Sunday 25 June 2017

Meditation of Analysis of 4 Elements ಚತುಧಾತುವವಥ್ಥನ (ಧಾತುಗಳ ವಿಶ್ಲೇಷಣಾ ಧ್ಯಾನ)

ಚತುಧಾತುವವಥ್ಥನ
(ಧಾತುಗಳ ವಿಶ್ಲೇಷಣಾ ಧ್ಯಾನ)

                ಇಲ್ಲಿ ಸಾಧಕನು (ಭಿಕ್ಷುವು) ತನ್ನ ಶರೀರವನ್ನು ಯಥಾಭೂತವಾಗಿ ಅದು ಹೇಗಿದೆಯೋ ಹಾಗೆ ಅರಿಯುತ್ತಾನೆ. ದೇಹವು ನಾಲ್ಕು ಮಹಾಭೂತಗಳಾದ ಪೃಥ್ವಿ, ಜಲ, ವಾಯು, ಅಗ್ನಿಗಳಿಂದಾದ ರೂಪವಷ್ಟೇ ಹೊರತು ಇದು ನನ್ನದಲ್ಲ, ನಾನಲ್ಲ ಮತ್ತು ನನ್ನ ಆತ್ಮವಲ್ಲ ಎಂದು ಯತಾರ್ಥವಾಗಿ ಅರಿಯುತ್ತಾನೆ. ನಾಲ್ಕು ಧಾತುಗಳ ಯತಾರ್ಥ ಅರಿಯುವಿಕೆಯು ಧ್ಯಾನದ ಲಕ್ಷಣವಾಗಿದೆ. ಇಲ್ಲಿ ಶೂನ್ಯತೆಯನ್ನು ಅರ್ಥಮಾಡಿಕೊಳ್ಳುವಿಕೆಯೇ ಕ್ರಿಯೆಯಾಗಿದೆ. ಇದು ನಾನು ಅಥವಾ ಆತ್ಮದ ಯೋಚನೆಗಳಿಂದ ವಿಮುಕ್ತವಾದಾಗ ವ್ಯಕ್ತವಾಗುತ್ತದೆ. ಧ್ಯಾನವು ಬುದ್ಧಿವಂತರಿಗೆ ನೀಡಲಾಗುತ್ತದೆ.
                ಧ್ಯಾನದ ಲಾಭಗಳೆಂದರೆ : ಭಿಕ್ಷುವು ಭಯದಿಂದ, ಪ್ರಾಪಂಚಿಕತೆಯಿಂದ, ಅತೃಪ್ತಿಯಿಂದ, ಪ್ರಿಯ ಮತ್ತು ಅಪ್ರಿಯ ಇಂದ್ರಿಯ ಸುಖಗಳಿಂದ, ಸ್ತ್ರೀ ಅಥವಾ ಪುರುಷ ಎಂಬ ಗ್ರಹಿಕೆಗಳಿಂದ ಮುಕ್ತನಾಗುತ್ತಾನೆ. ಪ್ರಜ್ಞಾವಂತನಾಗುತ್ತಾನೆ. ಸೋತಪನ್ನ ಸ್ಥಿತಿಗೆ ಹತ್ತಿರವಾಗುತ್ತಾನೆ. ಮಾನಸಿಕ ಸ್ಥಿತಿಗಳು, ಸ್ವಚ್ಛವಾಗುತ್ತದೆ. ತನ್ನ ಶರೀರವನ್ನು ಪೂರ್ಣ ಹತೋಟಿಯಲ್ಲಿ ಇಡುತ್ತಾನೆ.
ಧ್ಯಾನ ವಿಧಾನ :
                ಇಲ್ಲಿ ಭಿಕ್ಷುವು ನಿಶ್ಶಬ್ದ, ನಿರ್ಜನ ಏಕಾಂತ ಸ್ಥಳದಲ್ಲಿ ನೆಲೆಸಿ ಪದ್ಮಾಸನದಲ್ಲಿ ಕುಳಿತು, ಅಕುಶಲ ಸ್ಥಿತಿಗಳಿಂದ ಮುಕ್ತನಾಗಿ ರೀತಿ ಚಿಂತನೆ ಮಾಡುತ್ತಾನೆ. ಶರೀರವು ಕೇವಲ 4 ಧಾತುಗಳಿಂದ ಆಗಿದೆ. ಅವೆಂದರೆ ಘನ (ಪೃಥ್ವಿ), ದ್ರವ (ಜಲ) ಅನಿಲ (ವಾಯು) ಮತ್ತು ಉಷ್ಣ (ತೇಜೋ) ಹೀಗಾಗಿ ಇದು ಕೇವಲ ಧಾತುಗಳಿಂದ ಕೂಡಿದ್ದು, ಇಲ್ಲಿ ಯಾವ ಜೀವಿಯಾಗಲಿ, ಆತ್ಮವಾಗಲಿ ಇಲ್ಲ. ಇದು ನನ್ನದಲ್ಲ ಹಾಗು ನಾನು ಅಲ್ಲ ಎಂದು ಚಿಂತಿಸುತ್ತಾನೆ.
                ಭಿಕ್ಷುಗಳೇ, ನುರಿತ ಕಟುಕನೊಬ್ಬನು ಹಸುವನ್ನು ಕೊಂಡು ದಾರಿಯ ಬದಿಯಲ್ಲಿ ತುಂಡು ತುಂಡಾಗಿ ಮಾಂಸವನ್ನು ಇಟ್ಟಿರುತ್ತಾನೆ. ಹಾಗೆಯೇ ಭಿಕ್ಷುಗಳೇ ನೀವು ಸಹಾ ದೇಹವನ್ನು ಮಾನಸಿಕವಾಗಿ ವಿಭಜಿಸಿ ಇದು ಘನದಾತು, ಇದು ದ್ರವಧಾತು, ಇದು  ತೇಜೋ ಧಾತು ಮತ್ತು ಇದು ಅನಿಲಧಾತು ಎಂದು ವಿಭಜಿಸಿ ವಿಶ್ಲೇಷಿಸಿ.
                ನಮ್ಮ ಶರೀರದಲ್ಲಿರುವ ಘನಧಾತುಗಳೆಂದರೆ ತಲೆಗೂದಲು, ತಲೆ, ಉಗುರು, ಹಲ್ಲುಗಳು, ಚರ್ಮ, ಮಾಂಸ, ಸ್ನಾಯು, ನಾಡಿಗಳು, ನರಗಳು, ಮೂಳೆಗಳು, ಅಸ್ತಿಮಚ್ಚೆ. ಮೂತ್ರಪಿಂಡ, ಹೃದಯ, ಶ್ವಾಸಕೋಶ, ವಪೆ, ಕರುಳು, ಗಂಟಲು, ಮೆದುಳು, ಮಲ ಇತ್ಯಾದಿ.
                ನಮ್ಮ ಶರೀರದಲ್ಲಿರುವ ದ್ರವಧಾತುಗಳೆಂದರೆ - ಪಿತ್ತರಸ, ಜೊಲ್ಲು, ಕೀವು, ರಕ್ತ, ಬೆವರು, ಕೊಬ್ಬು ಕಣ್ಣೀರು, ತೈಲ, ಮೂಗಿನ ಸ್ರಾವ, ಮೂತ್ರ ಇತ್ಯಾದಿ.
                ನಮ್ಮ ಶರೀರದಲ್ಲಿರುವ ಉಷ್ಣತೆಯೆಂದರೆ ಸಾಧಾರಣ ತಾಪ, ಜ್ವರದ ತಾಪ, ಆಹಾರದಿಂದಾದ ತಾಪ, ಮನಸಿನ ಒತ್ತಡದಿಂದ ತಾಪ ಇತ್ಯಾದಿ.
                ನಮ್ಮ ಶರೀರದಲ್ಲಿರುವ ವಾಯುವೆಂದರೆ ನಮ್ಮ ದೇಹದಲ್ಲಿ ಮೇಲ್ಮುಖವಾಗಿ ಹರಿಯುವ ವಾಯು, ಕೆಳಮುಖವಾಗಿ ಹರಿಯುವ ವಾಯು, ಕಿಬ್ಬೊಟ್ಟಯಲ್ಲಿರುವ ವಾಯು, ಬೆನ್ನಿನಲ್ಲಿರುವ ವಾಯು, ಶ್ವಾಸಕೋಶದಲ್ಲಿರುವ ವಾಯು, ಅಂಗಗಳಿರುವ ವಾಯು ಉಶ್ವಾಸ ಮತ್ತು ನಿಶ್ವಾಸ.
                ಹೀಗೆ ನಮ್ಮ ಶರೀರದಲ್ಲಿ ಕೇವಲ 4 ಧಾತುಗಳಿವೆ ಹೊರತು ಆತ್ಮವಿಲ್ಲ. ಹಾಗು ಶರೀರ ನಮ್ಮದಲ್ಲ ಹಾಗು ನಾನು ಅಲ್ಲ ಎಂದು ಯತಾರ್ಥವಾಗಿ ಅರಿಯುತ್ತಾರೆ.
                ಹಾಗೆಯೇ ಆತನು ಶರೀರದ ಅಂಗಗಳು ಎಲ್ಲೆಲ್ಲಿವೆ, ಅವುಗಳ ರಚನೆ ಹೇಗಿದೆ. ಆವುಗಳ ಧಾತುಗಳು ಅವುಗಳ ಕಾರ್ಯ, ಅವುಗಳ ಲಕ್ಷಣ ಗಮನಿಸುತ್ತಾ ಇಲ್ಲಿ ಯಾವುದು ನಾನಲ್ಲ, ನನ್ನ ಆತ್ಮವಲ್ಲ, ನಾನಲ್ಲ ಎಂದು ಅರಿಯುತ್ತಾನೆ.
                ಶರೀರವು ಹಿಂದಿನ ಜನ್ಮದ ಕರ್ಮದ ಅನಾಸಾರವಾಗಿ ಮತ್ತು ಚಿತ್ತದಿಂದ ಉತ್ಪತ್ತಿಯಾಗಿದೆ ಹಾಗು ಉಷ್ಣತೆಯಿಂದ ಮತ್ತು ಆಹಾರದಿಂದ ಇವು ರಚಿತವಾಗಿದೆ ಎಂದು ಅರಿಯುತ್ತಾನೆ.
                ಇಡೀ ಶರೀರ ಅಷ್ಟೇ ಅಲ್ಲ, ಇಡೀ ಬ್ರಹ್ಮಾಂಡವು ನಾಲ್ಕು ಮಹಾಧಾತುಗಳಿಂದ ರೂಪಿತವಾಗಿವೆ ಎಂದು ಅರಿಯುತ್ತಾನೆ.
                ಧಾತುಗಳು ಸ್ತ್ರೀಯು ಅಲ್ಲ, ಪುರುಷನು ಅಲ್ಲ. ಕೇವಲ ಧಾತುಗಳಾಗಿವೆ ಎಂದು ಅರಿಯುತ್ತಾನೆ.
                ಆತ ಧಾತುಗಳನ್ನು ಸ್ಪಷ್ಟವಾಗಿ ಅರಿಯುತ್ತಾನೆ. ಹೇಗೆಂದರೆ : ಪೃಥ್ವಿಯು (ಘನವು ಕಠಿಣವಾದಿ ಲಕ್ಷಣವನ್ನು ಹೊಂದಿದೆ. ಅದರ ಕ್ರಿಯೆಯು ಸ್ಥಾಪಿಸುವುದಾಗಿದೆ. ಅದು ಪಡೆಯುವಿಕೆಯಿಂದ ವ್ಯಕ್ತವಾಗುತ್ತದೆ ಅಷ್ಟೇ. (ಜಲ/ದ್ರವ)ವು ಹರಿಯುವ ಲಕ್ಷಣವನ್ನು ಹೊಂದಿದೆ. ಇದರ ಕ್ರಿಯೆಯು ಏನೆಂದರೆ ತೀವ್ರತೆ ಉಂಟುಮಾಡುವುದು. ಇದು ಅಂಟುವಿಕೆಯಿಂದ ವ್ಯಕ್ತವಾಗುತ್ತದೆ. ತೇಜೋದಾತುವು ಉಷ್ಣತೆಯ ಲಕ್ಷಣ ಹೊಂದಿದೆ. ಇದರ ಕ್ರಿಯೆ ಏನೆಂದರೆ ನಿರ್ವಹಣೆ ಮಾಡುವುದು (ಪೋಷಣೆ ಮಾಡುವುದು). ವಾಯು ಧಾತುವು ಉಬ್ಬುವಿಕೆಯ ಲಕ್ಷಣ ಹೊಂದಿದೆ. ಇದರ ಕ್ರಿಯೆ ಚಲನೆಯಾಗಿದೆ. ಇದು ಸಾಗಿಸುವಿಕೆಯಿಂದ ವ್ಯಕ್ತವಾಗುತ್ತದೆ.
                ಪೃಥ್ವಿ ದ್ವಾರವು         ಎತ್ತಿಹಿಡಿಯುತ್ತದೆ
                ಅಪೋಧಾತುವು      ಹರಿಯುತ್ತದೆ
                ತೇಜಧಾತುವು        ಮೇಲ್ಮುಖವಾಗಿ ಹೋಗುವಂತೆ ಮಾಡುತ್ತದೆ.
                ವಾಯು   ಉರುಳುವಂತೆ ಮಾಡುತ್ತದೆ.
                ದೇಹವನ್ನು ರೂಪಬಂಧವೆನ್ನುತ್ತಾರೆ. ಅಂದರೆ ಧಾತುಗಳ ರಾಶಿಯಾಗಿದೆ. ಅಂದರೆ ಪೃಥ್ವಿರಾಶಿ, ಅಪೋರಾಶಿ, ತೇಜೋರಾಶಿ ಮತ್ತು ವಾಯುರಾಶಿ. ಪ್ರತಿ ರಾಶಿಯಲ್ಲಿ ಮತ್ತು ತತ್ವಗಳು ಇರುತ್ತದೆ. ಆದರೆ ಒಂದು ಮಾತ್ರ ಪ್ರಾಬಲ್ಯ ವಹಿಸಿರುವಾಗ ಅದರದೇ ಹೆಸರು ನೀಡಲಾಗುತ್ತದೆ. ಉದಾಹರಣೆಗೆ ಪೃಥ್ವಿ ರಾಶಿಯಲ್ಲಿ ಪೃಥ್ವಿಯು ಪ್ರಾಬಲ್ಯ ವಹಿಸಿರುತ್ತದೆ. ಹಾಗೆಯೇ ಅಪೋ, ತೇಜೋ ಮತ್ತು ವಾಯುಗಳು ಸಹ ಇರುತ್ತದೆ.
                ನಾಲ್ಕು ಬೇರೆಯಾಗದು, ಜೊತೆಯಲ್ಲೇ ಇರುತ್ತದೆ. ಒಂದಕ್ಕೊಂದು ಆಧಾರವಾಗಿ, ಒಂದಕ್ಕೊಂದು ನಿರ್ವಹಕವಾಗಿ, ಸಹಾಯಕವಾಗಿ ಇರುತ್ತವೆ.
                ಆತನು ಮುಂದೆ ಇವುಗಳಲ್ಲಿ ಸಾಮಿಪ್ಯತೆ ಮತ್ತು ವಿರುದ್ಧತೆ ಗಮನಿಸುತ್ತಾನೆ. ಹೇಗೆಂದರೆ ಪೃಥ್ವಿ ಮತ್ತು ಅಪೋಗಳಿಗೆ ತೂಕವಿರುತ್ತದೆ, ಆದ್ದರಿಂದ ಅವು ಸಾಮಿಪ್ಯ, ತೇಜೋ ಮತ್ತು ವಾಯುಗಳು ಹಗುರವಾಗಿರುತ್ತದೆ. ಇವು ಸಹಾ ಸಾಮಿಪ್ಯತೆ ಹೊಂದಿರುತ್ತದೆ. ಜಲ ಮತ್ತು ತೇಜೋಗಳು ವಿರುದ್ಧವಾಗಿರುತ್ತದೆ. ಅನ್ಯೋನ್ಯತೆಯಲ್ಲಿ ಪ್ರಥ್ವಿ ಮತ್ತು ಅಪೋ ವಿರುದ್ಧವಾಗಿರುತ್ತದೆ. ಪೃಥ್ವಿ ಮತ್ತು ವಾಯು ವಿರುದ್ಧವಾಗಿದೆ. ರೀತಿಯಲ್ಲಿ ಆತನು ಇವುಗಳ ಸಾಮಿಪ್ಯ ಮತ್ತು ವಿರುದ್ಧತೆ ಅರಿಯುತ್ತಾನೆ.
                ಹೇಗೆ ಗೊಂಬೆಯೊಂದಕ್ಕೆ ಚಲನೆ, ಮಾತನಾಡುವಿಕೆ ಎಲ್ಲವನ್ನು ಸಿದ್ಧಪಡಿಸಿದರೆ ಅದಕ್ಕೆ ಆತ್ಮವಿಲ್ಲವೋ, ಹಾಗೆಯೇ ಧಾತುಗಳಿಂದ ದೇಹಕ್ಕೆ ಆತ್ಮವಿಲ್ಲ. ಕೇವಲ ಕ್ರಿಯೆಗಳು ಜರುಗುತ್ತವೆ. ನಾನು ಎಂಬುದೇ ಇಲ್ಲ. ಇನ್ನೂ ನನ್ನದೆಲ್ಲಿ? ಹೀಗೆ ಆತನು ವಿಶ್ಲೇಷಿಸುತ್ತಾನೆ. ಹೀಗೆಯೇ ಧ್ಯಾನಿಸುತ್ತಾ ಆತನು ಪಂಚನಿವರಣಗಳಿಂದ ಮುಕ್ತನಾಗಿ ಮತ್ತು ಧ್ಯಾನಗಳಿಂದ ಕೂಡಿ ಸಾಮಿಪ್ಯ ಸಮಾಧಿ ಪಡೆಯುತ್ತಾನೆ. ಅಥವಾ ಸೋತಪನ್ನ ಸ್ಥಿತಿಗೆ ಸಮೀಪವಾಗಿರುತ್ತಾನೆ.
ಇಲ್ಲಿಗೆ ಧಾತು ವಿಶ್ಲೇಷಣೆ ಸಂಕ್ಷಿಪ್ತವಾಗಿ ಮುಗಿಯಿತು

No comments:

Post a Comment