Tuesday 12 December 2017

ಬೋಧಿ ಪ್ರಾಪ್ತಿಯ ಆ ಮಹೋನ್ನತ ಅಮೃತ ಘಳಿಗೆ

ಬೋಧಿ ಪ್ರಾಪ್ತಿಯ ಮಹೋನ್ನತ ಅಮೃತ ಘಳಿಗೆ



                ಬುದ್ಧ ಭಗವಾನರು ವೈಶಾಖ ಶುದ್ಧ ಪೂರ್ಣಮಿಯ ದಿನದಂದು ಬೋಧಿಪ್ರಾಪ್ತಿಯ ದಿನದಂದು ಮೊದಲನೆಯ ಜಾವಕ್ಕೆ ತಮ್ಮೆಲ್ಲ ಹಿಂದಿನ ಜನ್ಮದ ವೃತ್ತಾಂತವನ್ನು ಕ್ಷಿಪ್ರವಾಗಿ, ಸಂಕ್ಷಿಪ್ತವಾಗಿ ಅರಿತುಕೊಂಡರು. ಎರಡನೆಯ ಜಾವದಲ್ಲಿ ಜೀವಿಗಳು ಯಾವ ಯಾವ ಕರ್ಮದಿಂದ ಯಾವ ಯಾವ ಗತಿ ಸೇರುತ್ತವೆ ಎಂಬ ಕರ್ಮ ನಿಯಮದ ಜ್ಞಾನವನ್ನು ಅರಿತುಕೊಂಡರು.
                3ನೆಯ ಜಾವದ ಸಮೀಪದ ವೇಳೆಯಲ್ಲಿ ಅವರು ಆರ್ಯಸತ್ಯಗಳ ಜ್ಞಾನಪ್ರಾಪ್ತಿಯ ಕಡೆ ಗಮನಹರಿಸಿದರು.
                ಅಹೋ, ಜೀವಿಗಳೆಲ್ಲವೂ ಕೇವಲ ಆಯಾಸವನ್ನೇ ಹೊಂದುತ್ತವೆ. ಬಾರಿ ಬಾರಿ ಜನ್ಮ ಎತ್ತುತ್ತವೆ. ಮುದಿಗಳಾಗುತ್ತಾರೆ ಸತ್ತು ಪುನಃ ಜನ್ಮ ತಾಳುತ್ತಿರುತ್ತವೆ.
                ಮಾನವನ ದೃಷ್ಟಿಕೋನಕ್ಕೆ ಕಾಮದ ಅಥವಾ ಮೋಹದ ಅಂಧಕಾರವು ಸದಾ ಆವರಿಸಿರುತ್ತದೆ ಮತ್ತು ತಮ್ಮ ಅಂಧಕತೆಯ ಕಾರಣದಿಂದ ಅವರು ಮಹಾ ದುಃಖದಿಂದ ಪಾರಾಗುವ ಮಾರ್ಗವನ್ನೇ ಅರಿಯಲಾರರು.
                ರೀತಿಯ ವಿಚಾರ ಕ್ರಮದಿಂದ ಅವರು ರೀತಿ ಪ್ರಶ್ನಿಸಿಕೊಂಡರು. ನಿಜಕ್ಕೂ ಇದೇನು? ಏತಕ್ಕಾಗಿ ಜರಾಮರಣವಾಗುತ್ತದೆ? ಆಗ ಅವರಿಗೆ ಅರಿವಾಯಿತು. ತಲೆ ಇರುವವರೆಗೆ ತಲೆನೋವು ಇರುವ ಹಾಗೆ, ವೃಕ್ಷವಿರುವ ಕಾಲಕ್ಕೂ ಅದಕ್ಕೆ ಕಡಿದು ಹಾಕುವ ಹಾಗೆ ಜನ್ಮವಿರುವ ತನಕ ಜರಾಮರಣಗಳು ಇದ್ದೇ ಇರುತ್ತವೆ.
                ನಂತರ ಅವರು ಜನ್ಮಕ್ಕೆ ಕಾರಣವೇನು? ಎಂದು ಶೋಧಿಸಿದಾಗ ಅವರಿಗೆ ಭವ (ಕರ್ಮಭವ) ದಿಂದ ಜನ್ಮವಾಗುತ್ತದೆ ಎಂದು ಅರಿವಾಯಿತು. ಅವರಿಗೆ ಸ್ಪಷ್ಟವಾಗಿ ಅರ್ಥವಾಯಿತು. ಏನೆಂದರೆ ಜನ್ಮವು ಸೃಷ್ಟಿಕರ್ತನಿಂದಾಗಲಿ, ಪ್ರಕೃತಿಯಿಂದಾಗಲಿ, ಆತ್ಮನಿಂದಾಗಲಿ, ಅಕಾರಣದಿಂದಾಗಲಿ ಸೃಷ್ಟಿಯಾಗಲಿಲ್ಲ.
                ನಮ್ಮ ಹಿಂದಿನ ಜನ್ಮದ ಕರ್ಮ ಭವದಿಂದಲೇ ಜನ್ಮವಾಗುತ್ತದೆ ಎಂದು ಅರಿವಾಯಿತು.
                ಆಗ ಅವರು ಭವಕ್ಕೆ ಕಾರಣವೇನು? ಎಂದು ಶೋಧಿಸಿದಾಗ ಅವರಿಗೆ ಭವದ ಕಾರಣ ಉಪಾದಾನ (ಪ್ರಬಲ ಆಸಕ್ತಿಯ ಅಂಟು)ವೇ ಎಂದು ಅರಿವಾಯಿತು.
                ಜೀವನದಲ್ಲಿ ದುಃಖಮುಕ್ತರಾಗಲು ನಾವು ಹಲವಾರು ಮಿಥ್ಯಾ ಆಶ್ರಯಗಳಿಗೆ ಮೊರೆ ಹೋಗುತ್ತೇವೆ. ನಾನಾ ಮಿಥ್ಯಾಶೀಲಾಚರಣೆ, ಮೋಹಾಚಾರಣೆಗಳಲ್ಲಿ ಆಸಕ್ತಿ ತಾಳುತ್ತೇವೆ. ಕಾಮಭೋಗದಲ್ಲಿ ಅತಿ ಆಸಕ್ತಿ ತಾಳುತ್ತೇವೆ. ಆತ್ಮನಲ್ಲಿ ಆಸಕ್ತಿ ತಾಳುತ್ತೇವೆ. ನಾನಾ ಸಿದ್ಧಾಂತಗಳಲ್ಲಿ ಆಸಕ್ತಿಗಳನ್ನು ತಾಳುತ್ತೇವೆ. ಹೇಗೆ ಸಣ್ಣ ಜ್ವಾಲೆಯಿಂದ ಮಹಾ ಅಗ್ನಿ ಸಂಭವಿಸುತ್ತದೋ ಹಾಗೆಯೇ ಎಲ್ಲಾ ಆಸಕ್ತಿಗಳಿಂದ ಭವವು ಸಂಭವಿಸುತ್ತದೆ ಎಂದು ಅರಿತರು.
                ನಂತರ ಉಪಾದಾನವು ಯಾವ ಕಾರಣಗಳಿಂದಿರುತ್ತದೆ ಎಂದು ಶೋಧಿಸಿದಾಗ ಅವರಿಗೆ ತನ್ಹಾ (ತೃಷ್ಣೆ/ತೀವ್ರಬಯಕೆ/ದಾಹ)ದಿಂದ ಆಗುತ್ತದೆ ಎಂದು ಅರಿವಾಯಿತು. ಯಾವರೀತಿ ವಾಯುವಿನ ಸಹಾಯದಿಂದ ಅಗ್ನಿಯು ಪ್ರಜ್ವಲಿತವಾಗುತ್ತದೋ ಅದೇರೀತಿಯಲ್ಲಿ ತನ್ಹಾದಿಂದ ಕಾಮ ಕ್ರೋಧ ಮುಂತಾದ ಮಹಾಪಾಪಗಳು ಸಂಭವಿಸುತ್ತದೆ.
                ನಂತರ ಅವರು ಯೋಚಿಸಿದರು, ತನ್ಹಾ ಯಾವುದರಿಂದ ಉದಯಿಸುತ್ತದೆ. ಆಗ ಅವರಿಗೆ ವೇದನೆಯೇ ತನ್ಹಾದ ಕಾರಣವೆಂದು ಅರಿವಾಯಿತು.
                ವೇದನೆಗಳಿಂದ (ಸುಖ, ದುಃಖ, ತಟಸ್ಥ ಅನುಭವಗಳು/ಸಂವೇದನೆಗಳು) ಆವೃತನಾದ ಮನುಷ್ಯ ಅವುಗಳ ತೃಪ್ತಿಗಾಗಿ ಉಪಾಯಗಳನ್ನು ಹುಡುಕುತ್ತಾನೆ. ಏಕೆಂದರೆ ದಾಹವಿಲ್ಲದೆ ಯಾರಿಗೂ ಜಲದ ಆನಂದ ಸಿಗುವುದಿಲ್ಲ. ಹಾಗೆಯೇ ವೇದನೆಗಳಿರುವುದ ರಿಂದಲೇ ತನ್ಹಾ ಉದಯಿಸುತ್ತದೆ ಎಂದು ಸ್ಪಷ್ಟವಾಗಿ ಅರಿವಾಯಿತು. ನಂತರ ಅವರು ವೇದನೆಗಳ ಕಾರಣವನ್ನು ಶೋಧಿಸಿದರು.
                ಬುದ್ಧ ಭಗವಾನರು ಮೊದಲೇ ವೇದನೆಗಳ ಅಂತ್ಯ ಮಾಡಿದ್ದರು. ಅವರಿಗೆ ಸುಲಭವಾಗಿ ವೇದನೆಗಳ ಕಾರಣ ಸ್ಪರ್ಶವೆಂದು ಅರಿವಾಯಿತು. ಸ್ಪರ್ಶವೆಂದರೆ ಇಂದ್ರಿಯಗಳು ಮತ್ತು ಅವುಗಳ ವಿಷಯಗಳ ಮಿಲನ ಅಥವಾ ಮನಸ್ಸು ಮತ್ತು ಮನಸ್ಸಿನ ವಿಷಯಗಳ ಮಿಲನ ಇದೇ ಸ್ಪರ್ಶವಾಗಿದೆ. ಹೇಗೆ ಇಂದನ ಮತ್ತು ಕಿಡಿಗಳ ಸಂಯೋಗದಿಂದ ಜ್ವಾಲೆಯು ಉಂಟಾಗುವುದೋ ಹಾಗೆಯೇ ಇಂದ್ರಿಯಗಳ ಮತ್ತು ಅವುಗಳ ವಿಷಯಗಳಿಂದ ಸ್ಪರ್ಶವು ಆಗಿಯೇ ವೇದನೆಗಳು ಉಂಟಾಗುತ್ತದೆ.
                ನಂತರ ಅವರು ಸ್ಪರ್ಶಕ್ಕೆ ಕಾರಣ ಹುಡುಕಿದಾಗ ಅವರಿಗೆ ಆರು ಇಂದ್ರಿಯಗಳ ಆಧಾರಗಳು ಕಂಡುಬರುತ್ತದೆ. ಅವೆಂದರೆ ಕಣ್ಣು, ಕಿವಿ, ಮೂಗು, ನಾಲಿಗೆ, ದೇಹ ಮತ್ತು ಮನಸ್ಸು.
                ಅವರಿಗೆ ಸ್ಪಷ್ಟವಾಗಿ ಆರು ಇಂದ್ರಿಯಗಳ ಆಧಾರ ಇರುವುದರಿಂದಲೇ ಸ್ಪರ್ಶವು ಉದಯಿಸುತ್ತದೆ ಎಂದು ಅರಿವಾಯಿತು.
                ಹೀಗೆಯೇ ಭಗವಾನರು ಉರುವೇಲದ ಹತ್ತಿರ ನಿರಂಜರ ನದಿಯ ದಡದಲ್ಲಿ ಬೋಧಿ ಧ್ಯಾನವನ್ನು ಮತ್ತು ನಿಬ್ಬಾಣದ ಪರಮ ಸುಖವನ್ನು ಅನುಭವಿಸುತ್ತಿದ್ದರು. ಹೀಗೆಯೇ ಅದೇ ಆಸನದಲ್ಲಿ ಪಟಿಚ್ಚಸಮುಪ್ಪಾದದ ಅನುಲೋಮ ಕ್ರಮವಾದ ಸರಣಿಯನ್ನು ವಿಶ್ಲೇಷಿಸಿದರು.
                ಇದರಿಂದ, ಇನ್ನೊಂದು ಉದಯಿಸುತ್ತದೆ. ಇದರ ಉದಯದಿಂದ ಇದು ಉದಯಿಸುತ್ತದೆ. ಹೇಗೆಂದರೆ : ಅವಿದ್ಯೆ(ಅಜ್ಞಾನ)ಯಿಂದ ಸಂಖಾರಗಳು (ಮನೋ ನಿಮರ್ಿತಿಗಳು) ಉದಯಿಸುತ್ತದೆ.
                ಸಂಖಾರಗಳಿಂದ ವಿನ್ಯಾನವು ಉದಯಿಸುತ್ತದೆ.
                ವಿನ್ಯಾನದಿಂದ ನಾಮರೂಪಗಳು ಉದಯಿಸುತ್ತದೆ.
                ನಾಮರೂಪಗಳಿಂದ 6 ಇಂದ್ರೀಯಾಧಾರಗಳು ಉದಯಿಸುತ್ತದೆ.
                6 ಇಂದ್ರೀಯಾಧಾರಗಳಿಂದ ಸ್ಪರ್ಶವು ಉದಯಿಸುತ್ತದೆ.
                ಸ್ಪರ್ಶಗಳಿಂದ ವೇದನೆಗಳು ಉದಯಿಸುತ್ತದೆ.
                ವೇದನೆಯಿಂದ ತನ್ಹಾವು ಉದಯಿಸುತ್ತದೆ.
                ತನ್ಹಾದಿಂದ ಉಪಾದಾನ ಉದಯಿಸುತ್ತದೆ.
                ಉಪಾದಾನದಿಂದ ಭವವು ಉದಯಿಸುತ್ತದೆ.
                ಭವದಿಂದ ಜನ್ಮ ಉದಯಿಸುತ್ತದೆ.
                ಜನ್ಮದಿಂದ ಜರಾಮರಣ ಒಟ್ಟಾರೆ ದುಃಖರಾಶಿಯು ಉದಯಿಸುವುದು.
                ಹೀಗೆ ನುಡಿದ ನಂತರ ಭಗವಾನರು ಉದಾನವೊಂದನ್ನು ನುಡಿದರು.
                ಯಾವಾಗ ಪರಿಶ್ರಮ ಧ್ಯಾನಿ ಜ್ಞಾನಿಗಳು ಅಸ್ತಿತ್ವದ ಸ್ಥಿತಿಗಳನ್ನು ಧ್ಯಾನಿಸುವರೋ, ಆಗ ಅವರು ಕಾರಣ ಮತ್ತು ಪರಿಣಾಮಗಳ ಸ್ವರೂಪವನ್ನು ಅರಿಯುವರು. ಆಗ ಎಲ್ಲಾ ಸಂದೇಹಗಳು ನಿವಾರಣೆಯಾಗುವುವು.
                ನಂತರ ಭಗವಾನರು ಹಾಗೆಯೇ ಕಾರಣ ಮತ್ತು ಪರಿಣಾಮದ ಸರಪಳಿಯನ್ನು ಪರೋಕ್ಷವಾಗಿ ವಿಶ್ಲೇಷಿಸಿದರು.
                ಸ್ಥಿತಿಯು ಇಲ್ಲದಿದ್ದರೆ, ಸ್ಥಿತಿಯು ಉಂಟಾಗುವುದಿಲ್ಲ. ಸ್ಥಿತಿಗಳ ಉದಯಿಸುವಿಕೆಯ ನಿರೋಧದಿಂದ ಸ್ಥಿತಿಯು ನಿರೋಧವು ಆಗುತ್ತದೆ.
                ಹೇಗೆಂದರೆ ಅವಿದ್ಯೆಯ (ಅಜ್ಞಾನ) ಪೂರ್ಣ ನಾಶದಿಂದ ಮತ್ತು ನಿರೋಧದಿಂದ ಸಂಖಾರವು ನಿರೋಧವಾಗುತ್ತದೆ.
                ಸಂಖಾರಗಳ ನಿರೋಧದಿಂದ ವಿನ್ಯಾನದ ನಿರೋಧವಾಗುತ್ತದೆ. (ನಿಲುಗಡೆ/ಅಂತ್ಯ)
                ವಿನ್ಯಾನದ ನಿರೋಧದಿಂದ ನಾಮರೂಪದ ನಿರೋಧವಾಗುತ್ತದೆ.
                ನಾಮರೂಪದ ನಿರೋಧದಿಂದ 6 ಇಂದ್ರೀಯಗಳ ನಿರೋಧವಾಗುತ್ತದೆ.
                6 ಇಂದ್ರೀಯಗಳ ನಿರೋಧದಿಂದ ಸ್ಪರ್ಶವು ನಿರೋಧವಾಗುತ್ತದೆ.
                ಸ್ಪರ್ಶಗಳ ನಿರೋಧದಿಂದ ವೇದನೆಗಳ ನಿರೋಧವಾಗುತ್ತದೆ.
                ವೇದನೆಗಳ ನಿರೋಧದಿಂದ ತನ್ಹಾ ನಿರೋಧವಾಗುತ್ತದೆ.
                ತನ್ಹಾದ ನಿರೋಧದಿಂದ ಉಪದಾನದ ನಿರೋಧವಾಗುತ್ತದೆ.
                ಉಪದಾನದ ನಿರೋಧದಿಂದ ಭವದ ನಿರೋಧವಾಗುತ್ತದೆ.
                ಭವದ ನಿರೋಧದಿಂದ ಜನ್ಮದ ನಿರೋಧವಾಗುತ್ತದೆ.
                ಜನ್ಮದ ನಿರೋಧದಿಂದ ಇಡೀ ದುಃಖರಾಶಿಯ ನಿರೋಧವಾಗುತ್ತದೆ.
                ಇದಕ್ಕೆ ಸಂಬಂಧಿಸಿದಂತೆ ಭಗವಾನರು ಇನ್ನೊಂದು ಉದಾನವನ್ನು ನುಡಿದರು.
                ಯಾವಾಗ ಪರಿಶ್ರಮ ಧ್ಯಾನಿ ಜ್ಞಾನಿಗಳು ಅಸ್ತಿತ್ವದ ಸ್ಥಿತಿಗಳನ್ನು ವಿಶ್ಲೇಷಿಸುವರೋ ಆಗ ಅವರು ಕಾರಣಗಳ ನಿರೋಧವನ್ನು ಅರಿಯುತ್ತಾರೆ, ಆಗ ಅವರ ಎಲ್ಲಾ ಸಂದೇಹಗಳು ದೂರವಾಗುತ್ತದೆ.
                ಹೀಗೆಯೇ ಭಗವಾನರು ಪಟಿಚ್ಚ ಸಮುಪ್ಪಾದ ಅನುಲೋಮ ಕ್ರಮ ಹಾಗು ಪ್ರತಿಲೋಮ ಕ್ರಮದಿಂದ ಒಟ್ಟಾಗಿ ಅರಿತರು. ನಂತರ ಉದಾನವೊಂದನ್ನು ಹಾಡಿದರು.
                ಯಾವಾಗ ಪರಿಶ್ರಮ ಜ್ಞಾನಿ ಅಸ್ತಿತ್ವದ ಸ್ಥಿತಿಗಳನ್ನು ಧ್ಯಾನಿಸುವನೋ ಆತನು ಮಾರನ ಸೈನ್ಯವನ್ನು ಕತ್ತಲೆಯನ್ನು ದೂರೀಕರಿಸುವ ಸೂರ್ಯನಂತೆ ಚದುರಿಸಿಬಿಡುವನು. ಎಂದು ನುಡಿದರು.
                ರೀತಿಯಾಗಿ ಜ್ಞಾನ ಗಳಿಸಿದ ಅವರು ಎಲ್ಲರ ಆಸ್ತಿತ್ವಕ್ಕೆ ಕಾರಣವಾಗುವ, ಎಲ್ಲರೂ ನಂಬುವ ಹಾಗೆ ಯಾವ ದೇವರನ್ನು (ಸೃಷ್ಟಿಕರ್ತ, ಪಾಲನಕರ್ತ, ನಾಶಕರ್ತ) ಕಾಣಲಿಲ್ಲ. ಯಾವ ಆತ್ಮನನ್ನು ಅವರು ಕಾಣಲಿಲ್ಲ. ಪರರು ಸಮಾಧಿ ಸ್ಥಿತಿಗಳಿಗೆ ದೇವರೆಂದು ಮತ್ತು ಆತ್ಮವೆಂದು ಕರೆಯುತ್ತಾರೆ ಎಂದು ತಿಳಿದರು.
                ರೀತಿ ಎಲ್ಲವನ್ನು ಅರಿತು ತನ್ಹಾದಿಂದ, ಅಜ್ಞಾನದಿಂದ, ಕಲ್ಮಶಗಳಿಂದ, ಜನ್ಮಗಳಿಂದ ಮುಕ್ತರಾದರು.
                ನಿಬ್ಬಾಣವನ್ನು ಸಾಕ್ಷಾತ್ಕರಿಸಿದರು. ಸ್ವಯಂ ಮಧ್ಯಮ ಮಾರ್ಗ/ಆರ್ಯ ಅಷ್ಠಾಂಗ ಮಾರ್ಗವನ್ನು ಸಂಶೋದಿಸಿದರು. ರೀತಿಯಾಗಿ ಎಲ್ಲವನ್ನು ತಾವಾಗಿಯೇ ಸಿದ್ಧಿಸಿದ್ದರಿಂದ ಅವರು ಅದ್ವಿತೀಯರಾಗಿ, ಬುದ್ಧರಾಗಿ ಪ್ರಕಾಶಿಸುತ್ತ ನಿಂತರು. ಜಗದ ದುಃಖ ವಿಮುಕ್ತಿಗಾಗಿ ಶ್ರಮಿಸಲು ಸಿದ್ಧರಾದರು. ಅದಕ್ಕೆ ಮುಂಚೆ ಒಂದು ಗಾಥೆಯನ್ನು ನುಡಿದರು.
                ಗೃಹ ಕಟ್ಟುವವನೇ ದೃಷ್ಟಿಸಿದ್ದೇನೆ (ನಿನ್ನನ್ನು),
ಮತ್ತೆ ಗೃಹವು ಕಟ್ಟಲ್ಪಡುವುದಿಲ್ಲ.
ಬೇಕಾದ ತೊಲೆ ನಿಲುವುಗಳೆಲ್ಲಾ ಚೂರಾಗಿವೆ.
ಗೃಹದ ಆಧಾರಸ್ತಂಭ ಮುರಿದು ಚೆಲ್ಲಾಪಿಲ್ಲಿಯಾಗಿದೆ
 ಚಿತ್ತವು ಸಂಖಾರತೀತವಾಗಿದೆ
ತನ್ಹಾ ಕ್ಷಯವು ಸಾಧಿಸಲ್ಪಟ್ಟಿದೆ (ಜಯಿಸಲ್ಪಟ್ಟಿದೆ). (ಧಮ್ಮಪದ 154)

                ಹೀಗಾಗಿ ಪಟ್ಟಿಚ ಸಮುಪ್ಪಾದವು ಬೋಧಿಯ ಸಾರವೇ ಆಗಿದೆ.

No comments:

Post a Comment