಾಗಲಿ
                ಓಹ್ ಆತ ಮುಂದೆ ಅತ್ಯಂತ ಬಲಿಷ್ಠನಾಗಲಿ
                ಓಹ್ ಆತ ಮುಂದೆ ಅತ್ಯಂತ ಶೀಲವಂತನಾಗಲಿ
                ಓಹ್ ಆತ ಮುಂದೆ ಅತ್ಯಂತ ಸಮಾಧಿವಂತನಾಗಲಿ
                ಓಹ್ ಆತ ಮುಂದೆ ಅತ್ಯಂತ ಪ್ರಜ್ಞಾವಂತನಾಗಲಿ
                ಓಹ್ ಆತ ಮುಂದೆ ಅತ್ಯಂತ ಹೃದಯವಂತನಾಗಲಿ
                ಓಹ್ ಆತ ಮುಂದೆ ಅತ್ಯಂತ ವಿಮುಕ್ತನಾಗಲಿ
                ಓಹ್ ಆತ ಮುಂದೆ ಅತ್ಯಂತ ಸುಖಿಯಾಗಿಯೇ ಇರಲಿ
                ಓಹ್ ಆತ ಮುಂದೆ ಸದಾ ಅಭಿವೃದ್ಧಿಶೀಲನಾಗಲಿ
                ಈ ರೀತಿ ಮುದಿತಾ ಧ್ಯಾನ ಮಾಡುತ್ತಾ, ನಂತರ ಆತನು ಪ್ರಿಯರಾದವರನ್ನು, ನಂತರ, ತಟಸ್ಥ ವ್ಯಕ್ತಿಗಳನ್ನು, ನಂತರ ದ್ವೇಷಿಸುವವರನ್ನು, ನಂತರ ಅಸೂಯೆಪಡುವವರನ್ನು, ನಂತರ ತನ್ನ ಮೆಲೆ ಪ್ರಸರಿಸಲಿ, ನಂತರ ಸರ್ವ ಜೀವಿಗಳ ಮೆಲೆ ಪ್ರಸರಿಸಲಿ, ಸರ್ವದಿಕ್ಕುಗಳಲ್ಲಿ ಪ್ರಸರಿಸಲಿ, ಮೆತ್ತಾ ಧ್ಯಾನದಂತೆ ಬೇಧಭಾವವಿಲ್ಲದೆ ಸರ್ವರ ಮೇಲೆ ಪ್ರಸರಿಸುವುದರಿಂದಾಗಿ ನಿವರಣಗಳಿಂದ ಮುಕ್ತನಾಗುತ್ತಾರೆ. ನಂತರ ಹಾಗೆಯೇ ತ್ರಿತೀಯ ಧ್ಯಾನದವರೆಗೂ ಆತನು ತಲುಪುತ್ತಾನೆ. ಅಲ್ಲಿಂದ ಆತನು ನೇರವಾಗಿ ವಿನ್ಯಾನನಂಚ ಯಾತನ ಸ್ಥಿತಿಗೆ ತಲುಪಬಹುದು ಅದಕ್ಕೆ ಈ ಧ್ಯಾನ ಶ್ರೇಷ್ಠವಾದ ಆಧಾರವಾಗಿದೆ.
                ಮುದಿತಾ ಧ್ಯಾನದ ಲಾಭಗಳು ಮೆತ್ತಾ ಧ್ಯಾನದಂತೆಯೆ ಅಗಿರುತ್ತದೆ.

ಇಲ್ಲಿಗೆ ಮುದಿತಾ ಧ್ಯಾನವು ಮುಗಿಯಿತು.

No comments:

Post a Comment