Tuesday 19 December 2017

ಚಿತ್ತವಿಶುದ್ದಿ

                                          ಚಿತ್ತವಿಶುದ್ದಿ


ಸರ್ವ ಪಾಪಗಳನ್ನು ಮಾಡದಿರುವಿಕೆ,
 ಕುಶಲ ಕರ್ಮಗಳನ್ನು ಮಾಡುವಿಕೆ (ಸಂಪಾದಿಸುವಿಕೆ)
 ಚಿತ್ತವನ್ನು ಪರಿಶುದ್ಧಿಗೊಳಿಸುವಿಕೆ ಇದೇ ಬುದ್ಧರ ಶಾಸನವಾಗಿದೆ. 

(ಧಮ್ಮಪದ 183)
ಪಾಪಗಳನ್ನು ಮಾಡದಿರುವಿಕೆ ಮತ್ತು ಕುಶಲ ಕರ್ಮಗಳನ್ನು ಮಾಡುವಿಕೆ ಇವರೆಡು ಶೀಲದಲ್ಲಿ ಅಡಕವಾಗಿದೆ. ಅಥವಾ ಇವರೆಡರಿಂದ ಶೀಲ ನಿಮರ್ಾತವಾಗಿದೆ. ಆದರೆ ಚಿತ್ತವನ್ನು ಪರಿಶುದ್ಧಗೊಳಿಸುವಿಕೆ ಸಮಾಧಿ ಮತ್ತು ಪ್ರಜ್ಞಾಗೆ ಸಂಬಂಧಪಟ್ಟಿದೆ.  ಸಮಾಧಿಯಿಂದ ತಾತ್ಕಾಲಿಕವಾಗಿ ಚಿತ್ತವು ಪರಿಶುದ್ಧಿಯಾಗುತ್ತದೆ. ಆದರೆ ಅದರ ಪ್ರವೃತ್ತಿ ಮತ್ತು ಪ್ರಚನ್ನತೆಗಳು ಸುಪ್ತವಾಗಿಯೇ ಇರುತ್ತದೆ. ಪ್ರಜ್ಞಾಭಾವನದಿಂದ ಚಿತ್ತವು ಪೂರ್ಣವಾಗಿ ವಿಶುದ್ಧಿಯಾಗುತ್ತದೆ.
ಇಲ್ಲಿ ಸಮಾಧಿಯಾನಿಕ ಮತ್ತು ವಿಪಶ್ಶನಯಾನಿಕ ಎಂಬ ಎರಡು ಬಗೆ ಧ್ಯಾನಗಳಿವೆ. ಸಮಾಧಿಯಾನಿಕ ಧ್ಯಾನವು ಚತುರ್ಥಸಮಾಧಿ ಅಥವಾ ಅರೂಪ ಧ್ಯಾನಗಳ ಪರಾಕಾಷ್ಠೆಯಾಗಿದೆ. ಅಲ್ಲಿನ ಸಾಧಕರು ನಂತರ ವಿಪಶ್ಶನ ಪ್ರಾರಂಭಿಸುತ್ತಾರೆ. ಸಮಥಾ ಧ್ಯಾನಗಳನ್ನು ಈಗಾಗಲೇ ಬೌದ್ಧರ ಅದ್ವಿತೀಯ ಧ್ಯಾನಗಳ ಮಾರ್ಗ ಭಾಗ-1ರಲ್ಲಿ ಪರಿಚಯಿಸಿದ್ದೇವೆ. ಆ ಸಾಧನೆ ಮಾಡಿದವರು ಈಗ ನಂತರ ವಿಪಶ್ಶನ ಧ್ಯಾನವನ್ನು ಪ್ರಾರಂಭಿಸಿ ಮಾರ್ಗ ಮತ್ತು ಫಲಗಳನ್ನು ಪಡೆಯುತ್ತಾರೆ. ಕೆಲವರು ಶೀಲವಿಶುದ್ದಿಯ ನಂತರವೇ ನೇರವಾಗಿ ವಿಪಶ್ಶನ ಪ್ರಾರಂಭಿಸುತ್ತಾರೆ. ಅಂತಹವರಿಗೆ ಸುಖ್ಖ ವಿಪಸ್ಸಕ (ಒಣ ವಿಪಶ್ಶನ ಧ್ಯಾನಿ) ಎನ್ನುತ್ತಾರೆ. ಏಕೆಂದರೆ ಅವರು ಸಮಾಧಿಯ ತೇವಾಂಶವಿಲ್ಲದೆಯೇ ಮಾರ್ಗದಲ್ಲಿದ್ದಾರೆ.

ಸಮಾಧಿ ಸ್ವರೂಪ

ಸಮಾಧಿಯು ಚಿತ್ತ ಏಕಾಗ್ರತೆಯ ಸ್ಥಿತಿಯಾಗಿದೆ. ಇಲ್ಲಿ ಒಂದು ವಿಷಯದ ಮೇಲೆ ಪೂರ್ಣ ಏಕಾಗ್ರವಹಿಸಿ ಮಿಕ್ಕೆಲ್ಲದರಿಂದ ವಿಮುಖರಾಗುತ್ತೇವೆ. ಇದಕ್ಕೆ ಪಾಳಿಯಲ್ಲಿ ಬಹಳಷ್ಟು ಸಮಾನಾರ್ಥಕ ಪದಗಳಿವೆ. ಝಾನ/ಧ್ಯಾನ/ಭಾವನ/ಸಮಾಪತ್ತಿ ಇತ್ಯಾದಿ.
ಎಲ್ಲಾ ಕುಶಲಸ್ಥಿತಿಗಳಿಗೆ ಸಮಾಧಿಯೇ ನಾಯಕವಾಗಿದೆ. ಇಲ್ಲಿ ಒಂದೇ ವಿಷಯ ವಸ್ತುವಿನ ಮೇಲೆ ಮನಸ್ಸು ಮತ್ತು ಎಲ್ಲಾ ಮಾನಸಿಕ ಕುಶಲ ಸ್ಥಿತಿಗಳು ಏಕಾಗ್ರವಾಗುವುದರಿಂದ ಇದಕ್ಕೆ ಕುಶಲ ಸ್ಥಿತಿಗಳ ಸಮಗ್ರತೆ ಎನ್ನುವೆವು. ಎಲ್ಲಾ ಮಾನಸಿಕ ಸ್ಥಿತಿಗಳು ಬಾಗುವುದರಿಂದ, ಹಿಂಬಾಲಿಸುವುದರಿಂದ, ಕೇಂದ್ರೀಕೃತವಾಗುವುದರಿಂದ ಸಮವಾಗಿ, ಸರಿಯಾಗಿ, ಏಕ ವಿಷಯದ ಮೇಲೆ ಹರಿಸುವುದರಿಂದ ಇದು ಸಮಾಧಿಯಾಗಿದೆ.
ಸಮಾಧಿಯ ಲಕ್ಷಣವೇನೆಂದರೆ ನೆಲಸುವಿಕೆ ಮತ್ತು ಚದುರಿ ಹೋಗದಿರುವಿಕೆ. ಸಮಾಧಿಯ ಕ್ರಿಯೆಯೆ ಚದುರುವುದನ್ನು ತೆಗೆದುಹಾಕುವಿಕೆ, ಚಿತ್ತದ ಅಚಲತೆಯಿಂದ ಇದು ವ್ಯಕ್ತವಾಗುತ್ತದೆ. ಸಮಾಧಿಗೆ ತತ್ಕ್ಷಣದ ಕಾರಣವೇನೆಂದರೆ ಆನಂದಿಸುವಿಕೆ. ಆನಂದ, ಉತ್ಸಾಹದಿಂದ ಏಕಾಗ್ರವಾದಾಗ ಚಿತ್ತವು ಕಶ್ಮಲಗಳಿಂದ ಮುಕ್ತವಾಗುತ್ತದೆ. ಹೀಗೆ ಯಾವುದಕ್ಕೂ ಅವಲಂಬಿತವಾಗದೆ, ಅಚಲವಾಗಿ, ಅಭಾಧಿತವಾಗಿ, ತಡೆಗಳಿಂದ ದೂರವಾಗಿ, ಏಕವಾಗಿ, ಸ್ಥಿರವಾಗಿ, ಶಾಂತಿ ಮತ್ತು ಸುಖಗಳಿಂದ ಮನಸ್ಸು ಕೇಂದ್ರೀಕೃತವಾಗಿ ಸಮನ್ವಯವಾಗಿ, ವರ್ತಮಾನದಲ್ಲಿ ನೆಲೆಸಿ, ವಿಹರಿಸುವಂತಹುದೇ ಸಮಾಧಿಯಾಗಿದೆ.

ಉನ್ನತ ವಿಪಶ್ಶನ (ವಿಪಸ್ಸನ) ಧ್ಯಾನ :

(ಬೌದ್ಧರ) ಧ್ಯಾನಗಳಲ್ಲೇ ಅತ್ಯಂತ ಶ್ರೇಷ್ಠವಾದ ಧ್ಯಾನವು ಇದ್ದರೆ ಅದು ವಿಪಸ್ಸನವೇ ಆಗಿದೆ. ಬೌದ್ಧರ ಧ್ಯಾನಗಳು 2 ವಿಧವಾಗಿವೆ.
1. ಸಮಥ ಧ್ಯಾನಗಳು 2. ವಿಪಸ್ಸನ ಧ್ಯಾನಗಳು.
40 ಬಗೆಯ ಸಮಥ ಧ್ಯಾನಗಳನ್ನು ತಾನು ಈ ಹಿಂದಿನ ಗ್ರಂಥವಾದ ಬೌದ್ಧರ ಅದ್ವಿತೀಯ ಧ್ಯಾನಗಳ ಮಾರ್ಗ ಭಾಗ-1ರಲ್ಲಿ ವಿವರಿಸಿದೆ. ಈ ಗ್ರಂಥದಲ್ಲಿ ನಾನು ವಿಪಸ್ಸನ ಅದರಲ್ಲೂ ಉನ್ನತ ವಿಪಸ್ಸನ ಅಥವಾ ಸಮಗ್ರ ವಿಪಸ್ಸನ ಧ್ಯಾನವನ್ನು ವಿವರಿಸಲಿದ್ದೇನೆ. ವಿಪಸ್ಸನ ಧ್ಯಾನವು ಬೌದ್ಧರ ಧ್ಯಾನಗಳಲ್ಲೇ ಮುಕುಟವೂ ಹೌದು, ಹೃದಯವೂ ಹೌದು ಮತ್ತು ಬೆನ್ನೆಲುಬು ಸಹಾ ಹೌದು. ಏಕೆಂದರೆ ಅದು ಅನುಪಮೇಯ ವಿಶಿಷ್ಟ, ಪರಮಶ್ರೇಷ್ಠ ಧ್ಯಾನಗಳಾಗಿವೆ. ಬುದ್ಧರ ಬೋಧಿ ಜ್ಞಾನವೆಲ್ಲವೂ ನಮಗೆ ಇದರಿಂದ ವ್ಯಕ್ತವಾಗಿ ತಿಳಿಯುತ್ತದೆ. ಇದನ್ನು ಪಾಲಿಸುತ್ತಿದ್ದಂತೆ ಇದರ ಮಹತ್ವವು ಇನ್ನೂ ಸ್ಪಷ್ಟವಾಗಿ, ಹೆಚ್ಚಾಗಿ ತಿಳಿಯಲ್ಪಡುತ್ತದೆ. ವಿಪಸ್ಸನ ಧ್ಯಾನವು ಅತ್ಯಂತ ಪುರಾತನ ಧ್ಯಾನಗಳಲ್ಲಿ ಒಂದಾಗಿದ್ದು, ಇದು ಬುದ್ಧ ಭಗವಾನರಿಂದ ಸಂಶೋಧಿಸಲ್ಪಟ್ಟಿದೆ.
ವಿ-ಪಸ್ಸನ ಎಂದರೆ ವೀಕ್ಷಿಸುವುದು ಎಂದು ಅರ್ಥವಾಗಿದೆ. ಅಂದರೆ ಸತ್ಯವನ್ನು ಅದು ಹೇಗಿದೆಯೋ ಹಾಗೆ ಯತಾರ್ಥವಾಗಿ ತೋರಿಕೆಯ ಸೀಳಿ ನೋಡುವಿಕೆಯಾಗಿದೆ. ವಿಪಸ್ಸನ ಎಂದರೆ ಸ್ಪಷ್ಟವಾಗಿ ಆಳವಾಗಿ ನೋಡುವುದಾಗಿದೆ. ತಮ್ಮ ಎದುರು ಪ್ರತ್ಯಕ್ಷವಾಗಿ ಸಾಕ್ಷಾತ್ಕಾರ ಮಾಡಿಕೊಳ್ಳುವುದಾಗಿದೆ. ಅಥವಾ ಪರಮಶ್ರೇಷ್ಠ ಜ್ಞಾನ ಪಡೆಯುವುದಾಗಿದೆ. ಇದಕ್ಕೆ ಪ್ರಜ್ಞಾಧ್ಯಾನ ಎಂದು ಕರೆಯುತ್ತಾರೆ. ಅಂತರ್ ದೃಷ್ಟಿಯ ಧ್ಯಾನ ಎಂದು ಕರೆಯುತ್ತಾರೆ. ಬೋಧಿ ಜ್ಞಾನ ಎಂದು ಕರೆಯುತ್ತಾರೆ. ಇಲ್ಲಿ ನಾವು ಸರಣಿಯಾಗಿ ಒಂದರ ನಂತರ ಮತ್ತೊಂದು ಜ್ಞಾನಗಳನ್ನು ಪಡೆಯುತ್ತಾ ಹೋಗುತ್ತೇವೆ.
ವಿಪಸ್ಸನ ಧ್ಯಾನವು ಅತ್ಯವಶ್ಯಕವಾಗಿ ನಮಗೆ ಬೇಕಾಗಿದೆ. ಏಕೆಂದರೆ ನಾವು ದುಃಖದಿಂದ ಪಾರಾಗುವುದಕ್ಕಾಗಿ ಬಂಧನಗಳಿಂದ ಬಿಡುಗಡೆ ಪಡೆಯಲು ಕಶ್ಮಲಗಳಿಂದ ಶುದ್ಧಿ ಹೊಂದಿ ಪರಿಶುದ್ಧತೆ ಪಡೆಯಲು, ಉನ್ನತವಾದ ಆನಂದ, ಸುಖ, ಪ್ರಶಾಂತತೆ ಮತ್ತು ಪರಮಶಾಂತತೆ ಪಡೆಯಲು, ಎಲ್ಲದಕ್ಕಿಂತ ಹೆಚ್ಚಾಗಿ ಸ್ವ-ವೀಕ್ಷಣೆಯಿಂದ ಸ್ವ-ಪರಿವರ್ತನೆ ಹೊಂದಲು, ಸ್ವ-ಪರಿವರ್ತನೆ ಎಂದರೆ ಮೋಹದಿಂದ ಜ್ಞಾನಿಗಳಾಗಲು ಸ್ವಾರ್ಥದಿಂದ ನಿಸ್ವಾಥರ್ಿಗಳಾಗಲು, ದ್ವೇಷದಿಂದ ದಯಾಮಯಿಯಾಗಲು ಲೋಭದಿಂದ ದಾನಿಗಳಾಗಲು, ಮಿಥ್ಯದಿಂದ ಸತ್ಯವಂತರಾಗಲು, ಮೃತ್ಯುವಿನಿಂದ ಅಮರತ್ವದೆಡೆಗೆ ಸಾಗಲು, ಅಜ್ಞಾನದ ಕತ್ತಲೆಯಿಂದ ಬೋಧಿಯ ಬೆಳಕಿನತ್ತ ಸಾಗಲು, ಜನ್ಮದಿಂದ ನಿಬ್ಬಾಣದತ್ತ ಸಾಗಲು ನಮಗೆ ವಿಪಸ್ಸನ ಬೇಕೇ ಬೇಕು. ಇದರಿಂದ ಬಹಳಷ್ಟು ರೋಗಗಳಿಂದ ಮುಕ್ತರಾದರೂ ಅದು ಅತ್ಯಲ್ಪ ಲಾಭವಷ್ಟೇ. ಮಿಕ್ಕ ಲಾಭವು ಪರಮ ಲಾಭವಾಗಿದೆ.
ವಿಪಸ್ಸನ ಧ್ಯಾನವು ಭಾರತದಿಂದ ಕಳೆದುಹೋಗಿದ್ದ ಅತ್ಯಮೂಲ್ಯ ರತ್ನವಾಗಿದ್ದು ಅದನ್ನು ಮತ್ತೆ ಭಾರತಕ್ಕೆ ಅಷ್ಟೇ ಅಲ್ಲ, ವಿಶ್ವದ ಎಲ್ಲಾ ಜೀವಿಗಳಿಗೆ ಮತ್ತೆ ತಲುಪಿಸಲು ಎಲ್ಲರ ಸಹಕಾರ ಬೇಕಾಗಿದೆ. ಶ್ರೀಲಂಕ, ಬಮರ್ಾ, ಥಾಯಿಲ್ಯಾಂಡ್ ಮತ್ತು ಲಾವುಸ್ಗಳಲ್ಲಿ ಇಂದು ಜನಪ್ರಿಯ ಧ್ಯಾನವಾಗಿದೆ. ಈಗ ಇಡೀ ವಿಶ್ವದಲ್ಲೆಲ್ಲಾ ಮತ್ತೆ ಬಲಿಷ್ಠವಾಗಿ ಹಬ್ಬುತ್ತಿದೆ. ಈ ಧ್ಯಾನವು ವೈಜ್ಞಾನಿಕವಾಗಿಯು ಅತ್ಯುತ್ತಮ ಎಂದು ಸಾಬೀತಾಗಿ, ವಿಶ್ವದ ಶ್ರೇಷ್ಠ ವೈದ್ಯರ, ಮಾನಸಿಕ ಶಾಸ್ತ್ರಜ್ಞರ ಮತ್ತು ತಂತ್ರಜ್ಞಾನಿಗಳ ಅಭಿಪ್ರಾಯವಾಗಿದೆ. ಈ ಧ್ಯಾನವು ಈಗಾಗಲೇ ಎಲ್ಲಾ ಧರ್ಮದವರು ಪಾಲಿಸಲು ಆರಂಭಿಸಿ ಅದನ್ನು ತಮ್ಮತನವಾಗಿಸಲು ಆರಂಭಿಸಿದ್ದಾರೆ. ಸತ್ಯವನ್ನು ಎಲ್ಲೇ ಇರಲಿ, ಸ್ವೀಕರಿಸುವುದು ಎಲ್ಲಾ ಜ್ಞಾನಿಗಳ ಲಕ್ಷಣವಾಗಿದೆ. ಹಾಗೆಯೇ ಮಿಥ್ಯವನ್ನು ತೊರೆಯುವುದು ಸಹಾ ಎಲ್ಲಾ ಜ್ಞಾನಿಗಳ ಲಕ್ಷಣಗಲ್ಲಿ ಒಂದಾಗಿದೆ. ಸತ್ಪುರುಷರ ಲಕ್ಷಣವೇನೆಂದರೆ ಕೃತಜ್ಞರಾಗಿರುವುದು. ನಾವೆಲ್ಲರೂ ಇದಕ್ಕಾಗಿ ಬುದ್ಧ ಭಗವಾನರಿಗೆ ಸದಾ ಋಣಿಯಾಗಿರಬೇಕಾಗಿದೆ.
ವಿಪಸ್ಸನ ಧ್ಯಾನವು ಪ್ರಧಾನವಾಗಿ 3 ಭಾಗದಿಂದ ಕೂಡಿದೆ. ಶೀಲ, ಸಮಾಧಿ ಮತ್ತು ಪ್ರಜ್ಞಾ. ಅಂದರೆ ಮೊದಲು ಶೀಲ ವಿಶುದ್ಧಿಯಾಗಬೇಕಾಗಿದೆ. ನಂತರ ಚಿತ್ತ ವಿಶುದ್ದಿಯಾಗಬೇಕಾಗಿದೆ. ನಂತರವೆ ಪ್ರಜ್ಞಾ ವಿಶುದ್ಧಿಯಾಗುತ್ತದೆ. ಪ್ರತಿಯೊಂದರಲ್ಲೂ ಮತ್ತೆ ವಿಭಾಗವಾಗಿ ಹಲವಾರು ಹಂತಗಳಾಗುತ್ತವೆ.
ಶೀಲವಿಶುದ್ಧಿ ಎಂದರೆ ಕಾಯ, ವಾಚಾ, ಮಾನಸವಾಗಿ ಪರಿಶುದ್ಧತೆಯಿಂದಿರುವುದು.
ಚಿತ್ತವಿಶುದ್ಧಿ ಎಂದರೆ ಚಿತ್ತದ ಏಕಾಗ್ರತೆಯನ್ನು ಉಸಿರಾಟದ ಮೂಲಕ ಸಾಧಿಸುವುದು. ಪ್ರಜ್ಞಾವಿಶುದ್ದಿ ಎಂದರೆ ನಾಮರೂಪಗಳನ್ನು ವೀಕ್ಷಿಸಿ ಅವುಗಳ ಅನಿತ್ಯ ದುಃಖ, ಅನಾತ್ಮ ವೀಕ್ಷಿಸಿ ಅವುಗಳಲ್ಲಿ ಅಂಟದೆ ಮುಕ್ತರಾಗುವುದು.
ಇದು ಸಂಕ್ಷಿಪ್ತ ವಿವರಣೆಯಾಗಿದೆ. ಮುಂದೆ ವಿವರವಾಗಿ ಅರಿಯೋಣ.

ಜಾಗರೂಕತೆಯಿಂದ ಸ್ಥಾಪನೆ :

ಜಾಗರೂಕನಿಗೆ ಸಮಾಧಿಯು ಸಮೀಪವಾಗಿದೆ. ಅದರಿಂದಾಗಿ ಹೆಚ್ಚು ಹೆಚ್ಚು ಜಾಗರೂಕರಾಗಲು ಪ್ರಯತ್ನಿಸಬೇಕು. ನಾವು ಜಾಗರೂಕರಾದಷ್ಟು ಹೆಚ್ಚು ಶೀಲವಂತರಾಗ ಬಹುದು, ಇಂದ್ರಿಯಗಳನ್ನು ರಕ್ಷಿಸಬಹುದು, ಸಮಾಧಿಯನ್ನು ಪ್ರಾಪ್ತಿಮಾಡಬಹುದು. ಅಕುಶಲಗಳನ್ನು ತಡೆಯಬಹುದು, ಸತ್ಯವನ್ನು ಅರಿಯಬಹುದು. ನೆನಪಿನ ಶಕ್ತಿಯನ್ನು ವಿಕಾಸಿಸಬಹುದು. ಜ್ಞಾನದ ಹಂತಗಳನ್ನು ತಲುಪಬಹುದು. ನಾವು ಸದಾಕಾಲ ಏಕ ವಿಷಯದ ಮೇಲೆ ಧ್ಯಾನಿಸಲು ಸಾಧ್ಯವಾಗದೆ ಹೋಗಬಹುದು. ಆದರೆ ಸದಾಕಾಲ ಜಾಗರೂಕತೆಯಂತು ಸ್ಥಾಪಿಸಬಹುದು. ಆದ್ದರಿಂದ ಜಾಗರೂಕತೆಯು ನಮ್ಮ ಅಸ್ತಿತ್ವದ ಅಂಗವಾಗಿ ಸ್ಥಾಪಿಸಬೇಕು. ಆಗಲೇ ನಮ್ಮ ವಿಕಾಸ ಆರಂಭವಾಗುತ್ತದೆ.
ಮಹಾಸತಿ ಪಟ್ಠಾನ ಸುತ್ತದಲ್ಲಿ ಇದರ ಬಗ್ಗೆ ಈ ರೀತಿಯ ಉಲ್ಲೇಖವಿದೆ.
ಭಿಕ್ಷುವು ನಡೆಯುವಾಗ, ನಾನು ನಡೆಯುತ್ತಿದ್ದೇನೆ ಹಾಗೆಯೇ ನಿಂತಿರುವಾಗ ನಾನು ನಿಂತಿದ್ದೇನೆ, ಹಾಗೆಯೇ ಕುಳಿತಿರುವಾಗ ನಾನು ಕುಳಿತಿದ್ದೇನೆ ಹಾಗೆ ಮಲಗಿರುವಾಗ ನಾನು ಮಲಗಿದ್ದೇನೆ ಹೀಗೆಯೇ ಆತನು ಪ್ರತಿಯೊಂದು ದೈಹಿಕ ಭಂಗಿಯನ್ನು ಅರಿಯುತ್ತಾನೆ.
ಈ ರೀತಿಯಾಗಿ ಆತನು ದೇಹದ ಅರಿಯುವಿಕೆಯನ್ನು ಬಾಹ್ಯದಲ್ಲೂ ಅಥವಾ ಆಂತರ್ಯದಲ್ಲೂ ಅಥವಾ ಹೊರಗೂ, ಒಳಗೂ ಚಿಂತನೆ (ವೀಕ್ಷಣೆ) ಮಾಡುತ್ತಾ ಇರುತ್ತಾನೆ.
ಆತನು ದೇಹದ ಉದಯ ಸ್ವರೂಪ ಅರಿಯುತ್ತಾನೆ. ಅಥವಾ ದೇಹದ ಅಳಿವಿನ ಸ್ವರೂಪ ಅರಿಯುತ್ತಾನೆ ಅಥವಾ ದೇಹದ ಉದಯ ಅಳಿವುಗಳನ್ನು ಚಿಂತಿಸುತ್ತಾನೆ. ಇಲ್ಲಿ ದೇಹವಷ್ಟೇ ಇದೆ ಎಂದು ಜಾಗರೂಕನಾಗಿ, ಪ್ರಜ್ಞಾ ವಿಕಾಸಕ್ಕಾಗಿ, ಜಾಗರೂಕತೆಯ ವಿಕಾಸಕ್ಕಾಗಿ, ಸ್ವತಂತ್ರವಾಗಿ, ಯಾವುದಕ್ಕೂ ಅಂಟದೆ ಜೀವಿಸುತ್ತಾನೆ.
ಹಾಗೆಯೇ ಭಿಕ್ಷುವು ಪೂರ್ಣ ಜಾಗರೂಕವಾಗಿ ನಡೆಯುತ್ತಾನೆ. ತಲೆತಿರುಗಿಸುವಾಗಲಿ, ತನ್ನ ಅಂಗಗಳನ್ನು ಮಲಗುವಾಗ ಆಗಲಿ ಅಥವಾ ಅಂಗಗಳನ್ನು ಚಲಿಸುವಾಗ ಆಗಲಿ, ವಸ್ತ್ರಗಳನ್ನು ಬಳಸುವಾಗ ಆಗಲಿ, ತಿನ್ನುವಾಗ ಆಗಲಿ, ನೀರನ್ನು ಕುಡಿಯುವಾಗ ಆಗಲಿ, ಅಗಿಯುವಾಗ ಆಗಲಿ, ರುಚಿಸುವಾಗ ಆಗಲಿ, ವಿಸಜರ್ಿಸುವಾಗ ಆಗಲಿ, ಚಲಿಸುವಾಗ ಆಗಲಿ, ನಿಂತಿರುವಾಗ ಆಗಲಿ, ಕುಳಿತಿರುವಾಗ ಆಗಲಿ, ಮಲಗಿರುವಾಗ ಆಗಲಿ, ಮಾತನಾಡುವಾಗ ಆಗಲಿ, ನಿಶ್ಶಬ್ದರಿಂದ ಕೂಡಿರುವಾಗ ಆಗಲಿ, ಆತನ ಸರ್ವ ಕ್ರಿಯೆಗಳಲ್ಲಿ ಸರ್ವ ಅವಸ್ಥೆಯಲ್ಲಿ ಸದಾ ಜಾಗರೂಕ ಅರಿವನ್ನು ಪಡೆದಿರುತ್ತಾನೆ.
ಈ ರೀತಿಯಾಗಿ ಆತನು ಕಾಯಾನುಪಸ್ಸಿಯಾಗಿ ವಿಹರಿಸುತ್ತಾನೆ.... ದೇಹವಷ್ಟೇ ಇದೆ ಎಂದು ಜಾಗರೂಕನಾಗಿ, ಪ್ರಜ್ಞಾವಿಕಾಸಕ್ಕಾಗಿ, ಜಾಗರೂಕತೆಯ ವಿಕಾಸಕ್ಕಾಗಿ, ಸ್ವತಂತ್ರವಾಗಿ, ಯಾವುದಕ್ಕೂ ಅಂಟದೆ ಜೀವಿಸುತ್ತಾನೆ.

ಅನುಪಮ ಆನಾಪಾನ (ಸತಿ/ವಿಪಶ್ಶನ) ಧ್ಯಾನ :

ಆನಾಪಾನ ಸತಿ ಅಥವಾ ಆನಾಪಾನಾ ವಿಪಶ್ಶನ ಧ್ಯಾನವು ಎಲ್ಲಾ ಧ್ಯಾನಗಳಿಗಿಂತ ಶ್ರೇಷ್ಠವೆಂದು ಪರಿಗಣಿಸಲ್ಪಟ್ಟಿದೆ. ಏಕೆಂದರೆ ಈ ಧ್ಯಾನವು ಶಾಂತಿಯನ್ನು, ಜ್ಞಾನೋದಯವನ್ನು (ಸಂಬೋಧಿ) ಮತ್ತು ವಿಮುಕ್ತಿಯನ್ನು (ನಿಬ್ಬಾಣ) ನೀಡುತ್ತದೆ. ಅಷ್ಟೇ ಅಲ್ಲದೆ ಅಭಿಜ್ಞಾ (ಸಿದ್ಧಿಗಳು) (ಮಾನಸಿಕ ಬಲಾಢ್ಯತೆ), ಯೋಗ್ಯವಾದ ದೃಷ್ಟಿಕೋನ, ಜ್ಞಾನ ಎಲ್ಲವೂ ಸಿಗುತ್ತದೆ. ಈ ಧ್ಯಾನವು ಬುದ್ಧಭಗವಾನರಿಂದ ಸಂಶೋಧಿಸಲ್ಪಟ್ಟಿದೆ. ಇದರ ಪ್ರಭಾವವು ಅನಂತರ 500 ವರ್ಷಗಳ ಬಳಿಕ ಬಂದಂತಹ ಪತಂಜಲಿಯವರ ಮೇಲೆ, ಮತ್ತಿತರ ಭಾರತೀಯ ಧ್ಯಾನಿಗಳ ಮೇಲೆ ಬಿದ್ದಿದೆ. ಅಷ್ಟೇ ಅಲ್ಲ, ಆಧುನಿಕ ಕಾಲದಲ್ಲೂ ಬಹಳಷ್ಟು ದೇಶಗಳಲ್ಲಿ, ವಿವಿಧ ಧಮ್ಮದವರು, ವಿವಿಧ ಸ್ವಾಮೀಜಿಗಳು, ವಿವಿಧ ವೈಜ್ಞಾನಿಕರು, ವೈದ್ಯರು, ಧ್ಯಾನ ಗುರುಗಳು, ತತ್ವಶಾಸ್ತ್ರಜ್ಞರು, ಮಾನಸಿಕ ಶಾಸ್ತ್ರಜ್ಞರು ತಮ್ಮಲ್ಲಿ ಅಳವಡಿಸಿಕೊಂಡಿದ್ದಾರೆ. ಇದು ಮಾನಸಿಕ ಕಲ್ಮಶಗಳನ್ನು ಬಹುಬೇಗ ಪರಿಣಾಮಕಾರಿಯಾಗಿ ಶುದ್ಧಿಗೊಳಿಸುವಂತಹದು, ಮಾನಸಿಕ ರೋಗಿಗಳಿಗೆ ಇದು ಅಮೃತ ಸಮಾನವಾದಂತಹ ಧ್ಯಾನವಾಗಿದೆ. ಅಷ್ಟೇ ಅಲ್ಲದೆ ವಿವಿಧ ರೋಗಗಳು ಇದರಿಂದ ಶಮನವಾಗಿರುವಂತಹ ಹಲವಾರು ಉದಾಹರಣೆಗಳಿವೆ. ಇತ್ತೀಚೆಗೆ ಕೆಲವು ಖೈದಿಗಳು ಈ ಪದ್ಧತಿ ಅನುಸರಿಸಿ ಶುದ್ಧ ವ್ಯಕ್ತಿಗಳಾಗಿ ಪರಿವರ್ತನೆ ಹೊಂದಿದ್ದಾರೆ. ಈ ರೀತಿಯಾಗಿ ಈ

ವಿಪಸ್ಸನ ಧ್ಯಾನವು :


1. ಮಿಥ್ಯಾ ದೃಷ್ಟಿಯಿಂದ ಸಮ್ಮಾ ದೃಷ್ಟಿಯೆಡೆಗೆ
2. ಅಲ್ಪ ಜ್ಞಾನದಿಂದ ಅಭಿಜ್ಞಾದೆಡೆಗೆ
3. ಅಸತ್ಯದಿಂದ ಸತ್ಯದೆಡೆಗೆ
4. ದುಃಖದಿಂದ ಪರಮಸುಖದೆಡೆಗೆ
5. ಅಜ್ಞಾನದಿಂದ ಪರಮ ಸಂಬೋಧಿಯೆಡೆಗೆ
6. ಕಶ್ಮಲಗಳಿಂದ ಪರಿಶುದ್ಧಿಯೆಡೆಗೆ
7. ಬಂದನಗಳಿಂದ ಬಿಡುಗಡೆಯೆಡೆಗೆ
8. ಅಶಾಂತಿಯಿಂದ ಶಾಂತತೆಯೆಡೆಗೆ
9. ಅಹಂಕಾರದಿಂದ ಅನಾತ್ಮದೆಡೆಗೆ
10. ಜನ್ಮದಿಂದ ನಿಬ್ಬಾಣದೆಡೆಗೆ ತಲುಪಿಸುತ್ತದೆ.
ಆದರೆ ಈ ಧ್ಯಾನದ ಪರಿಶುದ್ಧರೂಪ ಹಾಗು ಪೂರ್ಣ ವಿಕಸಿತ ಸ್ವರೂಪ ಬೌದ್ಧ ಧ್ಯಾನಗಳಲ್ಲಿ ಇಲ್ಲೇ ಸಿಗುತ್ತದೆ. 

No comments:

Post a Comment