Thursday 21 December 2017

ಆನಾಪಾನಾ ವೇದನಾನುಪಸ್ಸನಾ Anapana vedanaanupassana

                            ಆನಾಪಾನಾ ವೇದನಾನುಪಸ್ಸನಾ :

5. ಇಲ್ಲಿ ಸಾಧಕನು ಸುಶಿಕ್ಷಣ ಪಡೆದು ಹೀಗೆ ಅರಿತು ಸಾಧನೆ ಮಾಡುತ್ತಾನೆ. ನಾನು ಪೀತಿ (ಆನಂದ)ವನ್ನು ಅನುಭವಿಸುತ್ತಾ ಉಸಿರು ತೆಗೆದುಕೊಳ್ಳುತ್ತಿದ್ದೇನೆ ಅಥವಾ ಬಿಡುತ್ತಿದ್ದೇನೆ ಇಲ್ಲಿ ಆನಂದವನ್ನು 2 ವಿಧದಲ್ಲಿ ಅನುಭವಿಸಬಹುದು.

1. ಧ್ಯಾನ ವಸ್ತು ವಿಷಯದಿಂದ (ಸಮಥದಿಂದ) 2. ಗೊಂದಲಾತೀತದಿಂದ (ವಿಪಶ್ಶನದಿಂದ) ಇಲ್ಲಿ ಧ್ಯಾನ ವಿಷಯದಿಂದ ಪ್ರಥಮ ಸಮಾಧಿ ಪ್ರಾಪ್ತಿಯಾದಾಗಿನಿಂದ ಆತನು ಆನಂದವನ್ನು ಅನುಭವಿಸಿರುತ್ತಾನೆ. ಇಲ್ಲಿ ಆತನು ಪ್ರಥಮ ಮತ್ತು ದ್ವಿತೀಯ ಧ್ಯಾನದಲ್ಲಿ ಅನುಭವಿಸಿದ ಆನಂದದಲ್ಲಿ ಅನಿತ್ಯತೆ ಕಾಣುತ್ತಾನೆ. ಹೀಗೆ ಆತನು ಗೊಂದಲಾತೀತನಾಗುತ್ತಾನೆ.
ಇಲ್ಲಿ ಆತನು 16 ರೀತಿಯಲ್ಲಿ ಆನಂದವನ್ನು ಉದಯಿಸುವಂತೆ ಮಾಡಬಹುದು. ಹೇಗೆಂದರೆ ಆತನು ಅನಾಪಾನಾಸತಿಯಲ್ಲಿ ಏಕಾಗ್ರತೆಯಿಂದ ಇದ್ದಾಗ, ಯಾವುದೇ ರೀತಿ ಭಂಗಬಾರದ ರೀತಿಯಲ್ಲಿ ಧ್ಯಾನಿಸುತ್ತಿರುವಾಗ ಅದನ್ನು (1) ಅರಿತಾಗ (2) ಗಮನಹರಿಸಿದಾಗ (3) ಗ್ರಹಿಸಿದಾಗ (4) ಸ್ಪಷ್ಟವಾಗಿ ನೋಡಿದಾಗ (5) ಪ್ರತಿಬಿಂಬಿಸಿದಾಗ (6) ನಿರ್ಧರಿಸಿದಾಗ (7) ಶ್ರದ್ಧೆಯಿಂದ ನಿರ್ಧರಿಸಿದಾಗ (8) ಪ್ರಯತ್ನಶೀಲದಿಂದ ಕೂಡಿದಾಗ (9) ಜಾಗ್ರತೆ ಸ್ಥಾಪಿಸಿದಾಗ (10) ಏಕಾಗ್ರತೆಯಲ್ಲಿ ನೆಲೆಸಿದಾಗ (11) ಪ್ರಜ್ಞೆಯಿಂದ ಅರಿತಾಗ (12) ಅಭಿಜ್ಞಾದಿಂದ ಕೂಡಿದಾಗ (13) ಯಾವುದನ್ನು ಅರಿಯಬೇಕೋ ಅದನ್ನು ಅರಿತಾಗ (14) ಯಾವುದನ್ನು ತ್ಯಜಿಸಬೇಕೋ ಅದನ್ನು ತ್ಯಜಿಸಿದಾಗ (15) ಯಾವುದನ್ನು ವೃದ್ಧಿಸಬೇಕೋ ಅದನ್ನು ವೃದ್ಧಿಸಿದಾಗ (16) ಯಾವುದನ್ನು ಸಾಕ್ಷಾತ್ಕರಿಸಬೇಕೋ ಅದನ್ನು ಸಾಕ್ಷಾತ್ಕರಿಸಿದಾಗ ಆನಂದ ಉದಯಿಸುತ್ತದೆ.
ಯಾವಾಗ ಆತನು ಸದಾ ಉದಾತ್ತವಾದ ಆನಂದದಿಂದ ಕೂಡಿರುವನೋ ಆಗ ಆತನಿಂದ ಯಾವುದೇ ಪಾಪ ಆಗುವುದಿಲ್ಲ. ಇದೇ ಆತನ ಶೀಲವಾಗಿರುತ್ತದೆ. ಆಗ ಆತನು ಅಭಂಗ ಏಕಾಗ್ರತೆಯಲ್ಲಿರುತ್ತಾನೆ. ಇದೇ ಆತನ ಸಮಾಧಿಯಾಗಿದೆ. ಈ ಆನಂದವು ಅನಿತ್ಯ, ಅನಾತ್ಮ ಎಂದು ಅರಿಯುತ್ತಾನೆ. ಇದೇ ಆತನ ಪ್ರಜ್ಞೆಯಾಗಿದೆ. ಹೀಗೆ ಆತನು ಸುಶಿಕ್ಷಣವನ್ನು ಪಡೆಯುತ್ತಾನೆ.

ಸಂಕ್ಷಿಪ್ತ ಆನಾಪಾನಾ ವೇದನಾನುಪಸ್ಸನಾ

. ಇಲ್ಲಿ ಸಾಧಕನು ಆನಂದವನ್ನು ಅರಿಯುತ್ತಾ ಅದರ ಅನಿತ್ಯತೆಯನ್ನು ಅರಿಯುತ್ತಾನೆ. ಅದು ಶಾಶ್ವತವಲ್ಲ ಎಂದು ಅರಿಯುತ್ತಾನೆ. ಆಗ ಆತನು ನಿತ್ಯವೆಂಬ ಗ್ರಹಿಕೆ (ನಿಚ್ಚ ಸನ್ಯಾ) ತ್ಯಜಿಸುತ್ತಾನೆ.
. ನಂತರ ವೇದನೆಗಳೆಲ್ಲವೂ ಅವು ಸುಖ ಪೂರ್ವಕವೇ ಆಗಿದ್ದರೂ ಜನ್ಮ ನೀಡುವುದರಿಂದ, ವಿಯೋಗವಾಗುವುದರಿಂದ ಮರೆಯಾಗುವುದರಿಂದಾಗಿ ಅವು ದುಃಖಕರ ಎಂದು ಅರಿತು ಸುಖವೆಂಬ ಗ್ರಹಿಕೆಯನ್ನು (ಸುಖಿ ಸನ್ಯಾ) ತ್ಯಜಿಸುತ್ತಾನೆ.
. ನಂತರ ಸಾಧಕನು ಯಾವುದೆಲ್ಲಾ ವೇದನೆಗಳು ಉದಯಿಸಿ ಮರೆಯಾಗುತ್ತವೆಯೋ ಮತ್ತು ದುಃಖಜಾತವು ಅಗಿರುವುದರಿಂದಾಗಿ ಅವು ನಾನಲ್ಲ, ನನ್ನದಲ್ಲ ಅವು ನನ್ನ ಆತ್ಮವಲ್ಲ ಎಂದು ಅರಿಯುತ್ತಾನೆ. ಈ ರೀತಿಯಾಗಿ ಆತನು ಆನಂದವೇ ನನ್ನ ಆತ್ಮ ಎಂಬ ಮಿಥ್ಯಾ ಗ್ರಹಿಕೆಯನ್ನು (ಅತ್ತಸನ್ಯಾ) ತೊರೆಯುತ್ತಾನೆ.
. ಹೀಗಾಗಿ ಆತನು ವೇದನೆಗಳಲ್ಲಿ (ಆನಂದದಲ್ಲಿ) ಯಾವ ಸುಖವನ್ನು ಪಡೆಯಲಾರ. ಆತನು ಆನಂದಿಸುವ ಪ್ರವೃತ್ತಿ ತೊರೆಯುತ್ತಾನೆ.
. ಹೀಗೆ ಆತನು ವಿರಾಗಿಯಾಗುತ್ತಾನೆ, ವೇದನೆಗಳಲ್ಲಿ (ಆನಂದದಲ್ಲಿ) ವಿರಾಗ ಭಾವನೆ ತಾಳುತ್ತಾನೆ, ಹೀಗಾಗಿ ಆತನು ಭಾವೋದ್ರೇಕಗಳನ್ನೆಲ್ಲಾ ತೊರೆಯುತ್ತಾನೆ.
. ನಂತರ ಆತನು ಈ ವೇದನೆಗಳ ಅಂತ್ಯ ಮಾಡಲು ನಿರ್ಧರಿಸುತ್ತಾನೆ (ನಿರೋಧ) ಮತ್ತು ಆತನಲ್ಲಿ ವೇದನೆಗಳು ಉದಯಿಸಲಾರವು. ಏಕೆಂದರೆ ಆತನು ಅವುಗಳ ಸಮುದಾಯ (ಉತ್ಪತ್ತಿ)ವನ್ನೇ ನಿಲ್ಲಿಸಿದ್ದಾನೆ. ಆತನಲ್ಲಿ ಈಗ ಸ್ಪರ್ಶವಾದರೂ ವೇದನೆಗಳು ಉಂಟಾಗುವುದಿಲ್ಲ.
. ಹೀಗೆ ಆತನು ವೇದನೆಗಳನ್ನು (ಆನಂದವನ್ನು) ತ್ಯಜಿಸುತ್ತಾನೆ. ಅವುಗಳಲ್ಲಿ ಅಂಟುವುದಿಲ್ಲ. ಅವುಗಳಿಗೆ ಅತೀತನಾಗುತ್ತಾನೆ. ಹೀಗೆ ಆತನು ಆನಂದದಲ್ಲಿ ಅನುಭವಿಸುತ್ತಾ ಉಸಿರಾಟದ ಧ್ಯಾನದಲ್ಲಿ ವಿಹರಿಸುತ್ತಾನೆ.

6. ಇಲ್ಲಿ ಸಾಧಕನು ಸುಶಿಕ್ಷಣ ಪಡೆದು ಹೀಗೆ ಅರಿತು ಸಾಧನೆ ಮಾಡುತ್ತಾನೆ. ನಾನು ಸುಖ (ದಿವ್ಯವಾದ ಸುಖ)ವನ್ನು ಅನುಭವಿಸುತ್ತಾ ಉಸಿರನ್ನು ಒಳ ತೆಗೆದುಕೊಳ್ಳುತ್ತಿದ್ದೇನೆ ಮತ್ತು ಹೊರ ಬಿಡುತ್ತಿದ್ದೇನೆ.

ಆನಂದವು ಸ್ಥೂಲವಾದರೆ ಸುಖವು ಸೂಕ್ಷ್ಮವಾಗಿದೆ. ಆನಂದವನ್ನು ದ್ವಿತೀಯ ಧ್ಯಾನದವರೆಗೆ ಅನುಭವಿಸಿದರೆ, ಸುಖವನ್ನು ತೃತೀಯ ಧ್ಯಾನದವರೆಗೆ ಅನುಭವಿಸಬಹುದಾಗಿದೆ. ಅಷ್ಟೇ ಅಲ್ಲ, ಸುಖವನ್ನು ವಿಪಶ್ಶನ ಧ್ಯಾನದಲ್ಲಿಯೂ ಅನುಭವಿಸಬಹುದಾಗಿದೆ.
ಆನಂದದಂತೆ ಸುಖವನ್ನು ಸಹ 16 ವಿಧದಲ್ಲಿ ಉದಯಿಸಬಹುದಾಗಿದೆ ಮತ್ತು ಸದಾ ಸುಖ ಪೂರ್ವಕದಲ್ಲಿ ಇರುವವನಲ್ಲಿ ಶೀಲ, ಸಮಾಧಿ ಮತ್ತು ಪ್ರಜ್ಞಾವು ನೆಲೆಸಿರುತ್ತದೆ.
ಇಲ್ಲಿ ಸಾಧನೆಯೆಲ್ಲವೂ ಹಿಂದಿನ ಹಂತದಂತೆಯೇ ಅಂದರೆ ಆನಂದವನ್ನು ಅನುಭವಿಸಿದ ರೀತಿಯಲ್ಲಿಯೇ. ಆದರೆ ವ್ಯತ್ಯಾಸವಿರುವುದು ಕೇವಲ ಹಿಂದಿನ ಸಾಧನೆಗೆ ಆನಂದವು ವಸ್ತು ವಿಷಯವಾಗಿತ್ತು. ಇಲ್ಲಿ ಸುಖವು ವಸ್ತು ವಿಷಯವಾಗಿದೆ.

7. ಚಿತ್ತ ಸಂಖಾರಗಳನ್ನು ಅನುಭವಿಸುತ್ತಾ ನಾನು ಉಸಿರನ್ನು ಒಳ ತೆಗೆದುಕೊಳ್ಳುತ್ತಿದ್ದೇನೆ ಮತ್ತು ಹೊರಬಿಡುತ್ತಿದ್ದೇನೆ. ಈ ರೀತಿ ಸುಶಿಕ್ಷಣ ಪಡೆದು ಆತನು ಸಾಧನೆ ಮಾಡುತ್ತಿರುತ್ತಾನೆ.

ಇಲ್ಲಿ ಸುಶಿಕ್ಷಣವೆಂದರೆ ಶೀಲ, ಸಮಾಧಿ, ಪ್ರಜ್ಞಾವೇ ಆಗಿದೆ. ಒಳ ಉಸಿರು, ಹೊರ ಉಸಿರಿನ ಜಾಗ್ರತೆಯೇ ಆನಾಪಾನಾಸತಿಯಾಗಿದೆ. ಇಲ್ಲಿ ಚಿತ್ತ ಸಂಖಾರಗಳನ್ನು ವೀಕ್ಷಿಸುವುದೇ ಪ್ರಜ್ಞಾವಾಗಿದೆ. ಇಲ್ಲಿ ಚಿತ್ತಸಂಖಾರಗಳೆಂದರೆ ವೇದನಾ ಮತ್ತು ಸನ್ಯಾ (ಸಞ್ಞಾ) ಆಗಿದೆ. ಈ ವೇದನಾ ಮತ್ತು ಸನ್ಯಾವು ಪಂಚಖಂಧಗಳಲ್ಲಿ ಎರಡಾಗಿದೆ. ಉಳಿದವುಗಳೆಂದರೆ ರೂಪ, ವಿನ್ಯಾನ, ಸಂಖಾರ.
ಇಂದ್ರಿಯ ಮತ್ತು ಇಂದ್ರೀಯಗಳ ಸ್ಪರ್ಶದ ನಂತರದ ಸ್ಥಿತಿಯೇ ವೇದನಾ ಆಗಿದೆ. ವೇದನೆಯೆಂದರೆ ಯಾವ ವೇದನೆಯೆಂದು ಪತ್ತೆಹಚ್ಚುವುದೇ ಸನ್ಯಾ (ಗ್ರಹಿಕೆ)ಯಾಗಿದೆ. ಹಾಗೆಯೇ ಮನಸ್ಸು ಮತ್ತು ಮನಸ್ಸಿನ ವಿಷಯಗಳು ಸಂಪಕರ್ಿಸಿದಾಗ ವೇದನೆ (ಸಂವೇದನೆ) ಉಂಟಾಗುತ್ತದೆ. ಧ್ಯಾನದಲ್ಲೂ ಕಾಯಾನುಪಸ್ಸನಾ ಮತ್ತು ವೇದನೆ ಆನಾಪಾನಾ ಮಾಡುವಾಗ ವೇದನೆಗಳು ಉಂಟಾಗುತ್ತದೆ. ಅವು ಮುಖ್ಯವಾಗಿ 3 ವಿಧವಾಗಿದೆ. ಪ್ರಿಯ (ಸುಖ) ವೇದನೆ, ದುಃಖ (ಅಪ್ರಿಯ) ವೇದನೆ ಮತ್ತು ಪ್ರಿಯ ಅಪ್ರಿಯವಲ್ಲದ (ಸುಖವೂ-ದುಃಖವೂ ಅಲ್ಲದ ವೇದನೆ) ವೇದನೆ. ಇವು ಯಾವ ವೇದನೆಯೆಂದು ಪತ್ತೆಹಚ್ಚುವುದೇ ಗ್ರಹಿಕೆಯಾಗಿದೆ.
ಧ್ಯಾನ ಆಳದಲ್ಲಿ ಸಂಖಾರಗಳು, ವಿನ್ಯಾನವು, ಯೋಚನೆಗಳು ಇರುವುದಿಲ್ಲ. ಆದರೆ ವೇದನೆ ಮತ್ತು ಸನ್ಯಾಗಳು ಇರುತ್ತದೆ. ಹೀಗಾಗಿ ಇವುಗಳ ವೀಕ್ಷಣೆಯೇ ಚಿತ್ತ ಸಂಖಾರಗಳ ವೀಕ್ಷಣೆ ಅಥವಾ ನಿಜವಾದ ವೇದನಾನುಪಸ್ಸನಾವಾಗಿದೆ. ಸನ್ಯಾವು ದೃಷ್ಟಿಗೆ (ಮಿಥ್ಯಾ ದೃಷ್ಟಿಗೆ) ಮೂಲವಾಗಿದೆ. ಉದಾಹರಣೆಗೆ : ಸುಂದರವಾಗಿದೆ ಎಂಬ ಶುಭದೃಷ್ಟಿ, ಸುಖವಾಗಿದೆ ಎಂಬ ಸುಖದೃಷ್ಟಿ, ಇದು ನಾನೇ ಎಂಬ ಆತ್ಮದೃಷ್ಟಿ, ಇದು ನಿತ್ಯ ಎಂಬ ನಿಚ್ಚ ದಿಟ್ಟಿ ಇವೆಲ್ಲವೂ ಗ್ರಹಿಕೆಯಿಂದಲೇ ಉಂಟಾಗುತ್ತದೆ. ಹಾಗೆಯೇ ಪ್ರಜ್ಞಾದಿಂದ ಅಶುಭಾ, ಅನಿತ್ಯಾ, ದುಃಖ ಮತ್ತು ಅನಾತ್ಮವು ಉಂಟಾಗುತ್ತದೆ.
ಇದು ಅಪ್ಪಟವಾದ ವಿಪಸ್ಸನಾ ಧ್ಯಾನವಾಗಿದೆ. ಇಲ್ಲಿ ಸಮಥದ ಪ್ರವೇಶವಿಲ್ಲವಾಗಿದೆ. ವೇದನಾದಿಂದ ಸನ್ಯಾವು ಉಂಟಾಗುತ್ತದೆ. ಹಾಗೆಯೇ ಸನ್ಯಾದಿಂದ ವೇದನಾವು ಸಹಾ ಉಂಟಾಗುತ್ತದೆ. ಸನ್ಯಾದಿಂದ ಮನೋಕ್ಲೇಶವಾದ ದಿಟ್ಟಿ ಉಂಟಾಗುತ್ತದೆ. ಆದರೆ ವೇದನಾದಿಂದ ಇಚ್ಛೆ ಉಂಟಾಗುತ್ತದೆ. ಈ ಇಚ್ಛೆಯೇ ಎಲ್ಲ ಕರ್ಮಗಳ ಮೂಲವಾಗಿದೆ. ಗ್ರಹಿಕೆ ಮತ್ತು ವೇದನೆಗಳು ಮನಸ್ಸಿಗೆ ಕಾರಣವಾಗಿದೆ ಹಾಗು ಸನ್ಯಾವು ಮಾತ್ರ ಮನಸ್ಸಿನ ಅಂತಿಮ ಸ್ಥಿತಿಯಾಗಿದೆ. ಇಲ್ಲಿ ಮತ್ತೊಮ್ಮೆ ವೇದನಾನುಪಸ್ಸನಾ ಆರಂಭವಾಗಬೇಕಾಗುತ್ತದೆ. ಇಲ್ಲಿ ಆನಂದವೇ ಆಗಿರಲಿ, ಸುಖವೇ ಆಗಿರಲಿ ಅದು ವೇದನೆಯೆಂದು ಪರಿಗಣಿಸಲ್ಪಡುತ್ತದೆ. ಅವುಗಳ ವೀಕ್ಷಣೆ ಇಲ್ಲಿ ಆಗುತ್ತದೆ. ಇಲ್ಲಿ ವೇದನೆಗಳ ಉದಯ, ಸ್ಥಾಪನೆ, ಅಳಿವು ಎಲ್ಲವನ್ನೂ ಸಾಧಕ ಅರಿಯುತ್ತಿರುತ್ತಾನೆ.

8. ಚಿತ್ತ ಸಂಖಾರಗಳನ್ನು ಶಾಂತಗೊಳಿಸುತ್ತ ನಾನು ಉಸಿರನ್ನು ತೆಗೆದುಕೊಳ್ಳುತ್ತಿದ್ದೇನೆ ಅಥವಾ ಉಸಿರನ್ನು ಹೊರಬಿಡುತ್ತಿದ್ದೇನೆ ಎಂದು ಆತನು ಸುಶಿಕ್ಷಣ ಪಡೆದು ಸಾಧನೆ ಮಾಡುತ್ತಿರುತ್ತಾನೆ. 

ಇಲ್ಲಿ ಚಿತ್ತ ಸಂಖಾರಗಳಾದ ವೇದನೆ ಮತ್ತು ಗ್ರಹಿಕೆಗಳ ಕಡೆ ಕೇಂದ್ರೀಕರಿಸಿ ಆನಾಪಾನಾಸಾಧನೆ ಮಾಡುತ್ತಿರುತ್ತಾನೆ. ಆತನು ವೇದನೆಗಳಿಗೆ ಅನಿತ್ಯ, ಅತೃಪ್ತಿಕಾರಕ (ದುಃಖ) ಮತ್ತು ಅನಾತ್ಮ (ನಾನು ಅಲ್ಲ) ಕಂಡು ಆನಂದದಿಂದ ಮತ್ತು ಸುಖದಿಂದ ವಿಮುಖವಾಗುತ್ತಾನೆ. ಹಾಗೆಯೇ (ಮಿಥ್ಯಾ) ಸನ್ಯಾದಿಂದ ಅಂದರೆ ಶುಭ (ಸುಂದರ) ನಿತ್ಯ, ಸುಖ ಮತ್ತು ಇದೇ ನನ್ನ ಆತ್ಮ, ಇದೇ ನಾನು, ಇದೇ ನನ್ನದು ಎಂಬ ಗ್ರಹಿಕೆಗಳಿಂದ ಮುಕ್ತನಾಗುತ್ತಾನೆ. ವೇದನೆಗಳ ಮತ್ತು ಸನ್ಯಾಗಳ ಉದಯ ಹೇಗೆ ಆಗುತ್ತವೆ ಎಂಬುದನ್ನು ಅರಿಯುತ್ತಾನೆ. ಹಾಗೆಯೇ ಅವುಗಳ ಅಪಾಯ ಅರಿಯುತ್ತಾನೆ. ಅವುಗಳಲ್ಲಿ ಆಸಕ್ತಿ ಕ್ಷೀಣಿಸಿ ಅವುಗಳಲ್ಲಿ ಆನಂದಿಸದೆ, ವಿರಾಗಿಯಾಗಿ ವೇದನೆಗಳ ಉದಯವನ್ನೇ ತಡೆದು ಈ ರೀತಿಯಾಗಿ ವೇದನೆಗಳ ಅಂತ್ಯಹಾಡಿ ತ್ಯಜಿಸುತ್ತಾನೆ. ಇರುವ ವೇದನೆಗಳನ್ನು ನಿಲ್ಲಿಸುತ್ತಾನೆ. ಹೊಸದಾಗಿ ವೇದನೆ ಉದಯಿಸದಂತೆ ಮಾಡುತ್ತಾನೆ. ಸಮಚಿತ್ತತೆಯನ್ನು ವೃದ್ಧಿಸಿ ವೇದನಾ ಸಮಚಿತ್ತತೆ ಸಾಧಿಸುತ್ತಾನೆ.

No comments:

Post a Comment