Sunday 18 October 2015

upekkha or equanimity meditation in kannada ಉಪೇಖ್ಖಾ (ಉಪೇಕ್ಷಾ) ಧ್ಯಾನ

ಉಪೇಖ್ಖಾ (ಉಪೇಕ್ಷಾ) ಧ್ಯಾನ

                ಮಾನವ ಶಾಂತಿ ಅಪೇಕ್ಷೆಯಿಂದಲೇ ಪ್ರಾರಂಭದಲ್ಲಿ ಧರ್ಮದ ಬಳಿಗೆ ಬರುತ್ತಾನೆ. ಜೀವನದಲ್ಲಿ ಈ ಶಾಂತಿಯು ಸಮಚಿತ್ತತೆಯಿಂದ ಲಭಿಸುತ್ತದೆ. ಜೀವನದಲ್ಲಿ ಲಾಭ, ನಷ್ಟ, ಜಯ, ಪರಾಜಯ, ನಿಂದೆ, ಸ್ತುತಿ, ಸುಖ-ದುಃಖಗಳು ಬರುತ್ತವೆ, ಇರುತ್ತವೆ. ಹಾಗೆಯೇ ಸಮಚಿತ್ತತೆಯನ್ನು ಲೋಭ, ದ್ವೇಷ, ಭಯ, ಚಿಂತೆಗಳು ಸಹಾ ಕದಡುತ್ತದೆ. ಈ ಎಲ್ಲಾ ಕ್ಲೇಶಗಳನ್ನು ಸುಖ-ದುಃಖಗಳನ್ನು ಮೀರಿದ ಸ್ಥಿತಿಯೇ ಸಮಚಿತ್ತತೆ ಆಗಿದೆ. ಇದು ಪಾಲಿಸಲು ಅತ್ಯಂತ ಕಠಿಣವು, ಅಷ್ಟೇ ಪ್ರಾಧಾನ್ಯತೆವುಳ್ಳದ್ದು ಆಗಿದೆ.
                ಸಮಚಿತ್ತತೆಯಿಂದ ಕೂಡಿದವನು ಅಭಯನು, ಅಶೋಕನು, ಅದ್ವೇಷಿಯು ಹಾಗೆಯೇ ಅಲೋಭಿಯು ಮತ್ತು ಅಮೋಹಿಯು ಆಗಿರುತ್ತಾನೆ. ಅದರಿಂದಾಗಿ ಇದು ಮಹತ್ತರವಾದ ಗುಣವಾಗಿದೆ. ಮಾನವನಿಗೆ ಸದಾ ಪ್ರಿಯ ಮತ್ತು ಅಪ್ರಿಯ ಬಯಕೆಗಳಿರುತ್ತದೆ. ಅದರಲ್ಲು ಪ್ರಿಯ ವ್ಯಕ್ತಿಗಳು ಮತ್ತು ಅಪ್ರಿಯ ವ್ಯಕ್ತಿಗಳು ಎಂಬ ಬಂಧನವಿದ್ದು, ಇದರಿಂದಾಗಿ ಆತನು ಪ್ರಿಯ ವ್ಯಕ್ತಿಗಳ ವಿಯೋಗದಿಂದ ದುಃಖಿತನಾಗುತ್ತಾನೆ. ಹಾಗೆಯೇ ಅಪ್ರಿಯ ವ್ಯಕ್ತಿಗಳ ಸಮಾಗಮದಿಂದ ಭಯ ಅಥವಾ ದ್ವೇಷವುಳ್ಳವನು ಆಗುತ್ತಾನೆ. ಯಾವಾಗ ಆತನಲ್ಲಿ ಈ ಪ್ರಿಯ ವ್ಯಕ್ತಿಗಳು ಮತ್ತು ಅಪ್ರಿಯ ವ್ಯಕ್ತಿಗಳು ಎಂಬ ಬಾಂಧವ್ಯ ಸಮಚಿತ್ತತೆಯಿಂದಾಗಿ ಅಳಿದು ಹೋಗುತ್ತದೋ ಸರ್ವರನ್ನು ಶಾಂತವಾಗಿ ಕಾಣುತ್ತಾನೆ. ವ್ಯಕ್ತಿಗಳ ಬಂಧನದಿಂದ ಮುಕ್ತನಾಗುತ್ತಾನೆ. ಸರ್ವರನ್ನು ಸಮಭಾವದಿಂದ ಕಾಣುತ್ತಾನೆ. ನ್ಯಾಯಪರತೆ ಹೊಂದುತ್ತಾನೆ. ಆಸಕ್ತಿಯನ್ನು ವಜರ್ಿಸಿ ನೋಡುವುದರಿಂದ (ಉಪೇಖ್ಖತ್ತಿ) ಮತ್ತು ತಟಸ್ಥತೆ ಹೊಂದಿರುವುದರಿಂದಾಗಿ ಇದನ್ನು ಉಪೇಖ್ಖಾ ಎನ್ನುತ್ತಾರೆ.
                ಉಪೇಖ್ಖಾದ ಲಕ್ಷಣವೇನೆಂದರೆ ಜೀವಿಗಳ ಬಗ್ಗೆ ತಟಸ್ಥತೆ. ಇದರ ಕಾರ್ಯ ಏನೆಂದರೆ ಎಲ್ಲಾ ಜೀವಿಗಳನ್ನು ಸಮಭಾವದಿಂದ ನೋಡುವುದು. ಇದು ರಾಗ ಮತ್ತು ದ್ವೇಷಗಳು (ಪ್ರಿಯ ಮತ್ತು ಅಪ್ರಿಯ ಬಯಕೆಗಳು) ಶಾಂತವಾಗುವುದರಿಂದ ವ್ಯಕ್ತವಾಗುತ್ತದೆ. ಇದರ ತತ್ಕ್ಷಣದ ಕಾರಣ ಏನೆಂದರೆ ಜೀವಿಗಳ ಸುಖದುಃಖಕ್ಕೆ ಆ ಜೀವಿಗಳೇ ಕಾರಣ ಎಂದು ಸ್ಪಷ್ಟವಾಗಿ ಅರಿಯುವುದು. ಉಪೇಖ್ಖಾವು ಅಪ್ರಿಯ ಮತ್ತು ಪ್ರಿಯ ಯೋಚನೆಗಳು ಸ್ತಬ್ದವಾದಾಗ ಜಯಶಾಲಿಯಾಗುತ್ತದೆ. ಆದರೆ ಅಲಕ್ಷಬಾರದ ಪ್ರಾಪಂಚಿಕ ವಿಷಯಗಳಲ್ಲಿ ಉಪೇಕ್ಷೆ ತಾಳಿದಾಗ ಸೋಲುತ್ತದೆ

.
ಉಪೇಖ್ಖಾ ಧ್ಯಾನ ವಿಧಾನ :
                ಯಾರು ಬ್ರಹ್ಮವಿಹಾರದ ಉಪೇಖ್ಖಾ ಧ್ಯಾನದಲ್ಲಿ ತಲ್ಲೀನನಾಗಲು ಬಯಸುವನೋ ಆತನು ಮೊದಲು ಮೆತ್ತಾದಲ್ಲಿ ಆಗಲಿ, ಅಥವಾ ಕರುಣಾದಲ್ಲಿ ಆಗಲಿ ಅಥವಾ ಮುದಿತಾದಲ್ಲಿ ಆಗಲಿ ತ್ರಿತೀಯ ಸಮಾಧಿ ಪಡೆದಿರಬೇಕು. ಅನಂತರ ಆತನು ತ್ರೀತೀಯ ಸಮಾಧಿಯಿಂದ ನಿರ್ಗಮಿಸಿ ಅದರ ಪುನರ್ ಅವಲೋಕನ ಮಾಡಬೇಕು. ಹಾಗೆ ಮಾಡಿದಾಗ ಆತನಿಗೆ ಜೀವಿಗಳಿಗೆ ಅಂಟುವಿಕೆ ದುಃಖದ ರೀತಿ ಭಾಸವಾಗುತ್ತದೆ. ಹಾಗು ಆನಂದಕ್ಕಿಂತ, ಸುಖಕ್ಕಿಂತ, ಆನಂದ ಮೀರಿದ, ಸುಖವನ್ನು ಮೀರಿದ ಸಮಚಿತ್ತತೆಯು ಇಷ್ಟವಾಗುತ್ತದೆ. ಆಗ ಆತನು ಸಮಚಿತ್ತತೆಯಿಂದ ಕೂಡಿದ ಮನದಿಂದ ತಟಸ್ಥ ವ್ಯಕ್ತಿಯ ಬಗ್ಗೆ ಕೇಂದ್ರೀಕೃತಗೊಳ್ಳುತ್ತಾನೆ. ಬಹುಕಾಲ ಹೀಗೆ ಇದ್ದು ನಂತರ ಆತನು ಪ್ರಿಯ ವ್ಯಕ್ತಿಯ ಬಗ್ಗೆ ಸಮಚಿತ್ತತೆಯಿಂದ ಕೂಡಿ ಬಹುಕಾಲ ನೆಲೆಸುತ್ತಾನೆ. ನಂತರ ದ್ವೇಷಿಸುವವನನ್ನು ನೆನಪು ಮಾಡುತ್ತಾ ಆತನ ಬಗ್ಗೆಯು ಸಮಚಿತ್ತತೆಯನ್ನು ಪ್ರಸಾರ ಮಾಡುತ್ತಾನೆ. ನಂತರ ಎಲ್ಲಾ ಜೀವಿಗಳ ಮೆಲೆ ಸಮಚಿತ್ತತೆ ಪ್ರಸರಿಸುತ್ತಾನೆ. ಹಾಗೆಯೇ ಪೂರ್ವ ದಿಕ್ಕಿನಲ್ಲಿರುವ ಎಲ್ಲಾ ಜೀವಿಗಳ ಬಗ್ಗೆ ಸಮಚಿತ್ತತೆ ಪ್ರಸರಿಸುತ್ತಾನೆ. ನಂತರ ಪಶ್ಚಿಮ, ಉತ್ತರ, ದಕ್ಷಿಣ ಊದ್ರ್ವ, ಅದೋ ಹೀಗೆ ಎಲ್ಲಾ ಜೀವಿಗಳ ಮೇಲೆ ಸಮಭಾವದಿಂದ, ಸಮಚಿತ್ತತೆಯಿಂದ ಸಮಚಿತ್ತತೆಯನ್ನು ಪ್ರಸರಿಸುತ್ತಾನೆ.
                ದಿಕ್ಕಿನ ಮೂಲಕ ಆತನು ಸಮಚಿತ್ತತೆಯನ್ನು ಹೇಗೆ ಪ್ರಸರಿಸುತ್ತಾನೆ ಎಂದರೆ ಮೊದಲು 1 ಅಥವಾ 2 ಮನೆಗಳು, ನಂತರ 15 ಮನೆಗಳು, ಹಾಗೆಯೇ ಒಂದು ಬೀದಿ, ಅರ್ಧ ಹಳ್ಳಿ, ಜಿಲ್ಲೆ, ರಾಜ್ಯ, ದೇಶ, ಖಂಡ, ಪೃಥ್ವಿ, ಸೌರವ್ಯೂಹ ಹಾಗೆಯೇ ಇಡೀ ಬ್ರಹ್ಮಾಂಡವನ್ನು ಆತನು ಸಮಚಿತ್ತತೆಯಿಂದ ಪ್ರಸರಿಸುತ್ತಾನೆ. ಚತುರ್ಥ ಧ್ಯಾನ ಪ್ರಾಪ್ತಿಯಾಗಿ ನಂತರ ಆತನು ಅದರ ಸಹಾಯದಿಂದ ನೇರವಾಗಿ ಅಕಿಂಚಾಯಾತನ ಅರೂಪ ಸಮಾಧಿ ಪಡೆಯುತ್ತಾನೆ.
                ಬುದ್ಧ ಘೋಷರವರ ಪ್ರಕಾರ 4 ಬ್ರಹ್ಮವಿಹಾರಗಳು ಪೂರ್ಣತೆಯಿಂದ ದಶಪಾರಮಿಗಳು ಪೂರ್ಣವಾಗುತ್ತದೆ.

- ಇಲ್ಲಿಗೆ ನಾಲ್ಕು ಬ್ರಹ್ಮ ವಿಹಾರಗಳು ಮುಗಿಯಿತು  

No comments:

Post a Comment