Thursday 21 December 2017

ಆನಾಪಾನಾ ಸಮಥ ಧ್ಯಾನ anapana samatha jhana

                                    ಆನಾಪಾನಾ ಸಮಥ ಧ್ಯಾನ


ಆನಾಪಾನಾಕ್ಕೆ ಎಂಟು ಮೆಟ್ಟಿಲುಗಳು :

ಈ ಎಂಟು ಮೆಟ್ಟಿಲುಗಳಲ್ಲಿ ನಾವು ಇಡೀ ಸಾಧನೆಯನ್ನೇ ಅಡಕಗೊಳಿಸಬಹುದು. ಇದರಲ್ಲಿ ಆದಿಯಿಂದ ಅಂತ್ಯದವರೆಗಿನ ಮಾಹಿತಿಯಿದೆ. ಇದರಿಂದಾಗಿ ಧ್ಯಾನ ಸ್ಥಿತಿಗಳಲ್ಲದೆ ಆರಿಯ ಮಾರ್ಗಫಲವು ಸಹಾ ಸಿಗುತ್ತದೆ. ಮೊದಲ ನಾಲ್ಕು ಮೆಟ್ಟಿಲುಗಳು ಝಾನ ಸ್ಥಿತಿಗೆ ಕೊಂಡೊಯ್ಯುತ್ತದೆ ನಂತರದ ನಾಲ್ಕು ಸ್ಥಿತಿಗಳು ಅರಿಯಮಾರ್ಗ ಫಲವನ್ನು ನೀಡುತ್ತದೆ. ಅವು ಹೀಗಿವೆ :
ಸಮಥಾ
1. ಎಣಿಕೆಯ ಸಾಧನೆ (ಗಣನ) : ಕೇವಲ ಉಸಿರಾಟದ ಎಣಿಕೆ
2. ಸಂಬಂಧಿಸುವ ಸಾಧನೆ (ಅನುಬಂಧನ) : ಉಸಿರಾಟದ ಗಮನ
3. ಸಂಪರ್ಕ ಸಾಧನೆ (ಪುಸನಾ) : ಉಸಿರಾಟದ ಸ್ಪಶರ್ಿಸುವಿಕೆ
4. ಸ್ಥಿರಗೊಳ್ಳುವ ಸಾಧನೆ (ಥಾಪನ) : ಧ್ಯಾನ ಪ್ರಾಪ್ತಿ
ವಿಪಶ್ಶನಾ
5. ಅರಿಯುವಿಕೆಯ ಸಾಧನೆ (ಸಲ್ಲಕ್ಖಣ) : ವಿಪಶ್ಶನದ ಆರಂಭ
6. ವಿಮುಖವಾಗುವ ಸಾಧನೆ (ವಿವಟ್ಠನಾ) : ಮಾರ್ಗದಲ್ಲಿ ನೆಲಸುವಿಕೆ
7. ಪರಿಶುದ್ಧಿಯಾಗುವ ಸಾಧನೆ (ಪರಿಶುದ್ಧಿ) : ಫಲಪ್ರಾಪ್ತಿ
8. ಪುನರ್ ಅವಲೋಕನ ಸಾಧನೆ (ಪಟಿಪಸ್ಸನಾ) : ಪುನರ್ ವೀಕ್ಷಣೆ

ಅನಾಪಾನ ಸಮಥ ಧ್ಯಾನ :

1. ಎಣಿಕೆ (ಗಣನೆ) : 

ಯೋಚನೆಗಳ ತಡೆಯನ್ನು ಮೀರಲು ಸುಲಭವಾದ ಕ್ರಮವಿದು.  ಇಲ್ಲಿ ಸಾಧಕನು ಉಸಿರಾಟವು ಸ್ಪರ್ಶವಾದೊಡನೆಯೆ ಒಂದು ಎಂದು ಎಣಿಕೆ ಮಾಡುತ್ತಾನೆ. ಹೀಗೆಯೇ ಪ್ರತಿ ಉಸಿರಾಟದ ಸ್ಪರ್ಶದಲ್ಲಿ ಎಣಿಕೆ ಮಾಡುತ್ತಾನೆ. ಆದರೆ ಸಂಖ್ಯೆ 10ನ್ನು ಮೀರಬಾರದು. ಹಾಗಾದರೆ ಅನಾಪಾನಾ ಸ್ಮೃತಿಯು ಭಂಗವಾಗುತ್ತದೆ. ಉಸಿರಾಟದ ಧ್ಯಾನದಲ್ಲಿ ಹಿಡಿತ ಸಿಕ್ಕೊಡನೆ ಆತನು ಎಣಿಸುವುದನ್ನು ನಿಲ್ಲಿಸಬೇಕು. ಕೇವಲ ಉಸಿರಾಟದಲ್ಲಿ ಗಮನವನ್ನು ಕೇಂದ್ರೀಕರಿಸಬೇಕು.

2. ಸಂಬಂಧಿಸುವ ಸಾಧನೆ (ಅನುಬಂಧನ) :

 ಅನುಬಂಧನವೆಂದರೆ ಉಸಿರಾಟದಲ್ಲಿ ತಡೆರಹಿತ ಗಮನ ನೀಡುವಿಕೆ ಆಗಿದೆ. ಇಲ್ಲಿ ಒಳ ಉಸಿರಾಟವು ಮೂಗಿನಿಂದ ಆರಂಭವಾಗುತ್ತದೆ. ಹೃದಯದಲ್ಲಿ ಇದರ ಮಧ್ಯಾವಸ್ಥೆ ಇರುತ್ತದೆ. ಕಿಬ್ಬೊಟ್ಟೆಯಲ್ಲಿ ಇದರ ಅಂತ್ಯವಾಗುತ್ತದೆ. ಹಾಗೆಯೇ ಹೊರ ಉಸಿರಾಟವು ಕಿಬ್ಬೊಟ್ಟೆಯಿಂದ ಆರಂಭವಾಗಿ, ಹೃದಯದಲ್ಲಿ ಮಧ್ಯಾವಸ್ಥೆ ಇದ್ದು ಮೂಗಿನಲ್ಲಿ ಕೊನೆಗೊಳ್ಳುತ್ತದೆ. ಆದರೆ ಈ ಎಲ್ಲಾ ಅವಸ್ಥೆಯಲ್ಲಿ ಕೇಂದ್ರೀಕೃತಗೊಳಿಸಿದರೆ ಮನವು ಚದುರಿಹೋಗುತ್ತದೆ.
ಆಗ ಮನಸ್ಸು ಕ್ಷೊಭೆಗೆ ಒಳಗಾಗುತ್ತದೆ. ಆದ್ದರಿಂದ ಎಲ್ಲಿ ಉಸಿರಾಟ ಸ್ಪರ್ಶವಾಗುತ್ತದೋ ಅಲ್ಲೇ ಎಣಿಕೆ ಮಾಡಬೇಕು. ಹಾಗೆಯೇ ಅನುಬಂಧವು ಸಹಾ ಅದೇ ಸ್ಥಳದಲ್ಲಿ ಆಗಬೇಕು. ಆಗ ಮನಸ್ಸು ಏಕಾಗ್ರವಾಗಿರುತ್ತದೆ. ಅಂದರೆ ಮೂಗಿನ ತುದಿಯಲ್ಲಿ ಗಮನ ಕೇಂದ್ರೀಕರಿಸಬೇಕು.

3. ಸಂಪರ್ಕ ಸಾಧನೆ (ಪುಸಣ) : 

ಇಲ್ಲಿ ಉಸಿರಾಟದ ಸ್ಪರ್ಶವಾಗುವ ಕಡೆ ಸಂಪರ್ಕ ಏರ್ಪಟ್ಟಿರಬೇಕು. ಅಂದರೆ ಮೂಗಿನ ತುದಿಯಲ್ಲಿ ಅಥವಾ ಮೇಲ್ತುಟಿಯ ಭಾಗದಲ್ಲಿ ಕೆಲವೊಂದು ಸಾಧಕರು ಕಿಬ್ಬೊಟ್ಟೆಯಲ್ಲಿ ಮಾತ್ರ ಕೇಂದ್ರೀಕೃತಗೊಳಿಸುತ್ತಾರೆ. ಆದರೆ ಬಹುಪಾಲು ಸಾಧಕರು ಮೂಗಿನ ತುದಿಯಲ್ಲಿ ಕೇಂದ್ರೀಕೃತಗೊಳಿಸುತ್ತಾರೆ. ಎಲ್ಲೇ ಆಗಲಿ, ಆ ಒಂದು ಸ್ಥಳದಲ್ಲೇ ಕೇಂದ್ರೀಕೃತಗೊಳಿಸಬೇಕು. ಹೇಗೆಂದರೆ ದ್ವಾರಪಾಲಕನಂತೆ, ದ್ವಾರಪಾಲಕನು ಯಾರು ಒಳಹೊಕ್ಕರು ಅಥವಾ ಯಾರು ಹೊರಬಂದರು ಎಂದು ಗಮನ ನೀಡುತ್ತಲೇ ಇರುತ್ತಾರೆ. ಅದೇ ರೀತಿಯಲ್ಲಿ ನಾವು ಒಳ ಉಸಿರು ಮತ್ತು ಹೊರ ಉಸಿರಿನಲ್ಲೇ ಅಂದರೆ ಅದು ಸಂಪಕರ್ಿಸುವಲ್ಲೇ ಗಮನ ನೀಡಬೇಕು. ಹೇಗೆಂದರೆ ಗರಗಸದ ಉದಾಹರಣೆಯಂತೆ. ಒಂದು ಮರದ ತುಂಡನ್ನು ಸಮನಾದ ನೆಲದಲ್ಲಿಟ್ಟು ಆ ಕಡೆ ಈ ಕಡೆ ಗರಗಸದಿಂದ ಕೊಯ್ಯುತ್ತಾರೆ. ಆಗ ಅವರ ಗಮನ ಮರದ ತುಂಡಿನ ಮೇಲೆ ಇರುವುದಿಲ್ಲ. ಹಾಗೆಯೇ ಗರಗಸದ ಮೇಲೆಯೂ ಇರುವುದಿಲ್ಲ. ಕೇವಲ ಗರಗಸವು ಮರದ ತುಂಡನ್ನು ಕತ್ತಿರಿಸುತ್ತಿರುವ ಭಾಗದಲ್ಲಿ ಮಾತ್ರ ನೆಲೆಸಿರುತ್ತದೆ. ಹಾಗೆಯೇ ಸಾಧಕನು ಒಳ ಉಸಿರಿನಲ್ಲಿ ಆಗಲಿ ಅಥವಾ ಹೊರ ಉಸಿರಿನಲ್ಲಿ ಆಗಲಿ ಕೇಂದ್ರೀಕರಿಸದೆ ಉಸಿರುಗಳು ಸ್ಪಶರ್ಿಸುತ್ತಿರುವ ಭಾಗದಲ್ಲಿ ಮಾತ್ರ ಚಿತ್ತವನ್ನು ಕೇಂದ್ರೀಕೃತಗೊಳಿಸುತ್ತಾನೆ.
ಹಾಗೆಯೇ ಆತನು ಯೋಗ್ಯ ಜಾಗರೂಕತೆಯಿಂದಿರುತ್ತಾನೆ, ಯೋಗ್ಯ ಏಕಾಗ್ರತೆಯಿಲ್ಲಿರುತ್ತಾನೆ ಮತ್ತು ಯೋಗ್ಯ ಶ್ರಮವನ್ನು ಪಡುತ್ತಿರುತ್ತಾನೆ. ಹೇಗೆಂದರೆ ಯಾವುದೇ ಯೋಚನೆಗಳನ್ನು ಆತನು ಮಾಡುವುದಿಲ್ಲ. ಹೀಗಾಗಿ ಆತನಿಗೆ ತಡೆಗಳಾವುವು ಇಲ್ಲದೆ ಪಂಚ ನೀವರಣಗಳು ಕ್ಷಯಿಸಿ ಹೋಗುತ್ತದೆ. ತಾತ್ಕಾಲಿಕವಾಗಿ ನಾಶವಾಗುತ್ತದೆ. ಅಷ್ಟೇ ಅಲ್ಲದೆ ಆತನ ಧ್ಯಾನಾಂಗಗಳು ಹರಿತವಾಗುತ್ತದೆ. ಆಗ ಆತನಲ್ಲಿ ಪಂಚನೀವರಣಗಳಾದ ಬೋಗಾಭಿಲಾಷೆ, ದ್ವೇಷ, ಸೋಮಾರಿತನ, ಅವಿಶ್ರಾಂತಿ, ಪಶ್ಚಾತ್ತಾಪ ಮತ್ತು ಸಂದೇಹ ಗಳಿಂದ ಮುಕ್ತನಾಗುತ್ತಾನೆ. ಹಾಗೆಯೇ ಧ್ಯಾನಾಂಗಗಳಿಂದ ಕೂಡಿರುತ್ತಾನೆ. ಧ್ಯಾನಂಗಗಳೆಂದರೆ ವಿತರ್ಕ, ವಿಚಾರ, ಪ್ರೀತಿ, ಸುಖ ಮತ್ತು ಏಕಾಗ್ರತೆ. ಈಗ ವಿವರವಾಗಿ..
.

                                     5 ಧ್ಯಾನಂಗಗಳು : 

ವಿತಕ್ಕ :

 ಸಮಾನ್ಯವಾಗಿ ವಿತರ್ಕವೆಂದರೆ ಯೋಚಿಸುವುದು, ನಿರ್ಧರಿಸುವುದು ಎಂತಿದೆ. ಆದರೆ ಇಲ್ಲಿ ಆ ಪದಕ್ಕೆ ಬೇರೆಯೇ ಅರ್ಥವಿದೆ. ಇಲ್ಲಿ ವಿತಕ್ಕ (ವಿತರ್ಕ)ವೆಂದರೆ ಧ್ಯಾನದ ವಿಷಯಕ್ಕೆ (ಉಸಿರಾಟದಲ್ಲಿ) ಸಮೀಪ ಗಮನ ನೀಡುವಿಕೆ ಅಂದರೆ ಗಮನವನ್ನು ಕೇಂದ್ರೀಕರಿಸುವಿಕೆ. ಉಸಿರಾಟದ ಎಣಿಕೆಯಲ್ಲಿ ಮತ್ತು ಸಂಬಂಧ ಏಪರ್ಾಟು ಆಗುವಲ್ಲಿ ವಿತಕ್ಕವು ಅಷ್ಟಾಗಿ ಬೆಳವಣಿಗೆ ಹೊಂದಿರುವುದಿಲ್ಲ, ಆದರೆ ಸಂಪರ್ಕ ಮತ್ತು ಸ್ಥಿರತೆಯ ಹಂತದಲ್ಲಿ ವಿತಕ್ಕವು ಪೂರ್ಣವಾಗಿ ಅಭಿವೃದ್ಧಿ ಹೊಂದಿರುತ್ತದೆ.

ವಿಚಾರ : 

ವಿಚಾರಕ್ಕೆ ಸಾಮಾನ್ಯ ಅರ್ಥ ಶೋಧನೆ. ತರ್ಕ ವಿಶ್ಲೇಷಣೆಯಿದ್ದರೂ ಇಲ್ಲಿ ಅದಕ್ಕೆ ಬೇರೆಯೇ ಅರ್ಥವಿದೆ. ಅಂದರೆ ಧ್ಯಾನ ವಿಷಯದಲ್ಲಿ (ಉಸಿರಾಟದಲ್ಲಿ) ಆಳವಾಗಿ ಅರಿಯುವಿಕೆ ಮತ್ತು ಹರಿಯುವಿಕೆ, ವಿತಕ್ಕ ಮತ್ತು ವಿಚಾರವು ಜೊತೆಯಲ್ಲಿಯೇ ಇರುತ್ತದೆ. ಉದಾಹರಣೆಗೆ : ವಿತರ್ಕವು ಚಿತ್ತವನ್ನು ನೋಡಿದರೆ ವಿಚಾರವು ನೋಡುವಷ್ಟೇ ಅಲ್ಲದೆ ಅರಿಯುವ ಕೆಲಸವು ಮಾಡುತ್ತದೆ, ವಿತರ್ಕವು ಭೂಮಿಗೆ ಸ್ಪಶರ್ಿಸುವ ಮಳೆಯ ಹನಿಗಳಾದರೆ, ವಿಚಾರವು ಆ ನೀರನ್ನು ಹೀರುವ ನೆಲವಾಗುತ್ತದೆ. ಒಂದು ದುಂಬಿಯು ಹೂವಿನ ಹತ್ತಿರ ಹೋಗುವಿಕೆ ವಿತರ್ಕವಾದರೆ, ಆ ಹೂವಿನ ಸುತ್ತಲು ತಿರುಗಾಡುವುದು ವಿಚಾರವಾಗುತ್ತದೆ. ಗಂಟೆಯ ಶಬ್ದವು ವಿತರ್ಕವಾದರೆ, ನಂತರದ ಪ್ರತಿಧ್ವನಿ ವಿಚಾರವಾಗುತ್ತದೆ. ಪಕ್ಷಿಯೊಂದು ಬಂಡೆಯಿಂದ ಹಾರಿದಾಗ ವಿತರ್ಕವಾಗುತ್ತದೆ ನಂತರ ದಿಕ್ಕಿನತ್ತ ನಿರಂತರ ಹಾರುವಿಕೆ ವಿಚಾರವಾಗುತ್ತದೆ. ಹೀಗಾಗಿ ವಿತರ್ಕವೆಂದರೆ ಕೇಂದ್ರೀಕೃತಗೊಳಿಸುವಿಕೆ ಮತ್ತು ವಿಚಾರವೆಂದರೆ ನಿರಂತರ ಮುಂದುವರೆಯುವಿಕೆ, ಹರಿಯುವಿಕೆ ಆಗಿದೆ.

ಪೀತಿ (ಆನಂದ) : 

ಪೀತಿ ಎಂದರೆ ಆನಂದ ಎಂದರ್ಥ. ಆದರೆ ಈ ಆನಂದವು ಇಂದ್ರೀಯ ಸುಖಗಳ ಆನಂದಕ್ಕಿಂತ ವಿಭಿನ್ನವಾದುದು ಹಾಗು ಶ್ರೇಷ್ಠವಾದುದು, ಮೀರಿದುದು ಆಗಿದೆ. ಈ ಪೀತಿಯು ಚೇತಸಿಕಾಗಳಲ್ಲಿ ಒಂದಾಗಿದೆ. ಯಶಸ್ಸಿನ ನಂತರದ ಆನಂದ ಅನುಭೂತಿಯಾಗಿದೆ. ಆನಂದವು ಉದಯಿಸಿದಾಗ ಕೂದಲು ಎದ್ದಿರುತ್ತದೆ. ಮಿಂಚಿನಂತೆ ಉದಯಿಸುವ ಕ್ಷಣಿಕ ಆನಂದವು ಇರುತ್ತದೆ. ದೇಹದಲ್ಲಿ ಎಣ್ಣೆಯು ಹರಿಯುವ ರೀತಿ ಪ್ರವಹಿಸುವ ಆನಂದವು ಇರುತ್ತದೆ. ವೇಗವಾಗಿ ಹರಿದು ದೀರ್ಘಕಾಲ ಇರುವಂತಹ ಆನಂದ ಇರುತ್ತದೆ. ಆದರೆ ಇಲ್ಲಿ ಅತ್ಯಂತ ರಭಸವಾಗಿ ಬೀಳುವ ಮಳೆಯಂತೆ ಇರುವ ಆನಂದವಾಗಿರುತ್ತದೆ. ಇದರಿಂದಾಗಿಯೇ ಪ್ರಥಮ ಸಮಾಧಿ ಸಿಗುವುದು.

ಸುಖ (ದಿವ್ಯ ಸುಖ/ಶಾಂತತೆ) :

 ನಾವು ನಿಜವಾದ ದಿವ್ಯ ಸುಖವನ್ನು ಅನುಭವಿಸಿಯೇ ಇಲ್ಲ. ಇದು ಸಿಗುವುದು ಪಂಚ ನೀವರಣಗಳು ನಾಶವಾದ ನಂತರವೇ. ಆದ್ದರಿಂದ ನಾವು ಇದನ್ನು ಕ್ಷಣಿಕವಾಗಿ ಅನುಭವಿಸುತ್ತಿದ್ದೇವೆ. ಯಾವಾಗ ಮನಸ್ಸು ನೀವಾರಣಗಳಿಂದ ಮುಕ್ತವಾಗಿ ಏಕಾಂತತೆ ತಾಳುವುದೋ ಆಗ ಸುಖವು ನೆಲಸುತ್ತದೆ. ನಾವು ಸುಖವನ್ನು ಅನುಭವಿಸಿದಾಗ ಮಾತ್ರ ಆನಂದಕ್ಕೂ ಮತ್ತು ದಿವ್ಯಸುಖಕ್ಕೂ ವ್ಯತ್ಯಾಸ ತಿಳಿಯಬಲ್ಲೆವು. ಪೀತಿ (ಆನಂದ) ಮತ್ತು ಸುಖ (ದಿವ್ಯ ಸುಖ/ಶಾಂತತೆ) ಇವು ಸಹಾ ಜೊತೆಯೇ ಇರುತ್ತದೆ. ಹೇಗೆಂದರೆ ತೇಲುವಿಕೆ ಪೀತಿಯಾದರೆ ನೆಮ್ಮದಿಯು ಸುಖವಾಗಿರುತ್ತದೆ. ಮನಶ್ಶಾಂತಿಯು ಪೀತಿಯಾದರೆ ಏಕಾಗ್ರತೆಯು ಸುಖವಾಗಿರುತ್ತದೆ. ಪೀತಿಯ ಸ್ಥೂಲವಾಗಿದ್ದರೆ ಸುಖವು ಸೂಕ್ಷ್ಮವಾಗಿರುತ್ತದೆ. ಪೀತಿಯು ಸಂಖಾರಗಳಲ್ಲಿ ಒಂದಾದರೆ ಆನಂದವು ವೇದನೆಗಳಲ್ಲಿ ಒಂದಾಗಿದೆ. ಎಲ್ಲಿ ಪೀತಿ (ಆನಂದ) ಬರುತ್ತದೆಯೋ ಅಲ್ಲೆಲ್ಲಾ ಸುಖವಿರುತ್ತದೆ. ಆದರೆ ಸುಖವಿರುವೆಡೆಯಲ್ಲಿ ಆನಂದ (ಪೀತಿ) ಇರಬಹುದು ಅಥವಾ ಇಲ್ಲದೆ ಹೋಗಬಹುದು.

ಏಕಾಗ್ಗತಾ (ಏಕಾಗ್ರತೆ) : 

ಇದನ್ನು ಚಿತ್ತ ಏಕಾಗ್ರತೆಯೆಂದು ಕರೆಯುತ್ತಾರೆ. ಇಲ್ಲಿ ಮನಸ್ಸು ಒಂದೇ ವಿಷಯದ ಮೇಲೆ (ಉಸಿರಾಟ) ನೆಲೆಸಿರುತ್ತದೆ, ಸ್ಥಾಪಿತವಾಗಿರುತ್ತದೆ. ಅಲ್ಲೇ ಕೇಂದ್ರಿಕೃತವಾಗಿರುತ್ತದೆ. ಸಾಮಾನ್ಯವಾಗಿ ಮನಸ್ಸು ಒಂದು ವಿಷಯದಿಂದ, ವಿಷಯಕ್ಕೆ ಹಾರುತ್ತಿರುತ್ತದೆ. ಪರಿವರ್ತನೆಯಾಗುತ್ತಲೆ ಇರುತ್ತದೆ. ಆದರೆ ಸುಶಿಕ್ಷಣದಿಂದ ಇಲ್ಲಿ ಮನಸ್ಸನ್ನು ಏಕ ವಿಷಯದ (ಉಸಿರಾಟದ) ಮೇಲೆ ನಿಲ್ಲಿಸಿ, ಕೇಂದ್ರೀಕೃತಗೊಳಿಸಿ, ಹರಿಸಿ, ನೆಲೆಸಿ, ಸ್ಥಾಪಿಸಿ ದೀರ್ಘಕಾಲ ಇರುತ್ತೇವೆ. ಇಲ್ಲಿ ಮನಸ್ಸು ಸ್ಥಿರವಾಗಿ, ದೃಢವಾಗಿ ಸುಸ್ಥಾಪಿತವಾಗಿರುತ್ತದೆ.
ಈ ಐದು ಅಂಗಗಳು ಒಟ್ಟಾಗಿ ಸೇರಿದಾಗ, ಪರಸ್ಪರ ಅವಲಂಬನೆಯಿಂದ ಬಲಿಷ್ಠವಾದಾಗ ಏಕ ಕಾರ್ಯಕ್ಕೆ ಕ್ರಿಯಾಶೀಲವಾದಾಗ, ಕುಶಲ ಸ್ಥಿತಿಗಳ ಸಮಗ್ರತೆಯಾದಾಗ ಪ್ರಥಮ ಸಮಾಧಿಗೆ ಸಮೀಪವಾದ ಸಾಮಿಪ್ಯ ಸಮಾಧಿಗೆ ದಾರಿ ಮಾಡಿಕೊಡುತ್ತದೆ. ಈ ಐದು ಅಂಗಗಳು ಎಳೆಗಳಿಂದ ದೊಡ್ಡ ಹಗ್ಗವಾದಂತೆ, ಸ್ಥಂಬಗಳಿಂದ ಕಟ್ಟಡವಿದ್ದಂತೆ, ಈ ಧ್ಯಾನದ ಅಂಗಗಳಿಂದ ಪ್ರಥಮ ಸಮಾಧಿಯು ಲಭಿಸುವುದು.
ಈ ಧ್ಯಾನಾಂಗಗಳು ಪಂಚ ನೀವರಣಗಳಿಗೆ ವಿರುದ್ಧವಾಗಿದೆ. ಯಾವಾಗ ವಿತಕ್ಕವು ಉಸಿರಾಟದಲ್ಲಿ (ಧ್ಯಾನ ವಿಷಯದಲ್ಲಿ) ಕೇಂದ್ರೀಕೃತವಾಗುವುದೋ ಆಗ ಉದ್ದಚ್ಚ (ಅವಿಶ್ರಾಂತಿ) ಮತ್ತು ಕುಕ್ಕುಚ್ಚ (ಚಿಂತೆ, ಪಶ್ಚಾತ್ತಾಪ) ಉದಯಿಸುವುದಿಲ್ಲ ಹಾಗು ಇರುವುದಿಲ್ಲ. ಹಾಗೆಯೇ ವಿಚಾರ (ಹರಿಯುವಿಕೆ)ವು ಕ್ರಿಯಾಬದ್ಧವಾಗಿರುವಾಗ ಸಂಶಯವು ತಾತ್ಕಾಲಿಕವಾಗಿ ನಿಲ್ಲುತ್ತದೆ, ಉದಯಿಸುವುದಿಲ್ಲ, ಇದರಂತೆಯೇ ಪೀತಿ (ಆನಂದ) ಮತ್ತು ಸುಖ (ದಿವ್ಯಸುಖ) ಇದ್ದಾಗ ದ್ವೇಷ ಬೇಸರವಾಗಲಿ, ಜಡತೆ ಸೋಮಾರಿತನವಾಗಲಿ ಇರುವುದಿಲ್ಲ, ಅವೆಲ್ಲವೂ ನಾಶವಾಗುತ್ತದೆ. ಹಾಗೆಯೇ ಏಕಾಗ್ರತೆಯು ನೆಲೆಸಿ ಪೀತಿ, ಸುಖ ಲಭಿಸುತ್ತಿದ್ದಂತೆ ಬೋಗಾಭಿಲಾಷೆಯು ನಾಶವಾಗಿ ಯಾವುದೇ ಪ್ರಾಪಂಚಿಕ ಬಯಕೆಗಳು, ಆನಂದವು ಇರುವುದಿಲ್ಲ. ಹೇಗೆ ಬೆಳಕು, ಕತ್ತಲೆಗಳು ಒಟ್ಟಿಗೆ ಇರಲಾರವೋ ಹಾಗೆಯೇ ಧ್ಯಾನಾಂಗಗಳ ಅಸ್ತಿತ್ವದಿಂದ ಐದು ನೀವರಣಗಳು ನಾಶವಾಗುತ್ತದೆ. ಆಗ ಆತನಿಗೆ ಸಾಲದಿಂದ ಮುಕ್ತವಾದಂತೆ, ರೋಗದಿಂದ ಮುಕ್ತನಾದಂತೆ, ಕಾರಾಗೃಹದಿಂದ  ಮುಕ್ತನಾದಂತೆ, ಗುಲಾಮಗಿರಿಯಿಂದ ಮುಕ್ತನಾದಂತೆ ಮರಳುಗಾಡಿನ ಅಥವಾ ಕಾಡಿನಿಂದ ದಾರಿತಪ್ಪಿ ಮತ್ತೆ ಯೋಗ್ಯ ಪಥದಲ್ಲಿ ಬಂದಂತಹ ಆನಂದ ಪಡೆಯುತ್ತಾನೆ.

ನಿಮಿತ್ತ (ಚಿಹ್ನೆ)ಗಳು :

ನಿಮಿತ್ತಗಳು 3 ವಿಧದಿಂದ ಕೂಡಿವೆ.
1. ಪರಿಕಮ್ಮ ನಿಮಿತ್ತ (ಪ್ರಾಥಮಿಕ ಚಿಹ್ನೆ)
2. ಉಗ್ಗಹ ನಿಮಿತ್ತ (ವಶೀಕೃತ ಚಿಹ್ನೆ)
3. ಪಟಿಭಾಗ ನಿಮಿತ್ತ (ಪ್ರತಿಫಲಿತ ಚಿಹ್ನೆ)

1. ಪರಿಕಮ್ಮ ನಿಮಿತ್ತ :

 ಇಲ್ಲಿ ಉಸಿರಾಟವೇ ಪರಿಕಮ್ಮ (ಪ್ರಾಥಮಿಕ ಚಿಹ್ನೆಯಾಗಿದೆ), ನಿಮಿತ್ತವಾಗಿದೆ. ಅಂದರೆ ಧ್ಯಾನ ವಸ್ತು (ವಿಷಯ)ವೇ ಪ್ರಾಥಮಿಕ ಚಿಹ್ನೆಯಾಗಿರುತ್ತದೆ. ಇಲ್ಲಿ ಉಸಿರಾಟದಲ್ಲಿ ಚಿತ್ತವು ನೆಲೆಸುವುದರಿಂದ ಇಲ್ಲಿ ಉಸಿರಾಟದ ಮೇಲಿನ ಜಾಗ್ರತೆಯೇ ಪರಿಕಮ್ಮ ನಿಮಿತ್ತ ಆಗಿರುತ್ತದೆ.

2. ಉಗ್ಗಹ ನಿಮಿತ್ತ (ವಶೀಕೃತ ಚಿಹ್ನೆ) : 

ಯಾವಾಗ ಚಿತ್ತವು ಉಸಿರಾಟದಲ್ಲಿ ನೆಲಸುವುದೋ ಆಗ ಏಕಾಗ್ರತೆಯೂ ಹರಿತವಾಗಿ, ಸ್ಥಿರವಾಗಿ ಸ್ಥಾಪಿಸಲ್ಪಡುತ್ತದೆ. ಉಸಿರಾಟವು ಮೂಗಿನ ಅಥವಾ ಮೇಲ್ತುಟಿಯ ಚರ್ಮದಲ್ಲಿ ಸ್ಥಾಪಿಸಲ್ಪಡುತ್ತದೆ. ದೀರ್ಘಕಾಲ ಅಭಾದಿತ, ನಿವರ್ಿಘ್ನ ಏಕಾಗ್ರತೆಯಿಂದ ದೇಹವು ಶಾಂತವಾಗುತ್ತದೆ. ಉಸಿರಾಟವು ಒಂದೇ ಗತಿಯಲ್ಲಿ ನಡೆಯುತ್ತಿರುತ್ತದೆ. ಅವಿಶ್ರಾಂತಿ ಶಾಂತವಾಗುತ್ತದೆ. ದೇಹವು ವಿಶ್ರಾಂತತೆಯನ್ನು, ಮಣಿಯುವಂತಹ ಮೆದುತನದ ಅನುಭವ ಪಡೆಯುತ್ತದೆ. ನೋವು, ಒತ್ತಡ, ಅವಿಶ್ರಾಂತತೆಯಿಂದ ಮುಕ್ತತೆ ಪಡೆದಾಗ, ಉಸಿರಾಟವು ಅತ್ಯಂತ ಸೂಕ್ಷ್ಮವಾಗಿ ನಡೆಯುತ್ತಿರುತ್ತದೆ. ಆಗ ದೇಹವು ಹಗುರತನದ ಅನುಭೂತಿಯನ್ನು ಪಡೆಯುತ್ತದೆ. ದೇಹವು ಗಾಳಿಯಲ್ಲಿ ತೇಲಿದಂತೆ ಭಾಸವಾಗುತ್ತದೆ. ಗಂಟೆಯ ಶಬ್ದವು ಬಂದಾಗ ಆ ಶಬ್ದವು ಅಳಿದು ಅಲೆಗಳ ಕಂಪನ ಶಬ್ದವು ಸೂಕ್ಷ್ಮವಾಗಿ ಕೇಳಿದಂತೆ ಸೂಕ್ಷ್ಮವಾದ ಉಸಿರಾಟದ ಅನುಭವವು ಲಭಿಸುತ್ತದೆ. ಉಸಿರಾಟ ಒಂದು ಕ್ಷಣ ನಿಲ್ಲಿಸಿದರೂ ಉಸಿರಾಟ ನಡೆದಂತೆ ಭಾಸವಾಗುತ್ತದೆ. ಮೂಗು ಅಥವಾ ತುಟಿಯ ಚರ್ಮದ ಮೇಲೆ ಅಂತಹುದೆ ಸಂವೇದನೆ ಸಿಗುತ್ತದೆ. ಗೋಪಾಲಕನು ಹಸುಗಳನ್ನು ಮೇಯಿಸಲು ಹೋದಾಗ ಅದರ ಪಾಡಿಗೆ ಅದನ್ನು ಬಿಟ್ಟುಬಿಡುತ್ತಾನೆ. ಆದರೂ ಅವು ಎಲ್ಲೇ ಮೇಯಲಿ, ನೀರು ಕುಡಿಯಲು ಒಂದೇ ಸ್ಥಳಕ್ಕೆ ಬರುತ್ತದೆ. ಅಲ್ಲೇ ಗೋಪಾಲಕನು ಅವನ್ನು ಹಿಡಿಯುತ್ತಾನೆ. ಅದೇರೀತಿಯಲ್ಲಿ ಒಳ ಉಸಿರು ಮತ್ತು ಹೊರ ಉಸಿರು ಸಂಪರ್ಕವಾಗುವ ಸ್ಥಳದ ಸಂವೇದನೆ, ಗಾಳಿಯ ಸಂವೇದನೆಯಲ್ಲಿ ಮನಸ್ಸು ಸ್ವಾಭಾವಿಕವಾಗಿ ನೆಲೆಸುತ್ತದೆ. ಇದೇ ಉಗ್ಗಹ ನಿಮಿತ್ತವಾಗಿದೆ.

3. ಪಟಿಭಾಗ ನಿಮಿತ್ತ (ಪ್ರತಿಫಲಿತ ಚಿಹ್ನೆ) : 

ಹೀಗೆ ಸಾಧನೆ ಮಾಡುತ್ತಿರುವಾಗ ಅಲೌಕಿಕ ಅನುಭವಗಳಾಗುತ್ತದೆ. ಅದೇ ಈ ಪಟಿಭಾಗ ನಿಮಿತ್ತ. ಅದೆಂದರೆ ಆತನಿಗೆ ಚಿಹ್ನೆಗಳು (ನಿಮಿತ್ತ) ಗೋಚರವಾಗುತ್ತದೆ. ಆದರೆ ಆ ಚಿಹ್ನೆಗಳು ಎಲ್ಲರಿಗೂ ಒಂದೇರೀತಿಯಾಗಿ ಕಾಣಿಸುವುದಿಲ್ಲ ಅಥವಾ ಸ್ಪರ್ಶವಾಗುವುದಿಲ್ಲ ಅಥವಾ ಅನುಭೂತಿಯಾಗುವುದಿಲ್ಲ.
ಇಲ್ಲಿ ಆಗುವಂತಹ ಅನುಭವಗಳೆಂದರೆ ಹತ್ತಿಯ ಸ್ಪರ್ಶದಂತಹ ಅನುಭವ ಅಥವಾ ರೇಷ್ಮೆಯ ಹತ್ತಿಯಂತಹ ಸ್ಪರ್ಶದ ಅನುಭವ ಅಥವಾ ಗಾಳಿಯ ಹೊಡೆತದಂತಹ ಅನುಭವವಾಗುತ್ತದೆ. ಎಳೆತ, ಸೆಳೆತದಂತಹ ಅನುಭವ ಅಥವಾ ಕೆಲವರಿಗೆ ನಕ್ಷತ್ರ ಅಥವಾ ರತ್ನಗಳ ಗುಂಪಿನಂತೆ, ಮುತ್ತಿನ ಗುಂಪಿನಂತೆ ಅಥವಾ ಹತ್ತಿಯ ಬೀಜದ ಸ್ಪರ್ಶದಂತೆ, ಉಲ್ಲಾಸಯುತ ಗಾಳಿಯ ಸ್ಪರ್ಶದಂತೆ ಅಥವಾ ಕಾಂಡದ ಚೂಪಿನ ಸ್ಪರ್ಶದಂತೆ, ತಂತಿಗಳ ಪಟ್ಟಿಯಂತೆ ಹೂಮಾಲೆಯಂತೆ, ಹೊಗೆಯ ಚಲನೆಯಂತೆ, ಜೇಡರ ಬಲೆಯಂತೆ ಅಥವಾ ಮೋಡದ ಪೊರೆಯಂತೆ ಅಥವಾ ಕಮಲದ ಹೂವಿನಂತೆ ಅಥವಾ ರಥದ ಚಕ್ರದಂತೆ ಅಥವಾ ಚಂದಿರನ ತಟ್ಟೆಯಂತೆ ಅಥವಾ ಸೂರ್ಯನ ತಟ್ಟೆಯಂತೆ ಕಾಣಿಸುವುದು ಅಥವಾ ಸ್ಪಶರ್ಿಸಲ್ಪಡುವುದು.
ಹೀಗೆ ಈ ಪಟಿಭಾಗ ನಿಮಿತ್ತವು ಒಬ್ಬೊಬ್ಬರಿಗೆ ಒಂದು ರೀತಿಯಂತೆ ಅನುಭವಕ್ಕೆ ಬರುತ್ತದೆ. ಏಕೆಂದರೆ ಗ್ರಹಿಕೆಯೇ ಕಾರಣ. ಒಬ್ಬೊಬ್ಬರ ಗ್ರಹಿಕೆ ಒಂದೊಂದು ರೀತಿಯಲ್ಲಿರುವ ಕಾರಣದಿಂದ, ಗ್ರಹಿಕೆಯಿಂದಲೇ ಉದಯಿಸುವ ಚಿಹ್ನೆಯು ಈ ರೀತಿಯಾಗಿ ಗೋಚರಿಸಿದರೆ ಆಶ್ಚರ್ಯವಿಲ್ಲ.
ಉದಾಹರಣೆಗೆ ಒಂದು ದೀಪವನ್ನೇ ತೆಗೆದುಕೊಳ್ಳಿ :-
. ಚಿಟ್ಟೆಗಳಿಗೆ ಅಥವಾ ಕೆಲವು ಕೀಟಗಳಿಗೆ ಈ ದೀಪವು ಅತ್ಯಾಕರ್ಷಕವಾಗಿರುತ್ತದೆ ಎಂದರೆ ಅದನ್ನು ಸ್ಪಶರ್ಿಸಲು ಹೋಗಿ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತದೆ.
. ಸಾಮಾನ್ಯ ಜನಕ್ಕೆ ದೀಪ ಬೆಳಕು ನೀಡುವಂತಹುದು ಅಷ್ಟೇ.
. ವಿಜ್ಞಾನಿಗಳಿಗೆ ದೀಪದಲ್ಲಿರುವ ಸಂಯುಕ್ತಗಳು, ಇಂಧನಗಳೆಲ್ಲಾ ತಿಳಿಯುತ್ತದೆ.
ತ. ಸಮಥ ಧ್ಯಾನಿಗೆ ಝಾನ ಪ್ರಾಪ್ತಿಯ ವಸ್ತು ದೀಪವಾದರೆ
ತ. ವಿಪಶ್ಶನ ಧ್ಯಾನಿಗೆ ಅನಿತ್ಯಗೋಚರಕಾರಿ ವಸ್ತುವಾಗಿರುತ್ತದೆ.
ಈ ರೀತಿಯಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಗ್ರಹಿಕೆಯಿರುತ್ತದೆ.


4. ಸ್ಥಿರಗೊಳ್ಳುವ ಸಾಧನೆ (ಥಾಪನ) :

ಈ ನಿಮಿತ್ತಗಳಲ್ಲಿ ನಾವು ಜಾಗರೂಕರಾಗಿರಬೇಕು. ಏಕೆಂದರೆ ಇಲ್ಲಿ ಕಸಿನಾದಲ್ಲಿ ಗೋಚರಿಸುವಂತಹ ನಿಮಿತ್ತಗಳು ಗೋಚರವಾದಾಗ ನಾವು ಅದನ್ನು ಅಲಕ್ಷಿಸಬೇಕು. ಇಲ್ಲವಾದರೆ ಅನಾಪಾನಾಸತಿಯ ಧ್ಯಾನವಾಗದೆ, ಕಸಿನಾದಂತಹ ಧ್ಯಾನಕ್ಕೆ ತಲುಪುವ ಸಂಭವನೀಯತೆ ಇರುತ್ತದೆ. ಅಂತಹ ನಿಮಿತ್ತಗಳೆಂದರೆ ಹೊಳಪುಳ್ಳ ಸೂರ್ಯ, ಚಂದಿರ, ನಕ್ಷತ್ರ, ಮುತ್ತು-ರತ್ನ ಇತ್ಯಾದಿ. ಈ ಗೋಚರ ನಿಮಿತ್ತ ಗೋಚರಿಸಿದರೂ ಅನಾಪಾನಾ ಸಾಧನೆ ಮುಂದುವರೆಸಬೇಕು. ಆದರೆ ಗಾಳಿಯ ಸ್ಪರ್ಶ, ಹತ್ತಿಯ ಸ್ಪರ್ಶಕ್ಕೆ, ಹತ್ತಿಯ ಬೀಜದ ಸ್ಪರ್ಶ, ಹಗುರತನದ ಅನುಭೂತಿ, ಗಾಳಿಯಲ್ಲಿ ತೇಲುವ ಅನುಭೂತಿ ಅಲಕ್ಷಿಸಬಾರದು. ಅಂತಹ ಸ್ಪರ್ಶದ ಅನುಭೂತಿಯಲ್ಲೇ ತಲ್ಲೀನನಾಗಬೇಕು. ಆ ಸ್ಪರ್ಶದ ಅನುಭೂತಿಯಲ್ಲೇ ಮನಸ್ಸು ನೆಟ್ಟು, ಕೇಂದ್ರೀಕರಿಸಿ ಸಾಧನೆ ಮಾಡಬೇಕು. ಇದೇ ಪಟಿಭಾಗ ನಿಮಿತ್ತವಾಗಿದೆ. ಈ ನಿಮಿತ್ತವು ಬಣ್ಣಗಳಿಂದ ಕೂಡಿರುವುದಿಲ್ಲ ಅಥವಾ ಆಕಾರದಿಂದಲೂ ಕೂಡಿರುವುದಿಲ್ಲ. ಈ ಪಟಿಭಾಗ ನಿಮಿತ್ತವನ್ನು ಅತ್ಯಂತ ಜಾಗರೂಕತೆಯಿಂದ ಮತ್ತು ಕೌಶಲ್ಯದಿಂದ ರಕ್ಷಿಸಬೇಕಾಗುತ್ತದೆ. ಹೇಗೆಂದರೆ ಗಭರ್ಿಣಿಯು ತನ್ನ ಪುತ್ರನನ್ನು ರಕ್ಷಿಸುವಂತೆ ಅತ್ಯಮೂಲ್ಯವಾದ ರತ್ನವನ್ನು ಕಾಪಾಡುವ ಹಾಗೆ ಕಾಪಾಡಿ ಹಗಲು-ರಾತ್ರಿ ಧ್ಯಾನಿಸಬೇಕಾಗುತ್ತದೆ. ಮೊದಲಿನ ಉಗ್ಗಹ ನಿಮಿತ್ತಕ್ಕೂ ಪಟಿಭಾಗ ನಿಮಿತ್ತಕ್ಕೂ ವ್ಯತ್ಯಾಸವಿದೆ. ಉಗ್ಗಹ ನಿಮಿತ್ತದಲ್ಲಿ ಯಾವುದೇ ತಪ್ಪಿದ್ದರೂ ಗೋಚರವಾಗುತ್ತಿತ್ತು. ಆದರೆ ಪಟಿಭಾಗ ನಿಮಿತ್ತದಲ್ಲಿ ಸಾವಿರಪಟ್ಟು ಶುದ್ಧವಾಗಿ ಕಂಡುಬರುತ್ತದೆ. ಆಗ ಸಾಧಕನು ಈ ಪಟಿಭಾಗ ಚಿಹ್ನೆಯನ್ನು ಮೂಗಿನ ತುದಿಯಲ್ಲಿ ಕೇಂದ್ರೀಕರಿಸಿ ಹಿಗ್ಗಿಸಬೇಕು. ನಂತರ ಹಾಗೆಯೇ ಹುಬ್ಬುಗಳ ನಡುವೆ ಅಥವಾ ಹಣೆಯಲ್ಲಿ ಹಾಗೆಯೇ ದೇಹದ ಭಾಗಗಳಲ್ಲಿ ಸ್ಥಾಪಿಸಬೇಕು. ಆಗ ಅಲ್ಲೆಲ್ಲಾ ಗಾಳಿ ತುಂಬಿದ ಅನುಭೂತಿಯಾಗುತ್ತದೆ. ಉದಾಹರಣೆಗೆ ಹಣೆಯಲ್ಲಿ ಕೇಂದ್ರೀಕರಿಸಿದಾಗ ತಲೆಯೆಲ್ಲಾ ಗಾಳಿಯಿಂದ ತುಂಬಿದ ಅನುಭೂತಿಯಾಗುತ್ತದೆ. ಇದೇ ರೀತಿಯಲ್ಲಿ ಇಡೀ ಶರೀರವೆಲ್ಲಾ ಗಾಳಿಯ, ತೇಲುವ, ಸ್ಪಶರ್ಿಕ ಅನುಭೂತಿಯ ಪಟಿಬಾಗ ನಿಮಿತ್ತದಿಂದ ಆವರಿಸಿದಾಗ ಆನಂದ ಮತ್ತು ಸುಖವು ಆತನಲ್ಲಿರುವ ಸೂಕ್ಷ್ಮ ನೀವರಣಗಳು ನಶಿಸಿ ಧ್ಯಾನಂಗಗಳು ಕೂಡಿ ಸಾಮಿಪ್ಯ ಸಮಾಧಿ ಪ್ರಾಪ್ತಿ ಮಾಡುತ್ತಾನೆ.

ಸಮಾಧಿ ಹಂತಗಳು

ಪ್ರಥಮ ಸಮಾಧಿ :

ಸಾಧಕನಲ್ಲಿ ಪಂಚನೀವರಣಗಳು ಅಂತ್ಯಗೊಂಡು ಸಾಮಿಪ್ಯ (ಉಪಾಚರ) ಸಮಾಧಿ ಪಡೆದಿದ್ದರೂ ಆತನಲ್ಲಿ ಧ್ಯಾನಂಗಗಳು ಇನ್ನೂ ಬಲಿಷ್ಠವಾಗಿ ಬೆಳೆದಿರುವುದಿಲ್ಲ. ಹೇಗೆಂದರೆ ಮಗುವು ಎದ್ದು ಬಿದ್ದು ನಡೆಯುವ ರೀತಿ. ಆದರೆ ಪಂಚ ಧ್ಯಾನಂಗಗಳನ್ನು ವೃದ್ಧಿಸಿದಾಗ ಆತನು ಸ್ಥಿರ ಸಮಾಧಿ ಪಡೆಯುತ್ತಾನೆ. ಹೇಗೆಂದರೆ ಯುವಕ ಓಡುವಂತೆ. ಹೇಗೆ ಆತನು ಸ್ಥಿರ ಸಮಾಧಿ (ಪ್ರಥಮ ಸಮಾಧಿ ಗಳಿಸುತ್ತಾನೆ) ಆ ಸ್ಥಿತಿಯಲ್ಲಿ ಆತನ ಮನಸ್ಸು, ಅತ್ಯಂತ ಮೃದು, ಅತ್ಯಂತ ಶಾಂತ, ಏಕಾಗ್ರತೆ, ಕಾರ್ಯಶೀಲತೆ, ಸುಖ, ಆನಂದ, ಮಣಿಯುವಂತಹ ಹಗುರತೆ ಎಲ್ಲವೂ ವೃದ್ಧಿಯಾಗಿರುತ್ತದೆ. ಆತನಿಗೆ ಯಾವ ಶಬ್ದವೂ ಕೇಳಿಸದೆ ಶಬ್ದಕ್ಕೆ ಆತೀತನಾಗಿರುತ್ತಾನೆ. ಪ್ರಥಮ ಸಮಾಧಿಯಲ್ಲಿ ಮಾನಸಿಕವು ಪ್ರಕಾಶಿತವಾಗುತ್ತದೆ, ಮನಸ್ಸು ಪಕ್ವವಾಗುತ್ತದೆ. ಅಪಾರ ಆನಂದದ ವೃದ್ಧಿಯಾಗಿರುತ್ತದೆ.
ಆತನ ಮನಸ್ಸು ಇಂದ್ರೀಯ ಕ್ಷೇತ್ರದಿಂದ ಸಮಾಧಿ ಲೋಕದ ಚಿತ್ತವಾಗಿ ಗೋತ್ರ ಬದಲಾಯಿಸುತ್ತದೆ. ಈ ರೀತಿಯಲ್ಲಿ ಆತನು ರಾಗಾದಿ, ಅಕುಶಲ ಚಿತ್ತಗಳಿಂದ (ನೀವರಣಗಳಿಂದ) ಮುಕ್ತನಾಗಿ ಏಕಾಂತತೆಯಿಂದ ಹುಟ್ಟಿದ ಪೀತಿ, ಸುಖದಿಂದ ಕೂಡಿದ ಪ್ರಥಮ ಸಮಾಧಿಯಲ್ಲಿ ನೆಲೆಗೊಳ್ಳುತ್ತಾನೆ.
ಆತನ ಇಡೀ ಶರೀರದಲ್ಲೆಲ್ಲಾ ಈ ರೀತಿಯ ಅಲೌಕಿಕ ಆನಂದ ಮತ್ತು ಸುಖದ ಏಕಾಗ್ರತೆಯ ಸುಖವನ್ನು ಆತನು ಇಡೀ ಶರೀರದಲ್ಲೆಲ್ಲಾ ಯಾವ ಭಾಗವು ಬಿಡದೆ ಹಬ್ಬಿಸುತ್ತಾನೆ.
ಹೇಗೆಂದರೆ ಸ್ನಾನ ಮಾಡುವವನು ಸೋಪಿನಪುಡಿಯನ್ನು ನೀರಿನಲ್ಲಿ ನೆನೆಸಿ, ಹಿಂಡಿ, ನೊರೆಯುಕ್ಕಿಸಿ ಇಡೀ ಶರೀರದಲ್ಲೆಲ್ಲಾ ನೊರೆ ವ್ಯಾಪಿಸುವ ಹಾಗೆ ಆತನು ತನ್ನ ಪಟಿಭಾಗ ನಿಮಿತ್ತವನ್ನು, ಹಗುರತನವನ್ನು, ಆ ಸಂವೇದನೆಗಳನ್ನು ಇಡೀ ಶರೀರ ವ್ಯಾಪಿಸುತ್ತಾನೆ.

  10 ವಿಧದ ಧ್ಯಾನದ ಕೌಶಲ್ಯಗಳನ್ನು ಪ್ರಾವೀಣ್ಯತೆ .


 ಅದೆಂದರೆ : 1) ಸ್ವಚ್ಛತೆ 2) ಧ್ಯಾನಂಗಗಳ ಮತ್ತು ಪಂಚಬಲಗಳ ಸಮತೋಲನೆ 3) ಚಿಹ್ನೆಗಳಲ್ಲಿ ಕೌಶಲ್ಯತೆ 4) ಸಕಾಲ ಪ್ರಯತ್ನಶೀಲತೆ 5) ಸಕಾಲ ಸಂಯಮ 6) ಸಕಾಲ ಸ್ಫೂತರ್ಿ 7) ಸಕಾಲ ಸಮಚಿತ್ತತೆ 8) ಧ್ಯಾನಿಗಳಲ್ಲದವರ ವರ್ಜನೆ 9) ಧ್ಯಾನಿಗಳೊಂದಿಗೆ ಬೆರೆಯುವಿಕೆ (ಸ್ನೇಹ) 10) ಧ್ಯಾನದಲ್ಲಿ ಸ್ಥಿರನಿಧರ್ಾರ ಕೈಗೊಳ್ಳುವಿಕೆ (ಹೊಂದಿಕೊಳ್ಳುವಿಕೆ, ಬಾಗುವಿಕೆ).
ನಂತರ ಸಾಧಕನು 5 ಹಂತದ ಸಮಾಧಿಯಲ್ಲಿ ನೈಪುಣ್ಯತೆ ಪಡೆಯಬೇಕಾಗುತ್ತದೆ.

1. ಲಕ್ಷ ನೈಪುಣ್ಯತೆ :

 ಇಚ್ಛೆ ಮಾತ್ರಕ್ಕೆ ಧ್ಯಾನ ವಿಷಯದಲ್ಲಿ ಗಮನ ನೀಡುತ್ತಾನೆ. ನಿಮಿತ್ತ ಧ್ಯಾನಂಗಗಳಲ್ಲಿಯೂ ಗಮನ ಕೇಂದ್ರೀಕರಣ.

2. ಪ್ರವೇಶ ಪ್ರಾಪ್ತಿ ನೈಪುಣ್ಯತೆ :

 ಇಚ್ಛೆ ಮಾತ್ರಕ್ಕೆ ಸಮಾಧಿಯ ಪ್ರವೇಶ ಮತ್ತು ಪ್ರಾಪ್ತಿ.

3. ನೆಲೆಸುವ ನಿಧರ್ಾರ ನೈಪುಣ್ಯತೆ :

 ಇಚ್ಛಾಕಾಲ (ದೀರ್ಘಕಾಲ) ಸಮಾಧಿಯಲ್ಲಿ ನೆಲೆಸುತ್ತಾನೆ

4. ನಿರ್ಗಮನ ನೈಪುಣ್ಯತೆ :

 ಇಚ್ಛಿಸಿದಾಗ ಸಮಾಧಿಯಿಂದ ಹೊರಬರುವಿಕೆ.

5. ಪುನರಾವಲೋಕನ ನೈಪುಣ್ಯತೆ : 

ಇಡೀ ಧ್ಯಾನವನ್ನು ಆತನು ಪುನಃ ಅವಲೋಕಿಸುತ್ತಾನೆ, ವಿಮಶರ್ಿಸುತ್ತಾನೆ ಮತ್ತು ವಿಶ್ಲೇಷಿಸುತ್ತಾನೆ.



ದ್ವಿತೀಯ ಸಮಾಧಿ :

ಈ ರೀತಿಯಲ್ಲಿ ಆತನು ಧ್ಯಾನದಲ್ಲಿ ನೈಪುಣ್ಯತೆ ಪಡೆದಾಗ ಆತನು ಅದನ್ನು ಪುನರ್ ಅವಲೋಕನ ಮಾಡಿದಾಗ ಆತನಿಗೆ ವಿತಕ್ಕ, ವಿಚಾರಗಳು ಸ್ಥೂಲವಾಗಿ ಕಂಡುಬರುತ್ತದೆ ಮತ್ತು ಪೀತಿ, ಸುಖ ಮತ್ತು ಏಕಾಗ್ರತೆಯು ಸೂಕ್ಷ್ಮವಾಗಿ ಕಂಡುಬರುತ್ತದೆ. ಆಗ ಆತನು ವಿತಕ್ಕ ವಿಚಾರವನ್ನು ಸ್ತಬ್ದಗೊಳಿಸುತ್ತಾನೆ.
ಭಿಕ್ಷುವು ವಿತಕ್ಕ ಮತ್ತು ವಿಚಾರವನ್ನು ಸ್ತಬ್ದಗೊಳಿಸಿ, ಪೀತಿ (ಆನಂದ) ಸುಖ (ದಿವ್ಯಸುಖ) ಮತ್ತು ಏಕಾಗ್ರತೆಯಿಂದ ಕೂಡಿದ ದ್ವಿತೀಯ ಸಮಾಧಿಯನ್ನು ಪ್ರಾಪ್ತಿ ಮಾಡುತ್ತಾನೆ. ಇದನ್ನು ಸಾಧಿಸಲು ಆತನಿಗೆ ಅಪಾರ ಆಂತರಿಕ ಶ್ರದ್ಧೆಯಿರಬೇಕಾಗುತ್ತದೆ. ಇವು 3 ಅಂಗಗಳಿಂದ ಕೂಡಿರುತ್ತದೆ. ಅಂದರೆ ಆನಂದ, ಸುಖ ಮತ್ತು ಏಕಾಗ್ರತೆ ವಿಭಂಗದ ಪ್ರಕಾರ ಪ್ರಬಲ ಶ್ರದ್ಧೆಯು ಇರುತ್ತದೆ. ಇದರಿಂದ ಸಿಗುವಂತಹ ಸುಖ, ಆನಂದದಿಂದ ಆತನು ನೆಲೆಸಿ ಆತನು ಇಡೀ ಶರೀರದಲ್ಲೆಲ್ಲಾ ಸುಖ, ಆನಂದವನ್ನು ಪ್ರಸರಿಸುತ್ತಾನೆ. ಹೇಗೆಂದರೆ ಆಳವಾದ ಸರೋವರವೊಂದರಲ್ಲಿ ಕೆಳಗಿನಿಂದ ತಂಪಾದ ನೀರು ಉದಯಿಸಿ ಉಕ್ಕಿ ಮೇಲೆ ಸುತ್ತಲೂ ಸರೋವರವನ್ನೆಲ್ಲ ಆವರಿಸಿಬಿಡುತ್ತದೆ. ಅದೇರೀತಿಯಲ್ಲಿ ಸಾಧಕನು, ಪೀತಿ ಸುಖದಿಂದ ಕೂಡಿದ ಏಕಾಗ್ರತೆಯ ಸುಖದಿಂದ ಇಡೀ ಶರೀರವನ್ನು ತೋಯಿಸಿಬಿಡುತ್ತಾನೆ.

ತೃತೀಯ ಸಮಾಧಿ : 

ಆತ ದ್ವಿತೀಯ ಸಮಾಧಿಯಲ್ಲಿ 5 ರೀತಿ ಪ್ರಾವಿಣ್ಯತೆ ಪಡೆಯುತ್ತಾನೆ. ಸಮಾಧಿಯಲ್ಲಿ ಬಹಳಕಾಲ ಲಕ್ಷಕೊಟ್ಟು ಪ್ರವೇಶಿಸಿ, ನೆಲೆಸಿ, ನಿರ್ಗಮಿಸಿ, ಪುನರ್ ಅವಲೋಕನ ಮಾಡುತ್ತಾನೆ. ಆಗ ಆತನಿಗೆ ಪೀತಿ (ಆನಂದ) ಸ್ಥೂಲವಾಗಿ ಕಂಡುಬರುತ್ತದೆ ಮತ್ತು ಸುಖ ಹಾಗು ಏಕಾಗ್ರತೆಯು ಸೂಕ್ಷ್ಮವಾಗಿಯು, ಶಾಂತವಾಗಿಯು ಕಂಡುಬರುತ್ತದೆ.
ಆಗ ಆತನು ಪೀತಿ (ಆನಂದ)ಯನ್ನು ಸ್ತಬ್ದಗೊಳಿಸಿದವನಾಗಿ ಸಮಚಿತ್ತತೆಯಿಂದ ವಿಹರಿಸುತ್ತಾನೆ. ತನ್ನ ದೇಹದಲ್ಲೆಲ್ಲಾ ಸುಖವನ್ನು (ದಿವ್ಯಸುಖ/ಶಾಂತಿ) ಎಚ್ಚರಿಕೆಯಿಂದ ಅನುಭವಿಸಿದವನಾಗಿ, ಯಾವುದನ್ನು ಆರ್ಯರು ಸಮಚಿತ್ತತೆ ಮತ್ತು ಎಚ್ಚರದಿಂದ ಕೂಡಿದ ಸುಖ ಎನ್ನುವರೋ ಅದನ್ನು ಪ್ರಾಪ್ತಿ ಮಾಡುತ್ತಾನೆ. ಈ ರೀತಿಯ ಪ್ರಶಾಂತತೆಯ ಸುಖದಿಂದ ಆತನು ಇಡೀ ಶರೀರವನ್ನೆಲ್ಲಾ (ತುಂಬಿಸಿ ಆವರಿಸಿಬಿಡುತ್ತಾನೆ), ತೋಯಿಸಿಬಿಡುತ್ತಾನೆ. ಹೇಗೆಂದರೆ ಕಮಲಗಳಿರುವ ಸರೋವರದಲ್ಲಿ ಕಮಲಗಳನ್ನೆಲ್ಲಾ ನೀರು ಆವರಿಸಿರುತ್ತದೆ. ಅಲ್ಲಿರುವ ಯಾವುದೇ ಕಮಲವಿರಲಿ ಅವೆಲ್ಲಾ ನೀರಿನಿಂದ ಆವೃತವಾಗಿರುತ್ತದೆ. ಅದೇರೀತಿಯಲ್ಲಿ ಆತನು ಸುಖವನ್ನು ಶರೀರದಲ್ಲೆಲ್ಲಾ ಆವರಿಸುತ್ತಾನೆ.

ಚತುರ್ಥ ಸಮಾಧಿ :

ನಂತರ ಮತ್ತೆ ಆತನು 5 ರೀತಿಯಲ್ಲಿ ಧ್ಯಾನದ ಪ್ರಾವಿಣ್ಯತೆ ಗಳಿಸುತ್ತಾನೆ. ಅವೆಂದರೆ ಲಕ್ಷಿಸುವಿಕೆ, ಪ್ರವೇಶ, ನೆಲೆಸುವಿಕೆ, ನಿರ್ಗಮನ, ಅವಲೋಕನ. ಆಗ ಆತನಿಗೆ ಸುಖವು ಸ್ಥೂಲವಾಗಿ ಕಂಡುಬರುತ್ತದೆ. ಸಂಪೂರ್ಣ ಜಾಗರೂಕನಾದ ಆತನಿಗೆ ಸಮಚಿತ್ತತೆ ಮತ್ತು ಏಕಾಗ್ರತೆಯು ಸೂಕ್ಷ್ಮವಾಗಿ ಶಾಂತವಾಗಿ ಕಂಡುಬಂದು ಅದನ್ನು ಸಾಧಿಸುತ್ತಾನೆ. ಸ್ಥೂಲವಾದ ಸುಖವನ್ನು ವಜರ್ಿಸಿ, ಸುಲಭವಾಗಿ ಸಿಗಲಾರದ ಅತ್ಯಂತ ಸೂಕ್ಷ್ಮವಾದ ಪರಿಶುದ್ಧವಾದ ಚತುರ್ಥ ಸಮಾಧಿ ಪ್ರಾಪ್ತಿಮಾಡುತ್ತಾನೆ. ಅದು ಕೇವಲ 2 ಅಂಗಗಳಿಂದ ಕೂಡಿರುತ್ತದೆ. ಅದೆಂದರೆ ಸಮಚಿತ್ತತೆ ಮತ್ತು ಏಕಾಗ್ರತೆ ಈ ಬಗೆಯ ಪರಿಶುದ್ಧ ಸ್ಥಿತಿಯಿಂದ ಆತನು ನೆಲೆಸಿರುತ್ತಾನೆ. ಇಡೀ ಶರೀರದಲ್ಲೆಲ್ಲಾ ಇಂತಹುದೇ ಸ್ಥಿತಿಯಿಂದ ಆವೃತಗೊಳಿಸುತ್ತಾನೆ. ಹೇಗೆಂದರೆ ಒಬ್ಬ ವ್ಯಕ್ತಿ ಕುಳಿತು ಬಿಳಿ ಬಟ್ಟೆಯನ್ನು ಪೂರ್ಣವಾಗಿ ಹೊದ್ದುವಂತೆ ಆತನು ಈ ಪರಿಶುದ್ಧತೆಯಿಂದ ಇಡೀ ಶರೀರವನ್ನು ತೋಯಿಸುತ್ತಾನೆ, ನೆಲೆಸುತ್ತಾನೆ.
ನಂತರ ಆತನು 5 ರೀತಿಯಲ್ಲಿ ಧ್ಯಾನದ ಪ್ರಾವಿಣ್ಯತೆ ಗಳಿಸುತ್ತಾನೆ. ಅವೆಂದರೆ ಲಕ್ಷ, ಪ್ರವೇಶ, ನೆಲೆ, ನಿರ್ಗಮನ ಮತ್ತು ಅವಲೋಕನ. ಆಗ ಆತನಿಗೆ ರೂಪ ಸಮಾಧಿಯು ಸ್ಥೂಲವಾಗಿ ಕಂಡುಬರುತ್ತದೆ. ಆಗ ಆತನಿಗೆ ಎರಡು ಆಯ್ಕೆಗಳಿರುತ್ತದೆ. ಅರೂಪ ಸಮಾಧಿ ಸಿದ್ಧಿಸುವುದು ಅಥವಾ ವಿಪಶ್ಶನಾ ಧ್ಯಾನವನ್ನು ಆರಂಭಿಸುವುದು.

5. ಅರಿಯುವಿಕೆ (ಸಲ್ಲಖ್ಖಂ) (ಅನಾಪಾನ ವಿಪಶ್ಶನ ಧ್ಯಾನ (ಸಂಕ್ಷಿಪ್ತ)) :

ಇಲ್ಲಿ ಧ್ಯಾನಿಯು ನಾಮ (ಮನಸ್ಸು) ಮತ್ತು ರೂಪ (ಶರೀರ)ವನ್ನು ಅರಿಯುತ್ತಾನೆ. ಆಗ ಆತನಿಗೆ ಆನಾಪಾನಸತಿಗೆ ಶರೀರವೇ ಆಧಾರ ಮತ್ತು ಮನಸ್ಸಿನಿಂದ ಇದರ ಉದ್ಭವ ಆಗಿದೆ ಎಂದು ಅರಿವಾಗುತ್ತದೆ. ಹಾಗೆಯೇ ದೇಹ ಮನಸ್ಸಿನ ಸ್ವರೂಪವು ಅದರ ಹಿಂದಿನ ಕಾರಣಗಳು, ಈಗಿನ ಅಸ್ತಿತ್ವ ಮತ್ತು ಮುಂದಿನ ಪರಿಣಾಮ ಈ ರೀತಿಯಲ್ಲಿ ಕಾಲಕ್ಕೆ ಅನುಗುಣವಾಗಿ ಅರಿಯುತ್ತಾನೆ. ನಂತರ ಆತನು ತನ್ನ ಸಂಶಯಗಳನ್ನೆಲ್ಲಾ ನಿವಾರಿಸಿಕೊಳ್ಳುತ್ತಾನೆ. ಆತನಿಗೆ ಈ ದೇಹ ಮತ್ತು ಮನಸ್ಸು ಕ್ಷಣಿಕ. ಅನಿತ್ಯವೆಂಬ ಜ್ಞಾನೋದಯ ಉಂಟಾಗುತ್ತದೆ. ಈ ಶರೀರವೇ ದುಃಖ ಮತ್ತು ಮನಸ್ಸು ಸಹಾ ದುಃಖ ಎಂದು ಅರಿವಿಗೆ ಬರುತ್ತದೆ. ಇಲ್ಲಿ ತನ್ನದು, ತನ್ನ ಆತ್ಮ ಅಥವಾ ನಾನು ಎಂಬುದು ಭ್ರಮೆ ಎಂಬ ಜ್ಞಾನೋದಯ ಉಂಟಾಗುತ್ತದೆ.

6. ವಿಮುಖತೆ (ವಿವಟ್ಠನಾ) :

 ಇಲ್ಲಿ ಸಾಧಕನು 10 ಬಗೆಯ ಅಪೂರ್ಣತೆಗಳನ್ನು ವಜರ್ಿಸುತ್ತಾನೆ. ಇಲ್ಲಿ ಆತನಿಗೆ ಉದಯ ವ್ಯಯದ ಜ್ಞಾನವಾಗಿ ಎಲ್ಲಾ ಸಂಖಾರಗಳು ಭಯಾನಕವಾಗಿ ಕಂಡುಬರುತ್ತದೆ. ಆತನು ಅದರಿಂದ ವಿರಾಗ ತಾಳುತ್ತಾನೆ. ನಿರೋಧವನ್ನುಂಟು ಮಾಡಿ, ಕಲ್ಮಶಗಳನ್ನೆಲ್ಲ ತೊರೆಯುತ್ತಾನೆ. ಹೊಸದಾಗಿ ಯಾವೊಂದು ರೀತಿಯ ಬಂಧನಕ್ಕೂ ಬೀಳದೆ ಸಾಧನೆ ಮಾಡುತ್ತಾನೆ.

7. ಪರಿಶುದ್ಧಿ : 

ಇಲ್ಲಿ ಆತನಿಗೆ ಲೋಕೋತ್ತರ ಫಲ ಪ್ರಾಪ್ತಿಯಾಗುತ್ತದೆ. ವಿಮುಕ್ತಿ ಅಥವಾ ಸಮಚ್ಛೆದಾ ವಿಮುಕ್ತಿ ಗಳಿಸುತ್ತಾನೆ.

8. ಪುನರ್ ಅವಲೋಕನ (ಪಟಿಪಸ್ಸನಾ) :

 ಇಲ್ಲಿ ಆತನು ನಾಶಗೊಳಿಸಿದ ಬಂಧನಗಳ ಇಡೀ ಪ್ರಕ್ರಿಯೆ ಪುನಃ ಪುನಃ ಅವಲೋಕಿಸುತ್ತಾನೆ. ಅಂದರೆ ಎಣಿಕೆಯಿಂದ ಪರಿಶುದ್ದಿಯವರೆಗೂ ಪುನರ್ ಅವಲೋಕನ ಮಾಡುತ್ತಾನೆ.

No comments:

Post a Comment