Sunday 10 December 2017

ಬೋಧಿ BODHI

                                                 ಬೋಧಿ


ಶ್ರೇಷ್ಠವಲ್ಲದ ವಿಷಯಗಳ ಅಪಾರ ಜ್ಞಾನಕ್ಕಿಂತ ಶ್ರೇಷ್ಠ ವಿಷಯಗಳ ಅಲ್ಪ ಜ್ಞಾನ ಮೇಲು

ಬೋಧಿಯು ಸರ್ವಜೀವಿಗಳ ಪರಮೋಚ್ಛ ಪರಮಶ್ರೇಷ್ಠ ಜ್ಞಾನವಾಗಿದೆ. ಹಾಗೆಯೇ ಪರಮೋಚ್ಛ ಅಂತಿಮ ಸ್ಥಿತಿಯಾಗಿದೆ. ಬೋಧಿ ಪದವು ಬುಧ್ ಎಂಬುವದರಿಂದ ಬಂದಿದೆ. ಅಂದರೆ ಎಚ್ಚೆತ್ತಿಕೋ, ಜಾಗೃತನಾಗು, ಶ್ರೇಷ್ಠ ಅರಿವನ್ನು ಪಡೆ ಎಂಬ ಅರ್ಥಗಳು ಬರುತ್ತವೆ. ಬೋಧಿಯ ಪ್ರಚ್ಚನ್ನ ಸ್ವಭಾವವು ಸರ್ವರಲ್ಲೂ ಇದೆ. ಆದರೆ ಅದನ್ನು ಪ್ರಜ್ಞಾಶೀಲತೆ ಮತ್ತು ಪರಿಶ್ರಮ ಇತ್ಯಾದಿ ಗುಣಗಳಿಂದ ವಿಕಸಿಸಬೇಕಾಗುತ್ತದೆ.

ಬೋಧಿಯ ವಿಧಗಳು :

ಬೋಧಿಯಲ್ಲಿ 3 ವಿಧಗಳಿವೆ. ಶ್ರಾವಕ ಬೋಧಿ, ಪಚ್ಚೇಕ ಬೋಧಿ ಮತ್ತು ಸಮ್ಮಾಸಂಬೋಧಿ.
ಶ್ರಾವಕ ಬೋಧಿಯೆಂದರೆ ಅರಹಂತರಾಗುವ ಜ್ಞಾನ ಮತ್ತು ನಿಬ್ಬಾಣ ಪ್ರಾಪ್ತಿ. ಆದ್ದರಿಂದಲೇ ಥೇರವಾದಿಗಳು ಬೋಧಿಯೆಂದರೆ ಪರಮಶ್ರೇಷ್ಠ ಜ್ಞಾನ ಎಂದೂ ಹಾಗು ನಿಬ್ಬಾಣ ಎಂದೂ ಬಳಸುತ್ತಾರೆ. ಇವೆರಡಕ್ಕೂ ಬೋಧಿಪದ ಬಳಸುತ್ತಾರೆ. ಇಲ್ಲಿ ವ್ಯಕ್ತಿಯೊಬ್ಬನು ಲೋಭ, ದ್ವೇಷ ಮತ್ತು ಮೋಹವನ್ನು ಅಂತ್ಯಗೊಳಿಸಿ ನಿಬ್ಬಾಣ ಪಡೆಯುತ್ತಾನೆ. ಅದಕ್ಕಾಗಿ ಬುದ್ಧ ಮತ್ತು ಸಮ್ಮಾಸಂಭೋದಿಯ ಜ್ಞಾನದ ಅಪಾರ ಸಹಾಯ ತೆಗೆದುಕೊಳ್ಳುತ್ತಾನೆ. ತ್ರಿಶರಣುವಿನ ಆಸರೆ ಪಡೆಯುತ್ತಾನೆ. ಬುದ್ಧರಿಂದ ಪ್ರಭಾವಿತನಾಗಿ, ಅವರ ಧಮ್ಮದ ಹಾದಿಯಲ್ಲಿ ನಡೆದು, ಸಂಘದಿಂದ ಮಾರ್ಗದಶರ್ಿತನಾಗಿ ಬೋಧಿ ಮತ್ತು ನಿಬ್ಬಾಣ ಪಡೆಯುತ್ತಾನೆ. ಇಲ್ಲಿ ಆತನು ಆರ್ಯ ಅಷ್ಟಾಂಗದ ಪಾಲನೆ ಮಾಡುತ್ತಾನೆ. ಇಲ್ಲಿ ಅರಹಂತನಾಗಿ ನಿಬ್ಬಾಣ ಪಡೆಯುವುದೇ ಜೀವನದ ಗುರಿಯಾಗಿದೆ.
ಪಚ್ಚೇಕ ಬೋಧಿಯಲ್ಲಿರುವ ಒಂದು ವಿಶೇಷತೆ ಎಂದರೆ ಅವರು ಸಹ ಪ್ರತ್ಯೇಕವಾಗಿ ಪರಿಶ್ರಮಿಗಳಾಗಿರುತ್ತಾರೆ ಹಾಗು ಅವರು ಯಾರಿಗೂ ಅವಲಂಬಿಸುವುದಿಲ್ಲ. ಯಾರಿಗೂ, ಯಾವುದಕ್ಕೂ ಅವಲಂಬಿಸದೆ, ಎಷ್ಟೋ ಕಾಲವಾಗಲಿ ವಿಚಲಿತರಾಗದೆ ತಮ್ಮದೇ ಹಾದಿಯಿಂದ ಶ್ರೇಷ್ಠಜ್ಞಾನ ಮತ್ತು ನಿಬ್ಬಾಣವನ್ನು ಪ್ರಾಪ್ತಿಮಾಡುವ ಉದಾತ್ತ ಪರಮಾರ್ಥ ವ್ಯಕ್ತಿತ್ವದ ಜೀವಿಯಾಗಿದ್ದಾರೆ. ಆದರೆ ಇವರು ಪರರಿಗೆ ಸಹಾಯ ಮಾಡುವ ಸ್ಥಿತಿಯಲ್ಲಿರುವುದಿಲ್ಲ. ಕೇವಲ ತಮ್ಮನ್ನು ಮುಕ್ತರನ್ನಾಗಿಸಿರುತ್ತಾರೆ. ಇವರಿಗಿಂತ ಶ್ರಾವಕಬೋಧಿಯ ಅರಹಂತರು ಚೆನ್ನಾಗಿ ಬೋಧನೆ ಮಾಡುತ್ತಾರೆ. ಕಾರಣವೇನೆಂದರೆ ಅವರಿಗೆ ಬುದ್ಧರ ಬೋಧಿಯ ಸಹಾಯ ಸಿಕ್ಕಿರುತ್ತದೆ.
ಶ್ರಾವಕ ಬೋಧಿ ಪ್ರಾಪ್ತಿ ಮಾಡಿದವರನ್ನು ಅರಹಂತರೆಂದು ಕೆಲವೊಮ್ಮೆ ಬುದ್ಧರೆಂದು ಕರೆಯುತ್ತಾರೆ.
ಪಚ್ಛೇಕಬೋಧಿ ಪ್ರಾಪ್ತಿ ಮಾಡಿದವರನ್ನು ಪಚ್ಛೇಕಬುದ್ಧರೆಂದು ಕರೆಯುತ್ತಾರೆ. ಸಮ್ಮಾಸಂಬೋಧಿ ಪ್ರಾಪ್ತಿ ಮಾಡಿದವರನ್ನು ಸಮ್ಮಾಸಂಬುದ್ಧರೆಂದು ಕರೆಯುತ್ತಾರೆ. ನಮ್ಮ ಕಾಲದ ಸಮ್ಮಾಸಂಬುದ್ಧರೆಂದರೆ ಗೌತಮ ಬುದ್ಧರು.
ಬೋಧಿಗೆ ಆಕಷರ್ಿತನಾಗಿ ಪರಿಶ್ರಮಪಡುವವರನ್ನು ಬೋಧಿಸತ್ವ ಎನ್ನುತ್ತಾರೆ. ಆದರೆ ಸಾಮಾನ್ಯವಾಗಿ ಇದು ಸಮ್ಮಾಸಂಬೋಧಿಗೆ ಪರಿಶ್ರಮಪಡುವವರಿಗೆ ಬಳಸಲಾಗುತ್ತದೆ. ಬೋಧಿಸತ್ವರಿಗೆ ಮಹಾಸತ್ವ ಎಂತಲೂ ಕರೆಯುತ್ತಾರೆ. ಅಂದರೆ ಜ್ಞಾನದ ಜೀವಿ, ಜ್ಞಾನದ ಆಸಕ್ತ, ಜ್ಞಾನ ಗಳಿಸಲು ಸಮರ್ಥ. ಪರಹಿತಕ್ಕಾಗಿಯೇ ಇರುವ ಏಕೈಕಜೀವಿ ಎಂದು ಕರೆಯುತ್ತಾರೆ. ಇಲ್ಲಿ ಬೋಧಿಸತ್ವ ಮಹಾಕರುಣೆಯಿಂದ ಸ್ಫೂತರ್ಿ ಹೊಂದಿ ದಯೆಯಿಂದಲೇ ಪ್ರೇರಕರಾಗಿ ಕನಿಕರದಿಂದ ಕ್ರಿಯಾಶೀಲರಾಗಿ, ದಶಪಾರಮಿಗಳನ್ನು 3 ಹಂತಗಳಲ್ಲಿ ಪರಿಪೂರ್ಣಗೊಳಿಸಿ, ಬುದ್ಧರಿಗೆ ಬೇಕಾದ ಸರ್ವಗುಣಗಳನ್ನು ಪರಿಪೂರ್ಣಗೊಳಿಸಿ, ಲೋಭ ದ್ವೇಷ ಮತ್ತು ಮೋಹಗಳನ್ನು ನಿಶ್ಶೇಷವಾಗಿ ನಾಶಗೊಳಿಸಿ, ಸ್ವಾವಲಂಬನೆಯಿಂದ ಯಾರಿಗೂ ಅವಲಂಬಿಸದೆ ಸ್ವ-ಪರಿಶ್ರಮಯುತರಾಗಿ, ದುಃಖ ಮತ್ತು ನಿಬ್ಬಾಣದ ಸಾಕ್ಷಾತ್ಕಾರ ಪ್ರಾಪ್ತಿ ಮಾಡುತ್ತಾರೆ. ದುಃಖದ ಮೂಲ ಕಾರಣವಾದ ತೀವ್ರವಾದ ದಾಹ (ಲೋಭ), ಅಹಂಕಾರ, ದ್ವೇಷ ಮತ್ತು ಮೋಹಗಳನ್ನು ನಿಶ್ಶೇಶವಾಗಿ ನಾಶಮಾಡುತ್ತಾರೆ. ದುಃಖ ನಿರೋಧ ಮಾರ್ಗಗಳನ್ನು ಅಸಂಖ್ಯಾತ ರೀತಿಯಲ್ಲಿ ಕಂಡುಹಿಡಿದು ದುಃಖದ ಅಂತ್ಯಗೊಳಿಸಿರುತ್ತಾರೆ. ಮಧ್ಯಮ ಮಾರ್ಗವಾದ ಆರ್ಯ ಅಷ್ಟಾಂಗ ಮಾರ್ಗದ ಸಂಶೋಧನೆ ಮತ್ತು ಪಾಲನೆ ಮಾಡಿರುತ್ತಾರೆ. ಪರಿಪೂರ್ಣಗೊಳಿಸಬೇಕಾದ ಸರ್ವಗುಣಗಳನ್ನು ಪರಿಪೂರ್ಣಗೊಳಿಸಿ ಸಮ್ಮಸಂಬುದ್ಧ ರಾಗುತ್ತಾರೆ ಹಾಗು ಎಲ್ಲಾ ಮಾನವರಿಗೆ ನಿಬ್ಬಾಣದ ಹಾದಿಯನ್ನು ತೋರಿಸಿ ಅವರನ್ನು ಮುಕ್ತರನ್ನಾಗಿಸಲು ಯತ್ನಿಸುತ್ತಾರೆ.
ಇವು ಬೋಧಿಯ 3 ವಿಧಗಳಾಗಿವೆ.
ಏತಕ್ಕಾಗಿ ಇದೇ ನಮ್ಮ ಅಂತಿಮಗುರಿಯಾಗಿದೆ ? ಏಕೆ ಇದು ಪರಮ ಶ್ರೇಷ್ಠಕರವಾಗಿದೆ? ಇಷ್ಟಕ್ಕೂ ಈ ಬೋಧಿಯಲ್ಲಿ ಏನಿದೆ ಮತ್ತು ಏನಿಲ್ಲ?

ಬೋಧಿ ಏಕೆ ?

ನಾವೆಲ್ಲಾ ಹುಟ್ಟುವೆವು, ನಂತರ ಇಂದ್ರೀಯಾಸಕ್ತಿಯಲ್ಲಿ ಬೀಳುವೆವು. ಹಾಗೆಯೇ ಇಂದ್ರೀಯ ತೃಪ್ತಿಗಾಗಿ ಧನ ಸಂಪಾದನೆ ಮಾಡಿದೆವು. ಅದಕ್ಕೆ ತಕ್ಕ ಜ್ಞಾನ ಹಾಗು ವೃತ್ತಿಗಳಲ್ಲಿ ತೊಡಗುವೆವು. ಆದರೆ ನಾವು ಎಂದಾದರೂ ಬೋಧಿಸತ್ವರಂತೆ ಗಂಭೀರ ಚಿಂತನೆ ಮಾಡಿದ್ದೇವೆಯೇ? ಅವರು ರೋಗಿಯನ್ನು, ವೃದ್ಧರನ್ನು, ಶವವನ್ನು ಕಂಡಾಗ ಅತ್ಯಂತ ಗಂಭೀರವಾಗಿ ಚಿಂತನೆ ಮಾಡಿದರು. ನಂತರ ಸಮಣವನ್ನು ಕಂಡು ಪರಿಹಾರದ ಬಗ್ಗೆಯು ಗಂಭೀರವಾಗಿ ಚಿಂತನೆ ಮಾಡಿದರು. ಇದೇ ನಮಗೂ ಅವರಿಗೂ ಇರುವ ವ್ಯತ್ಯಾಸ. ನಾವು ಪದೇ ಪದೇ ಜನ್ಮಿಸುತ್ತಲೇ ಇರುವೆವು ಹಾಗು ಮರಣಿಸುತ್ತಲೇ ಇರುವೆವು. ಇಂದ್ರೀಯ ಸುಖಕ್ಕಾಗಿ ಪಾಪ ಮಾಡಿ ದುರ್ಗತಿಯ ಜನ್ಮ ತಾಳುವೆವು. ನಾವು ಪದೇ ಪದೇ ಜನ್ಮ ತಾಳಬೇಕೆ? ಪದೇ ಪದೇ ದುಃಖ ಪಡೆಯಬೇಕೆ? ಅಲ್ಪ ಸುಖಕ್ಕಾಗಿ ಅಪಾರ ದುಃಖ ಪಡೆಯಬೇಕೆ? ಪದೇ ಪದೇ ರೋಗ ಮತ್ತು ಮುಪ್ಪುಗಳನ್ನು ಪಡೆಯಬೇಕೆ? ಪದೇ ಪದೇ ಅಪ್ರಿಯ ಸನ್ನಿವೇಶಗಳನ್ನು ಎದುರಿಸುತ್ತಲೇ ಇರಬೇಕೆ? ಯಾವ ಪುರುಷಾರ್ಥಕ್ಕಾಗಿ ನಾವು ಈ ರೀತಿ ಮಾಡುತ್ತಿದ್ದೇವೆ? ನಾವು ದುಃಖವನ್ನು ಏಕೆ ಗುರಿಯಾಗಿಟ್ಟುಕೊಂಡಿದ್ದೇವೆ? ದುಃಖವನ್ನು ಏಕೆ ಸುಖ ಎಂದು ಭಾವಿಸಿದ್ದೇವೆ? ಕುರೂಪವನ್ನೇ ಏಕೆ ಸುಂದರ ಎಂದು ಭಾವಿಸಿದ್ದೇವೆ? ಸದಾ ಪರಿವರ್ತನೀಯ ವಾದುದೆಲ್ಲವನ್ನು ಏಕೆ ನಿತ್ಯ ಎಂದು ಭಾವಿಸುತ್ತೇವೆ? ನಮ್ಮದಲ್ಲದ ವ್ಯಕ್ತಿತ್ವವನ್ನು ನಾವು ಏಕೆ ನಮ್ಮ ವ್ಯಕ್ತಿತ್ವ ಎಂದು ಭಾವಿಸುತ್ತೇವೆ ? ನನ್ನದಲ್ಲದ ಎಲ್ಲವನ್ನೂ ನಾವು ಏಕೆ ನನ್ನದು ಎಂದು ಯೋಚಿಸುತ್ತೇವೆ? ನಾನು ಎಂಬುದಕ್ಕೆ ಏಕೆ ಅಂಟಿದ್ದೇವೆ? ಇದು ನಿಜಕ್ಕೂ ನಾನೆಯೇ? ಹಾಗಾದರೆ ದುಃಖ ವಿಮುಕ್ತಿ ಎಂಬುದು ಇದೆಯೇ? ಈ ಜನ್ಮದಿಂದ, ರೋಗದಿಂದ ಮುಪ್ಪಿನಿಂದ, ಮರಣದಿಂದ, ಅಪ್ರಿಯ ಸನ್ನಿವೇಶಗಳಿಂದ ಮುಕ್ತಿಯಿದೆಯೇ? ಇದಕ್ಕೆಲ್ಲಾ ಉತ್ತರ : ಬುದ್ಧರ ಬೋಧನೆಯಲ್ಲಿರುವ ಬೋಧಿಯ ಸಾರಾಂಶದಲ್ಲಿ ನಮಗೆ ಸಿಗುತ್ತದೆ.
ಬೋಧಿಯ ಪರಮೋತ್ತತೆ :
ಬೋಧಿಯು ನಮಗೆ ಜನ್ಮರಹಿತ, ರೋಗರಹಿತ, ಮುಪ್ಪುರಹಿತ, ಮರಣರಹಿತ, ದುಃಖರಹಿತ, ಕಶ್ಮಲರಹಿತ, ಅಹಂಕಾರರಹಿತ ಆಜ್ಞಾನರಹಿತ ಮತ್ತು ಸ್ಥಿತಿಗಳಿಂದ ರಹಿತವಾದ ಶ್ರೇಷ್ಠತ್ವಕ್ಕೆ ಹೋಲಿಸಲು ಆಗದ ಸ್ಥಿತಿಗೆ ಕೊಂಡೊಯ್ಯುವುದರಿಂದ ಇದು ಪರಮ ಶ್ರೇಷ್ಠಕರವಾಗಿದೆ.

ಬೋಧಿಯ ಸಾರ :

ಬೋಧಿಯಲ್ಲಿ ಬುದ್ಧ ಭಗವಾನರ ಇಡೀ ಬೋಧನೆಯಿದೆ. ನಾವು ಬುದ್ಧರ ಬೋಧನೆಯ ಮೂಲಕ ಬೋಧಿಯನ್ನು ಅರಿಯಬಹುದು. ಹಾಗಾದರೆ ಬುದ್ಧರ ಬೋಧನೆಯಲ್ಲಿ ನಾವು ಕಾಣುವ ಅಂಶಗಳೆಂದರೆ:
1. ನಾಲ್ಕು ಆರ್ಯ ಸತ್ಯಗಳ ಜ್ಞಾನ
2. ಆರ್ಯ ಅಷ್ಠಾಂಗ ಮಾರ್ಗ ಅಥವಾ ಮಧ್ಯಮ ಮಾರ್ಗದ ಜ್ಞಾನ
3. ಕಾರಣ-ಕಾರ್ಯ-ಪರಿಣಾಮದ ಜ್ಞಾನ (ಪಟ್ಟಿಚ್ಛಸಮುಪ್ಪಾದ)
4. ಜನ್ಮಕ್ಕೆ ಕಾರಣವಾಗುವುದರ ಜ್ಞಾನ
5. ತ್ರಿಲಕ್ಷಣದ ಜ್ಞಾನ
6. ಅಶುಭ ಜ್ಞಾನ
7. ಅನಿತ್ಯ ಜ್ಞಾನ
8. ಆನಾತ್ಮದ ಜ್ಞಾನ
9. ಅನೀಶ್ವರವಾದ (ನಾಸ್ತಿಕ, ದೇವರು ಇಲ್ಲ) ದ ಜ್ಞಾನ
10. ಸರ್ವಲೋಕಗಳ ಜ್ಞಾನ
11. ಅಭಿಧಮ್ಮದ ಜ್ಞಾನ
12. ತರ್ಕ, ತತ್ವ ಮತ್ತು ಮನಶಾಸ್ತ್ರದ ಪೂರ್ಣ ಜ್ಞಾನ
13. ವಿಚಾರ ಮತ್ತು ವಿಶ್ಲೇಷಣೆಯ ಜ್ಞಾನ
14. ವಿಪಶ್ಶನದ ಜ್ಞಾನ
15. ಧ್ಯಾನಗಳ ಜ್ಞಾನ
16. ಅಭಿಜ್ಞಾ (ಪವಾಡಶಕ್ತಿಯ ಜ್ಞಾನ)
17. ಕರ್ಮಫಲಗಳ ಜ್ಞಾನ
18. ಬೋಧಿಪ್ರಾಪ್ತಿಗೆ ಸಹಾಯಕ ಅಂಗಗಳ ಜ್ಞಾನ (ಬೋಧಿ ಪಕ್ಕಿಯ ಧಮ್ಮ) ಮತ್ತು
ಇತ್ಯಾದಿ ಜ್ಞಾನಗಳನ್ನು ನಾವು ಬುದ್ಧರಲ್ಲಿ ಕಾಣುತ್ತೇವೆ.

ಇವೆಲ್ಲವೂ ಬುದ್ಧ ಮನಸ್ಸಿನಿಂದ ಉದಯಿಸಿದ, ಸಂಶೋಧಿಸಲ್ಪಟ್ಟಂತಹ ಜ್ಞಾನವೇ ಬೋಧಿ ಆಗಿದೆ. ಇದಕ್ಕೆ ಪರ್ಯಾಯವಾಗಿ ಧಮ್ಮ ಎಂದು ಕರೆಯುತ್ತಾರೆ. ಧಮ್ಮವು ಜ್ಞಾನವಾಗಿದೆ ಹೊರತು ಮತವಲ್ಲ. ಈ ಎಲ್ಲವನ್ನು ಬೋಧಿಸತ್ವರು ಅರಿತು ದುಃಖವನ್ನು ಅರಿತು ಅದರ ಮೂಲ ಕಾರಣವಾದ ನಾನು, ನನ್ನದು ಎಂಬ ಲೋಭ, ದ್ವೇಷ ಮತ್ತು ಮೋಹವನ್ನು ಪೂರ್ಣವಾಗಿ ನಾಶಗೊಳಿಸಿ, ಪರಿಶುದ್ಧವಾದ ನಿಬ್ಬಾಣವನ್ನು ಪ್ರಾಪ್ತಿಗೊಳಿಸಿದರು. ಹಾಗು ಸರ್ವ ಸದ್ಗುಣಗಳ ಪರಿಪೂರ್ಣತೆಯನ್ನು ಸಿದ್ಧಿಸಿ ಸಮ್ಮಾಸಂಬುದ್ಧರಾದರು.

37 ಬೋಧಿಪಕ್ಕಿಯ ಧಮ್ಮ (ಬೋಧಿಯ ರೆಕ್ಕೆಗಳು) :

ಈ ಬೋಧಿ ಪಕ್ಕಿಯ ಧಮ್ಮವು ನಮಗೆ ಬೋಧಿ ಪ್ರಾಪ್ತಿಗೊಳಿಸಲು ಸಹಾಯಕವಾಗಿದೆ. ಹೇಗೆ ಪಕ್ಷಿಗಳು ರೆಕ್ಕೆಗಳ ಮೂಲಕ ಆಕಾಶದಲ್ಲಿ ಹಾರಾಡುತ್ತವೆಯೋ ಹಾಗೆ ನಾವು ಸಹಾ ಬೋಧಿಯ ಆಕಾಶದಲ್ಲಿ ಬೋಧಿಯ ರೆಕ್ಕೆಗಳ ಮೂಲಕ ಹಾರಾಡುವೆವು.
ಇವು 37 ಇವೆ, ಇವು 7 ವಿಭಾಗಗಳಲ್ಲಿ ವಗರ್ಿಕೃತವಾಗಿದೆ.

1. ನಾಲ್ಕು ಸತಿ ಪಟ್ಠಾನಗಳು (ಸಮ್ಮಾಸತಿ) :

ಅ) ಕಾಯಾನುಪಸ್ಸನ  ಆ) ವೇದನಾನುಪಸ್ಸನ  ಇ) ಚಿತ್ತಾನುಪಸ್ಸನ ಮತ್ತು
ಈ) ಧಮ್ಮಾನುಪಸ್ಸನಾ.

2. ನಾಲ್ಕು ಸಮ್ಮಾ ಪಧಾನಗಳು (ಸಮ್ಮಾ ವ್ಯಾಯಾಮ) :

ಅ) ಸಂಯಮ  ಆ) ವರ್ಜನೆ  ಇ) ಭಾವನ  ಈ) ರಕ್ಷಣೆ

3. ನಾಲ್ಕು ಇದ್ದಿಪಾದಗಳು :

ಅ) ಛಂದ (ಪ್ರಬಲ ಇಚ್ಛಾಶಕ್ತಿಯುತ ಸಮಾಧಿ)
ಆ) ವೀರ್ಯ (ನಿರಂತರ ದೃಢ ಪರಿಶ್ರಮಯುತ ಸಮಾಧಿ)
ಇ) ಚಿತ್ತ (ಚಿತ್ತದ ಆಳ ಸಮಾಧಿ)
ಈ) ಮಿಮಾಂಸ (ವಿಶ್ಲೇಷಣಯುತ ಸಮಾಧಿ)

4. ಐದು ಇಂದ್ರೀಯಗಳು

ಅ) ಶ್ರದ್ಧಾ ಇಂದ್ರೀಯ  ಆ) ವೀರ್ಯ ಇಂದ್ರೀಯ  ಇ) ಸ್ಮೃತಿ ಇಂದ್ರೀಯ
ಈ) ಸಮಾಧಿ ಇಂದ್ರೀಯ  ಉ) ಪ್ರಜ್ಞಾ ಇಂದ್ರೀಯ

5. ಐದು ಬಲಗಳು

ಅ) ಶ್ರದ್ಧಾಬಲ ಆ) ವೀರ್ಯಬಲ ಇ) ಸ್ಮೃತಿಬಲ ಈ) ಸಮಾಧಿಬಲ ಉ) ಪ್ರಜ್ಞಾಬಲ.

6. ಸಪ್ತಬೋಧಿ ಅಂಗಗಳು :

ಅ) ಸ್ಮೃತಿ  ಆ) ಸತ್ಯಶೋಧನೆ  ಇ) ವೀರ್ಯ  ಈ) ಆನಂದ  ಉ) ಪ್ರಶಾಂತತೆ ಊ) ಸಮಾಧಿ  ಋ) ಸಮಚಿತ್ತತೆ

7. ಆರ್ಯ ಅಷ್ಠಾಂಗ ಮಾರ್ಗ :

ಅ) ಸಮ್ಮಾದಿಟ್ಟಿ (ಯೋಗ್ಯವಾದ ದೃಷ್ಟಿಕೋನ)
ಆ) ಸಮ್ಮಾ ಸಂಕಪ್ಪ (ಯೋಗ್ಯವಾದ ಸಂಕಲ್ಪ (ಯೋಚನೆ)
ಇ) ಸಮ್ಮಾ ವಾಚಾ (ಯೋಗ್ಯವಾದ ಸಂಭಾಷಣೆ)
ಈ) ಸಮ್ಮಾ ಕಮ್ಮಂತ (ಯೋಗ್ಯವಾದ ಕರ್ಮಗಳು)
ಉ) ಸಮ್ಮಾ ಅಜೀವ (ಯೋಗ್ಯವಾದ ಜೀವನೋಪಾಯ)
ಊ) ಸಮ್ಮಾ ವಾಯಾಮ (ಯೋಗ್ಯವಾದ ವ್ಯಾಯಾಮ)
ಋ) ಸಮ್ಮಾಸತಿ (ಯೋಗ್ಯವಾದ ಸ್ಮೃತಿ (ಎಚ್ಚರಿಕೆ)
ಎ) ಸಮ್ಮಾಸಮಾಧಿ (ಯೋಗ್ಯವಾದ ಸಮಾಧಿ)

ಈ ಎಲ್ಲ ಬೋಧಿಪಕ್ಕಿಯ ಧಮ್ಮವನ್ನು ನಾವು ಆರ್ಯ ಅಷ್ಠಾಂಗ ಮಾರ್ಗದಲ್ಲಿ ಅಡಕಗೊಳಿಸಬಹುದು. ಹಾಗೆಯೇ ಪಂಚ ಇಂದ್ರೀಯಗಳಲ್ಲಿ (ಬಲ) ಸಹಾ ಅಡಕಗೊಳಿಸಬಹುದು.
ಈ ಬೋಧಿ ಜ್ಞಾನದಲ್ಲಿ ನಾವು ದೇವರನ್ನು, ಆತ್ಮವನ್ನು, ಅಜ್ಞಾನವನ್ನು, ದುಃಖವನ್ನು, ಮೂಢನಂಬಿಕೆಗಳನ್ನು ಕಾಣಲಾರೆವು. ಆದ್ದರಿಂದ ಪೂರ್ಣ ಶಾಂತಿ ಸ್ವರೂಪವಾದ ಸರ್ವ ದುಃಖ ನಾಶಕವಾದ, ಶ್ರೇಷ್ಠ ಆನಂದ ಪ್ರಾಪ್ತಕರವಾದ ಜನ್ಮನಾಶಕವಾದ, ಸರ್ವಜ್ಞಾನ ಪ್ರಾಪ್ತಿಕರವಾದ ಮತ್ತು ಪೂರ್ಣ ವ್ಯಕ್ತಿತ್ವ ವಿಕಾಸ ಪೂರಕವಾದ ಬೋಧಿಯೇ ನಮ್ಮೆಲ್ಲರ ಗುರಿಯಾಗಿದೆ. ಈ ಬೋಧಿಯ ಮೂಲಕ ನಾವು ಶ್ರೇಷ್ಠ ಜ್ಞಾನ ಮತ್ತು ಶ್ರೇಷ್ಠ ವಿಮುಕ್ತಿ ಹೊಂದಬಹುದು.
ನಿಮ್ಮ ಗುರಿ ಪ್ರಾಪಂಚಿಕವನ್ನು ಮೀರಿದುದು ಆಗಿದೆಯೇ?
ನಿಮ್ಮ ಗುರಿ ಅತ್ಯುನ್ನತ ಸುಖ ಅಥವಾ ಅತ್ಯುನ್ನತ ಆನಂದವೇ?
ನಿಮ್ಮ ಗುರಿ ಸಾಕ್ಷಾತ್ಕಾರವೇ ಅಥವಾ ನಿಬ್ಬಾಣವೇ ?
ನಿಮ್ಮ ಗುರಿ ಜ್ಞಾನವೇ ?
ನಿಮ್ಮ ಗುರಿ ಪರಿಶುದ್ಧಿಯೇ ?
ನಿಮ್ಮ ಗುರಿ ವಿಮುಕ್ತಿಯೇ ?
ನಿಮ್ಮ ಗುರಿ ದುಃಖ ವಿಮುಕ್ತಿಯೇ ?
ನಿಮ್ಮ ಗುರಿ ಅತ್ಯುನ್ನತ ಸಾಹಸವೇ ?
ನಿಮ್ಮ ಗುರಿ ವ್ಯಕ್ತಿತ್ವ ವಿಕಾಸವೇ ?
ನಿಮ್ಮ ಗುರಿ ಜನ್ಮ ನಿರೋಧಕವೇ ?
ಹಾಗಾದರೆ ಅದು ಖಂಡಿತವಾಗಿ ಬೋಧಿ ಆಗಿದೆ. 

No comments:

Post a Comment