Tuesday 19 December 2017

ಸತಿಪಟ್ಠಾನ ಸುತ್ತದಲ್ಲಿ ಅನಾಪಾನಾಸತಿ :

ಸತಿಪಟ್ಠಾನ ಸುತ್ತದಲ್ಲಿ ಅನಾಪಾನಾಸತಿ :


ಭಿಕ್ಷುವು ಅರಣ್ಯದಲ್ಲಿ ಹೋಗಿ ಅಥವಾ ಮರದ ಬುಡದಲ್ಲಿ ಕುಳಿತು ಅಥವಾ ಏಕಾಂತ ಸ್ಥಳದಲ್ಲಿ ಪದ್ಮಾಸನದಲ್ಲಿ ಆಸೀನನಾಗಿ ದೇಹವನ್ನು ನೇರಕ್ಕೆ ಇಟ್ಟು ಜಾಗರೂಕತೆಯಲ್ಲಿ ತಲ್ಲೀನನಾಗುತ್ತಾನೆ.

ಅರಿವಿನಿಂದ ಉಶ್ವಾಸ (ಉಸಿರನ್ನು ತೆಗೆದುಕೊಳ್ಳುವುದು) ಮಾಡುತ್ತಾನೆ. ಅರಿವಿನಿಂದ ನಿಶ್ವಾಸ (ಉಸಿರನ್ನು ಹೊರಕ್ಕೆ ಬಿಡುವುದು) ಮಾಡುತ್ತಾನೆ. ಅವನಿಗೆ ಉದ್ದವಾದ ಉಸಿರನ್ನು ವಿಶ್ವಾಸಿಸುವಾಗ ನಾನು ದೀರ್ಘವಾದ ಉಶ್ವಾಸ ಮಾಡುತ್ತಿದ್ದೇನೆ ಎಂಬ ಅರಿವಿರುತ್ತದೆ. ಹಾಗೆಯೇ ಉದ್ದವಾದ ಉಸಿರನ್ನು ನಿಶ್ವಾಸಿಸುವಾಗ ನಾನು ದೀರ್ಘವಾದ ಉಸಿರನ್ನು ನಿಶ್ವಾಸ ಮಾಡುತ್ತಿದ್ದೇನೆ ಎಂಬ ಅರಿವು ಇರುತ್ತದೆ.

ಅದರಂತೆಯೇ ಕಿರಿದಾದ ಉಶ್ವಾಸ ಮಾಡುತ್ತಿರುವಾಗ ನಾನು ಕಿರಿದಾದ ಉಶ್ವಾಸ ಮಾಡುತ್ತಿರುವೆ ಎಂಬ ಅರಿವಿರುತ್ತದೆ. ಹಾಗೆಯೇ ಕಿರಿದಾದ ನಿಶ್ವಾಸ ಮಾಡುತ್ತಿರುವಾಗ ನಾನು ಕಿರಿದಾಗಿ ನಿಶ್ವಾಸ ಮಾಡುತ್ತಿರುವೆ ಎಂಬ ಅರಿವಿರುತ್ತದೆ.

ದೇಹದಲ್ಲಿ ಇಡೀ ಉಸಿರಾಟದ ಪ್ರಕ್ರಿಯೆಯನ್ನು ಅನುಭವಿಸುತ್ತಾ ಉಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನನ್ನು ಸುಶಿಕ್ಷಿತಗೊಳಿಸುತ್ತಿರುತ್ತಾನೆ.

ಉಸಿರಾಟದ ಪ್ರಕ್ರಿಯೆಯನ್ನು (ದೇಹವನ್ನು) ಶಾಂತಗೊಳಿಸುತ್ತಾ ಉಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನನ್ನು ಸುಶಿಕ್ಷಿತಗೊಳಿಸುತ್ತಾನೆ. ಉಸಿರಾಟದ ಕಾಯವನ್ನು ಪ್ರಕ್ರಿಯೆಯನ್ನು ಶಾಂತಗೊಳಿಸುತ್ತಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನನ್ನು ಸುಶಿಕ್ಷಿತಗೊಳಿಸುತ್ತಾನೆ.

ಹೇಗೆ ಕುಶಲಿಯಾದ ಚರಕಿ ಕೆಲಸದವ ಅಥವಾ ಆತನ ಶುಶುಕ್ಷು ಉದ್ದವಾಗಿ ತಿರುಗಿಸುವಾಗ ನಾನು ದೀರ್ಘವಾಗಿ ತಿರುಗಿಸುತ್ತಿದ್ದೇನೆ. ಹಾಗೆಯೇ ಕಿರಿದಾಗಿ ತಿರುಗಿಸುವಾಗ ನಾನು ಕಿರುವಾಗಿ ತಿರುಗಿಸುತ್ತಿದ್ದೇನೆ ಎಂದು ಅರಿಯುತ್ತಿರುತ್ತಾನೆ. ಅದರಂತೆಯೇ ಭಿಕ್ಷುವು ದೀರ್ಘವಾಗಿ ಉಶ್ವಾಸಿಸುವಾಗ ನಾನು ದೀರ್ಘವಾಗಿ ಉಸಿರಾಡುತ್ತಿದ್ದೇನೆ ಎಂದು ಕಿರಿದಾಗಿ ನಿಶ್ವಾಸಿಸುವಾಗ ನಾನು ಕಿರಿದಾಗಿ ನಿಶ್ವಾಸಿಸುತ್ತಿರುವೆ ಎಂದು... ಆತನು ತನ್ನನ್ನು ಸುಶಿಕ್ಷಿತಗೊಳಿಸುತ್ತಾನೆ.

ಹೀಗೆ ಆತನು ಕಾಯಾನುಪಸ್ಸಿಯಾಗಿ ಆಂತರಿಕವಾಗಿ ಅಥವಾ ಬಾಹ್ಯವಾಗಿ ಅಥವಾ ಆಂತರಿಕ ಮತ್ತು ಬಾಹ್ಯಗಳೆರಡರಲ್ಲೂ ಸಹಾ ಆತನು ಉಸಿರಾಟದಲ್ಲಿ ಉದಯಿಸುವ ಸ್ವಭಾವ (ಸಮುದಯ ಧಮ್ಮ) ಅರಿಯುತ್ತಾನೆ. ಹಾಗೆಯೇ ಅಳಿಯುವಿಕೆಯ ಸ್ವಭಾವವನ್ನು (ವಯ ಧಮ್ಮ) ಅರಿಯುತ್ತಾನೆ. ಹಾಗೆಯೇ ಉದಯವಯ (ಉದಯಿಸುವಿಕೆಯ ಮತ್ತು ಅಳಿಯುವಿಕೆಯ ಸ್ವಭಾವ)ವನ್ನು ಅರಿಯುತ್ತಾನೆ.

ಆಗ ಆತನಲ್ಲಿ ಇಲ್ಲಿ ದೇಹವಷ್ಟೇ ಇದೆ ಎಂಬ ಪ್ರಜ್ಞಾವುಂಟಾಗುತ್ತದೆ. ಪ್ರಜ್ಞಾವಿಕಾಸಕ್ಕಾಗಿ, ಜಾಗರೂಕತೆಯ ವಿಕಾಸಕ್ಕಾಗಿ ಆತನು ಲೋಕದ ಯಾವುದಕ್ಕೂ ಅಂಟದೆ ಸ್ವತಂತ್ರವಾಗಿ ಜೀವಿಸುತ್ತಾನೆ.
ಹೀಗೆ ಭಿಕ್ಷುವು ಕಾಯಾನುಪಸ್ಸಿಯಾಗಿ ಜೀವಿಸುತ್ತಾನೆ.

ಆನಾಪಾನಸತಿ ಸುತ್ತ (ಮಜ್ಜಿಮ ನಿಕಾಯ 118ನೇ ಸುತ್ತ)

ಆದರೆ ಮಜ್ಜಿಮ ನಿಕಾಯದ ಸುತ್ತದಲ್ಲಿ ಅನಾಪಾನಾಸತಿಯು ಇನ್ನೂ ವಿವರವಾಗಿ ಬೋಧಿಸಲಾಗಿದೆ.
.... ಈಗ ಹೇಗೆ ಆನಾಪಾನಸತಿಯನ್ನು ವೃದ್ಧಿಗೊಳಿಸಿದರೆ ಮತ್ತು ಅನುಸರಿಸಿದರೆ ಮಹತ್ತರ ಲಾಭವಾಗುತ್ತದೆ. ಮಹತ್ತರ ಫಲವು ಸಿಗುತ್ತದೆ?
ಇಲ್ಲಿ ಭಿಕ್ಷುವು ಅರಣ್ಯದಲ್ಲಿ, ಮರದ ಬುಡದಲ್ಲಿ ಅಥವ ಶೂನ್ಯಗೃಹದಲ್ಲಿ, ಪದ್ಮಾಸನದಲ್ಲಿ ಅಸೀನನಾಗಿ, ತನ್ನ ದೇಹವನ್ನು ನೇರವಾಗಿಟ್ಟುಕೊಂಡು ಮತ್ತು ಸದಾ ಉಶ್ವಾಸ ಮತ್ತು ನಿಶ್ವಾಸದಲ್ಲಿಯೇ ಜಾಗರೂಕತೆಯನ್ನು ಸ್ಥಾಪಿಸಿ ಸಾಧನೆ ಮಾಡುತ್ತಿರುತ್ತಾನೆ.
1. ಉಸಿರಾಟವು ದೀರ್ಘವಾಗಿದ್ದರೆ ನಾನು ದೀರ್ಘವಾದ ಉಸಿರನ್ನು ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಅರಿಯುತ್ತಿರುತ್ತಾನೆ.
2. ಉಸಿರಾಟವು ಕಿರಿದಾಗಿದ್ದರೆ ನಾನು ಕಿರಿದಾದ ಉಸಿರನ್ನು ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಅರಿಯುತ್ತಾನೆ.
3. ಇಡೀ ಉಸಿರಿನ ಕಾಯವನ್ನು ಅನುಭವಿಸಿದವನಾಗಿ ನಾನು ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ತನಗೆ ತಾನೇ ಸುಶಿಕ್ಷಣ ಪಡೆಯುತ್ತಾನೆ.
4. ಉಸಿರು ಕಾಯದ ಸಂಖಾರಗಳನ್ನು (ಚಟುವಟಿಕೆ) ಶಾಂತಗೊಳಿಸಿ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ತನಗೆ ತಾನೇ ಸುಶಿಕ್ಷಣ ಪಡೆಯುತ್ತಾನೆ. (ಇವಿಷ್ಟು ಅನುಪಾನ ಕಾಯನುಪಸ್ಸನವಾಗಿದೆ).
5. ಆನಂದವನ್ನು (ಪ್ರೀತಿ) ಅನುಭವಿಸಿದವನಾಗಿ ನಾನು ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನಗೆ ತಾನೇ ಸುಶಿಕ್ಷಣ ಪಡೆಯುತ್ತಾನೆ.
6. ಶಾಂತತೆಯನ್ನು (ಸುಖ) ಅನುಭವಿಸಿದವನಾಗಿ ನಾನು ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನಗೆ ತಾನೇ ಸುಶಿಕ್ಷಣ ಪಡೆಯುತ್ತಾನೆ.
7. ಚಿತ್ತದ ಚಟುವಟಿಕೆಗಳನ್ನೆಲ್ಲಾ ಅನುಭವಿಸಿ ನಾನು ಉಶ್ವಾಸಿಸುತ್ತಿರುವೆ ಅಥವಾ ನಿಶ್ವಾಸಿಸುತ್ತಿರುವೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ.
8. ಚಿತ್ತದ ಚಟುವಟಿಕೆಗಳನ್ನೆಲ್ಲಾ (ಸಂಖಾರಗಳನ್ನು) ಶಾಂತಗೊಳಿಸಿದವನಾಗಿ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ. (ಇವಿಷ್ಟು ಅನಾಪಾನಾ ವೇದನಾನುಪಸ್ಸನವಾಗಿದೆ).
9. ಚಿತ್ತವನ್ನು ಅನುಭವಿಸಿದವನಾಗಿ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಅತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ.
10. ಚಿತ್ತವನ್ನು ಸಂತೃಪ್ತಿಗೊಳಿಸುತ್ತಾ (ಶಾಂತಗೊಳಿಸುತ್ತಾ) ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ.
11. ಚಿತ್ತವನ್ನು ಸ್ಥಿರ (ಏಕಾಗ್ರ)ಗೊಳಿಸುತ್ತಾ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ.
12. ಚಿತ್ತವನ್ನು ವಿಮೋಚನೆಗೊಳಿಸುತ್ತಾ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ. (ಇವಿಷ್ಟು ಅನಾಪಾನಾ ಚಿತ್ತಾನುಪಸ್ಸನವಾಗಿದೆ).
13. ಅನಿತ್ಯತೆಯನ್ನು ಗಮನಿಸುತ್ತಾ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ.
14. ವಿರಾಗವನ್ನು ಗಮನಿಸುತ್ತಾ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ.
15. ನಿರೋಧವನ್ನು ಗಮನಿಸಿ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ.
16. ತ್ಯಜಿಸುವಿಕೆ (ಪಟಿನಿಸ್ಸ) ಗಮನಿಸುತ್ತಾ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ. (ಇವಿಷ್ಟು ಅನಾಪಾನಾ ಧಮ್ಮಾನುಪಸ್ಸನವಾಗಿದೆ).

ಈ ರೀತಿಯಾಗಿ ಆನಾಪಾನಾಸತಿಯನ್ನು ವೃದ್ಧಿಗೊಳಿಸಿದರೆ ಮತ್ತು ಪಾಲಿಸಿದರೆ ಮಹತ್ಪಲ ದೊರೆಯುತ್ತದೆ ಮತ್ತು ಮಹತ್ ಲಾಭ ದೊರೆಯುತ್ತದೆ. ಆಗ ಕೊನೆಯ ಒಳ ಉಸಿರು ಮತ್ತು ಹೊರ ಉಸಿರುಗಳು ಜಾಗ್ರತೆ ಇರುವಾಗಲೇ ನಿಲ್ಲುತ್ತದೆ.

ಭಿಕ್ಷುಗಳೇ ಆನಾಪಾನಾಸತಿಯನ್ನು ಬೆಳವಣಿಗೆ ಮಾಡಿದರೆ ಮತ್ತು ವೃದ್ಧಿಗೊಳಿಸಿದರೆ ಮಹತ್ಫಲವನ್ನು ನೀಡುತ್ತದೆ ಮತ್ತು ಮಹತ್ಲಾಭವನ್ನು ನೀಡುತ್ತದೆ. ಯಾವಾಗ ಆನಾಪನಾಸತಿಯು ಅಭಿವೃದ್ಧಿಗೊಳ್ಳುತ್ತದೋ ಮತ್ತು ಬೆಳವಣಿಗೆ ಆಗುವುದೋ ಆಗ ಅದು 4 ಸತಿಪಟ್ಟಾನಗಳನ್ನು ಪೂರ್ಣಗೊಳಿಸುತ್ತದೆ. ಯಾವಾಗ ನಾಲ್ಕು ಸತಿಪಟ್ಟಾನಗಳನ್ನು ಅಭಿವೃದ್ಧಿಗೊಳಿಸಿ ಬೆಳವಣಿಗೆ ಮಾಡುವಿರೋ ಆಗ ಅದು 7 ಬೋಧಿ ಅಂಗಗಳ ಬೆಳವಣಿಗೆ ಮೂಡುತ್ತದೆ ಮತ್ತು ಅಭಿವೃದ್ಧಿಗೊಳಿಸುತ್ತದೆ. ಯಾವಾಗ ಸಪ್ತಬೋಧಿ ಅಂಗಗಳನ್ನು ಬೆಳವಣಿಗೆ ಮತ್ತು ಅಭಿವೃದ್ಧಿಗೊಳಿಸುತ್ತವೆಯೋ ಆಗ ಅವು ನಿಜವಾದ ವಿದ್ಯೆ (ಬೋಧಿ) ಮತ್ತು ನಿಜವಾದ ವಿಮುಕ್ತಿ (ನಿಬ್ಬಾಣ) ನೀಡುತ್ತವೆ. 

No comments:

Post a Comment